ಸ್ನೇಹ ಬಂಧನ
“ಕವಲೊಡೆದ ಹಾದಿಯಲ್ಲಿ ನಿಂತಿದ್ದಾಗ
ಅರಿವ ಮರೆತು,
ನೀ ಜೊತೆಗೊಯ್ದೆ ಕೈಯ ಹಿಡಿದು,
ಶಾಂತವಾಯಿತು ದ್ವೇಷವೇ ತುಂಬಿ
ಒಡೆದಿದ್ದ ಮನಸ್ಸು ,
ನೀಡಿದಾಗ ಮನಸಿನ ತುಮುಲಗಳಿಗೆ ನೀ
ಮಾತಿನ ಸಾಂತ್ವನ “.
“ಯಾರ ಕಂಡರೂ ಸಿಡಿದೇಳುತ್ತಿದ್ದ ಗುಣ,
ಜೊತೆಗೆ ನಿಸ್ಸಾರವೆನಿಸೋ ಜೀವನ,
ಅರ್ಥವೇ ಆಗುತ್ತಿರಲಿಲ್ಲ ಈ ಜಗದ ತಲ್ಲಣ,
ಎಲ್ಲವ ಹಿಡಿತದಲ್ಲಿರಿಸಿ ಬದುಕನ್ನಾಗಿಸಿತು
ನಳನಳಿಸೋ ಹೂ ಬನ,
ಗೆಳತಿ, ಮನಸಿನ ವೇದನೆಗೆ ನೀ ನೀಡಿದ
ಮಾತಿನ ಸಾಂತ್ವನ”.
“ಸಾಗಲಿಲ್ಲ ಇಲ್ಲಿ ಯಾರಿಗೂ ಹೆದರಿ,
ಪ್ರೀತಿಯೆಂಬುದು ಹೋಗಿತ್ತು ಎದೆಯೊಳಗೆಯೇ ಕಮರಿ,
ಬಂಧಿಸಲು ನೀ ತುಸು ವಾತ್ಸಲ್ಯವ ತೋರಿ,
ಶರಣಾಗಿಸಿತು ನಿನ್ನ ಮುಂದೆ ಆ ಮಮತೆಯಿಂದಾವೃತ ನೋಟದ ಪರಿ,
ಎಷ್ಟೊಂದು ತೀವ್ರ ಮನಸಿನ ತುಮುಲಗಳಿಗೆ ನೀ ನೀಡೋ ಮಾತಿನ ಸಾಂತ್ವನ”.
“ಯಾರು ನನಗಿಲ್ಲಿ ಹಿತವರು?,
ಮುಖವಾಡ ತೊಟ್ಟ ಮುಖಗಳೋ ಹಲವಾರು,
ಆದರೆ ನೀ ತೋರೋ ನಿಷ್ಕಲ್ಮಶ ಪ್ರೀತಿಯೋ
ಬಲು ನವಿರು,
ಆ ಪ್ರೀತಿಯಲ್ಲಿ ಮನವೂ ಭೂರಮೆಯಂತೆ
ಸದಾ ಹಸಿರು,
ನೀಡಿತು ಹೊಸ ಬದುಕ ನೀ ನೀಡಿದ ಹಿತವಾದ
ಮಾತಿನ ಸಾಂತ್ವನ”.
“ಇಂದು ಹಗುರಾಗಿಹುದು ನನ್ನೀ ಮನ,
ಕಾರಣ ಉಸಿರಿರೋವರೆಗೂ ಶಾಶ್ವತವೆಂದು
ಅರಿವಾದ ಮೇಲೆ ಈ ಸ್ನೇಹ ಬಂಧನ,
ಇದ್ದರೂ ಸಾಕು ಇಲ್ಲಿ ನಾಲ್ಕೇ ದಿನ,
ಆದರೆ ಬಾನಂಚಲಿ ಸರಿಯೋ ಇಳಿ ಸಂಜೆಯ ಹೊತ್ತಲ್ಲಿ
ಸದಾ ಜೊತೆಗಿರಬೇಕು ನೀ ಪ್ರತೀ ಕ್ಷಣ,
ಹೇಗೆ ಬದಲಾಯಿಸಿಹುದು ಬದುಕ
ನೋಡು ಗೆಳತಿ,
ಮನಸಿನ ತುಮುಲಗಳಿಗೆ ನೀ
ನೀಡಿದ…………………..
ಮಾತಿನ ಸಾಂತ್ವನ ?”.
– ನಯನ ಬಜಕೂಡ್ಲು