ತಾಯಿಯರು ಮತ್ತು ತವರು
ಊರಿದ ಊರಿಂದ ಮೋಟರು ಹಿಡಿದು
ಉದ್ದಕ್ಕೂ ಹರಿದ ಹಿರಿದಾರಿ ಮುಗಿಸಿ
ನಡಿಗೆಯಲಿ ಕಿರು ಹಾದಿಯಲಿ ಸರಸರ
ಅಂಕುಡೊಂಕ ಕೆಲ ದೂರ ಸವೆಸಿ
ಉಸ್ಸೆಂದು ನಿರಾಳ ನಿಂತಲ್ಲಿ ಕಾಲು
ಕಾಣುವುದು ಆ ಹಳೆಯ ಹಳ್ಳಿ ಸೂರು!
ದಾರಿಯುದ್ದಕೂ
ಅಲ್ಲಿ ಇದ್ದೀತೊ ಇಲ್ಲವೋ ಭಾರೀ ಗುಡ್ಡ
ಸಣ್ಣ ದರಿ ಝರಿ ತೊರೆ ಕೆರೆ ಹೊಳೆ
ಹಸಿರ ಗಿಡ ; ಮೈತಾಗಿ ನಗಿಸುವ ಗಿಡಗೆಂಟೆ
ಬದು-ಭತ್ತ ತೂಗುತೆಂಗು
ತೆನೆರಾಗಿ ಗೊನೆಬಾಳೆ
ಸಾಗಿ ಕಾಲು ದಾರಿ ಮುಗಿಸಲು ಕಾಣಿಸಿತು
ಹೊಸತೆಂದೋ ಆಗಿದ್ದ ಒಕ್ಕಲು
ಅದು ಮೂಡು ಯಾ ಪಡುವಣ
ತೆಂಕು ಯಾ ಬಡಗ ಮನೆ
ಗೂಡು ಹಕ್ಕಿಗಳರಮನೆ
ಹಳೆನೆನಪಿಗೆ ಹೊಸತಾಗುವ
ತೂಗು ಉಯ್ಯಾಲೆ ಮೇನೆ!
ಅದು ಅಮ್ಮನಾ ತವರು
ಅವಳ ಅಕ್ಕತಂಗಿ ಅಣ್ಣತಮ್ಮರು
ನೆಲಮುಟ್ಟಿ ಉಸಿರ ಹಚ್ಚಿದಾ ಮನೆ
ಸಣ್ಣ ದೇಹಗಳು ಬೆಳೆದ ಸಿರಿಮನೆ
ನಿಲುಕದ ಕನಸುಗಳಲ್ಲಿ ಸಂಭ್ರಮಿಸಿದ
ಜೀವಗಳ ಹೊನ್ನ ಮನೆ
ಕೇಳಬಹುದು ಕೆಲವರು
ಅಲ್ಲೇನು ಅಂಥ ಆಟವುಂಟೆ?
ಚೆಂಡೆ ಮದ್ದಳೆ ಯಕ್ಷರ ಆಟವುಂಟೆ?
ಬೆಳ್ಳಿತಟ್ಟೆಯಲ್ಲಿ ಬಡಿಸಿದ ಪಾಯಸವುಂಟೆ?
ಗಂಟೆ ಜಾಗಟೆಗಳಲ್ಲಿ ನಲಿವ ದೇವರುಂಟೆ?
ದೈವವುಂಟೆ?
ಕಣ್ಣು ಕಿವಿ ಹೃದಯ ಹದ ಮಾಡಿದರೆ
ಕೇಳೀತು ವೈನಾಗಿ ಹರಿವ ಹೊಳೆಯ ರಾಗ
ದನ ಕರು ಮಹಿಷಗಳ ದೊಡ್ಡ ಕಣ್ಣ ಸೊಗ
ಪ್ರೀತಿ ಹರಿಸುವ ಶ್ವಾನ ; ಪುಳಕ ಮಾರ್ಜಾಲ
ಎದುರುಗೊಂಡಪ್ಪಿಕೊಳ್ಳುವ ಬಂಧಗಳ
ಎಲ್ಲೆಮೀರಿದ ಭಾವ
ಸಗಣಿಗೆ ಪಕ್ಕಾದ ನೆಲದಲ್ಲಿ ಕುಳಿತ
ತುತ್ತುಣಿಸಿ ದಣಿಯದೆ ಹಾಡಿದ
ಸುಕ್ಕು ಸಿರಿಮೊಗದ ಹಿರಿ ಜೀವ
ಅಲ್ಲಿ ಎಲ್ಲ ಆಟಗಳ ದೇವರುಂಟು
ಸುಖದು:ಖಗಳ ಪಾಠಗಳುಂಟು
ಬೆಸೆವ ನಂಟಿನ ಅಂಟು ಉಂಟು
ಕೊಂಕಿಲ್ಲದ ನಗೆ; ಕುಟಿಲವಿಲ್ಲದ ಮಾತು
ಕೊಂಡಾಟ ಮತ್ತು ತುಂಟಾಟವುಂಟು
ಅಮ್ಮ ನಕ್ಕುನಲಿದು ಹಗುರಾಗಿ ಹಾರಿ
ಮನಸ ಹದದಲ್ಲಿ ಹೂ ಬಳ್ಳಿ ನೆಟ್ಟು
ಖುಷಿಯ ಕೃಷಿಕಳಾಗುವಳು ಕೆಲ ಹೊತ್ತು!
ಹೊರಡುತ್ತಾ, ಕಣ್ಣಲ್ಲಿ ತುಂಬಿ ಅಮೃತ ಬಿಂದು
ಭಾರ ಎಳೆವ ತೇರಾಗುವಳು
ಉಮ್ಮಳಿಸುವ ಭಾವ ಸಣ್ಣ ಪೆಟ್ಟಿಗೆಯಲ್ಲಿಟ್ಟು
ಬೀಗವಿಕ್ಕಿ ಮತ್ತೊಂದು ಚಿಕ್ಕ ಚೀಲದ ಭರ್ತಿ
ನೆನಪ ತಿನಿಸುಗಳ ಹೊತ್ತು ಸಾಗುವಳು
ಅದೇ ಕಾಲು ದಾರಿ
ಹಿಡಿಯೆ ಮೋಟರು; ಮುಟ್ಟೆ ಹೆದ್ಡಾರಿ
– ಅನಂತ ರಮೇಶ್
ಬಹಳ ಸುಂದರ ಕವನ. ಮೂರು ಸಲ ಓದಿದೆ. “ಕಣ್ಣು ಕಿವಿ ಹೃದಯ ಹದ ಮಾಡಿದರೆ
ಕೇಳೀತು ವೈನಾಗಿ ಹರಿವ ಹೊಳೆಯ ರಾಗ……” ಪ್ರತಿ ಸಲ ಊರಿಗೆ ಹೋದಾಗಲೂ ಇಂತಹ ಅನುಭವ ಆಗಿದ್ದರೂ ಸಹ, ಅಕ್ಷರ ರೂಪಕ್ಕೆ ಇಳಿಸಲು ಆಗಿರಲಿಲ್ಲ.
ನಿಮ್ಮ ಮೆಚ್ಚುಗೆ ಮುದಕೊಟ್ಟಿತು.ಧನ್ಯವಾದಗಳು.
ಆಪ್ತವಾದ ಕವನ ..ಇಷ್ಟವಾಯಿತು
ಧನ್ಯವಾದಗಳು.