ಬಿದಿರಿನಲ್ಲಿ ಅರಳಿದ ಕಲೆ
ಉಜಿರೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ಪರಿಸರ ಸ್ನೇಹಿ ಸಾಮಗ್ರಿಗಳು ಹೆಚ್ಚು ಮಾರಾಟವಾಗುತ್ತಿವೆ. ಪ್ಲಾಸ್ಟಿಕ್ ಬಳಕೆಯನ್ನು ಕೊಂಚಮಟ್ಟಿಗೆ ತಗ್ಗಿಸಿ ಪ್ರಕೃತಿದತ್ತ ವಸ್ತುಗಳ ಉಪಯೋಗ ಆರೋಗ್ಯ ವರ್ಧಕ ಎಂಬ ಚಿಂತನೆಯಲ್ಲಿ ಜನರು ಬಿದಿರು ಮತ್ತು ಬೆತ್ತದ ಪರಿಕರಗಳ ಮೊರೆ ಹೋಗುತ್ತಿರುವುದಕ್ಕೆ ಇಲ್ಲಿನ ಮಳಿಗೆ ಸಾಕ್ಷಿಯಾಗುತ್ತಿದೆ. ಚಿಕ್ಕಮಗಳೂರಿನ ಫಾರೂಕ್ ಅವರ ಬಿದಿರು ಮತ್ತು ಬೆತ್ತದ ಸಾಮಗ್ರಿಗಳ ಮಳಿಗೆ ಇದೇ ಮೊದಲ ಬಾರಿಗೆ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿದೆ. ಕುಟುಂಬದವರ ಸಹಕಾರದಿಂದ ಬಿದಿರು ಮತ್ತು ಬೆತ್ತದ ವಸ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿ ತ್ರಿಪುರದಿಂದ ಮತ್ತು ಅರಣ್ಯ ಇಲಾಖೆಯಿಂದ ಬಿದಿರು, ಬೆತ್ತವನ್ನು ಖರೀದಿಸಲಾಗುತ್ತದೆ.
ಕೇವಲ ಅಲಂಕಾರಿಕ ಸಾಮಗ್ರಿಗಳು ಮಾತ್ರವಲ್ಲದೇ ಪೀಠೋಪಕರಣಗಳನ್ನೂ ತಯಾರಿಸಲಾಗುತ್ತದೆ. ಟೇಬಲ್, ಕುರ್ಚಿ, ಸೋಫಾ, ಡೈನಿಂಗ್ ಟೇಬಲ್, ಸ್ಟೂಲ್, ಸ್ಟ್ಯಾಂಡ್, ಇತ್ಯಾದಿಗಳನ್ನು ಗ್ರಾಹಕರ ಬೇಡಿಕೆಗಳ ಅನುಸಾರ ಸಿದ್ಧಪಡಿಸಲಾಗುತ್ತದೆ. ಮನೆಯ ಅಲಂಕಾರಿಕ ಸಾಮಗ್ರಿಗಳಾದ ಗೂಡುದೀಪ, ಫೋಟೋ ಫ್ರೇಮ್, ಕ್ಯಾಲೆಂಡರ್, ಹೂದಾನಿ, ಬಾಗಿಲು ತೋರಣ, ಪೆನ್, ಬೀಸಣಿಗೆ, ನವಿಲಿನ ಕಲಾಕೃತಿ, ಲಾಟೀನ್,ಮುಖವಾಡ, ಟೇಬಲ್ ಲ್ಯಾಂಪ್, ಬಿದಿರಿನ ಹೂವುಗಳು, ಅಡುಗೆಮನೆ ಸಾಮಗ್ರಿಗಳಾದ ತರಕಾರಿ ಬುಟ್ಟಿ. ಕಟೋರಿ, ಮೊರ, ಅಕ್ಕಿ ತುಂಬಿಸುವ ಪಾತ್ರೆ, ಮತ್ತು ಪರ್ಸ್, ಬ್ಯಾಗ್,ಕೂದಲಿನ ಕ್ಲಿಪ್ ಇತ್ಯಾದಿ ಸಾಮಗ್ರಿಗಳು ಗಮನ ಸೆಳೆಯುತ್ತಿವೆ.
‘ಲಕ್ಷದೀಪೋತ್ಸವದಲ್ಲಿ ಇದೇ ಮೊದಲ ಬಾರಿಗೆ ವ್ಯಾಪಾರಕ್ಕಾಗಿ ಬಂದಿರುವುದು ಸಂತಸದ ವಿಷಯ. ಜನರು ಕೆಲವೊಂದಿಷ್ಟು ವಸ್ತುಗಳಿಗೆ ಆರ್ಡರ್ ಕೊಟ್ಟು ಹೊಗಿದ್ದಾರೆ.ವ್ಯಾಪಾರ ಉತ್ತಮವಾಗಿದೆ. ಪ್ಲಾಸ್ಟಿಕ್, ಫೈಬರ್ ಕಾಲದಲ್ಲಿ ಜನರ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನೊಂದಿಷ್ಟು ವಸ್ತುಗಳನ್ನು ಮಾಡುವತ್ತ ಗಮನಹರಿಸಬೇಕಾಗಿದೆ’ ಎನ್ನುತ್ತಾರೆ ಚಿಕ್ಕಮಂಗಳೂರಿನ ಫಾರುಕ್.
ಜೀವನದ ಎಲ್ಲಾ ಹಂತದಲ್ಲೂ ಅವಿಭಾಜ್ಯವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಲು ಪರಿಸರ ಸ್ನೇಹಿ ಸಾಮಗ್ರಿಗಳ ಬಳಕೆ ಅನಿವಾರ್ಯತೆ ಇದೆ. ದಿನನಿತ್ಯ ಬಳಸುವ ಪೆನ್ನು, ಬ್ರಷ್, ಮನೆ ಅಲಂಕಾರಿಕ ವಸ್ತುಗಳು, ಮಕ್ಕಳಾಟಿಕೆ, ಪ್ಲಾಸ್ಕ್ ಹೂವಿನ ಹಾರಗಳು ಕೊನೆಯಲ್ಲಿ ತಿನ್ನುವ ಅನ್ನದ ಬಟ್ಟಲೂ ಸಹ ಪ್ಲಾಸ್ಟಿಕ್ ಮತ್ತು ಫೈಬರ್‌ಮಯವಾಗಿದೆ. ಇತ್ತೀಚಿಗೆ ಜನರಲ್ಲಿ ಮೂಡುತ್ತಿರುವ ದೇಶಿ ಉತ್ಪನ್ನಗಳ ಬಳಕೆಯ ಚಿಂತನೆ ಬಿದಿರು ಮತ್ತು ಬೆತ್ತದ ಪದಾರ್ಥಗಳ ಮೇಲೆ ಅಧಿಕವಾಗುತ್ತಿರುವುದು ಉತ್ತಮ ಬೆಳವಣಿಗೆ.
– ಜಯಲಕ್ಷ್ಮಿ ಭಟ್, ಎಸ್ ಡಿ ಎಂ ಉಜಿರೆ.
ಬಿದಿರು ಉತ್ಪನ್ನಗಳ ಬಗೆಗಿನ ಲೇಖನ ಚೆನ್ನಾಗಿದೆ
ಮೇಡಮ್ ಪೋಟೊದಲ್ಲಿರುವ ದುಂಡು ಬುಟ್ಟಿ ಮತ್ತೆ ಚೌಕಾಕಾರದ ಬುಟ್ಟಿ ಗೆ ಹಣ ಎಷ್ಟು ಆಗತ್ತೆ ತಿಳಿಸಿ