ತೂಕದೊಂದಿಗೆ ಪ್ರಯೋಗಗಳು..
ಇದು ಬಹುಶಃ ನನ್ನೊಬ್ಬಳ ಕತೆಯಲ್ಲ. ಬಹುತೇಕ ಹೆಣ್ಣುಮಕ್ಕಳ ವ್ಯಥೆ ( ಕತೆ) ಇದೇ. ಈ ವ್ಯಥೆ ಭಾರ ಅಥವಾ ಶರೀರ ತೂಕಕ್ಕೆ ಸಂಬಂಧಿಸಿದ್ದು. ನನ್ನ ಬಾಲ್ಯಕಾಲದಲ್ಲಿ ಅದೂ ಇದೂ ಅಂತ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ. ಮನೆ ವಠಾರದಲ್ಲಿ ಸಿಗುವ ಹಣ್ಣುಗಳಲ್ಲದೇ ಕಾಡಿಗೂ ಲಗ್ಗೆಯಿಟ್ಟು ಅದನ್ನೂ ಕಬಳಿಸಿ ಸ್ವಾಹಾ ಮಾಡುವ ಮಕ್ಕಳ ಸೈನ್ಯದ(ಬಹುಶಃ ಕಪಿ ಸೈನ್ಯ ಎನ್ನಬಹುದೇನೋ) ಒಂದು ಮರಿ ಕಪಿ ನಾನಾಗಿದ್ದೆ. ಬಾಲ್ಯದಲ್ಲಿ ನಾನು ದಢೂತಿಯಾಗಿರದಿದ್ದರೂ ತಕ್ಕಮಟ್ಟಿಗೆ ಗುಂಡುಗುಂಡಾಗಿದ್ದೆ. ಆದರೆ ಹೈಸ್ಕೂಲಿನ ಪ್ರಾಯಕ್ಕೆ ಬಂದಾಗ ತೆಳ್ಳಗಾಗತೊಡಗಿದ್ದೆ. ನನ್ನ ಇಬ್ಬರು ಅಕ್ಕಂದಿರು ಕಾಲೇಜಲ್ಲಿ ಕಲಿಯುತ್ತಿದ್ದರು. ಅವರೂ ತೆಳ್ಳಗೆ ಇದ್ದರು. ಕೆಲವು ವರ್ಷಗಳ ಬಳಿಕ ಅಕ್ಕನವರಿಗೆ ಮದುವೆಗೆ ಗಂಡು ಹುಡುಕಲಾರಂಭಿಸಿದಾಗ ತೆಳ್ಳಗಿರುವುದರಿಂದ ಆಗುವ ಸಮಸ್ಯೆಯ ನಿಜ ಸ್ವರೂಪ ನಮಗೆ ಅರ್ಥವಾಯಿತು. ಹುಡುಗಿ ತೆಳ್ಳಗಿದ್ದಾಳೆ, ಎಂಬ ನೆಪದಲ್ಲಿ ಕೆಲವು ಹುಡುಗರು ಅವರನ್ನು ನಿರಾಕರಿಸಿದ್ದರು. ಆದರೂ ಕೆಲವೇ ಸಮಯದಲ್ಲಿ ಅವರ ಮದುವೆ ನಡೆಯಿತು. ಇನ್ನು ಮುಂದಿನ ಸರದಿ ನನ್ನದು. ನನ್ನನ್ನೂ ತೆಳ್ಳಗಿರುವ ಕಾರಣ ಹುಡುಗರು ಒಪ್ಪದಿದ್ದರೆ ಎಂಬ ಚಿಂತೆ ಅಮ್ಮನನ್ನು ಸಹಜವಾಗಿಯೇ ಕಾಡಿತ್ತು..
ಆ ದಿನ ಜ್ವರಕ್ಕೆ ಔಷಧಿಗೆಂದು ನಾನು ಮತ್ತು ಅಮ್ಮ ಒಂದು ಕ್ಲಿನಿಕ್ ಗೆ ಹೋಗಿದ್ದೆವು. ಅಲ್ಲಿ ನಮ್ಮ ಸರದಿಗಾಗಿ ಕಾಯುತ್ತಾ ಕುಳಿತಾಗ ಅಮ್ಮ ಹೇಳಿದರು.”ನಿನಗೆ ಸ್ವಲ್ಪ ಶರೀರಪುಷ್ಟಿ ಬರಲು ಏನಾದರೂ ಟಾನಿಕ್ ಕೊಡುವಂತೆ ಡಾಕ್ಟರಲ್ಲಿ ಕೇಳುತ್ತೇನೆ”. ಆ ಡಾಕ್ಟರ್ ಹೆಚ್ಚೆಂದರೆ ಐದೂವರೆ ಅಡಿಯಷ್ಟು ಎತ್ತರವಿದ್ದಿರಬಹುದು. ಅವರು ಎಷ್ಟು ತೆಳ್ಳಗೆ ಇದ್ದರೆಂದರೆ ಜೋರು ಗಾಳಿ ಬೀಸಿದರೆ ಅವರು ಹಾರಿಹೋಗುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ನಾನು ಅಮ್ಮನಲ್ಲಿ “ಅಮ್ಮಾ, ಪ್ಲೀಸ್ ಅದನ್ನೊಂದು ಕೇಳಬೇಡ. ಅಂತಹ ಒಂದು ಮದ್ದು ಇದ್ದರೆ ಆ ಡಾಕ್ಟರ್ ಹೀಗಿರುತ್ತಿದ್ದರಾ?” ಎಂದೆ. ಅಮ್ಮ ಅದನ್ನು ಕಿವಿಗೆ ಹಾಕಿಕೊಂಡರೆ ತಾನೇ? ಜ್ವರಕ್ಕೆ ಮದ್ದು ತೆಗೆದುಕೊಂಡ ಬಳಿಕ ನಾನು ಬೇಡವೆಂದು ಕಣ್ಸನ್ನೆ ಮಾಡಿದರೂ ಕೇಳಿಯೇ ಬಿಟ್ಟರು. ಡಾಕ್ಟರು ಒಮ್ಮೆ ತಬ್ಬಿಬ್ಬಾದರು. ‘ನನ್ನನ್ನು ನೋಡಿಯೂ ಈ ತರ ಕೇಳುವ ಇವರು ತಮಾಷೆ ಮಾಡುತ್ತಿಲ್ಲ ತಾನೇ?’ ಎಂಬ ಭಾವನೆ ಅವರ ಮುಖದಲ್ಲಿತ್ತು. “ತೆಳ್ಳಗಿದ್ದರೂ ಏನೂ ತೊಂದರೆಯಿಲ್ಲ. ತೂಕ ತುಂಬಾ ಕಡಿಮೆಯಿದ್ದರಷ್ಟೇ ಸಮಸ್ಯೆ. ಟಾನಿಕ್ ಕುಡಿದರೆ ದಪ್ಪವೇನೂ ಆಗುವುದಿಲ್ಲ” ಎಂದರು. ಆ ಡಾಕ್ಟರ್ ಅಮ್ಮನಲ್ಲಿ ಮಾತನಾಡುತ್ತಿದ್ದರೆ ನಾನು ಉಕ್ಕಿಬರುವ ನಗುವನ್ನು ತಡೆಯಲು ಪಾಡುಪಡುತ್ತಿದ್ದೆ. ಒಮ್ಮೆ ಹೊರಗಡೆ ಹೋದರೆ ಸಾಕು ಎಂದು ಕಾಯುತ್ತಿದ್ದೆ. ಹೊರಗೆ ಬಂದದ್ದೇ ತಡ ಒಮ್ಮೆ ನಕ್ಕುಬಿಟ್ಟೆ. ಈಗ ಅಮ್ಮನಿಗೂ ನಗು ಬರುತ್ತಿತ್ತು. ಆದರೂ ತನ್ನ ಹೆಣ್ಣು ಮಕ್ಕಳನ್ನು ಯಾರೂ ಸಪೂರ ಎಂದು ಹೇಳಬಾರದೆಂದು ದಪ್ಪಗಾಗಿಸಲು ಅಮ್ಮ ನೆರೆಹೊರೆಯವರಲ್ಲೂ ನೆಂಟರಿಷ್ಟರಲ್ಲೂ ಕೇಳುವುದು ಮುಂದುವರಿಯಿತು. ಆದರೆ ಯಾರ ಸಲಹೆಯನ್ನು ಅನುಸರಿಸಿದರೂ ನಮ್ಮ ಶರೀರದ ಸ್ಥಿತಿ ಸುಧಾರಿಸಲಿಲ್ಲ. ನಮಗೆ ಆರೋಗ್ಯಕ್ಕೇನೂ ತೊಂದರೆಯಿರಲಿಲ್ಲ. ಇತ್ತ ಮದುವೆಯಾದ ಅಕ್ಕಂದಿರು ತಮ್ಮ ಮೊದಲ ಬಾಣಂತನದ ನಂತರ ದಪ್ಪಗಾಗಿದ್ದರು. ಅವರು ಮೊದಲಿಗಿಂತ ಹತ್ತಿಪ್ಪತ್ತು ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು. ಅವರ ಎರಡನೇ ಮಗು ಹುಟ್ಟಿದ ನಂತರ ಮತ್ತೂ ದಪ್ಪಗಾದರು. ಈಗ ಇವರನ್ನು ನೋಡಿದವರಿಗೆ ಇವರು ಮೊದಲು ಅಷ್ಟೊಂದು ತೆಳ್ಳಗಿದ್ದರು ಎಂಬುದೇ ಮರೆತುಹೋಗಿತ್ತು..
ತೆಳ್ಳಗಿದ್ದೇನೆ ಎಂದು ನನಗೂ ಒಂದೆರಡು ಮದುವೆ ಸಂಬಂಧಗಳು ತಪ್ಪಿ ಹೋಗಿದ್ದವು. ವಿಪರ್ಯಾಸವೆಂಬಂತೆ ಗುಂಡುಗುಂಡಾಗಿದ್ದ ಸುಂದರ ಹುಡುಗನೊಂದಿಗೆ ನನ್ನ ಮದುವೆ ನಡೆಯಿತು. ಮದುವೆಯಾದ ಮೇಲೂ ನನ್ನ ತೂಕದಲ್ಲಿ ಹೆಚ್ಚಿನ ಸುಧಾರಣೆಯೇನೂ ಆಗಲಿಲ್ಲ. ಗರ್ಭಿಣಿಯಾಗಿ ಐದಾರು ತಿಂಗಳಾದರೂ ನನಗೆ ಸ್ವಲ್ಪವೂ ಹೊಟ್ಟೆ ಕಾಣಿಸುತ್ತಿರಲಿಲ್ಲ. ನಂತರ ನಿಧಾನವಾಗಿ ದಪ್ಪಗಾಗುತ್ತಾ ಹೋದೆ. ಎಷ್ಟು ಅಂದರೆ ಸೀಮಂತದ ನಂತರ ಕೈಯಲ್ಲಿದ್ದ ಐದಾರು ಚಿನ್ನದ ಬಳೆಗಳನ್ನು ತೆಗೆಯಲು ಆಗದೇ ಜ್ಯುವೆಲ್ಲರಿಗೆ ಹೋಗಿ ಕತ್ತರಿಸಿ ತೆಗೆಯಬೇಕಾಯಿತು. ಅರುವತ್ತು ಕೆ.ಜಿ ತೂಕದ ಸಮೀಪದಲ್ಲಿದ್ದೆ. ಹೆರಿಗೆಯ ನಂತರ ಕೊಠಡಿಗೆ ಬಂದ ನನ್ನ ಹೊಟ್ಟೆಯ ಗಾತ್ರ ನೋಡಿ ಡ್ಯೂಟಿಯಲ್ಲಿದ್ದ ನರ್ಸ್ ಅದೇನೆಂದು ಡಾಕ್ಟರಲ್ಲಿ ಕೇಳುವಂತೆ ಸೂಚಿಸಿದರು. ಪರೀಕ್ಷೆ ಮಾಡಿದ ಡಾಕ್ಟರು ಯಾವುದೇ ಸಮಸ್ಯೆಯಿಲ್ಲ ಎಂದರು. ಆಸ್ಪತ್ರೆಯಿಂದ ಮನೆಗೆ ಬಂದ ನಂತರ ನನ್ನ ಅತ್ತೆ ಒಂದು ದೊಡ್ಡ ಕಾಟನ್ ಸೀರೆಯನ್ನು ಉದ್ದಕ್ಕೆ ಮಡಚಿಕೊಟ್ಟು ಅದನ್ನು ಹೊಟ್ಟೆಗೆ ಸುತ್ತಿಕೊಳ್ಳುವಂತೆ ತಿಳಿಸಿದರು. ಸಾಕಷ್ಟು ಬಿಸಿ ನೀರಲ್ಲಿ ಬಾಣಂತಿ ಸ್ನಾನ ಮುಗಿಸಿ ಬಂದು ಈ ಸೀರೆಯನ್ನು ಕಟ್ಟಿ ಮಲಗುವಾಗ ಹೊಟ್ಟೆಯೆಲ್ಲಾ ಬೆವರಿ ನನಗೆ ಕಿರಿಕಿರಿಯೆನಿಸುತ್ತಿತ್ತು. ಆದರೆ ನಾಯಿಯ ಬಾಲದ ಕತೆಯಾಯ್ತು ನನ್ನ ಹೊಟ್ಟೆಯದ್ದು. ಒಂದೆರಡು ತಿಂಗಳು ಕಳೆದರೂ ಹೊಟ್ಟೆಯ ಗಾತ್ರ ಹೆಚ್ಚೇನೂ ತಗ್ಗಲಿಲ್ಲ. ಸೀರೆ ತೆಳ್ಳಗಾಯ್ತೋ ಏನೋ. ಸೀರೆ ಹೊಟ್ಟೆಗೆ ಸುತ್ತುವುದನ್ನು ನಿಲ್ಲಿಸಿದೆ.
.
ತೂಕ ಹೆಚ್ಚಬಾರದೆಂದು ನಾನು ಈ ತರ ಪರಿತಪಿಸಿದರೂ ನನ್ನ ತವರು ಮನೆಗೆ ಹೋದರೆ ಮಾತ್ರ ಅವರು ಪ್ರತಿಕ್ರಿಯಿಸುವ ರೀತಿಯೇ ಬೇರೆ.”ನೀನು ಸ್ವಲ್ಪ ತೆಳ್ಳಗಾಗಿದ್ದಿ” ಎಂದು ಅವರು ಕಾಳಜಿಯಿಂದ ಹೇಳುವಾಗ ನನಗ ಆಶ್ಚರ್ಯ, ಜೊತೆಗೆ ಒಳಗೊಳಗೆ ಖುಷಿ. ಆದರೆ ನನ್ನ ಸಂಬಂಧಿಕರಂತೂ ಸಪೂರವಾಗುವುದು ಒಳ್ಳೆಯದೆಂದು ಒಪ್ಪಿಕೊಳ್ಳುವುದೇ ಇಲ್ಲ. “ನೀನು ಈಗ ಸರಿಯಾದ ತೂಕದಲ್ಲಿದ್ದಿ. ಇದಕ್ಕಿಂತ ಕಡಿಮೆಯಾಗುವುದು ಬೇಡ.” ಎಂದು ಪುಕ್ಕಟೆ ಉಪದೇಶ ಕೊಡಲು ಅವರು ಮರೆಯುವುದಿಲ್ಲ. ಈಗಕ್ಕಿಂತಲೂ ಸ್ವಲ್ಪ ಜಾಸ್ತಿ ದಪ್ಪಗಿದ್ದ ಸಂದರ್ಭದಲ್ಲಿ ನನ್ನ ಹೊಟ್ಟೆ ಕೂಡಾ ದಪ್ಪಗಿತ್ತು.”ಕಂಗ್ರಾಟ್ಸ್ ಅತ್ತಿಗೆ..ನಾಲ್ಕನೆಯದಕ್ಕೆ ರೆಡಿಯಾಗಿದ್ದೀರಾ?” ಎಂದು ನನ್ನ ನಾದಿನಿಯೊಬ್ಬಳು ಕೇಳಿದಾಗ ನಾನು ತಬ್ಬಿಬ್ಬು. ದಪ್ಪಗಾದರೂ ಚಿಂತೆಯಿರಲಿಲ್ಲ. ತಿಂದದ್ದೆಲ್ಲಾ ಹೊಟ್ಟೆಯ ಸುತ್ತ ಸಂಗ್ರಹವಾದರೆ ಈ ತರದ ಫಜೀತಿಗಳನ್ನು ಎದುರಿಸಬೇಕಾದೀತು. ಹಾಗಾಗಿ ನನ್ನ ತೂಕಕ್ಕೆ ನಾನೊಂದು ಮಿತಿ ಹೇರಿದ್ದೇನೆ. ಆ ಗಡಿ ದಾಟುವಾಗ ತೂಕ ಇಳಿಸುವ ಕಸರತ್ತು .
.
ಇತ್ತೀಚೆಗೆ ನನ್ನ ತಂಗಿ ಫೋನ್ ಮಾಡಿ ಎಚ್ಚರಿಸಿದಳು. “ಅಕ್ಕಾ, ತೂಕ ಇಳಿಸಲಿಕ್ಕೆಂದು ದಿನವೂ ಸೋರೆಕಾಯಿ ಜ್ಯೂಸ್ ಕುಡಿಯುತ್ತಿದ್ದವಳೊಬ್ಬಳು ಅದರಂದಾಗಿ ಸತ್ತು ಹೋದಳು. ಸಿಕ್ಕಾಪಟ್ಟೆ ಏನೇನನ್ನೆಲ್ಲ ಪರೀಕ್ಷಿಸಲು ಹೋಗಬೇಡ. ಪ್ರಾಣಕ್ಕಿಂತ ಹೆಚ್ಚಲ್ಲ ತೂಕ.” ತೂಕ ಹೆಚ್ಚಾಗಬಾರದೆಂಬ ಮನಸ್ಸಿದ್ದರೂ ನಾನು ದೇಹದಂಡನೆ ಹಾಗೂ ಕಟ್ಟುನಿಟ್ಟಿನ ಆಹಾರದ ಪಥ್ಯಗಳಿಂದ ಬಲುದೂರ. ಸ್ವೀಟ್ಸ್, ಐಸ್ ಕ್ರೀಂ ಇತ್ಯಾದಿ ನನ್ನ ಫೇವರೆಟ್. ಅದನ್ನೆಲ್ಲಾ ಬಿಟ್ಟು ನಾನಂತೂ ಯಾವ ಸಾಹಸಕ್ಕೂ ಇಲ್ಲ. ಅವನ್ನೆಲ್ಲ ದೂರವಿಟ್ಟರೆ ನಾನು ಸ್ಲಿಮ್ ಆಗಬಹುದೇನೋ? ನನಗೆ ಸ್ಲಿಮ್ ಆಗುವ ದುರಾಸೆಯಿಲ್ಲ. ಆದರೆ ಅಡ್ಡಾದಿಡ್ಡಿ ಬೆಳೆಯುವ ಬಗ್ಗೆ ಭಯವಿದೆ. ಅದಕ್ಕೆ ಸಣ್ಣಮಟ್ಟಿನ ಕೆಲವು ಪ್ರಯೋಗಗಳು ಅಷ್ಟೇ. ಸ್ಲಿಮ್ ಬ್ಯೂಟಿ ಆಗುವುದೇನೂ ಬೇಡ. ಆದರೆ ಧಡೂತಿಯೆಂದು ಕರೆಯಲ್ಪಡಬಾರದೆಂಬ ನನ್ನ ಯೋಚನೆಗೆ ಸದ್ಯದ ಮಟ್ಟಿಗೆ ನನ್ನ ಶರೀರ ಸ್ಪಂದಿಸುತ್ತಿದೆ. ವಾಕಿಂಗ್ ಹೋಗಲು, ವ್ಯಾಯಾಮ ಮಾಡಲು ಸಮಯವಿಲ್ಲ. ಬಾಯಿಚಪಲಕ್ಕೆ ಕಡಿವಾಣವೂ ಇಲ್ಲ. ಹೊಟ್ಟೆ ಬಿರಿಯೆ ತಿನ್ನುವುದಿಲ್ಲವಾದರೂ ಉಪವಾಸವಿರುವುದಿಲ್ಲ ಆದರೂ ತೂಕ ಹೆಚ್ಚಬಾರದೆಂಬುದು ದುರಾಸೆಯೆಂದು ನೀವೆಲ್ಲಾ ಹೇಳ್ತೀರೋ ಏನೋ? ಸರಳ,ಸುಲಭ ತೂಕ ನಿಯಂತ್ರಿಸುವ ನನ್ನ ಪ್ರಯೋಗಗಳೊಂದಿಗೆ ಸ್ಥಿರವೆನ್ನಬಹುದಾದ ತೂಕದೊಂದಿಗೆ ನಾನು ಮುನ್ನುಗ್ಗುತ್ತಿದ್ದೇನೆ. ಮಧ್ಯವಯಸ್ಸಲ್ಲಿ ಮಧ್ಯಪ್ರದೇಶ(ಹೊಟ್ಟೆಯ ಭಾಗ) ವಿಸ್ತರಿಸಬಹುದೆಂಬ ಭಯವಿದ್ದರೂ ಸದ್ಯಕ್ಕೆ ನನ್ನ ತೂಕದೊಂದಿಗೆ ನಾನು ಖುಷಿಯಾಗಿದ್ದೇನೆ.
.
ತೂಕ ನಿರ್ವಹಣೆಯ ಕತೆ ಚೆನ್ನಾಗಿದೆ. ನಾನೂ ಒಂದಾನೊಂದು ಕಾಲದಲ್ಲಿ ಸಪೂರವಿದ್ದೆ! ಈಗ ತೂಕ ಕಡಿಮೆ ಮಾಡಲು ವ್ಯಾಯಾಮ, ನಡಿಗೆ ಮಾಡುತ್ತಾ, ಬೇಕೆನಿಸುದದ್ದನ್ನು ತಿನ್ನುತ್ತಾ ಹಾಯಾಗಿದ್ದೇನೆ!
ನನ್ನ ಸಮಸ್ಯೆ ನೀವು ಬರೆದಂತಿದೆ…a very good article. Jessy mam
Very nice mam