ಹಾದು ಹೋಗುವ ಭಾವನೆಗಳ ನಡುವೆ!

Share Button

ಶ್ರುತಿ ಶರ್ಮಾ, ಬೆಂಗಳೂರು.

ಕೆಲ ಸಮಯದ ಹಿಂದೆ ನಡೆದ ಕೇರಳದ ನಟಿಯೊಬ್ಬಳ ಮೇಲಿನ ಆಕ್ರಮಣ, ಕಿರುಕುಳಗಳ ಘಟನೆ ಇನ್ನೂ ಹಸಿ ಹಸಿಯಾಗಿರುವಾಗಲೇ, ಕೇರಳದ ಮತ್ತೊಬ್ಬ ನಟಿ ರೈಲು ಪ್ರಯಾಣದ ಸಂದರ್ಭದಲ್ಲಿ ಮೇಲಿನ ಬರ್ಥ್ ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನಿಂದ ಕಿರುಕುಳ ಯತ್ನಕ್ಕೆ ಈಡಾದ ಘಟನೆ ನಡೆಯಿತು.

ಈ ಘಟನೆ ನೂರಾರು ಹೆಣ್ಣುಮಕ್ಕಳು ದಿನನಿತ್ಯ ಎದುರಿಸುತ್ತಿರುವ ಘಟನೆಗಳಂತಿರುವುದಾದರೂ ಆಕೆ ಆ ನಂತರ ನೀಡಿದ ಹೇಳಿಕೆ ವಿಷಾದಕರವಾಗಿ ಗಮನ ಸೆಳೆಯಿತು. ತಾನು ಗಾಬರಿಯಿಂದ ಕಿರುಚಾಡಿದ್ದರೂ ಸುತ್ತಲಿದ್ದ ಯಾವೊಬ್ಬ ವ್ಯಕ್ತಿಯೂ ಕಮಕ್ ಕಿಮಕ್ ಎನ್ನಲಿಲ್ಲ ಎಂದು ಆಕೆ ಹೇಳುತ್ತಾಳೆ.  ಆಗ ಅನಿಸಿದ್ದು, ಈಕೆ ಇದೇ ಘಟನೆಯನ್ನು ಫ಼ೇಸ್ ಬುಕ್ ನಲ್ಲಿ ಬರೆದು ಹಾಕಿದ್ದರೆ, ಕೋಟ್ಯಂತರ ಮಂದಿ ಕ್ಷಣ ಕ್ಷಣಕ್ಕೂ ಸ್ಪಂದಿಸುತ್ತಿದ್ದರು, ತಮ್ಮ ಮುಖಚಿತ್ರವನ್ನು ಅವಳ ಚಿತ್ರಕ್ಕೆ ಬದಲಾಯಿಸಿ ಒಂದಷ್ಟು ಘನವಾದ ಅಡಿಬರಹಗಳನ್ನೂ ಬರೆದು ಹಾಕುತ್ತಿದ್ದರು. ಆದರೆ ಇವೆಲ್ಲಾ ಬರಿಯ ಜಾಲತಾಣಗಳ ಪ್ರಪಂಚ ಮಾತ್ರ!

ಒಂದು ಯಾವುದೋ ಅಪರಾಧದ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡಿದಾಗ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅದರ ಬಗೆಗಿನ ಚರ್ಚೆಗಳಾಗುವುದನ್ನು ನೋಡುತ್ತೇವೆ. ಹಿಂದೆ ಒಂದು ರೇಪ್ ಮತ್ತು ಕೊಲೆ ಪ್ರಕರಣ ಸಂಬಂಧಿತ ದಿನನಿತ್ಯ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿ ಪ್ರೊಫ಼ೈಲ್ ಚಿತ್ರಗಳನ್ನು ಬಲಿಯಾದ ಹುಡುಗಿಯ ಭಾವಚಿತ್ರವಾಗಿ ಬದಲಾಯಿಸಿದವರು, ಪೂರ್ಣ ಕಪ್ಪು ಚಿತ್ರಗಳನ್ನು ಒಂದು ದಿನ ಕಾಲ ತಮ್ಮ ವಾಟ್ಸಾಪ್ ಸ್ಟಾಟಸ್ಗಳನ್ನಾಗಿ ಮಾಡಿದವರು ಸಾಕಷ್ಟು ಮಂದಿ. ಒಂದು ಹಂತದಲ್ಲಂತೂ ಒಂದಷ್ಟು ವ್ಯಕ್ತಿಗಳು ಅಪರಾಧಿಯನ್ನು ಪೋಲಿಸರು ಹಿಡಿದು ಕೊಟ್ಟರೆ ತಾವು ಕಲ್ಲು ಹೊಡೆದು ಸಾಯಿಸುತ್ತೇವೆಂದು ಭಾವಾವೇಶಕ್ಕೆ ಒಳಗಾಗಿ ಕಮೆಂಟಿಸುತ್ತಿದ್ದುದೂ ಅದಕ್ಕೆ ಒಂದಷ್ಟು ಸಹಮತಿ ವ್ಯಕ್ತಪಡಿಸುವ ಪ್ರತಿಕ್ರಿಯೆಗಳೂ ಕಂಡು ಬಂದಿತ್ತು. ನಿಜಕ್ಕೂ ಆ ಅಪರಾಧಿಯನ್ನು ಇವರ ಮುಂದೆ ತಂದು ನಿಲ್ಲಿಸಿದರೆ ಕಲ್ಲು ಹೊಡೆದು ಸಾಯಿಸಲು ಇದೇ ವ್ಯಕ್ತಿಗಳು ಮುಂದಾಗುವರೇ?!

ಮುಂದೆ ಯಾವತ್ತೋ ಅಪರಾಧಿ ಬೇಟೆಯಾದಾಗಲಂತೂ ಹೊಚ್ಚಹೊಸ ವಿಷಯಗಳು ಜಾಲತಾಣಗಳಲ್ಲಿ ರಾರಾಜಿಸುತ್ತಿರುತ್ತವೆ, ಯಾರೂ ಹಿಂದೊಮ್ಮೆ ಇನ್ಯಾರೋ ನುಡಿದ ಮಾತನ್ನು ಪ್ರಶ್ನಿಸುವಂತಹ ಕೆಲಸಕ್ಕೆ ಸಾಧಾರಣವಾಗಿ ಹೋಗುವುದಿಲ್ಲ, ಅದರ ನೆನಪಂತೂ ಹೆಚ್ಚಾಗಿ ಮರೆಯಾಗಿರುತ್ತದೆ. ಬಹಳ ಸಹಜವಾಗಿ ಹೊಸ ಸುದ್ದಿಗಳ ಭರಪೂರ ಪ್ರವಾಹದಲ್ಲಿ ಹಳೆ ವಾರ್ತೆಗಳು ಕೊಚ್ಚಿ ಹೋಗಿರುತ್ತವೆ.

ಸನ್ನಿವೇಶ ಸೃಷ್ಟಿಸುವ ಭಾವನೆಗಳ ತೀವ್ರತೆಯಲ್ಲಿ ಜಾಲತಾಣಗಳಲ್ಲಿ ಯಾರದೇ ಜವಾಬ್ದಾರಿಗೊಳಪಡದ ಹೇಳಿಕೆಗಳನ್ನು ಕೊಡುವ ಮನುಷ್ಯ ತಾನು ನಿಜಕ್ಕೂ ಇಂತಹ ಸಂದರ್ಭವೊಂದರಲ್ಲಿ ಹೇಗೆ ವರ್ತಿಸುವೆನೆಂಬ ಸ್ವಯಂ ಅವಲೋಕನಕ್ಕೆ ಒಳಗಾಗಬೇಕಿದೆ.

ನಟಿ/ಗಾಯಕಿ ಅಲೀಸಾ ಮಿಲಾನೋ ತನ್ನ ಟ್ವೀಟ್ ಒಂದರಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರೆಲ್ಲರೂ #metoo ಎಂದು ಉತ್ತರಿಸಲು ಕೇಳಿಕೊಳ್ಳುತ್ತಾರೆ. ಅದಕ್ಕೆ ಬಂದ ಸ್ಪಂದನೆ ಅಪಾರ. ಮಹಿಳೆಯರು ಮಾತ್ರವಲ್ಲ, ಪುರುಷರೂ ಕೂಡಾ ತಮಗೂ ಕೂಡಾ ಈ ತೆರನೆಯ ಅನುಭವಗಳಾಗಿದುದನ್ನು ಹೇಳಿಕೊಳ್ಳುತ್ತಾ ಟ್ವಿಟ್ಟರ್ ನಲ್ಲಿ ಆರಂಭವಾದ ಈ ಪ್ರಚಾರ ಫ಼ೇಸ್ಬುಕ್, ವಾಟ್ಸಾಪ್ ಗಳನ್ನೂ ಪ್ರವೇಶಿಸಿತು. ಇದಾಗಿ ತಿಂಗಳುಗಳುರುಳಿವೆ. ಆದರೆ ಅಲೀಸಾ ಮಿಲಾನೋ ಉದ್ದೇಶಿಸಿದಂತೆ ಇದು ಎಷ್ಟು ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿದೆ ಎಂಬುದು ಪ್ರಶ್ನೆಚಿಹ್ನೆಯಾಗಿಯೇ ಉಳಿದಿದೆ.

ಜಾಲತಾಣಗಳಲ್ಲಿ ಯಾವುದೋ ಘಟನೆಯ ತೀವ್ರತೆಯಲ್ಲಿ ಕಂಡು ಬರುವ ಹೇಳಿಕೆಗಳಲ್ಲಿ ಹೆಚ್ಚಾಗಿ ಕಂಡುಬರುವುದು “ಪಾಸಿಂಗ್ ಎಮೋಷನ್ಸ್” ಅಥವಾ ಹಾದು ಹೋಗುವ ಭಾವನೆಗಳು. ಒಂದೇ ಘಟನೆಯು ಕಳೆದು ಕೆಲ ತಿಂಗಳುಗಳಾದ ಮೇಲೆ ಮೊದಲಿದ್ದ ಅದೇ ತೀವ್ರ ಭಾವನೆಗಳಿರುತ್ತವೆಯೋ ಪರೀಕ್ಷಿಸಿಕೊಳ್ಳಿ, ಮನುಷ್ಯ ಸಹಜವಾಗಿ ಅದಿರುವುದಿಲ್ಲ. ಈ ರೀತಿಯಾಗಿ ಬಹಳ ದುಃಖ ತರುವ ಅಥವಾ ಖುಷಿ ಕೊಡುವ ಅಥವಾ ಇನ್ನವುದೇ ತೆರನಾದ ಭಾವನೆಗಳು ಮುಂದೆಯೂ ಇದೇ ರೀತಿಯಲ್ಲಿರಬೇಕೆಂದಿಲ್ಲ.

ಒಮ್ಮೆ ಹೀಗೆ ಬಂದು ಹಾಗೆ ಹೋಗುವ ಭಾವನೆಗಳನ್ನು ಅದು ಯಾವುದೋ ಉದ್ವೇಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುವ ಮೊದಲು ಒಂದು ಕ್ಷಣ ತೊಂದರೆಗೀಡಾದವರ, ಅವರ ಕುಟುಂಬಿಕರ ಅಥವಾ ಇನ್ನಾವುದೇ ರೀತಿಯಲ್ಲಿ ಸಂಬಂಧಪಟ್ಟವರ ಮನಸ್ಥಿತಿಗಳನ್ನೂ ತಕ್ಕಡಿಯ ಇನ್ನೊಂದು ತಟ್ಟೆಯಲ್ಲಿಟ್ಟು ತೂಗಿ ನೋಡಿದರೆ ಒಳಿತು. ಜಾಲತಾಣಗಳಲ್ಲಿನ ಬರಹಕ್ಕೆ ಸಿಗುವ ಮೆಚ್ಚುಗೆ, ಪ್ರತಿಕ್ರಿಯೆಗಳ ಹಪಹಪಿಯೋ ಅಥವಾ ನಿಜವಾದ ಕಾಳಜಿಯೋ ಭಾವನೆಯ ಹಿಂದಿನ ಮೂಲಮರ್ಮವೆಂದು ಅರಿತುಕೊಳ್ಳಲಿರುವ ಸಮಯ ಮೀಸಲಿಟ್ಟರೆ ಒಂದಷ್ಟು ಆರೋಗ್ಯಕರ ವಿಚಾರಧಾರೆ, ಚರ್ಚೆಗಳನ್ನು ಸಾಧಿಸಬಹುದು.

– ಶ್ರುತಿ ಶರ್ಮಾ, ಬೆಂಗಳೂರು.

2 Responses

  1. ಆಶಾ says:

    ಓದಿದೆ

  2. Pallavi Bhat says:

    ಯೋಚಿಸಬೇಕಾದ ವಿಚಾರ. ಸಾಮಾಜಿಕ ಜಾಲತಾಣವೆಂಬ “ವರ್ಚುವಲ್ ವರ್ಲ್ಡ್” ನಲ್ಲಿ ತೋರಿಸಲ್ಪಡುವ ಕಳಕಳಿಯ ಒಂದೆರಡು ಶೇಕಡಾವಾದರೂ ನಿಜ ಪ್ರಪಂಚದಲ್ಲಿ ತೋರಿಸಿದರೆ ಒಂದಷ್ಟು “ಮೀ ಟೂ” ಗಳು ಕಡಿಮೆಯಾಗಬಹುದೇನೋ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: