ಕನ್ನಡಿ
ಗೆಳತಿ,
ನಿನ್ನ ನೋವಿನಲ್ಲೂ
ನಿನ್ನ ನಲಿವಿನಲ್ಲೂ
ನಿನ್ನೆಲ್ಲಾ ಭಾವನೆಗಳಲ್ಲೂ
ನಿನ್ನನ್ನು ನೀನಾಗಿಯೇ ತೋರಿಸುವ
ನಿಜವಾದ ಗೆಳೆಯ ನಾನು.
ನೀನಾವ ಮುಖವಾಡ ಹಾಕಿದರೂ
ನೈಜತೆಯೋ, ನಾಟಕವೋ
ಯಾವುದಾದರೂ ಸರಿಯೆ;
ನಿನ್ನ ಕಣ್ಣಿನಲ್ಲಿ ನಿನ್ನದೇ
ಪ್ರತಿಬಿಂಬ ತೋರಿಸಿಕೊಡುವ
ಅಂತರಂಗದಾ ಸ್ನೇಹಿತ ನಾನು.
ಅಳುವಾಗ ನಿನ್ನ ಕಣ್ಣೀರು
ನಗುವಾಗ ನಿನ್ನ ನಗೆಮಲ್ಲಿಗೆ
ಆರಿಸಿಕೊಳ್ಳಲಾಗದು ಎನಗೆ
ಕೇವಲ ತೋರಿಸಬಲ್ಲೆ ನಿನಗೆ
ನಿನ್ನಂತರಂಗದ ಭಾವನೆ
ಹೊರಹೊಮ್ಮುವುದು ಕೇವಲ ನನ್ನೆದುರಿಗೆ.
ನೀ ಸೀರೆ ಉಟ್ಟಾಗ
ಒಡವೆ ತೊಟ್ಟಾಗ
ಮುಂಗುರುಳ ತೀಡಿದಾಗ
ಅಲಂಕಾರದಿ ಮೈಮರೆತಾಗ
ನಾಚುವ ನಿನ್ನ ಮೊಗದ ಅಂದ
ನನಗದು ಪರಮಾನಂದ.
ನನ್ನ ತುಂಬಾ ನೀನು
ನಿನ್ನ ಕಣ್ಣೊಳಗೆ ನಾನು
ನಿನ್ನ ಭಾವನೆಗಳ ಪ್ರಪಂಚ
ಶುರುವಾಗುವುದೇ ನನ್ನಿಂದ
ನೀನೆಲ್ಲಿಗೆ ಹೋದರೂ
ಸದಾ ನಿನ್ನೊಂದಿಗಿರುವ ಸಂಗಾತಿ ನಾನು.
ನಿನ್ನ ಜೀವನದ ಪ್ರತಿಯೊಂದು ಹಂತ
ನನ್ನ ನಿನ್ನ ಜೊತೆ ಅನಂತ
ನಮ್ಮಿಬ್ಬರ ಏಕಾಂತ
ಅದು ನಮ್ಮಿಬ್ಬರಿಗೆ ಸ್ವಂತ
ಉತ್ತರಿಸು ಈಗ ಏನಂತ
ಹೂಂ ಅಂತ ಹೂಂ ಅಂತ.
-ನಳಿನಿ. ಟಿ. ಭೀಮಪ್ಪ. ಧಾರವಾಡ