ಕಾಗದ ಬಂದಿದೆಯೇ …

Share Button

ಸಂಘಜೀವಿಯಾದ ಮಾನವನು ಮಾಹಿತಿಯನ್ನು ಇನ್ನೊಬ್ಬರಿಗೆ ರವಾನಿಸುವುದಕ್ಕಾಗಿ ಮನುಷ್ಯನು ಕಂಡುಕೊಂಡ ಮಾಧ್ಯಮಗಳು ಹಲವಾರು. ಶಿಲಾಯುಗದ ರೇಖಾಚಿತ್ರಗಳು, ಸಂಜ್ಞೆಗಳಿಂದ ಆರಂಭವಾದ ಸಂವಹನವು ಭಾಷೆಯ ಉಗಮವಾದ ಮೇಲೆ  ಸಂಕೇತ ಭಾಷೆ, ಮೌಖಿಕ ಭಾಷೆ, ತಮಟೆ ಬಡಿದು ಡಂಗುರ ಸಾರಿಸುವುದು, ದೂತರ ಮೂಲಕ ಸಂದೇಶ ರವಾನೆ,   ವಿವಿಧ ಪ್ರಕಾರಗಳ  ಓಲೆಗಳು, ಪತ್ರಗಳ ಮೂಲಕ ಮುಂದುವರಿಯಿತು. ಪತ್ರಗಳನ್ನು ಸಂಬಂಧಿತರಿಗೆ ತಲಪಿಸುವುದಕ್ಕಾಗಿ ಅಂಚೆ ವ್ಯವಸ್ಥೆ ಆರಂಭವಾಯಿತು. ಭಾರತದಲ್ಲಿ 1764 ರಲ್ಲಿ , ಅಂದಿನ ಬ್ರಿಟಿಷ್ ಸರಕಾರವು ಮುಂಬಯಿಯಲ್ಲಿ ಪ್ರಥಮ ಅಂಚೆ ಕಛೇರಿಯನ್ನು ಸ್ಥಾಪಿಸಿತು.

ಹೀಗೆ ಆರಂಭವಾದ ಅಂಚೆ ಕಛೇರಿಯ ಕಾರ್ಯಕಲಾಪಗಳು ಬಹುವಾಗಿ ವಿಸ್ತಾರಗೊಂಡು,  ದೇಶದ  ಉದ್ದಗಲಕ್ಕೆ ವ್ಯಾಪಿಸಿ, 1854 ರಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಗಳಿಸಿತು.  ಇದೇ ವರ್ಷ ಅಂಚೆ ಇಲಾಖೆಯ ಅಧಿಕೃತ ಸ್ಟ್ಯಾಂಪ್ ಬಿಡುಗಡೆಯಾಯಿತು. ಕಾಲಾನಂತರ ಪಿನ್ ಕೋಡ್ ವ್ಯವಸ್ಥೆ ಚಾಲನೆಗೆ ಬಂತು. ಕಳೆದ ಇಪ್ಪತ್ತು ವರ್ಷಗಳವರೆಗೂ ಜನರ ನಡುವೆ ಮಾಹಿತಿ ವಿನಿಮಯಕ್ಕೆ ಪತ್ರಗಳೇ ಮುಖ್ಯ ಮಾಧ್ಯಮವಾಗಿದ್ದುವು.  ಈಗ ಮಧ್ಯವಯಸ್ಸಿನಲ್ಲಿರುವ ಹೆಚ್ಚಿನ ಕನ್ನಡಿಗರು ತಮ್ಮ ಶಾಲಾದಿನಗಳಲ್ಲಿ  “ ಅಂಚೆಯ ಅಣ್ಣ ಬಂದಿಹೆ ಚಿಣ್ಣ,  ಅಂಚೆಯ ಹಂಚಲು ಮನೆಮನೆಗೆ, ಸಾವಿರ ಸುದ್ದಿಯ ಬೀರುತ ಬರುವನು ತುಂಬಿದ ಚೀಲವು ಹೆಗಲೊಳಗೆ “ಎಂಬ ಶಿಶುಗೀತೆಯನ್ನು ಹಾಡಿದವರೇ.l

ಅಂಚೆಯ ಅಣ್ಣ ಅಥವಾ ಪೋಸ್ಟ್ ಮ್ಯಾನ್ ಊರಿನ ಪ್ರತಿಯೊಬ್ಬರಿಗೂ ಅಪ್ತನಾಗುವ ಸರಳ ವ್ಯಕ್ತಿ. ಜನರಿಗೆ ಖುಷಿ ಕೊಡುವ ವಾರ್ತೆ, ದು:ಖದ ವಾರ್ತೆ ಎರಡನ್ನೂ ತಂದೊಪ್ಪಿಸುವ ಅಂಚೆಯಣ್ಣ ಸೈಕಲ್ ನಲ್ಲಿ ಮನೆಯಂಗಳಕ್ಕೆ ಬಂದು ಟ್ರಿನ್ ಟ್ರಿನ್ ಬೆಲ್  ಮಾಡಿದಾಗ  ಒಂದು ರೀತಿಯ ಸಂಚಲನವಾಗುತ್ತಿತ್ತು. ಆತನ ಖಾಕಿ   ಚೀಲದಲ್ಲಿ ಹಳದಿ ಬಣ್ಣದ ಕಾರ್ಡ್ ಗಳು,  ತಿಳಿನೀಲಿ ಬಣ್ಣದ ಇನ್ ಲ್ಯಾಂಡ್ ಪತ್ರಗಳು, ಕಂದು ಬಣ್ಣದ ಕವರ್ ಗಳು, ಯಾರದೋ ಮನೆಗೆ  ಬಂದ ಮನಿ ಆರ್ಡರ್ , ಪಾರ್ಸೆಲ್ ,  ಪತ್ರಿಕೆಗಳು ಹೀಗೆ ಬಟವಾಡೆಯಾಗಬೇಕಾದ ವಸ್ತುಗಳು ತುಂಬಿರುತ್ತಿದ್ದುವು.  ಮನೆಯವರಿಗೆ ಕೊಡಬೇಕಾದ ಪತ್ರಗಳನ್ನು ಕೊಟ್ಟು  ಸ್ವಲ್ಪ ವಿರಮಿಸುವ ಅಂಚೆಯಣ್ಣನಿಗೆ ಕಾಲಕ್ಕೆ ತಕ್ಕತೆ ಬಿಸಿಕಾಫಿಯನ್ನೋ, ತಂಪಾದ ಮಜ್ಜಿಗೆಯನ್ನೋ  ಕುಡಿಯಲು ಕೊಡುವ ಅಥವಾ ಮೆಲ್ಲವು ಎಲೆ-ಅಡಿಕೆ ತಟ್ಟೆಯನ್ನೊಡ್ಡುವ ಆತ್ಮೀಯತೆ ಮನೆಯವರಿಗೆ ಇರುತಿತ್ತು. ಅಂಚೆಯಣ್ಣನಿಗೂ ಧಾವಂತವಿರುತ್ತಿರಲಿಲ್ಲ. ಸ್ವಲ್ಪ ಲೋಕಾಭಿರಾಮ ಮಾತಾಡುತ್ತಾ, ಅವಶ್ಯವಿದ್ದರೆ ತಾನೇ ಪತ್ರವನ್ನು ಓದಿ ಹೇಳುವುದು ಅಥವಾ ಪತ್ರವನ್ನು ಬರೆದು ಕೊಡುವುದು ಹೀಗೆ ಸಮಾಜಸೇವೆ ಮಾಡಲೂ ಆತ ಸಿದ್ಧ.  ಪ್ರತಿಮನೆಗಳಲ್ಲಿಯೂ ಪತ್ರವನ್ನು ತಲಪಿದ ಕ್ಷಣ ಒಮ್ಮೆ ಓದಿ, ಆಮೇಲಿ ನಿಧಾನವಾಗಿ ಇನ್ನೊಮ್ಮೆ ಓದಿ, ಪುನ: ಮನೆಮಂದಿಯೆಲ್ಲಾ ಒಟ್ಟಾಗಿ ಚರ್ಚಿಸುವ ಪದ್ಧತಿಯೂ ಇತ್ತು.

                                                  (ಸಾಂದರ್ಭಿಕ ಚಿತ್ರ: ಅಂತರ್ಜಾಲದಿಂದ)

ಹೊಸದಾಗಿ ಮದುವೆ ಆಗಿ ವೃತ್ತಿನಿಮಿತ್ತ ದೂರದ ಊರಿನಲ್ಲಿರುವ  ನಲ್ಲ-ನಲ್ಲೆಯರಿಗೆ ಪತ್ರವೇ  ಸಂಜೀವಿನಿ. ಮನೆಯ ಮಹಿಳೆಯರಿಗೆ ತವರಿನಿಂದ ಪತ್ರ ಬಂದರೆ ಬಲು ಹಿಗ್ಗು. ಇನ್ನು ಅಪ್ಪ-ಅಮ್ಮಂದಿರಿಗೆ ದೂರದೂರಿನಲ್ಲಿ ಕೆಲಸದಲ್ಲಿರುವ ಮಕ್ಕಳು ಬರೆದ ಪತ್ರವನ್ನು ಪದೇ ಪದೇ ಓದುವುದರಲ್ಲಿ ಸಂಭ್ರಮ, ಅಂಚೆಯ ಮೂಲಕ ಪತ್ರಿಕೆಗಳ ಚಂದಾದಾರರಾದವರಿಗೆ ನಿಗದಿತ ದಿನ ಪತ್ರಿಕೆ ಬಾರದಿದ್ದರೆ ಚಡಪಡಿಕೆ. ಅಂಚೆಯಣ್ಣ ನಿಸ್ಸಂಶಯವಾಗಿ ಪತ್ರ ತಲಪಿಸುತ್ತಾನೆಂದೊ ಗೊತ್ತಿದ್ದರೂ, ಆತನನ್ನು ಕಂಡಾಗ ‘ನಮಗೆ ಏನಾದರೂ ಕಾಗದ ಬಂದಿದೆಯೇ’ ಎಂದು ಕೇಳುವುದು ತೀರಾ ಸಹಜವಾಗಿತ್ತು. ಅಕ್ಕಪಕ್ಕದ ಮನೆಯವರೂ ಪೋಸ್ಟ್ ಮ್ಯಾನ್ ಬಂದಿದ್ದು ಗೊತ್ತಾದರೆ ‘ಕಾಗದ ಬಂದಿದೆಯೆ?’ ಎಂದು ವಿಚಾರಿಸುತ್ತಾ ಮಾತಿಗಿಳಿಯುವರು. ಹೀಗೆ ಅಂಚೆಯು ಬೆಸೆಯುತ್ತಿದ್ದ  ಸಾಮಾಜಿಕ ಬಾಂಧವ್ಯ ಅನನ್ಯ.  ಮನೆಯ ಹಿರಿಯರಿಂದ ಆಶೀರ್ವಾದ ಬೇಡುತ್ತಾ, ಕಿರಿಯ ಸದಸ್ಯನನ್ನೂ ನೆನೆಯುತ್ತಾ ಬರೆಯುವ ಆ ಕಾಗದಗಳಲ್ಲಿ ಸಮಗ್ರತೆ ಇರುತ್ತಿತ್ತು.  ಇನ್ನು ಪತ್ರಗಳಲ್ಲಿ ವಿಳಾಸ ಬರೆಯುವ ಜಾಗ ಒಂದು ಬಿಟ್ಟು ಮಿಕ್ಕ ಎಲ್ಲಾ ಕಡೆಗಳಲ್ಲಿ ಅಕ್ಷರಗಳೇ ತುಂಬಿರುತ್ತಿದ್ದುವು.  ಹಳೆಯ ಪತ್ರಗಳನ್ನು ತಂತಿಯೊಂದರಲ್ಲಿ ಪೇರಿಸಿ ಇಡುತ್ತಿದ್ದರು.

ಇನ್ನು ಮನಿ ಆರ್ಡರ್ ಮೂಲಕ ಹಣವನ್ನು ಅಥವಾ ಮೊಮ್ಮಕ್ಕಳ ಭಾವಚಿತ್ರವನ್ನು ಕಳುಹಿಸಿದ್ದಾರೆಂದರೆ ಅವರ ಗ್ರೇಡ್ ಹೆಚ್ಚಿದಂತೆ. ಎಳೆಯ ಉದ್ಯೋಗಾಕಾಂಕ್ಷಿಗಳಿಗೆ ಇಂಟರ್ವ್ಯೂ ಪತ್ರವೋ, ನೇಮಕಾತಿ ಪತ್ರವೋ ಬಂದಿದೆಯೋ ಎಂಬ ತಳಮಳ. ಪ್ರಮುಖ ಪತ್ರಗಳು ಹಾಗೂ ಆಹ್ವಾನಪತ್ರಿಕೆಗಳು ಸಕಾಲದಲ್ಲಿ ಬಾರದೆ ಇದ್ದು  ಅವಮಾನ, ಬಿಗುಮಾನದ ಪ್ರಸಂಗಗಳನ್ನು ಸೃಷ್ಟಿಸುವುದೂ ಮಾಮೂಲಿಯಾಗಿತ್ತು. ರಿಜಿಸ್ಟರ್ಡ್ ಪೋಸ್ಟ್ ಬಂದರೆ ಕುತೂಹಲ ಮಿಶ್ರಿತ ಭಯ, ಲೇಖಕರಿಗೆ ಅಸ್ವೀಕೃತ ಬರಹ ವಾಪಸಾದರೆ  ಸ್ವೀಕರಿಸಲು ಅಳುಕು, ಯಾರಾದರೂ ಸ್ಟ್ಯಾಂಪ್ ಹಚ್ಚದೆ ಕಳುಹಿಸಿದ್ದರೆ ಪಡೆದುಕೊಳ್ಳುವವರು ಹಣ ಕೊಡಬೇಕಾಗಿದ್ದ ಮುಜುಗರ, ಸಮಾರಂಭಕ್ಕೆ ಹೋಗಲು ಮನಸ್ಸಿಲ್ಲವಾದರೆ ಕಾಗದ ಇನ್ನೂ ತಲಪಿಲ್ಲ ಎಂದು ಸಬೂಬು ಹೇಳಬಹುದಾದ ಸಾಧ್ಯತೆ…..ಹೀಗೆ ಹಲವಾರು ಮುಖದ  ಅಂಚೆಯ ಸಂಚಲನವನ್ನು ಹೇಳಿದಷ್ಟೂ ಮುಗಿಯದು. ಆರ್.ಕೆ.ನಾರಾಯಣ್ ಅವರ ‘ಮಿಸ್ಸಿಂಗ್ ಮೈಲ್’ ಕತೆಯಲ್ಲಿ ಬರುವ  ಪೋಸ್ಟ್ ಮ್ಯಾನ್ ನ ಕರ್ತವ್ಯನಿಷ್ಠೆ  ಹಾಗೂ ಸಾಮಾಜಿಕ ಕಾಳಜಿಯ ದ್ವಂದ್ವ ಮುಖಗಳಾಗಿ ಮೂಡಿ ಬಂದು, ‘ತನಪ್ಪ’ ಎಂಬ ಪೋಸ್ಟ್ ಮ್ಯಾನ್ ಪಾತ್ರವನ್ನು ಅಮರವಾಗಿಸಿದೆ.

ತಂತ್ರಜ್ಞಾನದ  ಅವಿಷ್ಕ್ರಾರವಾದ ಮೇಲೆ ಮಾಹಿತಿಯ ಸಂವಹನದಲ್ಲಾದ ಕ್ರಾಂತಿ ಅದ್ಭುತ. ಮೊಬೈಲ್ ಫೋನ್,  ವಾಟ್ಸಾಪ್, ಫೇಸ್ ಬುಕ್ ಇತ್ಯಾದಿಗಳ ಮೂಲಕ ಕ್ಷಣಾರ್ಧದಲ್ಲಿ ಸಂದೇಶ ರವಾನೆಯಾಗುವ ಈ ದಿನಗಳಲ್ಲಿ ಸುದೀರ್ಘ  ಪತ್ರವನ್ನು ಬರೆಯುವ   ಓದುವ ತಾಳ್ಮೆ ಯಾರಿಗೂ ಇಲ್ಲ. ಆದರೆ ಈಗ ಮೊಬೈಲ್ ಫೋನ್ ನ  ಸಂದೇಶದಲ್ಲಿ ಕಳಿಸುವ ನಾಲ್ಕು   ಪದಗಳನ್ನೂ  ಕೋಡ್ ರೂಪದಲ್ಲಿ ಸಂಕ್ಷಿಪ್ತವಾಗಿ  ಬರೆಯುವ ಪರಿ ಆರಂಭವಾಗಿದೆ. ಆ ಸಂದೇಶಗಳಲ್ಲಿ  ಯಾವ ಆಪ್ತತೆಯೂ ಇರುವುದಿಲ್ಲ.  ಇಂತಹ ಪುಟಾಣಿ ಸಂದೇಶಗಳನ್ನೂ  ಮೊಬೈಲ್ ನಲ್ಲಿ ಮೆಮೊರಿಯನ್ನು ಆಕ್ರಮಿಸುತ್ತವೆ ಎಂದು ಆಗಾಗ ಅಳಿಸುವ ಅನಿವಾರ್ಯತೆ ಈ ಕಾಲದ ಮಹಿಮೆ.

ಆದರೆ ಈಗ, ಸುದ್ದಿಯ ತರುವ ಅಂಚೆಯ ಅಣ್ಣನಿಗಾಗಿ ಕಾಯುವ ಕಾತರ ಯಾರಿಗೂ ಇಲ್ಲ. ಹಳ್ಳಿ ಪ್ರದೇಶಗಳಲ್ಲಿಯೂ ಮನೆಮನೆಗೆ ಬಂದು ಪತ್ರ ಬಟವಾಡೆ ಮಾಡುವ ಪದ್ಧತಿ ಬಹುತೇಕ ನಿಂತು ಹೋಗಿದೆ.    ಇನ್ನು ನಗರಪ್ರದೇಶಗಳಲ್ಲಿ ಖಾಸಗಿ ಕೊರಿಯರ್ ವ್ಯವಸ್ಥೆ ಎಲ್ಲೆಡೆ ವ್ಯಾಪಿಸಿದೆ.  ಈಗಿನ ಅಂಚೆಯ ಅಣ್ಣ ಮೋಟಾರ್ ಬೈಕ್ ನಲ್ಲಿ ದಡಬಡನೇ ಬಂದು ಗೇಟಿನಲ್ಲಿ ಇರಿಸಲಾದ  ಕೆಂಪು ಪೋಸ್ಟ್ ಬಾಕ್ಸಿಗೆ ಪತ್ರವನ್ನು ತುರುಕಿ ಯಾರ ಪ್ರತಿಕ್ರಿಯೆಗೂ ಕಾಯದೆ ಧಾವಿಸುತ್ತಾನೆ . ಅಪರೂಪಕ್ಕೆ ಸ್ಕೂಟರ್ ಚಲಾಯಿಸುತ್ತಾ ‘ಪೋಸ್ಟ್ ವುಮನ್’    ಬರುವುದಿದೆ.  ಇನ್ನು ಮನೆಯವರಿಗೂ, ಆ ಪತ್ರಗಳಿಗಾಗಿ ಕಾಯುವ ತವಕವಿಲ್ಲ. ಯಾವುದೋ ಮುದ್ರಿತ ಮಾಹಿತಿ ಇರಬಹುದು, ನಿಧಾನಕ್ಕೆ ನೋಡಿದರಾಯಿತು ಎಂಬ ಭಾವ.  ಪ್ರಪಂಚದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿರುವಾಗ ಅಂಚೆ ಇಲಾಖೆಯೂ ತನ್ನ ಕಾರ್ಯಬಾಹುಳ್ಯವನ್ನು  ಹೆಚ್ಚಿಸಿಕೊಂಡಿದೆ. ಮನಿ ಆರ್ಡರ್, ಸ್ಪೀಡ್ ಪೋಸ್ಟ್, ಇನ್ಸೂರೆನ್ಸ್, ಗ್ರೀಟಿಂಗ್ಸ್ ಪೋಸ್ಟ್, ಬ್ಯಾಂಕಿಂಗ್ ಇತ್ಯಾದಿ ಹಲವು ಸೇವೆಗಳು ಅಂಚೆ ಇಲಾಖೆಯಲ್ಲಿ ಲಭ್ಯ.

ಭಾರತದಲ್ಲಿ 1,55,600 ಕ್ಕೂ ಹೆಚ್ಚು ಅಂಚೆ ಕಛೇರಿಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರಪಂಚದ ಅತ್ಯಂತ ಅಂಚೆ ಬಟವಾಡೆ ವ್ಯವಸ್ಥೆ ಎಂಬುದು ನಮಗೆ ಹೆಮ್ಮೆಯ ವಿಚಾರ. ಹಾಗೆಯೇ ವಿಶ್ವದ ಅತಿ ಎತ್ತರದಲ್ಲಿರುವ ಅಂಚೆ ಕಛೇರಿಯು ಹಿಮಾಚಲ ಪ್ರದೇಶದಲ್ಲಿ , ಸಮುದ್ರ ಮಟ್ಟದಿಂದ 15,500 ಅಡಿ ಎತ್ತರದಲ್ಲಿರುವ  ‘ಹಿಕ್ಕಿಂ’ ಎಂಬಲ್ಲಿದೆ. ಇದು ಕೂಡ ನಮಗೆ ಹೆಮ್ಮೆಯ ದೇಶದ ಹೆಗ್ಗಳಿಕೆ.   ಹಳೆಯದೆಲ್ಲವೂ ಒಳ್ಳೆಯದಲ್ಲ, ಹೊಸತೆಲ್ಲವೂ ಕೆಟ್ಟದಲ್ಲ ಎಂಬಂತೆ ಅಂಚೆ ವ್ಯವಸ್ಥೆಯಲ್ಲಿಯೂ ಹಲವಾರು ನ್ಯೂನತೆಗಳಿವೆ. ಉದಾಹರಣೆಗೆ  ಕೊರಿಯರ್ ಗೆ ಹೋಲಿಸಿದರೆ ನಿಧಾನಗತಿ, ಆನ್ ಲೈನ್ ಸೇವೆಯಲ್ಲಿ ಇನ್ನೂ ಬೆಳೆಯದಿರುವುದು, ಕಡಿಮೆ ಅವಧಿಯ ಸೇವಾ ಅವಧಿ ಇತ್ಯಾದಿ. ಇಂದಿಗೂ ದುರ್ಗಮವಾದ ಹಳ್ಲಿ ಪ್ರದೇಶಗಳಲ್ಲಿ ಅಂಚೆವ್ಯವಸ್ಥೆಯೇ ಪ್ರಮುಖವಾಗಿದೆ.

1874 ಅಕ್ಟೋಬರ್ 09 ರಂದು ಸ್ವಿಜರ್ ಲ್ಯಾಂಡ್ ನಲ್ಲಿ ವಿಶ್ವ ಅಂಚೆ ಒಕ್ಕೂಟವನ್ನು ಸ್ಥಾಪಿಸಲಾಯಿತು.  ಈ ನೆನಪಿಗಾಗಿ  ಪ್ರತಿವರ್ಷ ಅಕ್ಟೋಬರ್  09 ತಾರೀಕನ್ನು ‘ವಿಶ್ವ ಅಂಚೆ ದಿನ’ ಎಂದು  ಆಚರಿಸಲಾಗುತ್ತದೆ.

– ಹೇಮಮಾಲಾ.ಬಿ

4 Responses

  1. ವೀರೇಶ್. ಕೆ.ಟಿ. ಮಾಡ್ಲಾಕನಹಳ್ಳಿ. says:

    ಪೇಸ್ಬುಕ್,ವಾಟ್ಸಪ್ ಮುಂತಾದ ಸಾಮಾಜಿಕ ಜಾಲ ತಾಣಗಳ ಬರಾಟೆಯಲ್ಲಿ .ಪ್ರತಿನಿತ್ಯ ನಮ್ಮೊಂದಿಗಿರುವ ಅಂಚೆಯಣ್ಣ ನನ್ನೆ ಮರೆತಿದ್ದೇವೆ ಮೇಡಂ. ಲೇಖನ ತುಂಬಾ ಚನ್ನಾಗಿದೆ ಮೇಡಂ.

  2. Hema says:

    ಧನ್ಯವಾದಗಳು..

  3. Pushpa Nagathihalli says:

    ಲೇಖನ ನಮ್ಮ ಕಾಲದ ಪೋಸ್ಟ್ ಮ್ಯಾನ್ ಜ್ಞಾಪಿಸಿತು. ಅಳಿಸಂದ್ರದಿಂದ ಪೋಸ್ಟ್ ಮೆನ್ ನಡೆದು ಬರುತ್ತಿದ್ದ. ನಮ್ಮ ಮನೆ ಜಗುಲಿಯ ಮೇಲೆ ಕುಳಿತು ಅವನು ಬರುವ ದಾರಿ ತೋಟದ ಅಂಚಿನವರೆವಿಗು ನಮ್ಮ ನಿರೀಕ್ಷೆಯ ನೋಟ. ಬಂದ ಕಾಗದ ಕೈಲಿಡಿದು ಒಳಗಿರುವ ವಿಷಯದ ಕುತೂಹಲ. ಅಂಚೆಯಣ್ಣನಿಗೆ ತುಂಬಿದ ಮಜ್ಜಿಗೆಲೋಟ ಕೊಡುವ ಕೃತಜ್ಞತೆ.”ಮೇಷ್ಟ್ರೇ “ಎಂದು ಕೂಗುತ್ತಾ ಬರುವ ಅಂಚೆಯವ ನೆಂಟನೇ ಆಗಿಬಿಟ್ಟಿದ್ದ.ಇದೆಲ್ಲಾ ಮುದಕೊಡುವ ನೆನಪುಗಳೆ.ವಂದನೆಗಳು

  4. ಆಶಾ says:

    ಹಳೆಯ‌ ನೆನಪಿಗೆ ತಂದmalange thanks

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: