ಭೂತ ಚೇಷ್ಟೆ…!!

Share Button
ನಮ್ಮ ಪಕ್ಕದೂರಿನ ರಾಮಣ್ಣನಿಗೆ ಅಲ್ಲೇ ಒಂದು ಪುಟ್ಟ ಅಂಗಡಿ. ಊರಿನಲ್ಲಿಯೇ ಬೆಳೆದ ತರಕಾರಿ, ಹಾಗೆಯೇ ಕೆಲವು ದೈನಂದಿನ ಅಗತ್ಯದ ಸಾಮಾನುಗಳು ಅಲ್ಲಿ ಲಭ್ಯವಿರುತ್ತಿದುದರಿಂದ ದಿನದ ವೈವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಅವನ ಅಂಗಡಿ ಇರುವುದು ಊರಿನ ಸ್ಮಶಾನದ ಸಮೀಪ. ಕಡಿಮೆ ಬಾಡಿಗೆಯ ಕಟ್ಟಡ ಮತ್ತೆಲ್ಲಿ ಸಿಗುತ್ತಿತ್ತು ಹೇಳಿ? ಮನೆಯಲ್ಲಿ ಹೆಂಡತಿ ಕಮಲ, ಏಳನೇ ತರಗತಿ ಓದುತ್ತಿದ್ದ ಮಗ ಮೋಹನ ಜೊತೆ ದಿನಗಳು ಚೆನ್ನಾಗಿಯೇ ಕಳೆಯುತ್ತಿದ್ದುವು. ಅಂಗಡಿಯಲ್ಲಿ ಸಹಾಯಕ್ಕೆಂದು ಆಳು ಲೋಕಪ್ಪನನ್ನೂ ಕೆಲಸಕ್ಕೆ ಇಟ್ಟುಕೊಂಡಿದ್ದನು.

ಆ ದಿನ ಊರಿನ ಜಾತ್ರೆ. ಅಂಗಡಿಯಲ್ಲಿ ವ್ಯಾಪಾರ ಸ್ವಲ್ಪ ಜೋರಾಗಿಯೇ ಇತ್ತು. ಮಗನಿಗೆ ಊರ ಜಾತ್ರೆ ಸಲುವಾಗಿ ಶಾಲೆಗೆ ರಜೆ. ಅವನೂ ಅಪ್ಪನಿಗೆಸಹಾಯಕ್ಕೆಂದು ಅಂಗಡಿಯಲ್ಲೇ ಇದ್ದ. ಸಂಜೆಯಾಗುತ್ತಿದ್ದಂತೆ  ರಾಮಣ್ಣ ಮಗನನ್ನು ಮನೆಗೆ ಕಳುಹಿಸಿದ, ಕತ್ತಲೆಗೆ ಮನೆಯಲ್ಲಿ ಮಡದಿ ಒಬ್ಬಳೇ ಆಗುವಳೆಂದು. ರಾತ್ರಿ ಹತ್ತು ಗಂಟೆಗೆಲ್ಲಾ ಕೆಲಸದ ಲೋಕಪ್ಪನನ್ನೂ ಮನೆಗೆ ಕಳುಹಿಸಿದ. ಗಿರಾಕಿಗಳು ಬರುವುದೂ ಕಡಿಮೆಯಾಗಿತ್ತು. ಬಂದಿದ್ದ ಒಂದೆರಡು ಗಿರಾಕಿಗಳನ್ನು ಕಳುಹಿಸಿ ಹೊರಡೋಣವೆಂದುಕೊಂಡ. ಗಂಟೆ ಅದಾಗಲೇ ಹನ್ನೊಂದು. ಬೇಗನೇ ಅವರಿಗೆ ಸಾಮಾನು ಕೊಟ್ಟು ಅಂಗಡಿಯ ಸಾಮಾನುಗಳನ್ನೆಲ್ಲಾ ಭದ್ರಪಡಿಸಿ, ಆ ದಿನದ ದುಡ್ಡನ್ನು ಕಿಸೆಗೆ ಹಾಕಿಕೊಳ್ಳುತ್ತಿದ್ದಂತೆ  ಫಕ್ಕನೆ ಕರೆಂಟು ಕೈಕೊಟ್ಟಿತು.  ಆ ದಿನ ಅಮಾವಾಸ್ಯೆ ಬೇರೆ. ಸುತ್ತಲೂ ಗವ್ವನೆ ಕವಿದ ಕಗ್ಗತ್ತಲು!

ಅಂಗಡಿ ಬಾಗಿಲು ಹಾಕಿ, ಇನ್ನೇನು ಅಲ್ಲೇ ಇದ್ದ ಅವನ ಹಳೆ ಸ್ಕೂಟರ್ ಬಳಿ ಬರುತ್ತಿದ್ದಂತೆ ಬೆಕ್ಕಿನ ಕರ್ಕಶ ಧ್ವನಿ ಕಿವಿಗಪ್ಪಳಿಸಿತು! ರಾಮಣ್ಣನಿಗೆ ಒಮ್ಮೆಲೇ ಎದೆ ಝಲ್ಲೆಂದಿತು. ಸ್ಮಶಾನದಲ್ಲಿ ಅಮಾವಾಸ್ಯೆ ದಿನ ದೆವ್ವಗಳು ಬೆಕ್ಕಿನಂತೆ ಕಿರುಚುತ್ತವೆ ಎಂದು ಎಲ್ಲೋ ಕೇಳಿದ್ದ. ಅದನ್ನು ನೆನೆದು ಕೈಕಾಲು ನಡುಗಲಾರಂಬಿಸಿತು. ಅಕ್ಕ ಪಕ್ಕ ಒಂದು ನರ ಪಿಳ್ಳೆಯೂ ಕಾಣುತ್ತಿರಲಿಲ್ಲ. ಆದದ್ದಾಗಲೆಂದು ಸ್ಕೂಟರಿಗೆ ಕೀ ಹಾಕುತ್ತಿದ್ದಂತೆ ಅತೀ ಸನಿಹದಲ್ಲೇ ಬೆಕ್ಕಿನ ಕರ್ಕಶ ಧ್ವನಿ ಕೇಳಿತು. ಅವನಿಗೆ ಸಂಶಯವೇ ಉಳಿಯಲಿಲ್ಲ. ದೆವ್ವ ಅವನ ಬಳಿಗೇ ಬಂದು ಬಿಟ್ಟಿತ್ತು! ಏನಾದರಾಗಲೆಂದು ಎದೆ ಗಟ್ಟಿ ಮಾಡಿಕೊಂಡು ಸ್ಕೂಟರ್ ಹೊರಡಿಸಿಯೇ ಬಿಟ್ಟ. ಏನು ಮಾಡಲಿ..ಅವನ ಸ್ಕೂಟರ್ ನೊಂದಿಗೇ ಆ ಧ್ವನಿಯೂ ಅವನ ಜೊತೆಗೇ ಹಿಂಬಾಲಿಸಿಕೊಂಡು ಬಂದೇ ಬಿಟ್ಟಿತ್ತು! ಅವನಿಗೆ ಮೈ ಪೂರಾ ಬೆವತು ಹೋಗಿತ್ತು. ಭಯದಿಂದ ಪ್ರಜ್ಞೆ ತಪ್ಪುವುದೊಂದು ಉಳಿದಿತ್ತು. ಹಾಗೋ ,ಹೀಗೋ ,ಹೇಗೋ ಅಂತೂ ಮನೆ ಸೇರಿದ. ಆದರೂ ಆ ಕರ್ಕಶ ಧ್ವನಿ ಆಗಾಗ ಕೇಳುವುದು ಮಾತ್ರ ನಿಂತಿರಲೇ ಇಲ್ಲ! ಸ್ಕೂಟರ್ ನಿಲ್ಲಿಸಿ ಮನೆ ಒಳಗೆ ಬಂದು ಇನ್ನೇನು ಸ್ನಾನಕ್ಕೆಂದು ಹೊರಡುತ್ತಾನೆ,ಹಿಂದೆಂದೂ ಕೇಳಿಸದಷ್ಟು ಕರ್ಕಶವಾಗಿ ಕೇಳಿ ಬಂತು ಧ್ವನಿ!

(ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ )

ಮೆಲ್ಲನೆ ಸ್ವಲ್ಪ ಧೈರ್ಯ ಮಾಡಿ ಮಗನೊಂದಿಗೆ ಸ್ಕೂಟರ್ ಬಳಿ ಬಂದು ಟಾರ್ಚ್ ಹಾಕಿ ಪರಿಶೀಲಿಸಿದ. ನೋಡುತ್ತಾನೆ… ಸ್ಕೂಟರಿನ ಚಕ್ರಗಳ ನಡುವಿನ  ಜಾಗದಲ್ಲಿ ಪುಟ್ಟ ಬೆಕ್ಕಿನ ಮರಿಯೊಂದು ಸಿಕ್ಕಿ ಹಾಕಿಕೊಂಡು ಗಾಯಗೊಂಡು ಅರಚುತ್ತಿತ್ತು. ಅಬ್ಬಾ.. ರಾಮಣ್ಣ ಅಂತೂ ನಿರಾಳನಾದ. ಆದರೆ ಮರುದಿನ ಊರು ಇಡೀ , ದೆವ್ವ ರಾಮಣ್ಣನನ್ನು ಮನೆವರೆಗೂ ಅಟ್ಟಿಸಿಕೊಂಡು ಬಂದುದೇ ದೊಡ್ಡ‌ ಸುದ್ದಿಯಾಗಿ ಎಲ್ಲರ ತಮಾಷೆಗೆ ಒಳ್ಳೆಯ ಗ್ರಾಸವಾದ ಎನ್ನಿ!

  ಶಂಕರಿ ಶರ್ಮ, ಪುತ್ತೂರು.
,

11 Responses

  1. ಸುಬ್ರಹ್ಮಣ್ಯ ಹೆಚ್.ಎನ್. says:

    ಪಾಪ ಬೆಕ್ಕಿನ ಮರಿ.

  2. Gayathri says:

    Good

  3. KVRajalakshmi says:

    ಅಯ್ಯೋ ಪಾಪ…ಆದರೂ ಭಯದ ಆ ಕ್ಷಣಗಳು…

  4. Pallavi Bhat says:

    ಅಯ್ಯೊ.. ಪಾಪ ಬೆಕ್ಕಿನ ಮರಿ.

  5. Vasanthik samethadka says:

    ಸುಂದರ ಸರಳ ಕಥೆ.

  6. ಶ್ರೀದೇವಿ says:

    ಪಾಪ ಬೆಕ್ಕು. ಸಾಯದೇ ಉಳಿದಿದ್ದು ಆಶ್ಚರ್ಯ.

  7. nalini bheemappa says:

    ಹೆದರಿದವನಿಗೆ ಹಗ್ಗವೂ ಹಾವಾಗಿ ಕಾಣುವ ಹಾಗೆ …ಚಂದವಿದೆ

  8. Shankari Sharma says:

    ಓದಿದ, ಮೆಚ್ಚಿದ ತಮಗೆಲ್ಲರಿಗೂ ಅಭಿನಂದನೆಗಳು

  9. shankari shama says:

    ಕತೆಯನ್ನು ಓದಿದ , ಮೆಚ್ಚಿದ ಎಲ್ಲ ಸಹೃದಯರಿಗೆ ಧನ್ಯವಾದಗಳು.

  10. Mallika j rai says:

    ಏನಾಗುವುದೋ ಎಂಬ ಕುತೂಹಲದೊಂದಿಗೆ ಚಂದಗಾಣಿಸಿದೆ ಕತೆ.

  11. ಆಶಾ says:

    Papa puche

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: