ಅಮ್ಮ, ಪ್ರಕೃತಿ, ಸಾಕು ಮಾಡು ತಾಯಿ
ಎಲ್ಲಿ ನೋಡಿದರೂ, ಯಾರ ಕೇಳಿದರೂ ವರುಣನ ಆರ್ಭಟದ ಅಬ್ಬರವೇ ಕೇಳುತ್ತಿದೆ, ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಸಂಖ್ಯ ವೀಡೀಯೋಗಳು,ಚಿತ್ರಗಳು ‘ಅಬ್ಬಾ, ಪ್ರಕೃತಿ ಮುನಿದರೆ ಮಾನವರು ಒಂದು ಅಣುವಿನಷ್ಟೇ’ ಅಂತನಿಸದಿರದು. ಅದೆಷ್ಟೋ ವರುಷಗಳಿಂದ ದುಡಿದು ಒಟ್ಟಾಗಿಸಿ ಕಟ್ಟಿದ ಮನೆ ಕ್ಷಣ ಮಾತ್ರದಲ್ಲಿ ನೀರಲ್ಲಿ ಕೊಚ್ಚಿ ಹೋಗುವುದ ಕಣ್ಣಾರೆ ಕಂಡು ಮಮ್ಮಲ ಮರುಗುತ್ತಿದ್ದಾರೆ. ಉಟ್ಟ ಬಟ್ಟೆಯಲ್ಲೇ ಜೀವ ಉಳಿಸುವ ನಿಟ್ಟಿನಲ್ಲಿ ತನ್ನ ಜಾಗವೆಂದು ಅಂದುಕೊಂಡಿದ್ದನ್ನ ಹಿಂತಿರುಗಿ ನೋಡಿಕೊಂಡೇ ಎಲ್ಲವ ಬಿಟ್ಟು ಗಂಜಿಕೇಂದ್ರಗಳೆಡೆಗೆ ಸಾಗುತ್ತಿದ್ದಾರೆ. ಏನಾಗುತ್ತಿದೆ, ಏನು ನಡೆಯುತ್ತಿದೆ ಅನ್ನುವಷ್ಟರಲ್ಲೇ ತನ್ನದೆನ್ನುವ ಜಮೀನು ಮಣ್ಣೊಳಗೆ ಮಣ್ಣಾಗಿ ಹೋಗುತ್ತಿದೆ. ವರುಷಗಳಿಂದ ಮನೆಯನ್ನ ಸಲಹಿದ ಫಲವತ್ತಾದ ಭೂಮಿ ಇಂದು ನನ್ನದೇನೂ ಇಲ್ಲ ಅನ್ನುವಂತೆಯೇ ಬೆನ್ನು ತಿರುಗಿಸಿ ನಡೆದೇ ಬಿಟ್ಟಿದೆ.
.
ಅಪ್ಪ, ಅಮ್ಮ, ಮಗ, ಮಗಳು ಎಂದು ಕೂಗುತ್ತಿದ್ದವರೆಲ್ಲ ನೀರಲ್ಲಿ ಕೊಚ್ಚಿ ಹೋಗಿ ಅನಾಥರನ್ನಾಗಿಸಿದ್ದಾರೆ. ಕೊಟ್ಟಿಗೆಯಲಿ ಕಟ್ಟಿದ ಮೂಕ ಜೀವಿಗಳು ಅನ್ಯಾಯವಾಗಿ ಬಲಿಯಾಗಿ ಹೋದವು.ಬಲಿಯಾದ ಮೂಕಪ್ರಾಣಿಗಳೆಷ್ಟೋ? ಅತ್ತೂ ಅತ್ತೂ ಕಣ್ಣೀರು ಬತ್ತಿದೆ,ಕಲ್ಲು ಹೃದಯಗಳೂ ಕರಗುತ್ತಿದೆ. ತುಂಬು ಗರ್ಭಿಣಿಯರ, ಹಸುಗೂಸುಗಳ, ತಿಂಗಳ ಕಿರಿಕಿರಿಯ ಅನುಭವಿಸುವ ಹೆಣ್ಣುಮಕ್ಕಳ, ರೋಗಿಗಳ, ವೃದ್ಧರ ಪರಿಸ್ಥಿತಿಯ ನೆನೆದರೆ ,”ಅಮ್ಮ, ಪ್ರಕೃತಿ, ಯಾಕಮ್ಮ ಈ ರೀತಿಯ ಮುನಿಸು ಮನುಕುಲದ ಮೇಲೆ” ಅಂತನಿಸಿ ಗಂಟಲು ಬಿಗಿಯುತ್ತದೆ, ಕಣ್ಣಂಚು ನಲುಗುತ್ತದೆ. ಹೊಟ್ಟೆ ಬಟ್ಟೆಕಟ್ಟಿ ಜೋಪಾನವಾಗಿಸಿದ್ದೆಲ್ಲ ಮಳೆ ಎನ್ನುವ ಬಾಯಿಗೆ ಒಂದೇ ಗುಕ್ಕಿಗೆ ಬಲಿಯಾಗಿ ಹೋಗುತ್ತಿದೆ.ಯಾರನ್ನ ದೂಷಿಸೋದು?ಪ್ರಕೃತಿಯನ್ನೋ, ಪ್ರಕೃತಿಯ ಅತ್ಯಾಚಾರಕ್ಕೆ ಒಳಗಾಗಿಸಿದ ಮನುಕುಲವನ್ನೋ, ಮನುಜನ ದುರಾಸೆಯನ್ನೋ, ಭಗವಂತನನ್ನೋ?ಯಾರನ್ನು? ಭೂಮಿ ತಾಯಿ ತಡೆಯಲಾರದಷ್ಟು ಭಾರವನ್ನ ಹೊತ್ತು ಸುಸ್ತಾಗಿ, ಹಗುರವಾಗುವ ಹೊತ್ತಲ್ಲಿ, ಅನೇಕ ಮುಗ್ಧರು ಬಲಿಯಾಗಿ ಹೋದರಲ್ಲಾ?!
.
ಇದೇ ಹೊತ್ತಲ್ಲಿ ನೊಂದವರಿಗಾಗಿ ಮಿಡಿಯುವ ಮನಗಳಿಗೆ ನಮನ. ಮುಖ್ಯವಾಗಿ ನಮ್ಮ ಯೋಧರಿಗೆ ಸಲ್ಯೂಟ್. ಮಳೆ ಬಂದರೂ ನೀವೆ ಬೇಕು.ದೇಶವ ರಕ್ಷಿಸಲೂ ನೀವೆ ಬೇಕು. ನೀವಿಲ್ಲದ ದೇಶವ ಊಹಿಸಲು ಸಾಧ್ಯವೇ?ನೆರೆ ಪ್ರವಾಹ ಉಕ್ಕುತ್ತಿದ್ದರೂ ಜೀವದ ಹಂಗು ತೊರೆದು ರಕ್ಷಿಸುವ ನಿಮ್ಮ ಚೈತನ್ಯಕ್ಕೆ ವಂದನೆಗಳು….ಪುಟ್ಟ ಪುಟ್ಟ. ಮಕ್ಕಳನ್ನ ತನ್ನ ಮಗುವಿನಂತೆಯೇ ಅಪ್ಪಿ ಹಿಡಿದು ಹೆಲಿಕಾಪ್ಟರಿನೊಳಗೆ ಕೂರಿಸಿ ಕಾಪಾಡುವ ನಿಮಗೆಲ್ಲರಿಗೂ ಹೃದಯ ಪೂರ್ವಕ ನಮನಗಳು.
ತನ್ನ ಕೈಯಲ್ಲಾಗುವ ಸಹಾಯ ಮಾಡುವ ಪ್ರತಿಯೊಬ್ಬರಿಗೂ ವಂದನೆಗಳು…ನೀವೆಲ್ಲರೂ ಚೆನ್ನಾಗಿರಿ ಅನ್ನುವ ಪ್ರಾರ್ಥನೆ ನನ್ನದು.
ನಿರಾಶ್ರಿತರಿಗೆಂದು ಕಳುಹಿಸಿದ, ಕಳುಹಿಸುತ್ತಿರುವ ವಸ್ತುಗಳು, ಹಣ, ಎಲ್ಲವೂ ಅವರಿವರ ಪಾಲಾಗದೆ,ನೇರವಾಗಿ ಅಗತ್ಯ ಇರುವವರಿಗೇ ತಲುಪುವಂತಾಗಲಿ.
.
ಕೇರಳ ,ಕೊಡಗಿನಂತೆ ನಮ್ಮ ದಕ್ಷಿಣಕನ್ನಡದಲ್ಲೂ ಸಾಕಷ್ಟು ಹಾನಿಯಾಗಿದೆ.ಅಲ್ಲೂ ಹತ್ತು ಹದಿನೈದು ದಿನಗಳಿಂದ ಕರೆಂಟ್ ಇಲ್ಲ, ಕರೆಂಟ್ ಇಲ್ಲದ ಕಾರಣ ಕುಡಿಯುವ ನೀರಿಲ್ಲ, ವಿದ್ಯುತ್ ಕಂಬಗಳು ಧರೆಗುರುಳಿದೆ, ಸಾಲು ಸಾಲು ಅಡಿಕೆ,ತೆಂಗಿನ ಮರಗಳು ಗಾಳಿಗೆ ಬಲಿಯಾಗಿ ಹೋಗಿ ಆರ್ಥಿಕ ನಷ್ಟ ಉಂಟಾಗಿದೆ.. ಅಲ್ಲಿಗೂ ಸಹಾಯ ಬೇಕಿದೆ..ಅಲ್ಲಿನ ಹಾನಿಗೆ ಸಾಮಾನ್ಯವಾಗಿ ಯಾರೂ ಅಧಿಕಾರಗಳು ತಲೆಕೆಡಿಸಿಕೊಳ್ಳುವುದಿಲ್ಲ.ಪ್ರತೀ ವರುಷವೂ ಅಡಿಕೆ ಮರಗಳು ಧರೆಗುರುಳುತ್ತವೆ.ಆದರೆ ಅಲ್ಲಿನ ರೈತರಿಗೆ ಯಾವುದೆ ಪರಿಹಾರ ಧನ ಸಿಗುವುದಿಲ್ಲ…ನಿರ್ಲಕ್ಷ್ಯ ಕ್ಕೆ ಒಳಗಾಗಿದ್ದಾರೆ ಅಡಿಕೆ ಬೆಳೆಗಾರರು ಅಂದರೆ ತಪ್ಪಾಗಲಾರದು.ಈ ಬಾರಿಯೂ ಹಾಗಾಗದಿರಲಿ ಅನ್ನುವುದೇ ಆಶಯ.
.
ನಮ್ಮ ದಕ್ಷಿಣ ಕನ್ನಡದ ಜನರಿಗೆ ಈ ವಿಪರೀತ ಮಳೆಯಿಂದಾಗಿ ನಷ್ಟ ಆದರೂ, ಆಗುತ್ತಿದ್ದರೂ ಪಕ್ಕದ ಕೇರಳ, ಕೊಡಗಿಗಾಗಿ ಮರುಗುತ್ತಿದ್ದಾರೆ, ಸಹಾಯ ಮಾಡುತ್ತಿದ್ದಾರೆ,ಅವರೂ ನಮ್ಮವರೇ ಎನ್ನುವಂತೆ..ನಿಮ್ಮೆಲ್ಲರ ಬಗ್ಗೆ ಹೆಮ್ಮೆಯಿದೆ.
.
ಆದಷ್ಟು ಬೇಗ ಎಲ್ಲವೂ ಮೊದಲಿನಂತಾಗಲಿ.ಹಾ ಇನ್ನೊಂದು ವಿಚಾರ, ಮನುಷ್ಯ ಇನ್ನಾದರೂ ಪಾಠ ಕಲಿತು ಪ್ರಕೃತಿಯ ಕಾಪಾಡುವಂತಾಗಲಿ..ಯಾರೋ ಮಾಡುವ ಅನಾಚಾರಕ್ಕೆ ಮುಗ್ಧರು ಬಲಿಯಾಗದಿರಲಿ.
.
-ಸಹನಾ ಪುಂಡಿಕಾಯಿ