‘ಪಡ್ಡಾಯಿ’ ಎನ್ನುವ ಕರಾವಳಿಯ ‘ಮ್ಯಾಕ್ ಬೆತ್’
ಮಂಗಳೂರಿನ ಅತ್ರಿ ಬುಕ್ ಸೆಂಟರ್ ಎಂದರೆ ನಮ್ಮಂತಹ ಪುಸ್ತಕ ಪ್ರೇಮಿಗಳಿಗೆ ಪ್ರಿಯವಾದ ತಾಣ. ಅಲ್ಲಿ ಶಿಸ್ತಿನಿಂದ, ಸಣ್ಣ ಮಟ್ಟಿಗೆ ಗೌರವ ಮಿಶ್ರಿತ ಭಯ ಹುಟ್ಟಿಸುವಂತೆ ಕುಳಿತಿರುತ್ತಿದ್ದ ಅಶೋಕ ವರ್ಧನರು, ಅಲ್ಲಿ ಬಂದು ಹೋಗುತ್ತಿದ್ದ ಸಾಹಿತಿಗಳು, ನನ್ನಂತಹ ಕಾಲೇಜು ಲೆಕ್ಚರರ್ ಗಳು.. ಹೀಗೆ ಅದೊಂದು ಸಾಹಿತ್ಯಾಸಕ್ತರ ಅಡ್ಡೆಯಂತಿತ್ತು. ಇನ್ನು ನಾನು ಅಲ್ಲಿನ ರೆಗ್ಯುಲರ್ ವಿಸಿಟರ್ ಆಗಿದ್ದು, ಅನೇಕ ಹುಂಬ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಪಿ ಎಚ್ ಡಿ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದೂ ಅವರಲ್ಲಿ ಹೇಳಿಕೊಂಡಿದ್ದೆ. ಆ ನಂತರ ಇನ್ನೊಮ್ಮೆ ಹೋದಾಗ ‘ಯಶಸ್ಸು ಸಂಪಾದಿಸುವುದು ಹೇಗೆ?’ ಈ ರೀತಿಯ ಜನಪ್ರಿಯ ಪುಸ್ತಕ ಕೇಳಿದಾಗ ‘ ಪಿ ಎಚ್ ಡಿ ಮಾಡುವವರು ಓದಬೇಕಾದ ಪುಸ್ತಕ ಇದಾ?’ ಎಂದು ಅವರಿಂದ ಲಘುವಾಗಿ ಗದರಿಸಿಕೊಂಡ ಖುಶಿಯೂ ನನಗಿದೆ. ಸದಾ ‘ಚಿಲ್ಲರೆ ಇಲ್ಲ’ ಎನ್ನುವ ಮಾತೇ ಇಲ್ಲದ, ಪ್ಲಾಸ್ಟಿಕ್ ಬ್ಯಾಗ್ ಕೇಳಿದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸುವ ತತ್ವಕ್ಕೆ ಬದ್ಧರಾಗಿದ್ದ ಅಶೋಕ ವರ್ಧನರ ಮಗ ಅಭಯ ಸಿಂಹ ಅವರು ನಿರ್ದೇಶಿಸಿದ ‘ಪಡ್ಡಾಯಿ’ ಸಿನೆಮಾವನ್ನು ಇವತ್ತು ನೋಡಿ ಬಂದೆವು.
ಸಿನೆಮಾ ವಿಮರ್ಶೆಯ ಪರಿಭಾಷೆ ಏನೂ ಗೊತ್ತಿರದ, ಸಾಮಾನ್ಯ ವೀಕ್ಷಕಳಾಗಿ ನೋಡಿದರೂ ಈ ಸಿನೆಮಾಕ್ಕೆ ನಮ್ಮನ್ನು ಒಂದೆರಡು ದಿನ ಕಲಕಿ ಬಿಡುವ ಶಕ್ತಿ ಇದೆ ಎಂದು ಹೇಳಬಲ್ಲೆ. ಇನ್ನು ಇಂಗ್ಲಿಷ್ ಸಾಹಿತ್ಯ ಓದಿಕೊಂಡಿರುವವರಿಗೆ ಡಿಗ್ರಿಯಲ್ಲಿಯೋ , ಸ್ನಾತಕೋತ್ತರ ಹಂತದಲ್ಲಿಯೋ ‘ಮ್ಯಾಕ್ ಬೆತ್‘ ಇದ್ದೇ ಇರುತ್ತದೆ. ಈ ದುರಂತ ಕಥಾನಕದ ಆಶಯವನ್ನೇ ನಮ್ಮ ನೆಲಕ್ಕೆ, ಅದರಲ್ಲೂ ಕರಾವಳಿಯ ಮೀನುಗಾರರ, ಅವರಂತೆಯೇ ಉಳಿದ ಇನ್ನೂ ಅನೇಕ ತಳ ವರ್ಗದವರ ಕನಸು ಕನವರಿಕೆಗಳಿಗೆ ಸ್ಪಂದಿಸುವಂತೆ ರೂಪಿಸಿರುವುದು ‘ಪಡ್ಡಾಯಿ’ ಯ ವೈಶಿಷ್ಟ್ಯ.
ಇನ್ನು ನಾನು ‘ಮ್ಯಾಕ್ ಬೆತ್’ ಅನ್ನು ಅಷ್ಟಿಷ್ಟು ಓದಿಕೊಂಡಿರುವ ಕಾರಣ ಚಿತ್ರ ಕತೆಗೂ ನಾಟಕಕ್ಕೂ ಸಾಮ್ಯತೆಗಳನ್ನು ಗುರುತಿಸಲು ಸಾಧ್ಯವಾಯಿತು. ಮ್ಯಾಕ್ ಬೆತ್ ಶುರುವಾಗುವುದು ಮೂರನೇ ದೃಶ್ಯದಲ್ಲಿ ‘ಮ್ಯಾಕ್ ಬೆತ್’, ಬ್ಯಾಂಕೋ ಮತ್ತು ಮೂವರು ಮಾಟಗಾತಿಯರ ಮುಖಾಮುಖಿಯೊಂದಿಗೆ.
All hail, Macbeth! Hail to thee, thane of Galmis!
All hail, Macbeth! Hail to thee, thane of Cawdor!
All hail, Macbeth! Though shalt be King hereafter
ಈ ಸಾಲುಗಳನ್ನು ಓದುವಾಗಲೇ ನಮಗೆ ರೋಮಾಂಚನವಾಗುತ್ತಿತ್ತು. ಅದೇ ರೀತಿ ‘ಗುಳಿಗ ದೈವ ‘ ಹೇಳಿದ ಒಂದೊಂದೇ ಮಾತು ನಿಜವಾದಂತೆ ಮಾಧವ, ಮುಖ್ಯವಾಗಿ ಅವನ ನವವಧು ಸುಗಂಧಿಯ ಕನಸು, ಮಹತ್ವಾಕಾಂಕ್ಷೆ ಹೆಚ್ಚುತ್ತದೆ.
ದಿನೇಶಣ್ಣ ಎಂಬ ಸಜ್ಜನ ಧನಿಗೆ ನಂಬಿಗಸ್ಥ ಸಹಾಯಕನಾಗಿ ಮಾಧವ ಕೆಲಸ ಮಾಡುತ್ತಿರುತ್ತಾನೆ. ಹಾಗೆಂದು ಅವನಿಗೆ ಸ್ವಂತವಾಗಿ ದೋಣಿಯಾಗಲಿ, ಬಲೆಯಾಗಲಿ ಇಲ್ಲ. ಸಾಲದ್ದಕ್ಕೆ ಎರಡು ಲಕ್ಷದ ಮೇಲೆ ಸಾಲ ಕೂಡ ಅವನಿಗೆ ಇದೆ. ಗುಳಿಗನ ಅಭಯ ವಚನದ ನಂತರ ಕಾಕತಾಳೀಯವಾಗಿ ಮಾಧವನ ಸಮಸ್ಯೆಗಳು ಬಗೆ ಹರಿಯುತ್ತವೆ. ದುಬೈಗೆ ಹೋಗಬೇಕೆಂದು ಆಶಿಸಿ ದಲ್ಲಾಳಿಯ ಮೋಸದಿಂದ ದುಡ್ಡು ಕಳೆದುಕೊಂಡ, ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿಯೂ ಇರದ ತನ್ನ ಮಗ ಮಂಜೇಶನಿಗಿಂತ ಮಾಧವನೇ ತನ್ನ ವಾರಸುದಾರ ಎಂದು ದಿನೇಶಣ್ಣ ಎಲ್ಲರೆದುರು ಹೇಳಿ ಉಯಿಲು ಕೂಡ ಬರೆಸುತ್ತಾನೆ. ( ಇದು ಮಗನಿಗೆ ಬುದ್ಧಿ ಕಲಿಸಲು ಆತ ಮಾಡಿದ ನಾಟಕ ಅಷ್ಟೇ).
ಇದು ಅರಿವಾದ ಕೂಡಲೇ ಸಿರಿತನದ ಕನಸು ಕಟ್ಟಿಕೊಂಡ ದಂಪತಿಗೆ ಆಶಾಭಂಗವಾಗುತ್ತದೆ. ತಮ್ಮ ಭಾವನೆಗಳೊಂದಿಗೆ ಆಡಲು ಧನಿಗಳು ಯಾರು ಎನ್ನುವ ಆಕೆಯ ಪ್ರಶ್ನೆ ನಮ್ಮನ್ನೂ ಕಾಡತೊಡಗುತ್ತದೆ. ದೈವದ ಮಾತು ಅವರ ಮನದ ಮಾತೇ ಆಗಿ ಧನಿಯನ್ನು ಕೊಂದಾದರೂ ಸರಿ ತಾವು ಸಿರಿವಂತರಾಗಬೇಕೆಂದು ಬಯಸುತ್ತಾರೆ. ಈ ಹಂತದಲ್ಲಿ ಮಾಧವ ಪಾತ್ರಧಾರಿ ಹಾಗೂ ಸುಗಂಧಿಯರ ( ಮೋಹನ್ ಶೇಣಿ ಹಾಗೂ ಬಿಂದು ರಕ್ಷಿದಿ) ಅಭಿನಯ ಅದ್ಭುತವಾಗಿದೆ. (ಪ್ರೀತಿ, ಕಾಮ, ಗಿಲ್ಟ್, ಯಾತನೆ, ಆಸೆ, ಮಹತ್ವಾಕಾಂಕ್ಷೆ, ಕಳವಳ.. ಹೀಗೆ).
ಮ್ಯಾಕ್ ಬೆತ್ ನಾಟಕದಲ್ಲಿ ಲೇಡಿ ಮ್ಯಾಕ್ ಬೆತ್ ಪಾಪ ಪ್ರಜ್ಞೆ ತಾಳಲಾರದೆ ಎದ್ದು ನಿದ್ದೆ ಯಲ್ಲಿ ಕಳವಳಿಸಿ ನಡೆಯುವ ದೃಶ್ಯ ಇದೆ. !
Here is the smell of the blood sill
All the perfumes of Arabia
Will not sweeten this little hand,
Oh, Oh, Oh!
ಸುಗಂಧಿ ಕೂಡ ಕೈಯಲ್ಲಿ ನೆತ್ತರು ಕಾಣುತ್ತಾಳೆ. ತಾನು ಅತಿಯಾಗಿ ಆಶಿಸಿದ ಸುಗಂಧದ ಪರಿಮಳಕ್ಕಿಂತ ಮೊದಲಿನ ಮೀನಿನ ವಾಸನೆಗೆ ಮರಳಲು ಆಶಿಸುತ್ತಾಳೆ. (ಈ ಹಂತದಲ್ಲಿ ಅವರಲ್ಲಿನ ಅಂತರ್ಗತ ಪ್ರೇಮವನ್ನು ನಿದೇಶಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ.) ಮ್ಯಾಕ್ ಬೆತ್ ನಂತೆಯೇ ‘ಪಡ್ಡಾಯಿ’ಯಲ್ಲೂ ಮಹತ್ವ್ವಾಕಾಂಕ್ಷೆ, ಅದನ್ನು ಈಡೇರಿಸಲು ನಡೆಸುವ ಸರಣಿ ಕೊಲೆಗಳು, ಒಳಗೊಳಗೆ ಹರಿಯುವ ಮಾನವೀಯ ಸೆಲೆಗಳು, ಆತ್ಮ ಸಾಕ್ಷಿಯ ಚುಚ್ಚುವಿಕೆ ಹೀಗೆ ಅನನ್ಯ ನಿರೂಪಣೆ.
‘ ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ಗಿಂತ ಭಿನ್ನವಾಗಿ, ‘ಪಡ್ಡಾಯಿ’ಯ ವಿಶಿಷ್ಟತೆ ಇರುವುದು ಅದು ವರ್ಗ ಸಂಘರ್ಷವನ್ನು ತಣ್ಣಗೆ ನಿರೂಪಿಸಿದ ರೀತಿಯಲ್ಲಿ. ಅರವಿಂದ ಅಡಿಗರ ‘ ದ ವೈಟ್ ಟೈಗರ್’ ನಲ್ಲಿ ಎತ್ತುವ ಕೆಲವು ಪ್ರಶ್ನೆಗಳು ಇಲ್ಲಿಯೂ ಇವೆ. ಎಷ್ಟೇ ಉದಾರಿ ಧನಿಯಾದರೂ ‘ಸಿರಿವಂತಿಕೆಯ ಆ ಪರಿಮಳಕ್ಕೆ ನಾವು ಹಂಬಲಿಸುವುದು ತಪ್ಪೇ?’ ಎನ್ನುವ ಸುಗಂಧಿಯ ಪ್ರಶ್ನೆ ನಮ್ಮನ್ನೂ ಕಾಡುತ್ತದೆ. . ಸಂಸ್ಕಾರದಿಂದ ಬಂದ ಪಾಪ ಪ್ರಜ್ಞೆಯಿಂದ ಮಾಧವ ಹಾಗೂ ಸುಗಂಧಿಯರು ದುರಂತ ನಾಯಕ ನಾಯಕಿಯರಾಗುತ್ತಾರೆ ಹೌದಾದರೂ ಅವರು ಎತ್ತುವ ಪ್ರಶ್ನೆಗಳು ಒಂದು ರೀತಿಯ ಸಬ್ ಟೆಕ್ಸ್ಟ್ ನ ಹಾಗೆ ಇವೆ ಎಂದೇ ನನ್ನ ಅನಿಸಿಕೆ.
ಇನ್ನು ಯಕ್ಷಗಾನದ ಮಟ್ಟುಗಳ, ದೈವದ ಕುಣಿತ, ಕಡಲಲೆಗಳ ಅಬ್ಬರ, ಸುಯಿಲು, ಗೂಬೆಯ ದನಿ ಹೀಗೆ ಅತಿ ಸಮರ್ಥವಾಗಿ ದೃಶ್ಯ, ಶ್ರವ್ಯ ಮಾಧ್ಯಮಗಳ ಪರಿಣಾಮಕಾರಿ ಬಳಕೆಯಿಂದ ಅದ್ಭುತವಾಗಿ ಮೂಡಿ ಬಂದ ‘ಪಡ್ಡಾಯಿ’ ಗೆ ರಾಷ್ಟ್ರಪತಿ ಪ್ರಶಸ್ತಿ ಮೊದಲುಗೊಂಡು ಅನೇಕ ಪ್ರಶಸ್ತಿಗಳು ಸಂದಿವೆ. ( ಇನ್ನು ನನ್ನ ಅಚ್ಚುಮೆಚ್ಚಿನ ಧಾರಾವಾಹಿ ‘ಜೋಡಿ ಹಕ್ಕಿ’ಯ ಜಾನಕಿಯ ತಂದೆ ಶಿವ ಭಟ್ ಅವರು ಒಂದು ರೀತಿಯ ಸಜ್ಜನ ವಿಲನ್ ನಂತೆ ಕಂಡು ಬಂದಿರುವುದು ನನಗಂತೂ ಖುಶಿಯಾಯಿತು.) ಒಟ್ಟಿನ ಮೇಲೆ ‘ಪಡ್ಡಾಯಿ’ ಏಕ ಕಾಲಕ್ಕೆ ಮ್ಯಾಕ್ ಬೆತ್ ನಾಟಕವನ್ನೂ ‘ಚೆಮ್ಮೀನ್’ ಮಲಯಾಳಮ್ ಸಿನೆಮಾದಂತೆ ದುರಂತವನ್ನೂ ಏಕಕಾಲಕ್ಕೆ ನೆನಪಿಸುತ್ತದೆ. ಉತ್ತಮ ಅನುಭವ.
,
-ಜಯಶ್ರೀ ಬಿ ಕದ್ರಿ
ಸಿನಿಮಾ ನೋಡಿದ ಹಾಗೆ ಆಯ್ತು..
ತುಂಬ ಆಪ್ತವಾಗಿ ಅನುಭವಿಸಿದ್ದೀರಿ, ಮಾತು ಕೊಟ್ಟಿದ್ದೀರಿ – ಧನ್ಯವಾದಗಳು.
ಹವಿಗನ್ನಡದಲ್ಲಿ ಮಾತನಾಡಬಲ್ಲ, ಕಾಲೇಜಿನಲ್ಲಿ ಇಂಗ್ಲಿಷ್ ಪಾಠ ಮಾಡುವ ಮೇಡಂ, ತುಳು ಭಾಷೆಯ ಸಿನೆಮಾದ ಬಗ್ಗೆ ಕನ್ನಡಭಾಷೆಯಲ್ಲಿ ವಿಮರ್ಶೆ ಬರೆದಿದ್ದಾರೆ! ಭಾಷಾಸಂಗಮ ಚೆನ್ನಾಗಿದೆ!! ಈ ಸಿನೆಮಾವನ್ನು ನೋಡಲು ಕಾತರಳಾಗಿದ್ದೇನೆ. ಧನ್ಯವಾದಗಳು
ಪಡ್ಡಾಯೀ ಒಂದು ಅನುಭವ ಮತ್ತು ಲಹರಿ, ಗುಂಗು ಮೂಡಿಸಿದ ಸಿನೆಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದ್ರಲ್ಲಿ ಬರುವ ಪಾತ್ರಗಳ ಮನೋಜ್ಞ ಅಭಿನಯ, macbeth ಹಿನ್ನಲೆ ಮನಸನ್ನು ತಟ್ಟಿಬಿಟ್ಟಿತು. ನಿಮ್ಮ ಹಾಗೇ ನನಗೂ ಚೆಮ್ಮೀನ್ ನನಗು ನೆನಪಾಯಿತು.
ಈ ಸಿನೆಮಾ ಮನಸನ್ನ ಬಿಡದೇ ಕಾಡ್ತಾ ಒರೋದಂತೂ ನಿಜ.
Good read 🙂
ಚಂದ ಬರೆದಿದ್ದೀರ ಅದರ ಅಕ್ಕ
ಸಂಗೀತ