ಬೊಗಸೆಬಿಂಬ

ಹೆಣ್ಣಾಗಿ ಹುಟ್ಟಿದ ಬಳಿಕ…

Share Button

ಶತಮಾನಗಳಿಂದಲೂ ಹೆಣ್ಣಿನ ಮೇಲೆ ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಆದರೆ ಈ ದೌರ್ಜನ್ಯಕ್ಕೆ ಕೇವಲ ಗಂಡು ಮಾತ್ರ ಕಾರಣವೆ? ಯೋಚಿಸಬೇಕಾಗಿದೆ. ಗಂಡಿಗಿಂತ ಹೆಚ್ಚಾಗಿ ಹೆಣ್ಣು ಮತ್ತೊಬ್ಬ ಹೆಣ್ಣಿನಿಂದಲೇ ದೌರ್ಜನ್ಯಕ್ಕೊಳಗಾಗುತ್ತಿರುವುದು ಖೇದದ ಸಂಗತಿ.

ಹೆಣ್ಣನ್ನು ಹುಟ್ಟುವ ಮೊದಲೇ ಭ್ರೂಣದಲ್ಲಿಯೇ ಚಿವುಟಿ ಹಾಕುತ್ತಿರುವ ಸಂಗತಿಗೆ ಮೇಲ್ನೋಟಕ್ಕೆ ಅವಳ ಗಂಡನನ್ನು ಹೊಣೆ ಮಾಡಿದರೂ ಅವನಲ್ಲಿ ಆ ಮನಸ್ಥಿತಿಯನ್ನು ಹುಟ್ಟುಹಾಕಿದವಳು ವಾಸ್ತವವಾಗಿ ಬಹಳಷ್ಟು ಸಲ ಆತನ ತಾಯಿಯೋ ಇಲ್ಲವೆ ಅಜ್ಜಿಯೋ ಆಗಿರುತ್ತಾಳೆ. ಹೆಣ್ಣಿಗೆ ಚಿಕ್ಕಂದಿನಿಂದಲೇ ಹಾಗೆ ಮಾಡಬೇಡ ಹೀಗೆ ಮಾಡಬೇಡ ಎಂದು ಬೇಡದ ಪಾಠಗಳು ಶುರುವಾಗಿಬಿಡುತ್ತವೆ. ಅನೇಕ ಸವಾಲುಗಳನ್ನು ಎದುರಿಸುತ್ತಲೇ ಬೆಳೆಯುವ ಹೆಣ್ಣು ತನ್ನ ಸಹೋದರರು ರಾಜಾರೋಷವಾಗಿ ಎಲ್ಲಾ ಸವಲತ್ತುಗಳನ್ನು ಅನುಭವಿಸುವುದನ್ನು ನೋಡುತ್ತಾ ಮುಂದಿನ ಜನ್ಮದಲ್ಲಾದರೂ ನನ್ನನ್ನು ಗಂಡಾಗಿ ಹುಟ್ಟಿಸು ದೇವರೇ ಎಂದೋ ಅಥವಾ ಮದುವೆಯಾದ ನಂತರ ತಾನು ಅನುಭವಿಸಿದ ಕಷ್ಟ ನನ್ನ ಮಗಳು ಅನುಭವಿಸಬಾರದು ಎಂದು ಹೆಣ್ಣು ಹಡೆಯುವುದಕ್ಕೇ ಹಿಂದುಮುಂದು ನೋಡುವ ಸ್ಥಿತಿಗೆ ಬಂದಿರುತ್ತಾಳೆ. ತನ್ನ ಸುತ್ತ ಒಂದು ಕೀಳರಿಮೆಯ ಕೋಟೆ ಕಟ್ಟಿಕೊಂಡೇ ಬೆಳೆಯುತ್ತಾಳೆ.

ಎಷ್ಟೇ ವಿದ್ಯಾವಂತಳಾದರೂ ಕೊಟ್ಟ ಮನೆಗೆ ಹೋದಾಣಿಕೆಯಾಗಲು ಸಾಕಷ್ಟು ಹೆಣಗಬೇಕಾಗುತ್ತದೆ. ಕೆಲವೊಮ್ಮೆ ಅಲ್ಲಿಯೂ ಅವಳಿಗೆ ನೆರವಾಗುವ ಬದಲು ಎರವಾಗುವುದು ಗಂಡಿನ ತಾಯಿ ಅಥವಾ ಅಕ್ಕತಂಗಿಯರೇ. ಸೊಸೆಯನ್ನು ಒಬ್ಬ ಮಗಳಾಗಿ ನೋಡದೆ ತಮ್ಮ ಮಗನನ್ನು ಕಿತ್ತುಕೊಳ್ಳಲು ಬಂದಿರುವ ಶತ್ರುವಿನಂತೆ ಕಾಣುತ್ತಾರೆ. ತಮ್ಮ ಮನೆ ಬೆಳಗಲು ಬಂದಿರುವ ಜೀವವೆನ್ನದೆ ಪುಗಸೆಟ್ಟೆ ದುಡಿಯಲು ಸಿಕ್ಕಿರುವ ಜೀತದಾಳಿನಂತೆ ನಡೆಸಿಕೊಳ್ಳುವ ಮಂದಿಯೇ ಹೆಚ್ಚು. ಮನೆಯ ಕೆಲಸವನ್ನೆಲ್ಲಾ ಮೆಲ್ಲಗೆ ಅವಳ ತಲೆಗೆ ವರ್ಗಾಯಿಸಿ ಆರಾಮವಾಗಿ ಅವಳ ಕೆಲಸಗಳಲ್ಲಿ ತಪ್ಪುಗಳನ್ನು ಕಂಡುಹಿಡಿಯುತ್ತಾ ಕಾಲಕಳೆಯುತ್ತಾರೆ. ಮನೆಕೆಲಸ ಮಾಡುವುದು ತಪ್ಪು ಎಂದಲ್ಲ ಆದರೆ ಕೈಲಾಗುವ ತನಕ ತಮ್ಮ ಕೈಲಾದ ಮಟ್ಟಿಗೆ ಸೊಸೆಗೆ ನೆರವಾಗಬಹುದಲ್ಲವೇ? ಎಲ್ಲವನ್ನೂ ಸೊಸೆ ಮುಂದಕ್ಕೇ ತಂದು ಬಡಿಯಬೇಕೆಂದು ಏಕೆ ಬಯಸುತ್ತಾರೋ ಕಾಣೆ? ಈ ವಿಷಯದಲ್ಲಿ ಗಂಡನಾಗಲಿ, ಮಾವನಾಗಲಿ ಕಣ್ಣಿದ್ದೂ ಕುರುಡರಂತೆ ನಟಿಸಿ ಜಾರಿಕೊಳ್ಳುತ್ತಾರೆ. ಎಲ್ಲಾ ಕಡೆ ಪಾರುಪತ್ಯ ಸಾಧಿಸುವ ಗಂಡು ಈ ವಿಷಯದಲ್ಲಿ ಅಮ್ಮನನ್ನು ಎದುರು ಹಾಕಿಕೊಳ್ಳಲು ಹೆದರುತ್ತಾನೆ. ಸ್ವಲ್ಪ ಧೈರ್ಯ ಮಾಡಿ ಹೆಂಡತಿಯ ಪರ ವಹಿಸಿದನೋ ಮುಗಿಯಿತು ಅವನ ಕಥೆ. ಅವನಿಗೆ ಹೆಂಡ್ತಿ ಗುಲಾಮ, ಅಮ್ಮಾವ್ರ ಗಂಡ ಬಿರುದುಗಳನ್ನು ತಾಯಿಯೇ ದಯಪಾಲಿಸುತ್ತಾಳೆ. ಇಲ್ಲೂ ಮತ್ತೆ ಹೆಣ್ಣಿನಿಂದಲೇ ಹೆಣ್ಣಿನ ಮೇಲೆ ಅತ್ಯಾಚಾರ.

ಇನ್ನು ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳನ್ನಂತೂ ದೇವರೇ ಕಾಪಾಡಬೇಕು. ಅತ್ಯಾಚಾರಿಯಿಂದ ಕೇವಲ ಒಂದು ಬಾರಿ ದೌರ್ಜನ್ಯಕ್ಕೊಳಗಾಗಿ ಸುಧಾರಿಸಿಕೊಳ್ಳಬಹುದೇನೋ? ಆದರೆ ನೆರೆಹೊರೆಯ, ಸಮಾಜದಲ್ಲಿನ ಹೆಣ್ಣುಮಕ್ಕಳು ಅವಳಲ್ಲಿ ಧೈರ್ಯ ತುಂಬುವುದಕ್ಕೆ ಬದಲಾಗಿ ನಿತ್ಯವೂ ಮಾನಸಿಕವಾಗಿ ಅತ್ಯಾಚಾರದಲ್ಲಿ ತೊಳಲಾಡುವಂತೆ ಮಾಡುವ ಅತ್ಯಾಚಾರ ಇದೆಯಲ್ಲಾ ಅದೇ ಅವಳನ್ನು ಹೆಚ್ಚು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತದೆ. ಅವಳ ಆತ್ಮವಿಶ್ವಾಸವನ್ನು ಕುಗ್ಗಿಸುವಂತೆ ನಡೆದುಕೊಳ್ಳುತ್ತಾರೆ. ಅತ್ಯಾಚಾರ ಮಾಡಿದ ಮಗನ ರಕ್ಷಣೆ ಮಾಡುವುದೂ ಹೆಣ್ಣೆ, ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಅದಕ್ಕೆ ಹೊಣೆಮಾಡುವುದೂ ಬಹಳಷ್ಟು ಸಲ ಮತ್ತೊಬ್ಬ ಹೆಣ್ಣೇ ಆಗುತ್ತಿರುವುದು ನಾಚಿಕೆಪಡುವಂತ ಸಂಗತಿ.

ಇನ್ನು ಮದುವೆಯಾಗದೆ ಮನೆಯಲ್ಲಿಯೇ ಉಳಿದರೆ, ಮದುವೆಯಾಗಿ ಮಕ್ಕಳಾಗದೆ ಹೋದರೆ, ಗಂಡ ಬಿಟ್ಟು ಹೋದರೆ ಅಥವಾ ಸತ್ತುಹೋದರೆ ಅಂಥಹ ಹೆಣ್ಣುಮಕ್ಕಳ ಪಾಡು ನಾಯಿಪಾಡಿಗಿಂತ ಕಡೆಯಾಗಿಬಿಡುತ್ತದೆ. ಆ ಹೆಣ್ಣೇ ಅದನ್ನು ಮರೆತು ಮುಂದಿನ ದಾರಿ ನೋಡಿಕೊಳ್ಳಲು ಮನಸ್ಸು ಮಾಡುತ್ತಿದ್ದರೆ ಅದನ್ನು ಮರೆಯಲು ಬಿಡದೆ ಹೆಜ್ಜೆ ಹೆಜ್ಜೆಗೆ ಅಪಮಾನಿಸುತ್ತಾ ಅವಳನ್ನು ಮಾನಸಿಕವಾಗಿ ನಿಶಃಕ್ತಗೊಳಿಸುವುದೂ ಕೂಡ ಹೆಣ್ಣೇ ಎಂಬುದು ಮರೆಯುವ ಹಾಗಿಲ್ಲ. ಈಗ ಹೆಣ್ಣಿನಲ್ಲಿ sಸ್ವಲ್ಪಮಟ್ಟಿಗೆ ಸಣ್ಣಗೆ ಬದಲಾವಣೆಯ ಪರ್ವ ಶುರುವಾಗಿದೆ. ತಮ್ಮ ಮೇಲಿನ ದೌರ್ಜನ್ಯವನ್ನು ಧೈರ್ಯದಿಂದ ಖಂಡಿಸುತ್ತಿದ್ದಾರೆ. ಹೆಣ್ಣು ಮತ್ತೊಬ್ಬ ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆದರೆ ಬಹುಶಃ ಹೆಣ್ಣಿನ ಸ್ಥಿತಿ ಸುಧಾರಿಸಬಹುದೇನೋ? ಮುಂದೆ ಪ್ರತಿಯೊಬ್ಬ ಹೆಣ್ಣೂ ಹೀಗೆ ತನ್ನ ಧೋರಣೆ ಬದಲಾಯಿಸಿಕೊಂಡರೆ ಮುಂದಿನ ಪೀಳಿಗೆಯಲ್ಲಾದರೂ ಬದಲಾವಣೆ ಕಾಣಬಹುದೇನೋ?

 – ನಳಿನಿ. ಟಿ. ಭೀಮಪ್ಪ, ಧಾರವಾಡ

2 Comments on “ಹೆಣ್ಣಾಗಿ ಹುಟ್ಟಿದ ಬಳಿಕ…

  1. ಉತ್ತಮವಾಗಿದೆ ನಿಮ್ಮ ಬರಹ ಹೆಣ್ಣಿನ ಮೇಲೆ ಅತ್ಯಾಚಾರ ಕುರಿತು ಬರೆದಿರುವಿರಿ. ಆದರೆ ಲಿಂಗ ಭೇದವಿಲ್ಲದೆ ಹೆಣ್ಣು ಗಂಡು ಇಬ್ಬರನ್ನು ಬಿಡದ ಕಾಮುಕರು ಸಹ ನಮ್ಮ ಸುತ್ತಲೂ ಇರುವರು ಹಾಗಾಗಿ ಮಕ್ಕಳ ಜವಾಬ್ದಾರಿಯನ್ನು ದೊಡ್ಡವರು ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಆ ಪುಟ್ಟ ವಯಸ್ಸಿನಲ್ಲಿ ಆಗುವ ಹಿಂಸೆ ಎಲ್ಲವೂ ಮಕ್ಕಳಿಗೆ ತಡೆಯುವ ಶಕ್ತಿ ಇರುವುದಿಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *