ಲಹರಿ

ಬೋರ್ಡೋ ದ್ರಾವಣದ ಮಹತ್ವ

Share Button

ಕೊಳೆ ರೋಗ ನಿಯಂತ್ರಣ ಈ ಹವಾಮಾನದಲ್ಲಿ ಸತ್ವರವಾಗಿದೆಯಲ್ಲವೇ? ನಿಮ್ಮಲ್ಲಿ ಈಬಾರಿ ಸಿಂಪರಣೆ ಮಾಡಿ ಆಯ್ತಾ?ಬಯೋ_ _ ಸಿಂಪರಣೆಯೋ, ಅಲ್ಲ ಬೋರ್ಡೋವಾ? ವಿಚಾರ ವಿಮರ್ಷೆ ಮಾಡುವುದು ಸಹಜವಲ್ಲವೇ?ಹಲವೆಡೆಗಳಲ್ಲಿ ಬೋರ್ಡೋ ತಯಾರಿ ಸ್ವೇಚ್ಛೆಯಿಂದಲೂ, ನೈಸರ್ಗಿಕ ವೈಪರೀತ್ಯದಿಂದಲೂ ಹದಗೆಡುತ್ತಿದೆಯೇ?

ಮಿಲಾರ್ಡೆಟ್ ಹತ್ತೊಂಬತ್ತನೇ ಶತಮಾನದಲ್ಲಿ ಫ್ರಾನ್ಸ್ ನಲ್ಲಿ ದ್ರಾಕ್ಷೆಯ ಕೊಳೆ ರೋಗ ಹತೋಟಿಗಾಗಿ ಆಕಸ್ಮಿಕವಾಗಿ ಕಂಡುಹಿಡಿದ ಬೋರ್ಡೋ ಮಿಕ್ಸ್ಚರ್ ಮಾತ್ರವೇ ಈಗಲೂ ಬಳಕೆಯಲ್ಲಿರುವುದೇಕೆ? ಈ ಪ್ರಶ್ನೆ ಎಷ್ಟು ಸ್ವಾಭಾವಿಕವೋ, ಅಷ್ಟೇ ಸತ್ಯ ಇದಕ್ಕೆ ಇತರ ದುಷ್ಪರಿಣಾಮಗಳಿಲ್ಲದಿರುವುದು. ಹಲವಾರು ವಿಜ್ಞಾನಿಗಳೂ ಇದನ್ನು ಸಾವಯವವೇನೋ ಎಂಬಂತೆ ಅಂಗೀಕರಿಸಿರುತ್ತಾರೆ.

ಇತ್ತೀಚೆಗೆ ಕಾಪರ್ ಆಕ್ಸೀ ಕ್ಲೋರೈಡ್ ಶಿಲೀಂಧ್ರ ನಾಶಕಗಳು ಕೆಲವು ಬೆಳೆಗಳಲ್ಲಿ ಬೋರ್ಡೋ ಮಿಕ್ಸ್ಚರ್ ನಂತೆಯೇ ಉಪಯೋಗಿಸಲ್ಪಡುತ್ತಿವೆಯಾದರೂ ಅದಕ್ಕಿಂತ ಮೇಲ್ಮೆಯನ್ನೇನೂ ಹೊಂದಿಲ್ಲ. ಆದರೂ, ಫೈಟೋಲಾನ್, ಬ್ಲಿಟಾಕ್ಸ್, ಕಿಲ್ಲೆಕ್ಸ್ ಕಾಪರ್, ಮುಂತಾದ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.  ಬೋರ್ಡೋ ಮಿಕ್ಸ್ಚರ್ ತಯಾರಿಸಲು ವ್ಯವಧಾನ ಅಥವಾ ಸೌಕರ್ಯವಿಲ್ಲದವರಿಗೆ ಇದು ಯೋಗ್ಯ ಪರ್ಯಾಯವಾಗಿದೆ.

ಇನ್ನು ಕೆಲವು ಫಾಸ್ಫೋರಸ್ ಆಸಿಡ್, ಅಕೋಮಿನ್-೪೦, ಬಯೋಫೈಟ್, ಬಯೋಪಾಟ್, ಕೊಳೆನಾಶಕ, ಈ ರೀತಿಯ ಹಲವಾರು ಪ್ಲಾಂಟ್ ಟಾನಿಕ್ ಗಳು, ಗ್ರೋತ್ ರಿಟಾರ್‍ಡರ್, ಆಲ್ಕಲಾಯ್ಡ್ ಮುಂತಾದ ರೋಗ ಪ್ರತಿರೋಧಕ ಪರಿಣಾಮವನ್ನುಂಟುಮಾಡುವ ತಯಾರಿಕೆಗಳೂ ಮಾರುಕಟ್ಟೆಗೆ ಬಂದಿವೆ.

ಇತ್ತೀಚೆಗಿನ ಮಾರುಕಟ್ಟೆ ಪ್ರವೇಶ ಮಾಡಿರುವ ರಾಸಾಯನಿಕವೆಂದರೆ ಮಾಂಡಿಪ್ರೊಪಾಮಿಡ್. ಇದರ ಬ್ರಾಂಡ್ ಹೆಸರು ರೇವಸ್ ಆಗಿದ್ದು, ದುಬಾರಿಯೆಂದು ತೋರಿದರೂ ಕಡಿಮೆ ಪ್ರಮಾಣದಲ್ಲಿ ಬಳಸಿದರೆ ಸಾಕಾದ್ದರಿಂದ ಉಪಯುಕ್ತ, ಸಕ್ರಿಯವೆಂದು ಪ್ರಾಥಮಿಕ ಅಧ್ಯಯನಗಳಲ್ಲಿ ಕಂಡುಬಂದಿದ್ದು, ಮೇಲಿನ ರಾಸಾಯನಿಕಗಳೊಂದಿಗೆ ಮುಂದಿನ ಕೆಲ ವರ್ಷಗಳಲ್ಲಿ ಪೈಪೋಟಿ ಮಾಡುವ ಸಾಧ್ಯತೆ ಇದೆ.

ಹೀಗೆಲ್ಲ ಇದ್ದರೂ ಜನಪ್ರಿಯವಾಗಿಯೂ, ಸಂದರ್ಭಕ್ಕನುಗುಣವಾಗಿ ಲಭ್ಯವೂ ಆಗಿ, ಸರಕಾರೀ ಸಬ್ಸಿಡಿ ಮುಂತಾದ ಸೌಲಭ್ಯಗಳೊಳಗೊಂಡು ಹಾಸುಹೊಕ್ಕಾಗಿರುವುದು ಮೈಲುತುತ್ತು-ಸುಣ್ಣ! ಹಾಗಿರುವಾಗ ಅದರ ಸಮರ್ಪಕ ಬಳಕೆಗೆ ಒತ್ತುಕೊಟ್ಟು ವೈಜ್ಞಾನಿಕವಾಗಿ ಬಳಸಲ್ಪಡುವುದು ಸೂಕ್ತವಲ್ಲವೇ?

ಬೋರ್ಡೋ ಮಿಶ್ರಣದ ತಯಾರಿ

ಬೋರ್ಡೋ ಮಿಶ್ರಣ ತಯಾರಿ ಅಡಿಕೆ ಬೆಳೆಗಾರರಿಗೆ, ಬೋರ್ಡೋ ಪೇಸ್ಟ್ ತಯಾರಿ ರಬ್ಬರ್ ಬೆಳೆಗಾರರಿಗೆ ಸುಪರಿಚಿತ.ಆದರೂ ಕೆಲವು ಅಂಶಗಳತ್ತ ಗಮನ ಹರಿಸುವುದು ಒಳ್ಳೆಯದು.

ಉತ್ತಮ ಗುಣಮಟ್ಟದ ಚಿಪ್ಪು ಸುಣ್ಣ, ಮೈಲುತುತ್ತು ಅತ್ಯಾವಶ್ಯಕ. ಸುಣ್ಣ ಬೇಯಿಸುವಾಗ ಗಳಗಳನೆ ಕುದಿಯುವ ನೀರಿನಲ್ಲಿ ಸುಣ್ಣ ಬೇಯಿಸಿ ತಣಿಸಿಡುವುದು ಒಂದು ಮಹತ್ವಪೂರ್ಣ ಕಾರ್ಯ. ಇದಕ್ಕೆ ಬದಲಾಗಿ ಮಾರುಕಟ್ಟೆಯಿಂದ ಶ್ರೇಷ್ಟವಾದ ಹೈಡ್ರೇಟೆಡ್ ಲೈಮ್ ಬಳಸಬಹುದು. ನಂಬಲರ್ಹ ಕಾರ್ಖಾನೆಯ ಮೈಲುತುತ್ತನ್ನೇ ಬಳಸಿ. ಸುಟ್ಟ ಸುಣ್ಣ ಹಾಗೂ ಮೈಲುತುತ್ತುಗಳು ಹೊಸತಾಗಿದ್ದಷ್ಟೂ ಪರಿಣಾಮ ಉತ್ತಮವಾಗಿರುತ್ತದೆ.1kg  ಸುಟ್ಟ ಸುಣ್ಣಕ್ಕೆ 1kg ಮೈಲುತುತ್ತು ಸರಿಯಾದ ನಿಷ್ಪತ್ತಿ. ಸುಣ್ಣ ಹೆಚ್ಚಾದಲ್ಲಿ ಫಂಗಿಸೈಡ್ ಕಡಿಮೆ, ಮೈಲುತುತ್ತು ಹೆಚ್ಚಾದಲ್ಲಿ ಸಸ್ಯಕ್ಕೆ ವಿಷಕಾರಿ ಎಂಬುದು ನೆನಪಿಡಬೇಕಾದ ವಿಚಾರ.

   

 

ಚಿಪ್ಪು ಸುಣ್ಣ, ಮೈಲುತುತ್ತುಗಳ ರಾಸಾಯನಿಕಕ್ರಿಯೆ

Ca(OH)2 +[Cu(H2O)6]SO4 +H2O → Cu2(OH)2SO4+CaSO4+H2O

ಚಿಪ್ಪು ಸುಣ್ಣದ ಬದಲಾಗಿ ಹೈಡ್ರೇಟೆಡ್ ಸುಣ್ಣದ ಪುಡಿ ಬಳಸುವಾಗ ಒಂದು ಕಿಲೋ ಮೈಲುತುತ್ತಿಗೆ 400 ಗ್ರಾಂ ಹೈಡ್ರೇಟೆಡ್ ಸುಣ್ಣ ಸಾಕಾಗುತ್ತದೆ.ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಸುಣ್ಣದ ದ್ರಾವಣ 10ಲೀ. ತಯಾರಿಸಿ ಅದಕ್ಕೆ 10 ಲೀ ಮೈಲುತುತ್ತಿನ ದ್ರಾವಣ ತ್ವರಿತವಾಗಿ ಕಲಕುತ್ತಾ ಸೇರಿಸುವುದು ಅಗತ್ಯ, ಬದಲಾಗಿ 80 ಲೀ ನೀರಿಗೆ  ಸುಣ್ಣದ ದ್ರಾವಣ 10ಲೀ. ಹಾಗೂ 10 ಲೀ ಮೈಲುತುತ್ತಿನ ದ್ರಾವಣ ಸುರಿದು ಮಿಶ್ರ ಮಾಡುವುದಲ್ಲ.ಉಪಯೋಗಿಸಬೇಕಾದಂದೇ ಬೋರ್ಡೋ ಮಿಶ್ರಣ ತಯಾರಿಸಿಕೊಳ್ಳಿ.ಒಮ್ಮೆ ಮಿಶ್ರಣ ಮಾಡಿದ ನಂತರ, ಆಗಾಗ ಕಲಕುತ್ತಿರಬೇಕು ಮತ್ತು ನಾಲ್ಕು ಗಂಟೆಗಳೊಳಗೆ ಉಪಯೋಗಿಸಿ ಮುಗಿಸಬೇಕು. ಇವು ರಾಸಾಯನಿಕವಾಗಿ ಗಮನಿಸಬೇಕಾದ ಅಂಶಗಳು, ಕಾಟಾಚಾರಗಳಲ್ಲ.

ಬೋರ್ಡೋಪೇಸ್ಟ್

ರಬ್ಬರ್ ಕೃಷಿಯಲ್ಲಿಯೂ, ಕಾಳು ಮೆಣಸಿನ ಕೃಷಿಯಲ್ಲಿಯೂ ಬೋರ್ಡೋ ಪೇಸ್ಟಿನ ಬಳಕೆ ಸಾಮಾನ್ಯ. ಅದಕ್ಕಾಗಿ 1 ಕೆ.ಜಿ. ಮೈಲುತುತ್ತಿಗೆ 5 ಲೀ. ನೀರು ಹಾಗೂ 1 ಕೆ.ಜಿ. ಸುಣ್ಣಕ್ಕೆ 5 ಲೀ ನೀರು ಹಾಕಿದ ಪ್ರತ್ಯೇಕ ದ್ರಾವಣಗಳ ಮಿಶ್ರಣದ ತಯಾರಿ ಮಾಡಲಾಗುತ್ತದೆ.

ಸರಿಯಾದ ರೀತಿಯಲ್ಲಿ ತಯಾರಿಸಿದ ರೋಗ ಪ್ರತಿರೋಧಕವನ್ನು ರೋಗ ತಗಲುವುದಕ್ಕೆ ಮೊದಲೇ ಸವರುವುದು ಅಥವಾ ಸಿಂಪಡಿಸುವುದಕ್ಕೆ ತಯಾರಿ ಹಾಗೂ ಯೋಜನಾಬದ್ಧ ಕಾರ್ಯ ಚಟುವಟಿಕೆ ಕೈಗೊಳ್ಳುವುದರಿಂದ ಕೊಳೆರೋಗಗಳಿಂದ ಮುಕ್ತಿ ಪಡೆಯಬಹುದು.

 -ಹಳೆಮನೆ ಮುರಲಿಕೃಷ್ಣ 

One comment on “ಬೋರ್ಡೋ ದ್ರಾವಣದ ಮಹತ್ವ

  1. ತಯಾರಿಸಿದ ಬೋರ್ಡೋ ಮಿಶ್ರಣ ಸರಿಯಾಗಿದೆಯೇ ಎಂದು ಪರಿಶೀಲನೆಗೆ ಸುಲಭವೆಂದರೆ ಹರಿತವಾದ ಅಲಗಿನ ಮಸೆದ ಚಾಕುವನ್ನು ಕೆಲ ನಿಮಿಷಗಳ ಕಾಲ ಬೋರ್ಡೋ ಮಿಶ್ರಣದಲ್ಲಿ ಅದ್ದಿ ನೋಡುವುದು. ಮೈಲುತುತ್ತಿಗೆ ಸಾಕಷ್ಟು ಸುಣ್ಣ ಬೆರಸಲ್ಪಟ್ಟರೆ ಚಾಕುವಿನ ಅಲಗು ಇದ್ದಂತೆಯೇ ಇರುವುದು. ಬದಲಾಗಿ ಆ ಅಲಗಿಗೆ ತಾಮ್ರದ ಕಂದುಗೆಂಪು ಲೇಪವಾಗಿದ್ದರೆ, ಇನ್ನಷ್ಟು ಸುಣ್ಣ ಸೇರಿಸುವುದು ಅಗತ್ಯ.
    ಮೈಲುತುತ್ತಿಗೆ ಸಾಕಷ್ಟು ಸುಣ್ಣ ಸೇರಿಸದಿದ್ದರೂ, ಹೆಚ್ಚಾಗಿ ಸುಣ್ಣ ಸೇರಿಸಿದರೂ, ಬೋರ್ಡೋ ಮಿಶ್ರಣ ಪರಿಣಾಮ ನೀಡದು. ಇದಕ್ಕಾಗಿ ಚಾಕುವಿನ ಬದಲಿಗೆ ಕಬ್ಬಿಣದ ಆಣಿಯನ್ನೋ, ಇತರ ಕಬ್ಬಿಣದ ಅಲಗನ್ನೋ, ಅಥವಾ ಲಿತ್ಮಸ್ ಕಾಗದದ ಮಾಪಕವನ್ನೋ ಬಳಸಿ, ಪಿ.ಹೆಚ್. 7 ಸರಿಯಾಗಿದೆಯೇ ಎಂದು ತಿಳಿದುಕೊಳ್ಳುವುದರಿಂದ ಸರಿಯಾದ ಬೋರ್ಡೋ ಮಿಶ್ರಣ ತಯಾರಿಸಿದಂತಾಗುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *