ನಾ ಬರೆಯ ಹೊರಟಾಗ ಕವಿತೆ….
ಮುದ ಕೊಟ್ಟವನು ದಿನಕರ
ಅವನಂದ ಎಳೆಬಿಸಿಲ ಗುಂಗೊಳಗೆ ಇರುತಿರಲು ಭಾವ ಹಿತಕರ…..
ನಾ ಬರೆಯ ಹೊರಟಾಗ ಕವಿತೆ…..
ಕರೆದಂದಳೀ ಮಮತಾಮಯಿ
ವಸುಂಧರೆ ಹಸಿರೊಳಗೆ ಉಸಿರಿರಲು
ಅಗದಿರದೇ ಕವಿ ಮನದಿ ಪದಗಳುತ್ಕರ್ಷ?
ನಾ ಬರೆಯ ಹೊರಟಾಗ ಕವಿತೆ……
ಉಕ್ಕಿ ಹರಿವ ಝರಿ ಅಲೆಯೊಳಗೆ ಕಳಿಸಿತ್ತು ಝಳು ಝುಳು ಎಂದೆನುವ
ಮುದದ ಪದದ ಕಚಗುಳಿ.
ನಾ ಬರೆಯ ಹೊರಟಾಗ ಕವಿತೆ….
ಮನುಕುಲದ ವಿಧವಿಧದ ಜಂಜಾಟ
ಸುಖದುನ್ಮಾದಗಳು ಮನಪಟಲಕಪ್ಪಳಿಸಿ
ಕುದಿಸಿತ್ತು ಬರೆವ ಒಲವು.
ನಾ ಬರೆಯ ಹೊರಟಾಗ ಕವಿತೆ….
ಮುಗಿಲು ಭುವಿಗಪ್ಪಿ ಹನಿ ಹನಿಯಾಗಿ
ಚುಂಬಿಸಿ,ತಂಗಾಳಿಯಲಿ ಗಿಡಮರಗಳು
ತೇಲಿ ತಾರುಣ್ಯ ನೆನಸುವಂತೆ.
ನಾ ಬರೆಯ ಹೊರಟಾಗ ಕವಿತೆ…..
ಬೆಳಗೂ ಬೈಗೂ ಹಕ್ಕಿಗಳಿಂಚರ,ಕೋಗಿಲೆ
ಗಾನ, ಹುಳುಹುಪ್ಪಟೆಗಳ ಕುಸುಕುಸು ಮಾತು ದನಿಯಾಗಿ ನಿಂತಂತೆ.
ನಾ ಬರೆಯ ಹೊರಟಾಗ ಕವಿತೆ…..
ನೈದಿಲೆಯ ವದನಕಪ್ಪಿದ ಚಂದಿರ
ಮಲ್ಲಿಗೆಯ ಕಂಪಿಗೆ ಮನಸೂರೆಗೊಂಡ
ಚುಕ್ಕಿಗಳು ಸ್ಪೂರ್ತಿಯಂತೆ.
-ಲತಾ(ವಿಶಾಲಿ) ವಿಶ್ವನಾಥ್