ವಿಜ್ಞಾನಲೋಕದ ಅಷ್ಟಲಕ್ಷ್ಮಿಯರು

Share Button

ಉದಯ ಶಂಕರ ಪುರಾಣಿಕ

ವಿಜ್ಞಾನ, ಸಂಶೋಧನೆ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅನೇಕ ಮಹಿಳೆಯರಿದ್ದಾರೆ. ಆದರೆ ಎಲೆಮರೆಯ ಕಾಯಿಗಳಂತೆ ಇರುವ ಈ ಮಹಿಳೆಯರು ಮತ್ತು ಲೋಕ ಕಲ್ಯಾಣಕ್ಕಾಗಿ ಇವರು ನೀಡುತ್ತಿರುವ ಮಹತ್ವದ ಕೊಡುಗೆ ಕುರಿತು ಅನೇಕ ಜನರಿಗೆ ಗೊತ್ತಿಲ್ಲ.

ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಭವಿಷ್ಯವಿಲ್ಲ, ಮಹಿಳೆಯರಿಗೆ ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟಸಾಧ್ಯ, ಸಾವಿರಾರು ಸುಪ್ರಸಿದ್ಧ ವಿಜ್ಞಾನಿಗಳಿರುವ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡಲು ಮಹಿಳೆಯರಿಗೆ ಸಾಧ್ಯವಿಲ್ಲ, ಮೊದಲಾದ ನಕಾರಾತ್ಮಕ ಚಿಂತನೆಗಳನ್ನು ಪ್ರಸ್ತುತ ಪಡಿಸುವ ಕೊಳಕು ಮನಸ್ಸುಗಳಿಗೆ ಬರವಿಲ್ಲ.

ಇವರು ಹುಟ್ಟಿದ ದೇಶ ಮತ್ತು ಮಾತನಾಡುವ ಭಾಷೆ ಬೇರೆ ಬೇರೆಯಾಗಿದೆ. ಆದರೆ  ವಿಶ್ವಮಟ್ಟದ ಸಾಧನೆಯನ್ನು ಮಾಡಿರುವ ಈ 8 ಜನ ಮಹಿಳೆಯರನ್ನು ಸಮಕಾಲೀನ ವಿಜ್ಞಾನ ಲೋಕದ ಅಷ್ಟಲಕ್ಷ್ಮೀಯಂದು ಕರೆದರೆ ತಪ್ಪಾಗಲಾರದು. ಇವರ ಯಶೋಗಾಥೆ, ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಕೆಲಸ ಮಾಡಲು ನಮ್ಮ ಯುವಕ-ಯುವತಿಯರಿಗೆ ಪ್ರೇರಣೆ ನೀಡಬೇಕು. ಮಹಿಳೆ ಕುರಿತು ನಕಾರಾತ್ಮಕ ಚಿಂತನೆಗಳು ಕೊನೆಯಾಗಬೇಕು ಎನ್ನುವ ಆಶಯದಿಂದ ಈ ಲೇಖನವನ್ನು ಬರೆದಿದ್ದೇನೆ.

Shirley Ann Jackson

ಸೌರಶಕ್ತಿಯಿಂದ ವಿದ್ಯುತ್‍ ಉತ್ಪಾದಿಸುವ ಸೋಲಾರ್‍ ಸೆಲ್‍ಗಳನ್ನು ಕುರಿತು ಕೇಳಿರುತ್ತೇವೆ. ಸಂವಹನ, ವೈದಕೀಯ, ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಬಳಸಲಾಗುತ್ತಿರುವ ಫೈಬರ್‍ ಆಫ್ಟಿಕ್‍ ಕೇಬಲ್‍ಗಳನ್ನು ಕುರಿತು ಕೇಳಿರುತ್ತೇವೆ. ಈ ಬಹುಪಯೋಗಿ ಮತ್ತು ಕ್ರಾಂತಿಕಾರಕ ಉತ್ಪನ್ನಗಳ ಸಂಶೋಧನೆಯಲ್ಲಿ ಮಹತ್ವದ ಕೊಡುಗೆ ನೀಡಿರುವವರು ಸುಪ್ರಸಿದ್ಧ ವಿಜ್ಞಾನಿ, ಶ್ರೀಮತಿ Shirley Ann Jackson. ಇವರು ವಿಶ್ವವಿಖ್ಯಾತ MIT ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‍ ಗೌರವ ಪಡೆದ ಮೊಟ್ಟಮೊದಲ ಆಫ್ರಿಕಾ-ಅಮೇರಿಕನ್‍ ಮಹಿಳೆಯಂದು ಖ್ಯಾತಿ ಗಳಿಸಿದ್ದಾರೆ.

Katherine Johnson

ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಮಾಡುತ್ತಿರುವ ವಿಶ್ವಮಟ್ಟದ ಸಾಧನೆಗಳಲ್ಲಿ ಯಶಸ್ವಿ ಉಪಗ್ರಹ ಉಡಾವಣೆಗಳು ಒಂದಾಗಿದೆ. ದೇಶಾದಂತ್ಯ ದೂರವಾಣಿ, ಟಿವಿ, ಇಂಟರ್‍ನೆಟ್‍ ಮೊದಲಾದ ಸೇವೆಗಳನ್ನು ನೀಡಲು ಹಾಗೂ ಕೃಷಿ, ಹವಾಮಾನ ಮುನ್ಸೂಚನೆ, ಸಂಶೋಧನೆ, ಮಿಲಿಟರಿ ಮೊದಲಾದ ಕ್ಷೇತ್ರಗಳಲ್ಲಿ ಈ ಉಪಗ್ರಹಗಳು ಮಹತ್ವದ ಕೊಡುಗೆಯನ್ನು ನೀಡುತ್ತಿವೆ. ಇಂದು ಭಾರತ, ಅಮೇರಿಕಾ, ರಷ್ಯಾ, ಚೀನಾ ಮೊದಲಾದ ದೇಶಗಳು ಯಶಸ್ವಿ ಉಪಗ್ರಹ ಉಡಾವಣೆ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ಸುಪ್ರಸಿದ್ಧ ವಿಜ್ಞಾನಿ Katherine Johnsonರವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.

ಉಪಗ್ರಹಗಳ ಉಡಾವಣೆಗಾಗಿ ಯಾವ ಪಥ ಆರಿಸಿಕೊಳ್ಳಬೇಕು, ಈಗಾಗಲೇ ಉಡಾವಣೆಯಾಗಿ ಕೆಲಸ ಮಾಡುತ್ತಿರುವ ಉಪಗ್ರಹಗಳ ಕೆಲಸಕ್ಕೆ ಸಮಸ್ಯೆಯಾಗದಂತೆ ಯಾವ ಸಮಯದಲ್ಲಿ ಹೊಸ ಉಪಗ್ರಹ ಉಡಾವಣೆ ಮಾಡಬೇಕು, ಒಂದು ವೇಳೆ ಉಪಗ್ರಹ ಉಡಾವಣೆ ವಿಫಲವಾದರೆ, ಯಾವ ಪಥವನ್ನು ಬಳಸಬೇಕು ಎಂದು ಇವರು ಕಂಡ ಹಿಡಿದ ಸೂತ್ರಗಳನ್ನು ಅಪೋಲೋ 11 ಮತ್ತು ಪ್ರಾಜೆಕ್ಟ್‍ ಮರ್‍ಕ್ಯೂರಿ ಯೋಜನೆಗಳಿಗಾಗಿ ಬಳಸಲಾಯಿತು. ಇಂದಿಗೂ ಇವರ ಸೂತ್ರಗಳನ್ನು ಉಪಗ್ರಹ ಉಡಾವಣೆಯಲ್ಲಿ ಬಳಸಲಾಗುತ್ತಿದೆ ಎಂದರೆ ಎಷ್ಟು ಮಹತ್ವದ ಕೊಡುಗೆಯನ್ನು ಇವರು ನೀಡಿದ್ದಾರೆ ಎನ್ನುವುದು ನಮಗೆ ಗೊತ್ತಾಗುತ್ತದೆ.

                   Chien-Shiung Wu

ಪರಮಾಣು ಸಂಶೋಧನೆಯಿಂದಾಗಿ ನಮಗೆ ವಿದ್ಯುತ್‍, ವೈದಕೀಯ ಮೊದಲಾದ ಕ್ಷೇತ್ರಗಳಲ್ಲಿ ಲಾಭವಾಗುತ್ತಿದೆ. ಈ ಕ್ಷೇತ್ರದ “ಪ್ರಥಮ ಮಹಿಳೆ ಅಥವಾ ಮಹಾಮಾತೆ” ಎನ್ನುವ ಗೌರವವನ್ನು ಸುಪ್ರಸಿದ್ಧ ವಿಜ್ಞಾನಿ Chien-Shiung Wu ಅವರಿಗೆ ನೀಡಲಾಗಿದೆ. ಬೀಟಾ ಕ್ಷಯಸಿವಿಕೆ ಕುರಿತು ಇವರು ಅತ್ಯಂತ ಮಹತ್ವದ ಸಂಶೋಧನೆಯನ್ನು ಮಾಡಿದ್ದಾರೆ. ಇವರ ಸಂಶೋಧನೆಗಳು ಮುಂದೆ ಈ ಕ್ಷೇತ್ರದಲ್ಲಿ ನೋಬಲ್‍ ಪ್ರಶಸ್ತಿಯ ಗೌರವ ಪಡೆದ ವಿಜ್ಞಾನಿಗಳು ಮಾಡಿದ ಹಲವಾರು ಸಂಶೋಧನೆಗಳಿಗೆ ಸಹಾಯಕವಾಗಿದ್ದವು. ಇಂತಹ ಮಹತ್ವದ ಕೊಡುಗೆಯನ್ನು ಇವರು ವಿಶ್ವಕ್ಕೆ ನೀಡಿದ್ದಾರೆ.

  Sameera Moussa

ಪರಮಾಣು ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸದಿದ್ದರೆ ನಮ್ಮ ಪರಿಸರ ಮತ್ತು ಸಮಸ್ತ ಜೀವರಾಶಿಯ ಮೇಲಾಗುವ ಅಪಾರ ಹಾನಿಯನ್ನು ಕುರಿತು ಅಪಾರ ಸಂಶೋಧನೆ ಮಾಡಿರುವವರಲ್ಲಿ ಸುಪ್ರಸಿದ್ಧ Sameera Moussa ಒಬ್ಬರಾಗಿದ್ದಾರೆ. ಅಣು ವಿಕಿರಣ ಕುರಿತು ಕೈರೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‍ ಪದವಿಯನ್ನು ಪಡೆದ ಮೊದಲ ಮಹಿಳೆಯನ್ನುವ ಗೌರವ ಕೂಡಾ ಇವರದ್ದಾಗಿದೆ. ಪರಮಾಣು ಶಕ್ತಿಯನ್ನು ಬಳಸಿ ಹೇಗೆ ಕ್ಯಾನ್ಸರ್‍ ಪೀಡಿತರಿಗೆ ಸುಲಭದರದಲ್ಲಿ ಉತ್ತಮ ಔಷಧಗಳನ್ನು ನೀಡಬಹುದು ಎಂದು ಕಂಡುಹಿಡಿಯಲು ತಮ್ಮ ಇಡೀ ಜೀವನವನ್ನು ಇವರು ಮುಡಿಪಾಗಿಟ್ಟರು. ಇವರ ಸಂಶೋಧನೆಯಿಂದಾಗಿ ನೂರಾರು ಕೋಟಿ ಕ್ಯಾನ್ಸರ್‍ ಪೀಡಿತರಿಗೆ ಇಂದು ಸಹಾಯವಾಗುತ್ತಿದೆ.

                Antonio Novello

ಅನೇಕ ದೇಶಗಳಲ್ಲಿ ಹೆಚ್.ಐ.ವಿ/ಏಡ್ಸ್‍ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ,  ತಾಯಿ ಮತ್ತು ಮಕ್ಕಳ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳನ್ನು ಕುರಿತು ಸಂಶೋಧನೆ ನೆಡೆಸಿ, ಕೋಟ್ಯಾಂತರ ತಾಯಿ ಮತ್ತು ಮಕ್ಕಳ ಚಿಕಿತ್ಸೆಗೆ ನೆರವಾದವರು ಸುಪ್ರಸಿದ್ಧ ವಿಜ್ಞಾನಿ Antonio Novelloರವರು.  ಅಮೇರಿಕಾ ದೇಶದ ಪ್ರಪ್ರಥಮ ಮಹಿಳಾ ಸರ್ಜನ್‍ ಜನರಲ್‍ ಗೌರವವನ್ನು ಇವರು ಪಡೆದಿದ್ದಾರೆ.

Flossie Wong-Staal

ಏಡ್ಸ್ ಮಹಾಮಾರಿ ಹೇಗೆ ಬರುತ್ತದೆ ಎಂದು ಸಂಶೋಧನೆ ಮಾಡಿ ಯಶಸ್ವಿಯಾದ ತಂಡದಲ್ಲಿ ಕೆಲಸ ಮಾಡಿದವರು ಸುಪ್ರಸಿದ್ಧ ವಿಜ್ಞಾನಿ Flossie Wong-Staal ನಂತರ ಎರಡು ವರ್ಷ ನಿರಂತರವಾಗಿ ಸಂಶೋಧನೆ ಮಾಡಿದ ಇವರು ವಿಶ್ವದಲ್ಲಿ ಪ್ರಪ್ರಥಮ ಬಾರಿಗೆ ಏಡ್ಸ್‍ ವೈರಸ್‍ನ್ನು ಕ್ಲೋನ್‍ ಮಾಡುವಲ್ಲಿ ಯಶಸ್ವಿಯಾದರು. ಯಾರಿಗಾದರೂ ಏಡ್ಸ್‍ ಬಂದಿದೆ ಅಥವಾ ಇಲ್ಲ ಎಂದು ತಿಳಿದುಕೊಳ್ಳಲು ನೆಡೆಸಲಾಗುವ ಪರೀಕ್ಷೆಗಳಲ್ಲಿ ಇವರ ಸಂಶೋಧನೆ ಮಹತ್ವದ ಪಾತ್ರವಹಿಸುತ್ತಿದೆ.

Wanda Diaz Merced.

ಸೂಪರ್ ನೋವಾ ಮತ್ತು ಸೂರ್ಯನ ಜ್ವಾಲೆಗಳ ಸಂಶೋಧನೆಯಲ್ಲಿ ಶಬ್ದ ತರಂಗಗಳನ್ನು ಬಳಸುವ ವಿಧಾನವನ್ನು ಅಭಿವೃದ್ಧಿ ಪಡಿಸಿದವರು ಸುಪ್ರಸಿದ್ಧ ವಿಜ್ಞಾನಿ Wanda Diaz Merced. 20 ವರ್ಷದವರಾಗಿದ್ದಾಗ ದೃಷ್ಟಿ ಕಳೆದುಕೊಂಡ ಇವರು, ನನಗೆ ಕಣ್ಣು ಕಾಣಿಸುವುದಿಲ್ಲ ನಿಜ ಆದರೆ ವಿವಿಧ ತಾರೆಗಳನ್ನು ಸಂಶೋಧನೆ ಮಾಡಲು ಶಬ್ದ ತರಂಗಗಳನ್ನು ಬಳಸುತ್ತೇನೆ ಎನ್ನುವ ದಿಟ್ಟ ನಿಲುವು ತಗೆದುಕೊಂಡರು. ತಾರೆಗಳು, ಗ್ರಹಗಳು  ಉಂಟು ಮಾಡುವ ಶಬ್ದವನ್ನು ಆಲಿಸುತ್ತ, ಮಹತ್ವದ ಸಂಶೋಧನೆಯನ್ನು ಇವರು ಮಾಡಿದ್ದಾರೆ.

                                 Fabiola Gianotti.

CERN ನಲ್ಲಿ ನೆಡಯುತ್ತಿರುವ Hadron Collidor ಸಂಶೋಧನೆಯಲ್ಲಿ ಅನೇಕ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಇಂತಹ 3,000 ವಿಜ್ಞಾನಿಗಳಿರುವ ದೊಡ್ಡ ತಂಡವೊಂದರ ಮುಖ್ಯಸ್ಥರಾಗಿ ಸಂಶೋಧನೆ ಮಾಡುತ್ತಿದ್ದಾರೆ ಸುಪ್ರಸಿದ್ಧ ವಿಜ್ಞಾನಿ  Fabiola Gianotti. ಇವರು ಮತ್ತು ಇವರ ತಂಡ ಮಾಡುತ್ತಿರುವ ಸಂಶೋಧನೆ ವಿಜ್ಞಾನ ಜಗತ್ತಿಗೆ ಮಹತ್ವದ ಕೊಡುಗೆಯನ್ನು ನೀಡುವ ನಿರೀಕ್ಷೆಯಿದೆ.
.
-ಉದಯ ಶಂಕರ ಪುರಾಣಿಕ

.

3 Responses

  1. Latha Gopalakrishna says:

    ಲೇಖನ ಮಾಹಿತಿಪೂರ್ಣ

  2. Hema says:

    ವಿಜ್ಞಾನ ಲೋಕದಲ್ಲಿ ಲಕ್ಷ್ಮಿಯರ ರೂಪಕ! ಬರಹ ಇಷ್ಟವಾಯಿತು

  3. ವಿನಾಯಕ ೆಲ್ ಪಟಗಾರ ಬೆಟ್ಕುಳಿ ಕುಮಟಾ(ಉ.ಕ) says:

    ಉತ್ತಮ ಮಾಹಿತಿಯುಕ್ತ ಲೇಖನ.ತುಂಬಾ ಚೆನ್ನಾಗಿದೆ. ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಬಗ್ಗೆ ತಿಳಿಸಿರುವುದು ಉಪಯುಕ್ತವಾಗಿದೆ.ಮುಂದಿನ ದಿನಗಳಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಭಾರತೀಯ ಮಹಿಳೆಯರ ಸಾಧನೆಗಳ ಬಗ್ಗೆ ತಮ್ಮಿಂದ ಇಂತಹುದೇ ಲೇಖನ ತಮ್ಮಿಂದ ನಿರಿಕ್ಷಿಸುತ್ತಿದ್ದೆನೆ. ಪುರಾಣಿಕ ಸರ್ ತುಂಬಾ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: