ಮುಂಗಾಲಿನ ನಡಿಗೆ…’ತಾಡಾಸನ’
ಮಧ್ಯವಯಸ್ಸು ಸಮೀಪಿಸುತ್ತಿದ್ದಂತೆ, ಕೆಲವರಿಗೆ ಕಾಲಿನ ರಕ್ತನಾಳಗಳು ವಕ್ರವಾಗುವುದು, ದಪ್ಪವಾಗುವುದು, ನೀಲಿಬಣ್ಣ ಹೊಂದಿ ತಿರುಚಿದಂತೆ ಕಾಣಿಸುವುದು ಇತ್ಯಾದಿ ಸಮಸ್ಯೆಗಳುಂಟಾಗುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ Varicose Veins ಅನ್ನುತ್ತಾರೆ. Varicose Veins ನಿಂದಾಗಿ ತೀರಾ ತೊಂದರೆಗಳಿಲ್ಲವಾದರೂ ಕಾಲಿನ ಅಂದಗೆಡುತ್ತದೆ ಮತ್ತು ಕೆಲವರಿಗೆ ಕಾಲುನೋವಿನ ಅನುಭವವಾಗುತ್ತದೆ.
Varicose Veins ಉಂಟಾಗದಂತೆ ತಡೆಗಟ್ಟಲು, ಯೋಗಾಸನದಲ್ಲಿ ಬಹಳ ಸರಳವಾದ ಮತ್ತು ಯಾರೂ ಅಭ್ಯಾಸ ಮಾಡಬಹುದಾದ ‘ಮುಂಗಾಲಿನ ನಡಿಗೆ’ ಮತ್ತು ‘ಹಿಂಗಾಲಿನ ನಡಿಗೆ’ ಎಂಬ ಪ್ರಕಾರಗಳಿವೆ. ಅಭ್ಯಾಸ ಮಾಡುವ ವಿಧಾನ:
1. ನೆಲದ ಮೇಲೆ ಬೆಡ್ ಶೀಟ್ ಅಥವಾ ಮ್ಯಾಟ್ ಹಾಸಿ ಎರಡೂ ಕಾಲುಗಳ ಮೇಲೆ ಭದ್ರವಾಗಿ ನಿಲ್ಲಿ.
2. ಎರಡೂ ಕೈಗಳನ್ನು ಎಷ್ಟು ಸಾಧ್ಯವೋ ಅಷ್ಟು ನೇರವಾಗಿ, ಮೇಲಕ್ಕೆ ಚಾಚಿ.
3. ಕೈಗಳು, ನಮ್ಮ ಕಿವಿಗಳನ್ನು ಸ್ಪರ್ಶಿಸುವಂತೆ ಲಂಬವಾಗಿರಬೇಕು.
4. ಈಗ ಶರೀರವನ್ನು ಮೇಲ್ಮುಖವಾಗಿ ಸೆಳೆಯುವ ಪ್ರಯತ್ನ ಮಾಡಿ.
5. ಈ ಸ್ಥಿತಿಯಲ್ಲಿ ಎರಡೂ ಹಿಮ್ಮಡಿಗಳನ್ನು ಮೇಲೆತ್ತಿ, ಮುಂಗಾಲುಗಳ ಮೇಲೆ ಭಾರ ಹಾಕಿ 10-20 ಹೆಜ್ಜೆ ‘ಮುಂಗಾಲಿನ ನಡಿಗೆ’ ಮಾಡಿ.
6. ಇದೇ ರೀತಿ, ಮುಂಗಾಲುಗಳನ್ನು ಮೇಲೆತ್ತಿ, ಹಿಮ್ಮಡಿಗಳ ಮೇಲೆ ಭಾರ ಹಾಕಿ ‘ಹಿಂಗಾಲಿನ ನಡಿಗೆ’ ಮಾಡಿ.
ಸ್ವಲ್ಪ ಮುಂದುವರಿದ ಭಾಗವಾದ ‘ತಾಡಾಸನ’ವನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಇನ್ನೂ ಹೆಚ್ಚಿನ ಪ್ರಯೋಜನ ದೊರಕುವುದು. ‘ತಾಡಾಸನ’ ಅಭ್ಯಾಸದ ವಿಧಾನ:
- ನೆಲದ ಮೇಲೆ ಬೆಡ್ ಶೀಟ್ ಅಥವಾ ಮ್ಯಾಟ್ ಹಾಸಿ, ಅದರ ಮೇಲೆ ಎರಡೂ ಪಾದಗಳನ್ನು ಭದ್ರವಾಗಿ ನಿಲ್ಲಬೇಕು.
- ಕಾಲಿನ ಸ್ನಾಯುಗಳನ್ನು , ಮಂಡಿಯ ಮತ್ತು ತೊಡೆಯ ಸ್ನಾಯುಗಳನ್ನು, ಹೊಟ್ಟೆಯನ್ನು, ಎದೆಯಭಾಗವನ್ನು, ಮೇಲ್ಮುಖವಾಗಿ ಸೆಳೆತ ಬರುವಂತೆ ಮಾಡಬೇಕು.
- ದೀರ್ಘ ಉಸಿರಾಟದೊಂದಿಗೆ, ಎರಡೂ ಕೈಗಳನ್ನೂ ಮೇಲಕ್ಕೆ ಎತ್ತಬೇಕು. ಈಗ ಸಂಪೂರ್ಣ ಶರೀರದಲ್ಲಿ, ಮುಖ್ಯವಾಗಿ ಕಾಲಿನ ಸ್ನಾಯುಗಳ ಸೆಳೆತದ ಅನುಭವವಾಗುತ್ತದೆ.
- ಕಾಲಿನ ಹಿಮ್ಮಡಿಗಳನ್ನು ಎತ್ತಿ, ಶರೀರದ ಸಂಪೂರ್ಣ ಭಾರವು, ಮುಂಗಾಲುಗಳ ಮೇಲೆ ಬೀಳುವಂತೆ, ನಿಂತುಕೊಂಡು, ಈ ಸ್ಥಿತಿಯಲ್ಲಿ ಒಂದೆರಡು ಬಾರಿ ಉಸಿರಾಡಿ. ಇದು ‘ತಾಡಾಸನ’. (ತಾಳೆಯ ಮರದಂತೆ, ನೇರವಾಗಿ ನಿಲ್ಲುವುದು ಎಂಬ ಅರ್ಥ)
ತಾಡಾಸನವನ್ನು ಸ್ವಲ್ಪ ಬದಲಾವಣೆಯೊಂದಿಗೆ ಅಭ್ಯಾಸ ಮಾಡುವ ಪ್ರಕಾರಗಳಿವೆ. ಅವು ಹೇಗೆಂದರೆ, ಚಿತ್ರದಲ್ಲಿ ತೋರಿಸಿದಂತೆ, ಹಸ್ತಗಳನ್ನು ಒಳಮುಖವಾಗಿ ಮಡಚುವುದು, ಹೊರಮುಖವಾಗಿ ಮಡಚುವುದು, ಎಡ ಮತ್ತು ಬಲ ಪಕ್ಕಕ್ಕೆ ವಾಲಿಸುವುದು.
– ಹೇಮಮಾಲಾ.ಬಿ
ಉಪಯುಕ್ತ ಮಾಹಿತಿ. ಹೀಗೇ ಒದಗಿಸುತ್ತ ಇರಿ.
Very Very Useful Information.. Tks