ಜೆ.ಜೆ.ಥಾಮ್ಸನ್-ಆಧುನಿಕ ವಿಜ್ಞಾನ ಜಗತ್ತಿನ ಮಹಾನ್ ಗುರು!

Share Button

 

‘ಗುರು – ಶಿಷ್ಯ ಪರಂಪರೆ’ ಅನ್ನುವ ಸಂಪ್ರದಾಯ ಮಾನವ ಇತಿಹಾಸದಷ್ಟೇ ಪ್ರಾಚೀನ. ತಾಯಿ – ಮಗುವಿನ ಸಂಬಂಧದಂತೆ ಒಂದು ಪವಿತ್ರವಾದ ಅನುಬಂಧ. ಭಾರತೀಯ ಪುರಾಣ ಮತ್ತು ಇತಿಹಾಸದಲ್ಲಿ ಇಂತಹ ಬಾಂಧವ್ಯಗಳಿಗೆ ಎಷ್ಟೋ ಉದಾಹರಣೆಗಳಿವೆ. ವೇದ, ಆಗಮ, ತತ್ವಶಾಸ್ತ್ರ, ವಾಸ್ತು, ಯುದ್ಧಶಾಸ್ತ್ರ ಅಥವಾ ಸಂಗೀತ ಕಲಿಯುವಿಕೆಯಲ್ಲಿ ಗುರು ಅಥವಾ ಗುರುಕುಲಗಳೇ ಪ್ರಾಮುಖ್ಯ. ವಸಿಷ್ಠ ಮಹರ್ಷಿ, ಸಾಂದೀಪನಿ ಮುನಿ, ಶುಕ್ರಾಚಾರ್ಯ, ಖಗೋಳ ಶಾಸ್ತ್ರಜ್ಞ ಆರ್ಯಭಟ, ಆಚಾರ್ಯತ್ರಯರು ( ಶಂಕರ, ರಾಮಾನುಜ ಹಾಗೂ ಮಧ್ವ ) ಇವರುಗಳ ಗುರುಕುಲಗಳಲ್ಲದೆ, ಗ್ರೀಕ್ ತತ್ವ ಶಾಸ್ತ್ರಜ್ಞರುಗಳಾದ ಸಾಕ್ರೆಟಿಸ್, ಪ್ಲೇಟೋ ಚಿಂತನ ಪರಂಪರೆಯೂ, ಚೀನಾದ ಕನ್ಫ್ಯೂಷಿಯಸ್ ಭೋಧನೆಗಳೂ ದೊಡ್ಡ ಅನುಯಾಯಿಗಳನ್ನೇ ಸೃಷ್ಟಿಮಾಡಿವೆ. ಆಧುನಿಕ ಪ್ರಪಂಚದಲ್ಲೂ ಉನ್ನತ ಮೌಲ್ಯಗಳನ್ನೋಳಗೊಂಡ ‘ಗುರುಕುಲ’ಗಳಿವೆ. ಇಂತಹ ಪರಂಪರೆ ಆಧುನಿಕ ವಿಜ್ಞಾನದಲ್ಲೂ ಇಲ್ಲವೇ? ಸರ್ ಜೆ.ಜೆ. ಥಾಮ್ಸನರು ಅಂತಹ ಒಂದುಗುರುಕುಲದಂತಹ ವಾತಾವರಣವನ್ನು ಅವರ ಪ್ರಯೋಗಾಲಯದಲ್ಲೇ ಮಾಡಿದ್ದರು.

ಚಿತ್ರ: ಸರ್ ಜೆ.ಜೆ. ಥಾಮ್ಸನ್

ಇಪ್ಪತ್ತನೇ ಶತಮಾನ ಪ್ರಾರಂಭವಾದಮೇಲೆ ಯಾವುದೇ ಒಬ್ಬ ಮಾನವ ಸಮಾಜಕ್ಕೆ ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ,   ಶ್ರೇಷ್ಟತೆಯ (ಗಾಂಧೀಜಿ ಅಥವಾ ಎಸ್. ರಾಮಾನುಜಂ ಅವರಂತಹ ವ್ಯಕ್ತಿಗಳನ್ನು ಹೊರತುಪಡಿಸಿ)  ಮಾಪನವೆಂದರೆ, ಅಂತಹ ವ್ಯಕ್ತಿಯು ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವರೇ ಎಂಬುದರ ಮೇಲೆಯೂ ಆಗಿಲ್ಲವೇ? ಇದು ಸಾಮಾನ್ಯವಾಗಿ ಹೆಚ್ಚಿನವರ ಅಂಬೋಣ. ಹಾಗಿದ್ದಲ್ಲಿ, ಜೆ.ಜೆ.ಥಾಮ್ಸನ್ ಸ್ವತಃ ಇಂತಹ ಗೌರವಕ್ಕೆ ಪಾತ್ರರಾಗಿದ್ದರಲ್ಲದೇ, ನೊಬೆಲ್ ಪ್ರಶಸ್ತಿ ವಿಜೇತ ಹಲವಾರು ವಿಜ್ಞಾನಿಗಳ ಗುರುಗಳೂ ಆಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಗುರುಗಳಾಗಿದ್ದುಕೊಂಡು, ಇಲ್ಲವೇ ತಮ್ಮ ಹೆಸರಿನ ಮತ್ತು ಜ್ಞಾನದ ಪ್ರಭಾವದಿಂದ ಜಗತ್ತಿನಾದ್ಯಂತ ಯುವ ವಿಜ್ಞಾನಿಗಳಿಗೆ ಸ್ಪೂರ್ತಿಯಾಗಿದ್ದರು. ಅವರ ವಿದ್ಯಾರ್ಥಿಗಳಲ್ಲಿ ಕನಿಷ್ಠ ಎಂಟು (ಆರು ಭೌತಶಾಸ್ತ್ರ ಮತ್ತು ಎರಡು ರಸಾಯನಶಾಸ್ತ್ರ) ವಿಜ್ಞಾನಿಗಳು ನೊಬೆಲ್ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದರು. ಅದೂ ಸಾಲದೆಂಬಂತೆ, ಮುಂದೆ 1937 ರಲ್ಲಿ ಅವರ ಮಗ ಜಿ.ಪಿ.ಥಾಮ್ಸನ್ ಕೂಡಾ ಭೌತಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಗಳಿಸಿದ್ದರು. ಇಪ್ಪತ್ತನೇ ಶತಮಾನದ  “ವಿಜ್ಞಾನದ ಮಹಾಗುರು” ಎಂದರೂ, ಆ ಬಿರುದು ಅವರಿಗೊಪ್ಪುತ್ತದೆ.


ಚಿತ್ರ
: ಗುರು ಜೆ.ಜೆ. ಥಾಮ್ಸನ್ (ಕುಳಿತವರಲ್ಲಿ ಎಡದಿಂದ ನಾಲ್ಕನೆಯವರು) ತನ್ನ ಶಿಷ್ಯರೊಂದಿಗೆ. [ಚಿತ್ರ ಕೃಪೆ : ಕೆವೆಂಡಿಶ್ ಲ್ಯಾಬ್ ಆಲ್ಬಮ್ ] 

ಆಧುನಿಕ ಅಣುವಿಜ್ಞಾನದ ಅಡಿಗಲ್ಲುಗಳನ್ನು ಹಾಕಿದವರ ಪಟ್ಟಿಯಲ್ಲಿ ಮೊದಲ ಹೆಸರು ಜೋಸೆಫ್ ಜೋನ್ ಥಾಮ್ಸನ್ ಎಂದು ಸುವರ್ಣಾಕ್ಷರಗಳಲ್ಲಿ ಕಲ್ಪಿಸಬಹುದು. ಥಾಮ್ಸನ್ ಗಿಂತ ಸುಮಾರು ಒಂದು ನೂರು ವರ್ಷಗಳ ಹಿಂದೆ ಬ್ರಿಟನ್ನಿನ ಜೋನ್ ಡಾಲ್ಟನ್ ಮತ್ತು ಅಲ್ಲಿಂದಲೂ 21 ಶತಮಾನಗಳ ಮೊದಲೇ ಭಾರತದ ಕಣಾದ ಹಾಗೂ ಗ್ರೀಸ್ ದೇಶದ ಡೆಮೋಕ್ರಿಟಿಸ್, ವಸ್ತುಗಳ ಅತಿ ಸಣ್ಣ ರೂಪವೆಂದರೆ ಪರಮಾಣು ಎಂದೂ ಮತ್ತು ಪರಮಾಣುಗಳು ಅವಿಭಾಜ್ಯ ಎಂದೂ ಸಾರಿದ್ದರು. ಡಾಲ್ಟನರು ಹತ್ತೊಂಬತ್ತನೇ ಶತಮಾನದ ಪ್ರಾರಂಭದ ವರ್ಷಗಳಲ್ಲಿ (1803) ಪರಮಾಣುಗಳು ಅವಿಭಾಜ್ಯ ಅಂದಿದ್ದರೆ, ಶತಮಾನದ ಕೊನೆಯ ವರ್ಷಗಳಲ್ಲಿ (1897) ಪರಮಾಣುವಿನ ಒಳಗೆಯೂ ವಿಭಾಗ ಮಾಡಲು ಸಾಧ್ಯವಾಗುವ ಇನ್ನಷ್ಟು ಚಿಕ್ಕ ಚಿಕ್ಕ ಕಣಗಳಿವೆ ಎಂದು ಥಾಮ್ಸನ್ ತೋರಿಸಿಕೊಟ್ಟರು. ಅವರು ಕಂಡುಕೊಂಡಂತಹ ಅಂತಹ ಮೊದಲ ಕಣಗಳೇ ‘ಇಲೆಕ್ಟ್ರಾನ್’ಗಳು.

ಯಾವುದೇ ಒಂದು ಹೊಸ ವಿಚಾರವನ್ನು ಮುಂದಿಟ್ಟಲ್ಲಿ, ವಿಜ್ಞಾನವೂ ಸೇರಿದಂತೆ, ಅದಕ್ಕೆ ವಿರೋಧಗಳು ಬರುವುದು ಸಾಮಾನ್ಯ. ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಲ್ಲಿ ಬ್ರಿಟನ್ನಿನ ವಿಲಿಯಂ ಕ್ರೂಕ್ಸ್ ಎನ್ನುವ ವಿಜ್ಞಾನಿ ಸಂಶೋಧಿತ ‘ಕ್ಯಾತೋಡ್ ಕಿರಣ’ಗಳ ಸ್ವಭಾವದ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದರು. ಕ್ರೂಕ್ಸ್ ಅವರು ಕ್ಯಾತೋಡ್ ಕಿರಣಗಳನ್ನು ನಿರ್ವಾತ ಮಾಡಿದ ಗಾಜಿನ ನಳಿಕೆಗಳ ಒಳಗೆ ಉತ್ಪಾದಿಸಿದ್ದರು. ರೊಂಜನ್ ತಯಾರಿಸಿದ್ದ X-ಕಿರಣಗಳು ಇಂತಹುದೇ ನಳಿಕೆಯೊಳಗೆ ಹುಟ್ಟಿದ್ದವು. ಹಾಗಾಗಿಯೇ, ಒಂದು ಸಿದ್ಧಾಂತದ ಪ್ರಕಾರ ಈ ಕ್ಯಾತೋಡ್ ಕಿರಣಗಳು, X-ಕಿರಣಗಳಂತೆ ಅಥವಾ ಬೆಳಕಿನ ಕಿರಣಗಳಂತೆ ವಿದ್ಯುತ್ಕಾಂತೀಯ ಅಲೆಗಳೇ ಇರಬೇಕಷ್ಟೇ ಎನ್ನುವುದು ಒಂದು ವಾದ. ಇದಕ್ಕೆ ಸಾಕಷ್ಟು ವಿಜ್ಞಾನಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಥಾಮ್ಸನ್ ಮತ್ತು ಅವರ ಶಿಷ್ಯರನೇಕರ ಪ್ರಕಾರ ಕ್ಯಾತೋಡ್ ಕಿರಣಗಳು ಅಂತಹ ಅಲೆಗಳೇ ಅಲ್ಲ. ಬದಲಾಗಿ, ಕಣ್ಣಿಗೆ ಕಾಣದ, ಫೋಟೋಗ್ರಫಿ ಪೇಪರ್ ಗಳಲ್ಲಿ ಹಿಡಿಯಲಾಗದ ಅತಿ ಸೂಕ್ಷ್ಮ ಕಣಗಳ ಸಮೂಹ ಪ್ರವಾಹ. ಸರಿ! ವಾದ-ಪ್ರತಿವಾದಗಳು ಪ್ರಾರಂಭವಾದವು. ಮುಂದಿನ ಒಂದು ವರ್ಷದಲ್ಲಿ ಥಾಮ್ಸನ್ ಅವರು ಈ ಕಿರಣಗಳ ಮೇಲೆ ಇನ್ನಷ್ಟು ಪ್ರಯೋಗಗಳನ್ನು ಮಾಡಿದರು. ಕ್ಯಾತೋಡ್ ಕಿರಣಗಳು ಅಯಸ್ಕಾಂತ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಒಂದು ಬದಿಗೆ ವಾಲುತ್ತವೆ, ಅದರ ಹಾದಿಯಲ್ಲಿ ಒಂದು ಚಿಕ್ಕ ಹಗುರವಾದ ರೆಕ್ಕೆಗಳಿರುವ ಚಕ್ರವನ್ನಿಟ್ಟರೆ, ಚಕ್ರವು ಯಾಂತ್ರಿಕವಾಗಿ ತಿರುಗಲಾರಂಭಿಸುತ್ತದೆ ಎಂಬಿತ್ಯಾದಿ ಪ್ರಯೋಗಗಳಿಂದ ಈ ಕಿರಣಗಳು ಕಣಗಳ ಸಮೂಹ ಪ್ರವಾಹವಲ್ಲದೇ, ಬೆಳಕಿನಂತೆ ವಿದ್ಯುತ್ಕಾಂತೀಯ ಅಲೆಗಳಲ್ಲ ಎಂದು ಸಾಬೀತು ಮಾಡಿದರು. ಕಣಗಳು ಋಣ ವಿದ್ಯುತ್ ಪೂರಣವಾಗಿವೆ (Negatively Charged), ಕಣವೊಂದರ ತೂಕ ಜಲಜನಕದ ಪರಮಾಣುವಿನ (ಅತ್ಯಂತ ಹಗುರವಾದ ಪರಮಾಣು) ತೂಕದ ಸುಮಾರು 2000 ಪಾಲು ಕಡಿಮೆಯಿದೆಯೆಂದೂ, ಪ್ರತಿ ಸೆಕೆಂಡಿಗೆ ಇವು 2,56,೦೦೦ ಕಿ.ಮೀ. ವೇಗದಲ್ಲಿ ಚಲಿಸಬಲ್ಲವೆಂದೂ, ಯಾವ ವಸ್ತುವಿನ ಮೇಲೆ ಇವು ಬೀಳುವವೋ ಅವುಗಳ ಮೇಲ್ಮೈಯಲ್ಲಿ ಒಂದು ಹೊಳಹನ್ನು (Glow) ಉಂಟುಮಾಡುತ್ತವೆಯೆಂದೂ ಕಂಡುಕೊಂಡರು. ಈ ಪ್ರವಾಹ ಇನ್ಯಾವುದೂ ಆಗಿರದೇ, ‘ಇಲೆಕ್ಟ್ರಾನ್’ಗಳೇ ಆಗಿವೆ ಎಂಬುದು ಥಾಮ್ಸನರ ಸಂಶೋಧನೆ. ಮೊತ್ತಮೊದಲ ಬಾರಿ ಒಂದು ಉಪಪರಮಾಣು (Subatomic) ಕಣದ ಆವಿಷ್ಕಾರವಾಯಿತು. ‘ವಿಜ್ಞಾನದ ಹೊಸ ಯುಗ’ವೊಂದು ಆರಂಭಗೊಂಡಿತು. 1906 ರಲ್ಲಿ ಥಾಮ್ಸನ್ ನೊಬೆಲ್ ಪ್ರಶಸ್ತಿಗೆ ಭಾಜನರಾದರು.

ಜೋಸೆಫ್ ಜೋನ್ ಥಾಮ್ಸನ್ 1856 ರ ಡಿಸೆಂಬರ್ 18 ರಂದು ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ ಜನಿಸಿದರು. ಅದಾಗಲೇ ಅವರ ತಂದೆ ಜೋಸೆಫ್ ಜೇಮ್ಸ್ ಥಾಮ್ಸನವರಲ್ಲಿ ಅವರ ಕುಟುಂಬದ ಹಿರಿಯವರಿಂದ ಬಳುವಳಿಯಾಗಿ ಬಂದಂತಹ ಒಂದು ಅಪರೂಪದ ಮತ್ತು ವಿಶಿಷ್ಟವಾದ ಪುಸ್ತಕದ ಅಂಗಡಿಯಿತ್ತು. ಪ್ರಾಚೀನ ಪುಸ್ತಕಗಳು ಮತ್ತು ಬೈಂಡ್ ಮಾಡಿದ ಕೈಬರಹಗಳೂ ಅಲ್ಲಿ ದೊರಕುತ್ತಿದ್ದವು. ಚಿಕ್ಕವನಿದ್ದಾಗಲೇ ಮಗ ಜೋನ್ ತಂದೆಯ ಅಂಗಡಿಯಲ್ಲಿದ್ದ ಪುರಾತನ ಮತ್ತು ಸಮಕಾಲೀನ ಪುಸ್ತಕಗಳನ್ನು, ಆಟ-ತಿರುಗಾಟ ಬಿಟ್ಟು, ಓದುತ್ತಿದ್ದ. ಹುಡುಗನ ಜ್ಞಾನ ದಾಹವನ್ನು ನೋಡಿ ಹಿರಿಯವರು ಅವನನ್ನು ಒಬ್ಬ ಇಂಜಿನಿಯರ್ ಮಾಡಿಸಬೇಕೆಂದು ಮ್ಯಾಂಚೆಸ್ಟರಿನ ವಿಕ್ಟೋರಿಯಾ ವಿಶ್ವವಿದ್ಯಾಲಯಕ್ಕೆ ಓದಲು ಕಳುಹಿಸಿದರು. ದುರದೃಷ್ಟವಶಾತ್, ತನ್ನ 16 ರ ಪ್ರಾಯದಲ್ಲಿ ಥಾಮ್ಸನ್ ತಂದೆಯನ್ನು ಕಳಕೊಂಡರು. ಆದರೂ ತಂದೆಯ ಗೆಳೆಯರು ಮತ್ತು ಚಿಕ್ಕಪ್ಪ, ಹುಡುಗನ ವಿದ್ಯಾಭ್ಯಾಸ ಕುಂಟಿತವಾಗಲು ಬಿಡಲಿಲ್ಲ. ಅದೇ ವರ್ಷ ಡಾಲ್ಟನ್ ಗೌರವಾರ್ಥವಿದ್ದ ಶಿಷ್ಯ ವೇತನ ದೊರಕಿದುದು ಥಾಮ್ಸನರಿಗೆ ಇನ್ನಷ್ಟು ಸಹಾಯವಾಯಿತು. ಸ್ವಾರಸ್ಯವೆಂದರೆ, ಶತಮಾನದಿಂದ ಬಂದ ‘ಡಾಲ್ಟನ್ ಪರಮಾಣು ತತ್ವ’ವನ್ನು, ಡಾಲ್ಟನ್ ಹೆಸರಿನ ಶಿಷ್ಯ ವೇತನ ಪಡೆದುಕೊಂಡೇ, ಅಲ್ಲಗೆಳೆದು ಮುಂದೆ ಪರಮಾಣುವಿಗೆ ಹೊಸ ಭಾಷ್ಯವನ್ನು ನೀಡಿದವರೇ ಥಾಮ್ಸನರು!

ತನ್ನ 19 ರ ಹರೆಯದಲ್ಲಿ ಇಂಜಿನಿಯರ್ ಪದವೀದರರಾದ ಥಾಮ್ಸನ್, ಗಣಿತದಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ, ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನ ಪ್ರತಿಷ್ಟಿತ ಗಣಿತದ ಟ್ರೈಪೊಸ್ (Tripos) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಆಯ್ಕೆಯಾದರು. 1881 ರಲ್ಲಿ, ಅಂದರೆ ತಮ್ಮ 24 ರ ಪ್ರಾಯದಲ್ಲಿ ಅವರು ದ್ರವ್ಯರಾಶಿ ಮತ್ತು ಶಕ್ತಿಯ (Mass and Energy) ಸಮಾನತೆಯ ಬಗ್ಗೆ ಬರೆದ ಒಂದು ವೈಜ್ಞಾನಿಕ ಪ್ರಬಂಧ ಉಲ್ಲೇಖನೀಯ ಮತ್ತು ಮುಂದೆ ಬರಲಿದ್ದ, ‘ಆಲ್ಬರ್ಟ್ ಐನ್ ಸ್ಟೈನ್ ಸಿದ್ಧಾಂತ’ಕ್ಕೆ ಪೂರ್ವಸಿದ್ಧತೆಯಂತೆ ಭಾಸವಾಗುತ್ತಿತ್ತು. ಟ್ರಿನಿಟಿ ಕಾಲೇಜಿನ ಅದ್ಯಯನದ ಅನಂತರ ಥಾಮ್ಸನ್, ಕೆವೆಂಡಿಶ್ ಪ್ರಯೋಗಾಲಯದಲ್ಲಿ ಸಂಶೋಧಕರಾಗಿ ಸೇರಿಕೊಂಡರು. ಒಂದು ಕಾಲದಲ್ಲಿ ಜಗತ್ತಿನ ಅದ್ಭುತ, ಆಗರ್ಭ ಶ್ರೀಮಂತರಾದರೂ ವಿಚಿತ್ರ ಸ್ವಭಾವದ ವಿಜ್ಞಾನಿಯಾಗಿದ್ದ ಹೆನ್ರಿ ಕೆವೆಂಡಿಶ್ (1731 – 1810) ಹೆಸರಿನಲ್ಲಿ ಸ್ಥಾಪಿಸಿದ್ದ ಈ ಸಂಸ್ಥೆಯಲ್ಲಿ ಲಾರ್ಡ್ ರೇಲಿಯವರು ಮುಖ್ಯಸ್ಥರಾಗಿದ್ದರು. 1884 ರಲ್ಲಿ ತನ್ನ ಉತ್ತರಾಧಿಕಾರಿಯಾಗಿ 28 ರ ಯುವಕ ಥಾಮ್ಸನರನ್ನು ನೇಮಕಾತಿ ಮಾಡಿ, ರೇಲಿಯವರು ರಾಜಿನಾಮೆ ಕೊಟ್ಟರು. ತಮ್ಮಿಂದ ಎಷ್ಟೋ ವರ್ಷ ಚಿಕ್ಕವನಿರುವ ಥಾಮ್ಸನ್ ಈ ಹುದ್ದೆಗೇರಿದ ಹಿನ್ನೆಲೆಯಲ್ಲಿ ಉಳಿದ ವಿಜ್ಞಾನಿಗಳಲ್ಲಿ ಗೊಂದಲ, ಗಲಾಟೆ ಹಾಗೂ ವಿರೋಧವೆಬ್ಬಿತು. ಆದರೇನು? ರೇಲಿಯವರ ಆಯ್ಕೆ ಒಳ್ಳೆಯ ವಿವೇಚನೆಯದ್ದೇ ಆಗಿತ್ತು. ಮುಂದೆ 34 ವರ್ಷಗಳ ಸುಧೀರ್ಘಕಾಲ ಥಾಮ್ಸನ್ ಸಂಸ್ಥೆಯನ್ನು ಜಗತ್ತಿನ ಅತಿ ಉತ್ಕೃಷ್ಟ ಸಂಶೋಧನಾಲಯವನ್ನಾಗಿ ಬೆಳೆಸಿದರು.

ಮುಖ್ಯಸ್ಥರಾದ ಹೊಸದರಲ್ಲಿ ಥಾಮ್ಸನ್ ಅವಿವಾಹಿತರಿದ್ದರು. ಅವರ ಉಪನ್ಯಾಸಗಳನ್ನು ಕೇಳಲು ಚಾಚೂ ತಪ್ಪದೆ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ, ಸರ್ ಜೋರ್ಜ್ ಎಡ್ವರ್ಡ್ ಪೇಗೆಟ್ ಅವರ ಮಗಳು ರೋಸ್ ಪೇಗೆಟ್ ಒಬ್ಬರು. ಜೋರ್ಜ್ ಪೇಗೆಟ್ ಕೇಂಬ್ರಿಜ್ ನಲ್ಲಿ ಪ್ರತಿಷ್ಟಿತ ಪ್ರೊಫೆಸ್ಸರ್ ಹಾಗೂ ಫಿಸಿಶಿಯನ್. ಮಗಳಿಗೆ ಥಾಮ್ಸನ್ ಪಾಠ ಎಷ್ಟು ಅರ್ಥವಾಗುತ್ತಿತ್ತು ಹೇಳುವಂತಿರಲಿಲ್ಲ. ಥಾಮ್ಸನ್ ಹೇಳುತ್ತಿದ್ದರು, “ನನಗನಿಸುತ್ತದೆ, ಆಕೆಗೆ ನಾನು ಹೇಳುತ್ತಿರುವುದು ಒಂದಿನಿತೂ ಅರ್ಥವಾಗುತ್ತಿಲ್ಲ. ತಾನು ದೈವತ್ವದ ಉಪನ್ಯಾಸಕ್ಕೆ ಬರುತ್ತಿದ್ದೇನೆಂಬ ತಪ್ಪು ಕಲ್ಪನೆ ಆಕೆಗಿದೆ. ದೇವರೇ ಕಾಪಾಡಬೇಕಷ್ಟೇ”. ಕಾಪಾಡಲಿಲ್ಲವೇ? 1890 ರಲ್ಲಿ ಇದೇ ಯುವತಿ ಥಾಮ್ಸನರ ಪತ್ನಿಯಾದಳು. 1892 ರಲ್ಲಿ ಜನಿಸಿದ ಈ ವಿಜ್ಞಾನಿ ದಂಪತಿಯ ಮಗ, ಜಿ.ಪಿ. ಥಾಮ್ಸನ್, ತಂದೆಯ ಹಾದಿಯಲ್ಲೇ ಮುಂದುವರಿದು ಒಬ್ಬ ಪ್ರತಿಷ್ಟಿತ ವಿಜ್ಞಾನಿ ಆಗುತ್ತಾರೆ. ಇಲ್ಲಿಯೂ ಒಂದು ಸ್ವಾರಸ್ಯವಿದೆ. ಅಪ್ಪ ಜೆ.ಜೆ.ಥಾಮ್ಸನ್ ಇಲೆಕ್ಟ್ರಾನುಗಳ ಪ್ರವಾಹ ಒಂದು ಅಲೆಯಲ್ಲ, ಅವು ಸೂಕ್ಷ್ಮ ಕಣಗಳ ಒಂದು ಸಮೂಹ ಚಲನೆಯಷ್ಟೇ (1897) ಅನ್ನುತ್ತಾರೆ. ಮುಂದೆ ನಾಲ್ಕು ದಶಕಗಳ ಅನಂತರ (1937), ಮಗ ಜಿ.ಪಿ.ಥಾಮ್ಸನ್ ಅನ್ನುತ್ತಾರೆ: ಪ್ರತಿಯೊಂದು ಇಲೆಕ್ಟ್ರಾನ್ ಕೂಡಾ, ಕಣವಾದರೂ, ಒಂದು ಶುದ್ಧ ಅಲೆಯಂತೆ ವರ್ತಿಸುತ್ತದೆ ಮತ್ತು ಅಲೆಗಳಿಗೆ ಅನ್ವಯಿಸುವ ಯಾವೊತ್ತೂ ಸೂತ್ರಗಳು, ಗುಣವಿಶೇಷಗಳು, ಇಲೆಕ್ಟ್ರಾನಿಗೂ ಅನ್ವಯವಾಗುತ್ತದೆ. ಮಗನ ಈ ಸಂಶೋಧನೆ, ‘ಇಲೆಕ್ಟ್ರಾನ್ ಗಳ ವಿವರ್ತನೆ (Diffraction)’ ಎಂಬ ಸಿದ್ಧಾಂತಕ್ಕಾಗಿ ನೊಬೆಲ್ ಪಾರಿತೋಷಕದಿಂದ ಸನ್ಮಾನಿತರಾಗುತ್ತಾರೆ. ಅದಾಗಲೇ ಸನ್ಮಾನಿತ ಅಪ್ಪ, ಮಗನಿಗೂ ಅಂತಹುದೇ ಸನ್ಮಾನ ಸಮಾರಂಭವನ್ನು ಕಣ್ಣಾರೆ ನೋಡಿ ಕೃತಾರ್ಥರಾಗುತ್ತಾರೆ.

ಮೊದಲ ಜಾಗತಿಕ ಯುದ್ಧ ಕಳೆದು ಮರುವರ್ಷ (1919) ಕೆವೆಂಡಿಶ್ ಸಂಶೋಧನಾಲಯದ ಮುಖ್ಯಸ್ಥ ಹುದ್ದೆಯನ್ನು ತನ್ನದೇ ಆತ್ಮೀಯ ಶಿಷ್ಯೋತ್ತಮ, ನೊಬೆಲ್ ಪ್ರಶಸ್ತಿ ವಿಜೇತ, ಲಾರ್ಡ್ ಅರ್ನೆಸ್ಟ್ ರುದರ್ಫೋರ್ಡ್ ಅವರಿಗೆ ಹಸ್ತಾಂತರಿಸಿ ನಿವೃತ್ತರಾದರು.

ಒಬ್ಬ ಸಾಧಾರಣ ವ್ಯಕ್ತಿಯಂತೆ ನಡೆದುಕೊಳ್ಳುತ್ತಿದ್ದ, ವಿನಮ್ರ, ಶಾಂತ ಸ್ವಭಾವದ, ಹಾಸ್ಯ ಮನೋವೃತ್ತಿಯ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮಹಾನ್ ವಿಜ್ಞಾನಿ, ಜೆ.ಜೆ. ಥಾಮ್ಸನ್ ಮನೆ ಸುತ್ತ ಒಂದು ಹೂದೋಟ ನಿರ್ಮಿಸಿ, ಅಲ್ಲಿ ದಿನದ ಸ್ವಲ್ಪ ಹೊತ್ತಾದರೂ ವಿಶ್ರಾಂತಿ ಪಡೆಯುತ್ತಿದ್ದರು. ಇಲೆಕ್ಟ್ರಾನ್ ಅಲ್ಲದೇ, ಅವರ ಇತರ ಆವಿಷ್ಕಾರಗಳೂ ವಿಜ್ಞಾನ ಲೋಕಕ್ಕೆ ಮುಖ್ಯವಾಗುತ್ತವೆ. ಐಸೊಟೋಪ್ ಗಳು (ಒಂದೇ ರಾಸಾಯನಿಕ ಗುಣವಿದ್ದು ತೂಕದಲ್ಲಿ ವಿಭಿನ್ನವಾಗಿರುವ ಪರಮಾಣುಗಳು) ಮತ್ತು ಮಾಸ್ ಸ್ಪೆಕ್ಟ್ರೋಮೀಟ್ರಿ ಕ್ಷೇತ್ರದಲ್ಲಿ ಅವರ ಸಂಶೋಧನಾ ಕೊಡುಗೆ ಅಪಾರ. ಹೊಸದೊಂದು ವಿಜ್ಞಾನದ ವಿಭಾಗವೇ ಸೃಷ್ಟಿಯಾದುದು ಇಲೆಕ್ಟ್ರಾನ್ ಆವಿಷ್ಕಾರದಿಂದ. ಕ್ಯಾತೋಡ್ ಕಿರಣದ ನಳಿಕೆಗಳು, X-ಕಿರಣದ ನಳಿಕೆಗಳು, ಇಲೆಕ್ಟ್ರಾನ್-ಸೂಕ್ಷ್ಮ ದರ್ಶಕಗಳು, ಲೇಸರುಗಳು, TV ನಳಿಕೆಗಳು ಅಲ್ಲದೆ, ಇನ್ನೆಷ್ಟೋ ಸಾಧನಗಳು ಇಲೆಕ್ಟ್ರಾನ್ ಆವಿಷ್ಕಾರದಿಂದ ಆಗಿವೆ. ಅದನ್ನೇ ಈಗ “ಇಲೆಕ್ಟ್ರಾನಿಕ್ಸ್” ಎಂದು ಕರೆಯಲಾಗುತ್ತದೆ.

ಬ್ರಿಟಿಷ್ ಸರಕಾರದಿಂದ 1912 ರಲ್ಲಿ ನೈಟ್ ಹುಡ್ ಸನ್ಮಾನಿತ, ಸರ್ ಜೆ.ಜೆ. ಥಾಮ್ಸನ್ ತನ್ನ 84 ರ(1940) ಹರೆಯದಲ್ಲಿ, ಎರಡನೇ ಜಾಗತಿಕ ಯುದ್ಧ ವಿಕೋಪಕ್ಕೆ ಮುಟ್ಟುವ ಮುನ್ನವೇ, ಉಲ್ಲಸಿತರಾಗಿದ್ದು ಅವರ ವಿದ್ಯಾರ್ಥಿಗಳ ಏಳಿಗೆಯನ್ನು ಮನಸಾರೆ ಪ್ರಶಂಶಿಸಿ ನೋಡುತ್ತಾ ಅಸ್ತಂಗತರಾದರು. ಅವರು ಹಿಂದೆ ಬಿಟ್ಟು ಹೋದ ಅನರ್ಘ್ಯ ಆಸ್ತಿಗಳೇನು – ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರಗಳ ಗ್ರಂಥಗಳು ಮತ್ತು ಜಗತ್ತಿನ ಅತ್ಯುತ್ತಮ ಶಿಷ್ಯವೃಂದ!

-ಡಾ. ಬಡೆಕ್ಕಿಲ ಶ್ರೀಧರ ಭಟ್., ಪುತ್ತೂರು.

1 Response

  1. Shankari Sharma says:

    ವೈಜ್ನಾನಿಕ ಲೇಖನ ಚೆನ್ನಾಗಿದೆ ಸರ್..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: