ಕಡಿತದ ಪೀಡೆ, ಮಿಡಿಯುವ ಪಾಲಕ
ಕಡಿತವೆಂದರೆ ಭೀತಿ ಹುಟ್ಟಿಸುತ್ತವೆ, ಜಿಗಣೆ, ಹೇನು, ಉಣ್ಣಿಗಳು, ಅಬ್ಬಬ್ಬಾ ಕೆಲವೊಂದಂತೂ ಅಪಾರ ನೋವು, ತುರಿಕೆ, ಸೆಳೆತ, ಹೀಗೆಲ್ಲ ನಮಗಾಗುವ ಅನುಭವವಾದರೆ, ಪಶು, ಪಕ್ಷಿ, ಇತರ ಸಾಕು ಪ್ರಾಣಿಗಳಿಗೆ ಮೂಕ ಬವಣೆ ಸದಾ ಕರುಣಾಜನಕವಲ್ಲವೇ..
ಹೇನು, ಉಣುಗು, ಜಿಗಣೆ, ಸೊಳ್ಳೆ, ನೊರಂಜಿಗಳ ಹಾವಳಿಯಿಂದ ಪಶು, ಪ್ರಾಣಿಗಳಲ್ಲಿ ನೋವು, ರಕ್ತ ಹೀನತೆ ನೇರ ಪರಿಣಾಮಗಳು. ಇನ್ನು ಅವುಗಳ ಜೊಲ್ಲಿನಿಂದ ಉಂಟಾಗುವ ತುರಿಕೆ, ಅಲರ್ಜಿಯಿಂದ ಕಿರಿಕಿರಿ ಮಾತ್ರವಲ್ಲ, ಜ್ವರ ಕೂಡಾ ಉಂಟಾಗುತ್ತದೆ. ಅಷ್ಟೇ ಅಲ್ಲ, ಈ ಕಡಿತದೊಂದಿಗೆ ಬರುವ ವಾಹಕ ಸೂಕ್ಷ್ಮಾಣು ಜೀವಿಗಳಾದ ಬ್ಯಾಕ್ಟೀರಿಯಾ, ವೈರಸ್ ಗಳು ಅತಿಯಾದ ಉಲ್ಬಣಾವಸ್ಥೆಯ ಗುಣಪಡಿಸಲಾಗದ ಕಾಯಿಲೆಗಳಿಗೂ, ರೋಗಗ್ರಸ್ಥ ಜೀವಿಯ ಮರಣಕ್ಕೂ, ಅದರ ಪ್ರತಿಫಲ ಪಡೆಯುವ ಜೀವಿ, ಮನುಷ್ಯರಿಗೆ ಕಾಯಿಲೆಗೂ ಕಾರಣವಾಗಬಲ್ಲದು. ರೋಗಾಣುಗಳನ್ನು ಒಂದು ಜೀವಿಯಿಂದ ಇನ್ನೊಂದಕ್ಕೆ ಒಯ್ಯುವ ವಾಹಕಗಳಾಗಿ ಈ ಪರಾನ್ನ ಜೀವಿಗಳು ವರ್ತಿಸುತ್ತವೆ. ಹಾಗೆ ಅನ್ನ ತಿಂದು ಎರಡು ಬಗೆಯುವುದು ಇವುಗಳ ಜಾಯಮಾನ.
ಹವಾಮಾನ ವ್ಯತ್ಯಯ, ನಿಸರ್ಗದ ಅಸಮತೋಲನದಿಂದ ಸಾಂಕ್ರಾಮಿಕ ರೋಗಕಾರಕ ಕ್ರಿಮಿಗಳ ಸಂಖ್ಯೆ ವಿಸ್ಫೋಟಕಾತ್ಮಕವಾಗಿ ವೃದ್ಧಿಗೊಳ್ಳುವುದು. ಉಲ್ಬಣಾವಸ್ಥೆಯಲ್ಲಿ ದನಕರುಗಳು, ಸಾಕು ನಾಯಿಗಳು, ಕೋಳಿಗಳು, ಸತ್ತು ಹೋಗುವುದೂ ಇದೆ. ಮಾನವನಿಗೂ ಹಲವಾರು ರೋಗ ರುಜಿನಗಳಿಗೆ ಇವು ಕಾರಣವಾದದ್ದಿದೆ.
ಇವುಗಳ ಉತ್ಪತ್ತಿ ಪ್ರಾಣಿಗಳಲ್ಲೂ ಸಸ್ಯಗಳಲ್ಲೂ ಆಗುತ್ತಿರುತ್ತದೆ. ಈ ಜೀವಿಗಳಿ ಮಣ್ಣಿನಡಿಯಲ್ಲೂ, ತರಗೆಲೆ ಮುಂತಾದವುಗಳಲ್ಲೂ ಸುಪ್ತವೋ ಎಂಬಂತೆ ಜೀವಿಸಬಲ್ಲವು. ಹಿತವಾದ ಪರಿಸರ ಸಿಕ್ಕಾಗ ಅವು ಚಟುವಟಿಕೆಗೂ, ವಂಶ ವೃದ್ಧಿಗೂ ತೊಡಗುವವು. ಕ್ರಿಮಿ ಕೀಟಗಳು ಕಳವಳಕಾರಿಯಲ್ಲದಿದ್ದಾಗ ಸೂಕ್ತ ನೈಸರ್ಗಿಕ ಹತೋಟಿ ಅಥವಾ ಜೈವಿಕ ಹತೋಟಿಯ ಕ್ರಮಗಳು. ಇನ್ನೊಂದು ರೀತಿಯ ಚತುರ ವಿಧಾನವೆಂದರೆ ಇವುಗಳ ಜೀವನ ವರ್ತುಲವನ್ನು ವಿಘಟಿಸಿ ಅವುಗಳ ವೃದ್ಧಿಯನ್ನು ತಡೆಯುವುದು. ಸಾಮಾನ್ಯ ರಾಸಾಯನಿಕ ಕೀಟನಾಶಕಗಳು ಇವುಗಳ ಹತೋಟಿಗೆ ಸಮರ್ಥವಾಗಿರುವುದಿಲ್ಲ. ಪ್ರತ್ಯೇಕ ಸಿಂತೆಟಿಕ್ ಪೈರಿತ್ರಾಯ್ಡ್ ಗಳು ಬಹಳಷ್ಟು ಉಪಯೋಗದಲ್ಲಿವೆಯಾದರೂ, ಇವುಗಳ ದುಷ್ಪರಿಣಾಮ ಶರೀರದ ಕೊಬ್ಬಿನಲ್ಲಿ ಶೇಖರವಾಗುವುದಾಗಿದೆ. ಒಟ್ಟಿನಲ್ಲಿ ಸಂಯೋಜಿತ ಕಾರ್ಯ ಚಟುವಟಿಕೆಗಳು ಹೆಚ್ಚಿನ ನಾಶನಷ್ಟವಿಲ್ಲದೇ ಜೀವಿಸಲು ಸಹಕಾರಿಯಾಗಬಲ್ಲವು.
ಉಲ್ಬಣಾವಸ್ತೆಯಲ್ಲಿ ಸಮಗ್ರ ಹತೋಟಿಯ ಕ್ರಮಗಳನ್ನು ಕೈಗೊಳ್ಳುವುದರಿಂದ ಬಾಧೆಯನ್ನು ಸಫಲವಾಗಿ ನಿರ್ವಹಿಸಬಹುದು. ಮಾರುಕಟ್ಟೆಯಲ್ಲಿ ಇವುಗಳ ಹತೋಟಿಗೆ ಸೈಪರ್ಮೆತ್ರಿನ್, ಫ಼ೆನ್ವಲರೇಟ್, ಇಮಿಡಾಕ್ಲೋಪ್ರಿಡ್ ಮುಂತಾದ ರಾಸಾಯನಿಕಗಳ ಪುಡಿಯ ರೂಪದ, ದ್ರವ ರೂಪದ, ಹೇರ್ ಆಯಿಲ್ ರೂಪದ ಹಾಗೂ ಶಾಂಪೂ ರೂಪದ ತಯಾರಿಕೆಗಳಲ್ಲಿ ಲಭ್ಯ.
ಸ್ವಚ್ಚ ಭಾರತದಿಂದ ಆರೋಗ್ಯಕರ ಭಾರತದತ್ತ ನಾವೇ ಸಕ್ರಿಯರಾಗಿ, ಆದಷ್ತು ನಮ್ಮ ಸಾಕು ಪ್ರಾಣಿಗಳ ಸಂರಕ್ಷಣೆ ಮಾಡಬೇಕು. ಬೆಂಗಳೂರಿನಂತಹ ನಗರಗಳಲ್ಲಿ ಇದಕ್ಕಾಗಿಯೇ ಕಾರ್ಯಪ್ರವೃತ್ತವಾಗಿ ಪೆಟ್ ಗ್ರೂಮಿಂಗ್, ಪೆಟ್ ಕೇರ್ ಸೆಲೂನುಗಳಿವೆ. ವಿಷ ಪದಾರ್ಥಗಳ ಬಳಕೆಯಿಂದ ಕೀಟ ನಿವಾರಣೆ ಮಾಡುವಾಗ ಆದಷ್ತು ಜಾಗರೂಕರಾಗಿರಿ.
– ಹಳೆಮನೆ ಮುರಲಿಕೃಷ್ಣ
ಬರಹ ಚೆನ್ನಾಗಿದೆ . ಕ್ರಿಮಿಕೀಟಗಳಿಂದ ರಕ್ಷಣೆಗಾಗಿ ಪಡುತ್ತಿರುವ ಬವಣೆಯ ವಿವರಣೆ ಚೆನ್ನಾಗಿದೆ.
ಕ್ರಿಮಿಕೀಟಗಳ ಹಾವಳಿ ಹಾಗೂ ಅದರ ನಿವಾರಣೋಪಾಯಗಳಿದ್ದು ಸಮಾಜದ ಹಿತದೃಷ್ಟಿಯಿದೆ.
ರಕ್ತ ಹೀರುವ ಜೀವಿಗಳ ಬಗ್ಗೆ ಲೇಖನ.. ಚೆನ್ನಾಗಿದೆ.