ಬಾರದಿರು ಮತ್ತೊಮ್ಮೆ
ಮತ್ತೊಮ್ಮೆ ಬಾರದಿರು ನನ್ನ ಮನಸಿನ ಮಂದಿರಕೆ
ನೋವ ಸಿಡಿಲಿಗೆ ಒಡೆದು ಹೋಗಿಹ ಭಾವ ಕಂದರಕೆ.
ನನ್ನ ಭಾವದ ಭಿತ್ತಿಯ ತುಂಬಾ ನಿನ್ನ ವದನದ ಚಿತ್ರ
ನಿನ್ನ ಕೇಳದೇ ನಾನೇ ಕಲ್ಪಿಸಿದ ನನ್ನ ಚಿತ್ತ ಸದನದ ಮಿತ್ರ.
ನಿನಗೇಕೆ ಅರಿಯದಾಯ್ತು ನಾ ನಿನ್ನ ಕಾಳಜಿ, ನೆನಪಿಗಿಟ್ಟ ಸಮಯದ ಮೀಸಲು.
ಹಾಗಾಗಿಯೇ ನಾನಿಂದು ಸೋತೆ ಸ್ನೇಹದ ಕಡಲ ಸುಖವಾಗಿ ಈಸಲು.
ಭೋರ್ಗರೆವ ಕಡಲಲೆಯೊಳಗೆ ತೇಲಿ
ಬಿಡುವೆ ನಿನ್ಮ ನೆನಪಿನ ಬುತ್ತಿ
ಮತ್ತೆ ಇತ್ತ ಸುಳಿಯದಿರೆನ್ನೊ ನನ್ನ ಕಣ್ಣೀರ ಹನಿಯೊಳಗೆ ಸುತ್ತಿ
ಈಗ ಯಾರೂ ಕೇಳರೆನಗೆ ಇದು
ಏತಕೆ ,ಯಾರ,ಯಾವ ಕಣ್ಣೀರ ಹನಿ,
ಅಲ್ಲೇ ನಿಂತೊಮ್ಮೆ ಜೋರಾಗಿ ಕರೆವೆ ನಿನ್ನ
ಹೆಸರನು,ಕೇಳದಾರಿಗೂ ಈ ನನ್ನ ದನಿ.
ಹೀಗೊಮ್ಮೆ ಬಯಕೆ ತೀರಿಸೆ ಕಡಲ ಕಿನಾರೆಯಲ್ಲೊಮ್ಮೆ
ಬರೆದೆ ನಾ ನಿನ್ನ ಹೆಸರನು ಅತ್ತು.
ಬರೆದೆ ನಾ ನಿನ್ನ ಹೆಸರನು ಅತ್ತು.
ನನ್ನ ಮನಸರಿತ ಕಡಲಲೆ ಹಿಂತಿರುಗಿ ಬಂದಾಗ ಸಿಕ್ಕ ಶಂಖದೊಳಿತ್ತು
ನಾನು ನೀನು ಕಳೆದ ಸಿಹಿಕ್ಷಣದ ಮುತ್ತು.
ನಾನು ನೀನು ಕಳೆದ ಸಿಹಿಕ್ಷಣದ ಮುತ್ತು.
ದಿನವಿಡೀ ದಣಿದು ಬಂಡೆಯೇರಿ ಕುಳಿತವಗೆ ಅರಿವಾಗಲಿಲ್ಲ
ಸೂರ್ಯ ವಿರಮಿಸೊ ಹೊತ್ತು.
ಸೂರ್ಯ ವಿರಮಿಸೊ ಹೊತ್ತು.
ಹಗಲಿಡಿ ಉರಿದಿದ್ದ ಸೂರ್ಯ ತಾ ಮೆದು ಸ್ಪರ್ಷದಲಿ ಸಂತೈಸಿ
ಮೆಲ್ಲಗುಸಿರಿದ ಮನೆಗೆ ತೆರಳುವ ಹೊತ್ತು.
ಮೆಲ್ಲಗುಸಿರಿದ ಮನೆಗೆ ತೆರಳುವ ಹೊತ್ತು.
ಸಂಜೆಗತ್ತಲು ನೀಲಿ ಗಗನ ತುಂಬ ಹೊಳೆವ ತಾರೆಯರ ದಂಡು.
ನೋವ ಮರೆವೆನೆ ತಂಪು ಗಾಳಿಯ
ಅಪ್ಪುಗೆಯಲಿ ,ನಗುವ ಚಂದ್ರನ ಕಂಡು.
‘
– ಲತಾ(ವಿಶಾಲಿ) ವಿಶ್ವನಾಥ್
ಇದು ಭಾವಗೀತೆ, ಊಹೆ ಅಥವಾ ಕಲ್ಪನೆಗಳು ಪ್ರಧಾನವಾಗಿವೆ