ಯುಗಾದಿಯ ದ್ವಿಪಾತ್ರ

Share Button

ವಿಜಯಾಸುಬ್ರಹ್ಮಣ್ಯ, ಕುಂಬಳೆ

ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ.

ಯುಗಾದಿಯ ವೈಶಿಷ್ಟ್ಯಃ– ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ.

ಯುಗಾದಿಯಲ್ಲಿ ಎರಡು ವಿಧ.

ಚೈತ್ರಮಾಸದ ಶುಕ್ಲ ಪ್ರತಿಪದೆ[ಪಾಡ್ಯ]ಯ ದಿನ ಚಾಂದ್ರಮಾನ ಯುಗಾದಿಯಾದರೆ; ಸೌರಮಾನ ಯುಗಾದಿ [ವಿಷುಕಣಿ 15-4-2018],

“ಚೈತ್ರಮಾಸಿ ಜಗದ್ಬ್ರಹ್ಮಾ ಸಸರ್ಜ  ಪ್ರಥಮೇ ಹನಿ|

ಶುಕ್ಲಪಕ್ಷೇ ಸಮಗ್ರಂತು  ತದಾ ಸೂರ್ಯೋದಯೇ ಸತಿ||”

ಎಂಬ ಸೂಕ್ತಿಯಂತೆ ಚೈತ್ರಮಾಸದ ಸೂರ್ಯೋದಯವಾದೊಡನೆ ಬ್ರಹ್ಮನು ಸಂಪೂರ್ಣ ಜಗತ್ತನ್ನು ಸೃಷ್ಟಿಸಿದನಂತೆ.

ಯುಗಾದಿಯಲ್ಲಿ ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ ಎಂಬುದಾಗಿ ಎರಡು ವಿಧ.ಚಂದ್ರನ ಬೆಳಕಿಗೆ ಮತ್ತು ಚಲನೆಗೆ ಸೂರ್ಯನೇ ಆಧಾರವೆಂದು ಪ್ರಾಚೀನರು ಚಾಂದ್ರಮಾನದ ಲೆಕ್ಕಾಚಾರವನ್ನು ರೂಪಿಸಿದರು.ಭೂಮಿಯಲ್ಲಾಗುವ  ಕಾಲಪರಿವರ್ತನೆಗೆ ಸೂರ್ಯನೇ ಕಾರಣವೆಂದು ಸೌರಮಾನ ತಿಂಗಳನ್ನು ಲೆಕ್ಕಹಾಕಿ ಸೂರ್ಯನು ಮೇಷರಾಶಿಗೆ ಬಂದಾಗ ಸೌರಮಾನ ಯುಗಾದಿ[ವಿಷು] ಆರಂಭವಾಯಿತು.ನಮ್ಮ ಪಂಚಾಂಗಗಳು ಚಾಂದ್ರಮಾನ ಯುಗಾದಿಯಂದು ಆರಂಭವಾಗುತ್ತದೆ.ತಿಥಿ,ವಾರ,ನಕ್ಷತ್ರ,ಯೋಗ, ಕರಣ ಎಂಬುದಾಗಿ ದಿನಕ್ಕೆ ಐದು ಅಂಗಗಳನ್ನು ರೂಪಿಸಿ ಪಂಚಾಂಗ ಎಂದು ಕರೆದರು.

ಆಚರಣೆಃ ನಮ್ಮ  ಆರಾಧ್ಯ ದೇವರನ್ನು ಸ್ತುತಿಸುತ್ತಾ ಉಂಡುಟ್ಟು ಸಮೂಹವಾಗಿ ಸಂತೋಷಪಡುವುದೇ ಹಬ್ಬ. ದೇಹ,ಆತ್ಮ,ಮನಸ್ಸು, ವಾಕ್, ಚಿತ್ತ, ಅಶನ, ವಸನ ಹಾಗೂ ವಾತಾವರಣ ಇವುಗಳೆಲ್ಲದರ   ಶುದ್ಧಿಯೇ ವ್ರತ-ಪರ್ವಗಳ ಆಚರಣೆ.ಇಲ್ಲಿ ಅಸುರೀ ಶಕ್ತಿಯ ವಿರುದ್ಧ ಮಾನವತಾ ಶಕ್ತಿ, ದೇವತಾ ಶಕ್ತಿಯ ವಿಜಯದ ಸಂಕೇತವೇ ಯುಗಾದಿ.ಭಾರತೀಯ ಸಂಸ್ಕೃತಿಯ ಭಾಗವೇ ಆಗಿರುವ ಯುಗಾದಿ ವರ್ಷದ ಮೊದಲನೆ ಹಬ್ಬ.ಸೌರಮಾನ ಯುಗಾದಿ ಎಂದರೆ ಕೇರಳೀಯರು ಆಚರಿಸುವ ವಿಶೇಷ ಹಬ್ಬ!. ಈ ದಿನ ನಮಗೆಲ್ಲಾ ವರ್ಷಾರಂಭ.ಚಾಂದ್ರಮಾನ ಯುಗಾದಿಯಂದು ಪಂಚಾಂಗ ಶ್ರವಣಕ್ಕೆ ಪ್ರಾಧಾನ್ಯತೆಯಿದ್ದರೆ ಸೌರಮಾನ ಯುಗಾದಿಯಂದು ಫಲವಸ್ತು,ದವಸಧಾನ್ಯ,ಚಿನ್ನಾಭರಣವನ್ನು, ಸುವಸ್ತುಗಳನ್ನು ಎದ್ದೊಡನೆ ಪ್ರಥಮತಃ ವೀಕ್ಷಿಸುವುದಕ್ಕೆ ಮಹತ್ವ!!.ಮೇಷ ಸಂಕ್ರಮಣದ ಮಾರಣೆ ದಿನವೇ ವಿಷುಕಣಿ.ಮನೆಯ ಹಿರಿ ಮಹಿಳೆಪ್ರಾತಃಕಾಲ ಮಕ್ಕಳನ್ನು ಎಬ್ಬಿಸಿ ದೇವರಕೋಣೆಯಲ್ಲಿಟ್ಟ ಸುವಸ್ತು,ದವಸ ಧಾನ್ಯ,ಚಿನ್ನಾಭರಣಗಳನ್ನಿಟ್ಟು ಮಕ್ಕಳಿಗೆ ಮೊದಲಾಗಿ ಈ ವಿಷುಕಣಿಯನ್ನು ತೋರಿಸುವರು.ಅಂದು ಚಿನ್ನಾಭರಣ,ಹಣ ಒಳಗೆ ಇಡಬೇಕಲ್ಲದೆ.ಹೊರಗೆ ಕೊಡಬಾರದು ಎಂಬ ನಂಬಿಕೆಯಿದೆ.  ದೀಪಹಚ್ಚಿ;ದೇವರಿಗೂ ಗುರು-ಹಿರಿಯರಿಗೂ ನಮಸ್ಕರಿಸಿ ಆಶೀರ್ವಾದ ಪಡೆಯುವುದು, ಹಾಗೂ ಹಿರಿಯರೆಲ್ಲರೂ ಕಿರಿಯರಿಗೆ ಆಶೀರ್ವದಿಸುವುದು ಸಂಪ್ರದಾಯ.ಕೆಲಸ ಮಾಡುವವರಿಗೆಲ್ಲ ತೆಂಗಿನಕಾಯಿ ಕಡುಬು,ಕೊಡುವ ರೂಢಿ. ಅದಲ್ಲದೆ ಗದ್ದೆ ಬೇಸಾಯಕ್ಕೆ ನೊಗ-ನೇಗಿಲು ಹಿಡಿಯುವುದಕ್ಕೆ ಮುಹೂರ್ತ ವಿಷುಕಣಿ ದಿವಸ[ಮೇಷಮಾಸ ಒಂದನೇ ದಿನ]. ಪೇಟೆ-ಪಟ್ಟಣಗಳಲ್ಲಿರುವವರು ತಮ್ಮ ಹಿರಿಯರಿರುವ ಮೂಲ ಮನೆಗೆ ತೆರಳಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಈ ದಿನ ನೂತನ ವಧುವು ತನ್ನ ಪತಿಯೊಂದಿಗೆ ತವರಿಗೆ ಬಂದು ಹೋಗುವುದು ಕೇರಳೀಯರ ಪರಂಪರೆಯ ವಿಶಿಷ್ಟ ಪದ್ಧತಿ.

PC: keralaculture.org

ಆಧ್ಯಾತ್ಮಿಕ ತತ್ವಃಯುಗಾದಿಯಂದು ಪಂಚಾಂಗಶ್ರವಣ ಮಾಡಿದವನಿಗೆ ಗಂಗಾಸ್ನಾನ ಮಾಡಿದ ಫಲ ದೊರೆಯುವುದಂತೆ.ಅಂತೆಯೇ ಸೌರಮಾನ ವಿಷುಕಣಿದಿನ ಸುವಸ್ತು,ಚಿನ್ನಾಭರಣ ನೋಡಿದ್ದಾದರೆ; ವರ್ಷವಿಡೀ ನೋಡುವುದಕ್ಕೆ,ಧರಿಸುವುದಕ್ಕೆ ಸಾಧ್ಯ ಎಂಬ ನಂಬಿಕೆ!.

ಕ್ರಿಸ್ತಶಕ ಆರಂಭವಾಗಿ ಕೆಲ ವರ್ಷಗಳ ತರುವಾಯ ಶಾಲಿವಾಹನ ಶಕೆ ಆರಂಭವಾಗುತ್ತದೆ.ದಕ್ಷಿಣಭಾರತದಲ್ಲೆಲ್ಲಾ ಈ ಶಕೆ ಬಳಕೆಯಲ್ಲಿದೆ. ನಮ್ಮ ಪಂಚಾಂಗಗಳು ಈ ಶಕೆಯನ್ನೇ ಹೇಳುತ್ತವೆ.ಶಕರು ನಮ್ಮ ದೇಶದ ಮೇಲೆ ಧಾಳಿಮಾಡಿದಾಗ; ಆ ದಿನಗಳಲ್ಲಿ, ನರ್ಮದಾ-ಕಾವೇರಿಗಳ ನಡುವೆ ರಾಜ್ಯವಾಳುತ್ತಿದ್ದ ಶಾಲಿವಾಹನ ಅವರ ಬಲವನ್ನು ಮುರಿದು ವಿಜಯಪತಾಕೆ ಹಾರಿಸಿದ.ಅದು ಚೈತ್ರ ಶುದ್ಧ ಪ್ರತಿಪದೆಯ ದಿನ.ಮುಂದೆ ಭಾರತದಲ್ಲಿ ಶಕರು ನಿರ್ನಾಮವಾದರು.ಶಾಲಿವಾಹನ ಬಂದ ಎಂಬುದಾಗಿ ಚರಿತ್ರೆ ಹೇಳುತ್ತದೆ.

ಕಾಲ ಪರಿಮಾಣಃಬ್ರಹ್ಮನ ಬದುಕಿನಲ್ಲಿ ಶ್ವೇತವರಾಹಕಲ್ಪವೆಂದು ಒಂದು ಹಗಲು.ಈ ಹಗಲಿನಲ್ಲಿ ಇದು ಏಳನೇ ವೈವಸ್ವತ ಮನ್ವಂತರ ಇಪ್ಪತ್ತೆಂಟನೆ ಮಹಾಯುಗದ ನಾಲ್ಕನೇ ಪಾದವಾದ ಕಲಿಯುಗದಲ್ಲಿ ಈ ಯುಗಾದಿಗೆ ಸಂದ ವರ್ಷಗಳು 5119. ಕಲಿಯುಗದಲ್ಲಿ ಯುದಿಷ್ಠಿರ, ವಿಕ್ರಮಗಳೆಂಬ ಎರಡು ಶಕಗಳು ಮುಗಿದು; ಮೂರನೆಯದಾದ ಶಾಲಿವಾಹನ ಶಕದಲ್ಲಿ ಸಂದ ವರ್ಷಗಳು ಈ  ’ವಿಲಂಬ’ ಸಂವತ್ಸರಕ್ಕೆ ಸಂದ ವರ್ಷಗಳು 1940. ಪ್ರತಿಯೊಂದು ಸಂವತ್ಸರದಲ್ಲೂ ಎರಡು ಅಯನಗಳು, ಮೂರುಕಾಲ ಭೇದಗಳು.ಆರುಋತುಗಳು,ಹನ್ನೆರಡು ಮಾಸಗಳು. ಹೀಗೆ ವರ್ಷಕ್ಕೊಮ್ಮೆ ಪುನರಾವರ್ತಿಸುವ ನಿಸರ್ಗದ ಕಾಲಚಕ್ರ ನಿರಂತರ ಉರುಳುತ್ತಾ ಇದ್ದು ಅರಿತು ಬದುಕುವವನಿಗೆ ಜೀವನಾನುಭವ ನೀಡುತ್ತದೆ.ಒಳ್ಳೊಳ್ಳೆಯ ಸಂದೇಶಗಳನ್ನೂ ಕೊಡುತ್ತದೆ.

ಹೆರಿಗೆಯಾದ ತಾಯಿ ಮಗುವಿನ ಮುಖ ನೋಡುತ್ತಲೇ ತಾನು ಅದುವರೆಗೆ ಅನುಭವಿಸಿದ ನೋವನ್ನು ಮರೆತು;ಮಗುವಿನ ಬೆಳವಣಿಗೆಯತ್ತ ಗಮನಹರಿಸುತ್ತಾಳೆ. ಅಂತೆಯೇ ಯುಗಾದಿಯ ಸಡಗರ-ಸಂಭ್ರಮದಲ್ಲಿ ನಮ್ಮ ಹಿಂದಿನ ಕಷ್ಟಗಳನ್ನು ಮರೆಯೋಣ.ಮುಂದಿನ ಸುಖಬದುಕಿನ ಆಶಾಭಾವನೆ ತಾಳೋಣ.ಜೀವನದಲ್ಲಿ ಉತ್ಸಾಹವನ್ನು ತಾಳೋಣ. ಕತ್ತಲೆಯಿಂದ ಬೆಳಕಿನತ್ತ ಸಾಗೋಣ.

ಈ ಸಂವತ್ಸರದ ವಿಷುಕಣಿಯಂದು  ಯಾವುದೇ ವಿಚಾರದ ಕೆಟ್ಟಮುಖವನ್ನು ಅಳಿಸಿಹಾಕಿ ಒಳ್ಳೆಯ ಮುಖ ನೀಡುವಂತೆ ಸುಮುಖನಲ್ಲಿ ಪ್ರಾರ್ಥಿಸುತ್ತಾ ಭರವಸೆಯ ಭಾವವನ್ನು ನಿರೀಕ್ಷಿಸೋಣವೇ..

—೦—

–  ವಿಜಯಾಸುಬ್ರಹ್ಮಣ್ಯ,ಕುಂಬಳೆ

4 Responses

  1. Hema says:

    ಸೊಗಸಾದ, ಮಾಹಿತಿಪೂರ್ಣ ಬರಹ ..

    • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

      ಧನ್ಯವಾದಗಳು ಹೇಮಮಾಲಾ.

  2. Jayalakshmi Bhat says:

    Olle lekhana

    • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

      ಧನ್ಯವಾದಗಳು, ಜಯಲಕ್ಷ್ಮಿಯವರಿಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: