ಧಾರವಾಡ ಸಾಹಿತ್ಯ ಸಂಭ್ರಮ – 2018
ಹೊಸದಾಗಿ ಬಿಡುಗಡೆಯಾಗಲಿರುವ ಬಹುಚರ್ಚಿತ ಸೂಪರ್ ಹಿಟ್ ಚಲನಚಿತ್ರವು ಪ್ರದರ್ಶಿಸಲ್ಪಡುವ ದಿನಾಂಕವನ್ನು ಮುಂಚಿತವಾಗಿ ಗಮನಿಸಿ, ಮುಂಗಡ ಟಿಕೆಟ್ ಕಾಯ್ದಿರಿಸಿ, ಪ್ರಥಮ ಪ್ರದರ್ಶನದಲ್ಲಿಯೇ ಸಿನೆಮಾ ನೋಡಿ ಗೆದ್ದೆವೆಂಬಂತೆ ಬೀಗುವವರಿರುತ್ತಾರೆ. ಆಸಕ್ತರಿಗೆ ಅದೊಂದು ಸಂಭ್ರಮ ಹಾಗೂ ಸಿನೆಮಾದ ಯಶಸ್ಸಿನ ಮಾನದಂಡವೂ ಹೌದು. ಆದರೆ ಸರ್ವವೂ ಆಂಗ್ಲಮಯವಾಗುತ್ತಿರುವ ಈಗಿನ ದಿನಗಳಲ್ಲೂ, ಕನ್ನಡ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಜನರು ನೋಂದಣಿ ದಿನಾಂಕಕ್ಕಾಗಿ ಕಾದು, ಮುಂಗಡವಾಗಿ ಶುಲ್ಕ ತೆತ್ತು ಸೀಟನ್ನು ಕಾಯ್ದಿರಿಸುತ್ತಾರೆಂದರೆ ಅದು ನಿಜಕ್ಕೂ ಕನ್ನಡದ ಸಂಭ್ರಮ. ಈ ರೀತಿ ಮುಂಗಡವಾಗಿ ಹೆಸರನ್ನು ನೋಂದಾಯಿಸಿ, 2018 ಜನವರಿ 19,20,21 ರಂದು, ಧಾರವಾಡದಲ್ಲಿ ನೆರವೇರಿದ ‘ಸಾಹಿತ್ಯ ಸಂಭ್ರಮ’ದಲ್ಲಿ ಭಾಗವಹಿಸಿದ ಸಂಭ್ರಮ ನಮ್ಮದು.
2018 ಜನವರಿ 19 ರಂದು ಪುಸ್ತಕ ಮಳಿಗೆಗಳ ಉದ್ಘಾಟನೆಯ ನಂತರ, ನಾಡಗೀತೆಯನ್ನು ಹಾಡುವ ಮೂಲಕ ಸಭಾ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯಲ್ಲಿದ್ದ ಗಣ್ಯರು ಸ್ಮರಣ ಸಂಚಿಕೆ ಮತ್ತು ಸಮೀಕ್ಷೆ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ವರ್ಷ ಕೀರ್ತಿಶೇಷರಾದ ಸಾಹಿತಿಗಳು ಹಾಗೂ ಕಲಾವಿದರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಯಿತು.
ಸಭಾಂಗಣದಲ್ಲಿ ನೆರೆದಿದ್ದ ಹಿರಿಯ ಹಾಗೂ ಕಿರಿಯ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರನ್ನು ಉದ್ದೇಶಿಸಿ ಪ್ರಾಸ್ತಾಪಿಕ ಭಾಷಣ ಮಾಡಿದ ಡಾ.ಗಿರಡ್ಡಿ ಗೋವಿಂದರಾಜ ಅವರು, ಎಡಬಲ ಪಂಥಗಳ ಅತಿರೇಕವಿಲ್ಲದ, ರಾಜಕೀಯ ಲೇಪವಿರದ, ಅಸಹಿಷ್ಣುತೆಗೆ ದಾರಿ ಮಾಡಿಕೊಡದ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಾರದ ಸಾಹಿತ್ಯ ಪರಿಸರವೇ ಈಗಿನ ಆವಶ್ಯಕತೆಯಾಗಿದೆ ಎಂದರು. ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಸರಕಾರದಿಂದ ಸಿಗಬೇಕಾದ ಪ್ರೋತ್ಸಾಹ ಲಭಿಸುತ್ತಿಲ್ಲ, ಇದು ಹೀಗೆಯೇ ಮುಂದುವರಿದರೆ, ಮುಂದಿನ ವರ್ಷಗಳಲ್ಲಿ ಸಾಹಿತ್ಯ ಸಂಭ್ರಮವನ್ನು ಆಯೋಜಿಸಲು ಕಷ್ಟವಾದೀತೆಂಬ ಆತಂಕವನ್ನೂ ತೋಡಿಕೊಂಡರು. ಕಾರ್ಯಕ್ರಮದ ವೇಳಾಪಟ್ಟಿಯ ಪ್ರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಇರಬೇಕಿತ್ತು. ಹಾಗಾಗಿ, ಸದರಿ ಇಲಾಖೆಯವರ ಗೈರುಹಾಜರಿಯು ವಾಸ್ತವಿಕತೆಯ ರೂಪಕ ಅನಿಸಿತು.
ತಮ್ಮ ಆಶಯ ಭಾಷಣದಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಾಹಿತ್ಯವು ಪ್ರಭುತ್ವವನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆಯೆ ? ಸ್ವಾಯತ್ತತೆ ಮೇಲೆ ಪ್ರಭುತ್ವವು ಆಕ್ರಮಣ ನಡೆಸುತ್ತಿದೆಯೆ ಎಂಬ ಕಳವಳ ವ್ಯಕ್ತಪಡಿಸಿದರು.
ಮೊದಲನೆ ಗೋಷ್ಠಿಯಲ್ಲಿ ‘ಇತಿಹಾಸ ಮತ್ತು ಅಂಧಾಭಿಮಾನ’ (History and Chauvinism ) ಬಗ್ಗೆ, ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಎಲ್ಲಾ ಪಕ್ಷಗಳು ಈ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿವೆ. ಸಂಶೋಧನೆಗಳು ಮೌಲ್ಯ ಕಳೆದುಕೊಳ್ಳುತ್ತಿದ್ದು, ಮೂಲ ಆಕರಗಳನ್ನು ಆಧರಿಸಿದ ಸಂಶೋಧನೆಗಳು ಮಾತ್ರ ಸತ್ವಯುತವಾಗಿರುತ್ತವೆ. ಇತಿಹಾಸದ ಬರವಣಿಗೆಯು ಭಾಷೆ, ಜಾತಿ, ಧರ್ಮದ ಚೌಕಟ್ಟಿನಿಂದ ಹೊರಬರಬೇಕು ಎಂದು ವ್ಯಾಖಾನಿಸಿದರು.
ಗಿರೀಶ ಕಾರ್ನಾಡ್ ಅವರ ನಿರ್ದೇಶನದಲ್ಲಿ ನಡೆದ ಎರಡನೆಯ ಗೋಷ್ಠಿಯಲ್ಲಿ, ‘ಅದಿಲಶಾಹಿ ಸಾಹಿತ್ಯ’ದ ಬಗ್ಗೆ ಕೃಷ್ಣ ಕೊಲ್ಹಾರ ಕುಲಕರ್ಣಿ ಮತ್ತು ಮೌಲಾನಾ ಮೆಹಹೂಬ ರಹಮಾನ ಮದನಿ ಅವರು ಬಹಳಷ್ಟು ಮಾಹಿತಿಗಳನ್ನು ಹಂಚಿಕೊಂಡರು. ಭಾರತವನ್ನಾಳಿದ ಮುಸ್ಲಿಂ ರಾಜರು, ಅವರ ಆಶ್ರಯದಲ್ಲಿದ್ದ ಕವಿಗಳು ಹಾಗೂ ಆಗ ಪ್ರಚಲಿತವಿದ್ದ ದಖನೀ ಭಾಷೆಯ ಬಗ್ಗೆ ಪ್ರಸ್ತಾಪಿಸಿದರು. ಎರಡನೇ ಅದಿಲ್ ಶಹಾನ ‘ಕಿತಾಬೆ ನವರಸ’ ಗೀತೆಗಳ ಸಂಕಲನ, ಪರ್ಶಿಯನ್ ಭಾಷೆಯ ಆಗಮನ, ಉರ್ದು ಹಾಗೂ ಹಿಂದಿ ಭಾಷೆಗಳ ಮೇಲೆ ಪರ್ಶಿಯನ್ ಭಾಷೆಯ ಪ್ರಭಾವ ಇತ್ಯಾದಿ ವಿಚಾರ ಮಂಥನ ನಡೆಯಿತು. ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿರುವ ಇಲಾಖೆ, ಖಾತೆ, ಮೇಜವಾನಿ, ಜಬರ್ದಸ್ತ್…ಇತ್ಯಾದಿ 4000 ಕ್ಕೂ ಹೆಚ್ಚು ಪದಗಳು ಪರ್ಶಿಯನ್ ಮೂಲದವುಗಳೆಂದು ತಿಳಿದಾಗ ಅಚ್ಚರಿಗೊಂಡೆವು.
ಊಟದ ವಿರಾಮದ ನಂತರ ‘ ಕನ್ನಡ ರಂಗಭೂಮಿ, ಪರಂಪರೆ, ಪರಿವರ್ತನೆ ಮತ್ತು ಭವಿಷ್ಯ‘, ದ ಬಗ್ಗೆ ಮೌಲಿಕವಾದ ಚಿಂತನವುಳ್ಳ ಗೋಷ್ಠಿಯಿತ್ತು. ದಿನದ ಕೊನೆಯಲ್ಲಿ, ಖ್ಯಾತ ಲೇಖಕರಾದ ವಿವೇಕ ಶಾನಭಾಗ ಅವರನ್ನು ಗೋಷ್ಠಿಯ ನಿರ್ದೇಶಕರಾಗಿದ್ದ ಜೋಗಿ ಅವರು, ಲೇಖಕರ ಕೃತಿಗಳ ಮೂಲಕವೇ ಸಂವಾದಕ್ಕೆಳೇದರು. ಬಹಳಷ್ಟು ಮಾಹಿತಿಯ ಜೊತೆಗೆ ಶಾನಭಾಗ ಅವರ ‘ಘಾಚರ್ ಘೋಚರ್’ ಕೃತಿಯು ಹತ್ತಕ್ಕೂ ಹೆಚ್ಚು ಸ್ವದೇಶಿ, ವಿದೇಶಿ ಭಾಷೆಗಳಿಗೆ ಅನುವಾದಗೊಂಡಿವೆ ಎಂದು ತಿಳಿದಾಗ ಹೆಮ್ಮೆಯಾಯಿತು. ಈ ಗೋಷ್ಠಿಯ ನಂತರ, ಕೂಡಲೇ ಪುಸ್ತಕ ಮಳಿಗೆಗೆ ಹೋಗಿ ‘ಘಾಚರ್ ಘೋಚರ್’ ಕೃತಿಯನ್ನು ಖರೀದಿಸಿದವರಲ್ಲಿ ನಾನೂ ಒಬ್ಬಳು.
ಸಂಜೆಯ ಸಮಯ ‘ಬೆಳಗಲು ವೀರಣ್ಣ ಮತ್ತು ತಂಡ’ದವರು ನಡೆಸಿಕೊಟ್ಟ ‘ತೊಗಲು ಗೊಂಬೆಯಾಟ’ವು ಸಭೆಯಲ್ಲಿ ಜಾನಪದ ಕಲೆಯ ಸಿಂಚನ ಮೂಡಿಸಿತ್ತು.
ಜನವರಿ 20,2018 ರಂದು ಮೊದಲನೆಯ ಗೋಷ್ಠಿಯಲ್ಲಿ ಮಾತನಾಡಿದ ಜಯಂತ ಕಾಯ್ಕಿಣಿ ಅವರು, ಗೋಪಾಲಕೃಷ್ಣ ಅಡಿಗರು ನಿರ್ವಹಿಸುತ್ತಿದ್ದ ‘ಸಾಕ್ಷಿ’ ಪತ್ರಿಕೆಯು, ಹೊಸಕನ್ನಡದ ಹಲವಾರು ಬರಹಗಾರರಿಗೆ ಮುಕ್ತ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿತ್ತು. ಈಗಿನ ಹಲವಾರು ಹಿರಿಯ ಲೇಖಕರು ಅಂದು ಸಾಕ್ಷಿ ಪತ್ರಿಕೆಗೆ ಬರೆಯುತ್ತಿದ್ದರು. ತನ್ನ ವಿರುದ್ಧವಾಗಿ ಬರೆದ ಬರಹವನ್ನೂ ಪ್ರಕಟಿಸುವ ಉದಾರತೆ ಹಾಗೂ ಕಿರಿಯ ಬರಹಗಾರರಿಗೆ ಪ್ರೋತ್ಸಾಹ, ಸಲಹೆ ನೀಡುವ ಸೌಜನ್ಯ ಅಡಿಗರ ದೊಡ್ಡ ಗುಣ ಎಂದು ತನ್ನ ಬರವಣಿಗೆಯ ಆರಂಭಿಕ ದಿನಗಳ ಬಗ್ಗೆ ನೆನೆಪಿಸಿಕೊಂಡರು ಜಯಂತ ಕಾಯ್ಕಿಣಿ .
‘ಮತ್ತೆ ಮತ್ತೆ ಓದಬೇಕಾದ ಕವಿತೆಗಳು’ ಗೋಷ್ಠಿಯಲ್ಲಿ .ಶ್ರೀ ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ಪ್ರಸ್ತುತ ಪಡಿಸಿದರು.
‘ನಾವು ಹೊಸ ಜ್ಞಾನವನ್ನು ಸೃಷ್ಟಿಸುತ್ತಿದ್ದೇವೆಯೆ? ‘ ಎಂಬ ಗೋಷ್ಠಿಯಲ್ಲಿ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿನ ತೊಡಕುಗಳು, ಸವಾಲುಗಳು, ನಿರೀಕ್ಷೆಗಳು ಇತ್ಯಾದಿ ಹಲವಾರು ವಿಚಾರಗಳನ್ನು ಚರ್ಚಿಸಲಾಯಿತ್ತು. ಭಾಗವಹಿಸಿದ್ದ ಮೋಹನ ಆಳ್ವಾ ಅವರು ತಾನು ಶಾಲಾ ಕಾಲೇಜುಗಳಲ್ಲಿ ಕಲಿತುದುದಕ್ಕಿಂತ ಹೆಚ್ಚು ಜೀವನಾನುಭವವನ್ನು ಬಯಲಿನಲ್ಲಿ ಕಲಿತೆ, ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕೃತಿ , ಕಲೆ, ಸಾಹಿತ್ಯ ಹಾಗೂ ಆಟೋಟಗಳ ಪರಿಚಯವೂ ಆಗಬೇಕು ಎಂದು ಅಭಿಪ್ರಾಯ ಪಟ್ಟರು.
‘ಕನ್ನಡ ಲಿಪಿಯ ಸುಧಾರಣೆ ಬೇಕೆ?’ ಎಂಬ ವಿಚಾರದಲ್ಲಿ ಲಿಪಿ ಬದಲಾವಣೆ ಮಾಡಿದರೆ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಪರ ಹಾಗೂ ಅಸಮ್ಮತಿಯ ಅಭಿಪ್ರಾಯಗಳು ಮೂಡಿ ಬಂದುವು. ಒಟ್ಟಿನಲ್ಲಿ ಕಾಲಕ್ಕ ತಕ್ಕಂತೆ, ಸೂಕ್ತವಾದ ಸುಧಾರಣೆ ಮಾಡಲು ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಾಗೂ ಸರಕಾರ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.
‘ಅಭಿವೃದ್ಧಿಯ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆಯ ದ್ವೀಪ’ ಎಂಬ ವಿಷಯದ ಬಗ್ಗೆ ಮಾತನಾಡಿದ ಉಲ್ಲಾಸ ಕಾರಂತ ಅವರು ತಾವು ಇಂಜಿನಿಯರ್ ಆಗಿದ್ದರೂ ನಿಸರ್ಗದೆಡೆಗೆ ಹರಿದ ಒಲವು, ಪ್ರಕೃತಿ ಸಂರಕ್ಷಣೆ ಮಾಡಲು ಹೊರಟವರಿಗೆ ಎದುರಾಗುವ ಸಮಸ್ಯೆಗಳು, ಕಾಡಿನ ಅಂಚಿನಲ್ಲಿ ಜೀವಿಸುವ ಬುಡಕಟ್ಟು ಸಮುದಾಯವರ ಜೀವನಶೈಲಿ, ಮನುಷ್ಯ ಮತ್ತು ಕಾಡುಪ್ರ್ರಾಣಿಗಳ ನಡುವೆ ಸಂಘರ್ಷ, ಹುಲಿ ಸಂರಕ್ಷಣೆ ಮತ್ತು ಅಧ್ಯಯನದ ಸಮಯದಲ್ಲಿ ತಮಗೆ ಎದುರಾದ ಸಮಸ್ಯೆಗಳು, ಅರಣ್ಯ ನಾಶದ ಕಾರಣಗಳು..ಇತ್ಯಾದಿ ಹಲವಾರು ವಿಷಯಗಳನ್ನು ಸುಂದರವಾದ ಪವರ್ ಪಾಯಿಂಟ್ ನಿರೂಪಣೆಯ ಜೊತೆಗೆ ವಿವರಿಸಿದರು.
ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಗಮನದಲ್ಲಿಟ್ಟುಕೊಂಡು ನಡೆಸಲಾದ ‘ಸಾಹಿತ್ಯ ಕೃತಿಗಳ ಮರು ಓದು’ ಗೋಷ್ಠಿಯು ಹಿಂದೊಮ್ಮೆ ಓದಿದ್ದ ಕಾದಂಬರಿಯನ್ನು ಹೊಸಹೊಳಹಿನಲ್ಲಿ ನೆನಪಿಸಿತು.
‘ಸಂವಾದ’ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಯೋಗರಾಜ ಭಟ್ ಮತ್ತು ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ಇಬ್ಬರೂ ಸಿನೆಮಾಕಥೆ, ನಿರ್ದೇಶನ, ಗೀತೆರಚನೆ ಇತ್ಯಾದಿ ವಿಚಾರಗಳ ಬಗ್ಗೆ ಹಾಸ್ಯಮಯವಾದ ಸಂಭಾಷಣೆ ನಡೆಸುತ್ತಾ, ಸಿನೆಮಾ ಕಥೆ ರಚನೆಯ ಪುಟ್ಟ ಪ್ರಾತ್ಯಕ್ಷಿಕೆಯನ್ನೂ ಮಾಡಿ ತೋರಿಸಿ, ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.
ಸಂಜೆಯ ಸಮಯದಲ್ಲಿ, ಶ್ರೀ ಫಯಾಜ್ ಖಾನ್ ಅವರ ಸಿರಿಕಂಠದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವು ಸಭೆಯಲ್ಲಿ ಸುಶ್ರ್ಯಾವ್ಯವಾಗಿ ಅನುರಣಿಸಿತು.
21 ಜನವರಿ 2018 ರಂದು ಮೊದಲ ಗೋಷ್ಠಿಯಲ್ಲಿ ‘ಕಾವ್ಯ ಮತ್ತು ಸಂಗೀತದ ಸಂಬಂಧ’ದ ಬಗ್ಗೆ , ಕಾವ್ಯ ಮತ್ತು ಸಂಗೀತಗಳು ಬೆಸೆದುಕೊಳ್ಳುವ ಪರಿ, ಕೆಲವೊಮ್ಮೆ ಸಂಗೀತದ ದೃಷ್ಟಿಯಿಂದ ಅಳವಡಿಸುವ ಮಾರ್ಪಾಡುಗಳಿಂದಾಗುವ ಅರ್ಥ ವ್ಯತ್ಯಾಸಗಳ ಬಗ್ಗೆ ಮೌಲಿಕ ಚರ್ಚೆ ನಡೆದುವು. ಹಿರಿಯ ಕವಿಗಳಾದ ಚೆನ್ನವೀರ ಕಣವಿ ಅವರು ಗೀತೆಗೆ ರಾಗ ಸಂಯೋಜನೆ ಮಾಡುವ ಮೊದಲು ಕವಿಯೊಂದಿಗೆ ಚರ್ಚಿಸಿ ಸಲಹೆ ಪಡೆಯುವುದು ಸೂಕ್ತ ಎಂದರು. ಗಾಯಕ ವೈ.ಕೆ.ಮುದ್ದುಕೃಷ್ಣ, ಗಾಯಕಿ ಜಯಶ್ರೀ ಅರವಿಂದ ಅವರ ಭಾಗವಹಿಸುವಿಕೆಯೊಂದಿಗೆ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದಲ್ಲಿ ಈ ಗೋಷ್ಠಿಯು ಸಂಪನ್ನವಾಯಿತು.
ರಾಜೇಂದ್ರ ಚೆನ್ನಿಯವರ ನಿರ್ದೇಶನದಲ್ಲಿ ನಡೆದ Diversity, Aphasia and Image: The Future of Language ಬಗ್ಗೆ ಉಪನ್ಯಾಸವನ್ನಿತ್ತ ಭಾಷಾತಜ್ಞ ಡಾ.ಗಣೇಶ್ ಎಸ್. ದೇವಿ ಅವರು ಆಕ್ರಮಣಶೀಲ ಭಾಷೆಗಳು ದೀರ್ಘಕಾಲ ಉಳಿಯುವುದಿಲ್ಲ. ಸಂವೇದನಾ ಶೀಲ ಭಾಷೆಗಳು ಆಳವಾಗಿ ಬೇರೂರುತ್ತವೆ . ಅಗತ್ಯವಿದ್ದಲ್ಲಿಯೂ ಮಾತನಾಡಲು ಸಾಧ್ಯವಾಗದಿದ್ದರೆ ಅದು ವಾಚಾಹೀನತೆ (Aphasia). ಇದನ್ನು ಸಾಂಘಿಕವಾಗಿ ಪ್ರತಿಭಟಿಸಬೇಕು ಎಂದು ವ್ಯಾಖ್ಯಾನಿಸಿದರು.
ಸಿ.ಯು ಬೆಳ್ಳಕ್ಕಿ, ಸುಮಂಗಲಾ, ಬಿ.ಜಯಶ್ರೀ, ಮಂಡ್ಯ ರಮೇಶ್ , ಇ.ಜಿ.ಸನದಿ ಮತ್ತು ಎಂ.ಕೃಷ್ಣೇಗೌಡ ಅವರು ಖ್ಯಾತ ಸಾಹಿತಿಗಳ ಒಡನಾಟದಲ್ಲಿ ತಮ್ಮ ಅನುಭವಕ್ಕೆ ದಕ್ಕಿದ ಹಾಸ್ಯ ಪ್ರಸಂಗಗಳನ್ನು ರಸವತ್ತಾಗಿ ಪ್ರಸ್ತುತಪಡಿಸಿದ ‘ಪ್ರಸಂಗಗಳು’ ಗೋಷ್ಠಿಯು ನಗೆಬುಗ್ಗೆಯಾಗಿತ್ತು. ಆಮೇಲೆ ಬಿ.ಜಯಶ್ರೀ ಮತ್ತು ಮಂಡ್ಯ ರಮೇಶ್ ಅವರು ಜಂಟಿಯಾಗಿ ಹಾಡಿದ ಗಣೇಶ ಸ್ತುತಿಯು ಬಹಳ ಸೊಗಸಾಗಿತ್ತು.
ಕರ್ನಾಟಕದಲ್ಲಿ ಸರ್ವಸಮ್ಮತವಾದ ಸಾಂಸ್ಕೃತಿಕ ನೀತಿ ರೂಪುಗೊಳ್ಳಬೇಕು, ವಿವಿಧ ಜಾತಿಯವರನ್ನು ಮೆಚ್ಚಿಸುವ ಸಲುವಾಗಿ ಹಮ್ಮಿಕೊಳ್ಳುವ ತರಾವರಿ ಜಯಂತಿಗಳು ಅಗತ್ಯವಿಲ್ಲ ಎಂದು ‘ಸರಕಾರದ ಸಾಂಸ್ಕೃತಿಕ ನೀತಿ’ ಗೋಷ್ಠಿಯಲ್ಲಿ ಪ್ರತಿಪಾದಿಸಲಾಯಿತು.
‘ಅಭಿವೃದ್ಧಿ ಹಾಗೂ ಪರಿಸರ’ ಗೋಷ್ಠಿಯಲ್ಲಿ ಮಾತನಾಡಿದ ನಾಗೇಶ್ ಹೆಗಡೆ, ನರೇಂದ್ರ ರೈ ದೇರ್ಲ, ಟಿ.ವಿ.ಮಂಜುನಾಥ ಮತ್ತು ರವೀಂದ್ರ ಭಟ್ ಅವರು ಮೂಲಸೌಕರ್ಯಗಳು ಮತ್ತು ಅಭಿವೃದ್ಧಿ ಎಂದು ನಾವು ಯಾವುದನ್ನು ಪರಿಗಣಿಸುತ್ತೇವೆಯೋ ಅಲ್ಲಿಯೇ ಪ್ರಮಾದವಾಗಿದೆ. ಅರಣ್ಯ. ಗೋಮಾಳ, ಶುದ್ದಜಲ ಇವು ಮೂಲಸೌಕರ್ಯಗಳು. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಸಲ್ಲದು ಎಂದು ಒತ್ತಿ ಹೇಳಿದರು.
ಕೊನೆಯದಾಗಿ, ‘ಹರಿವು’ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಇಲ್ಲಿಗೆ ಮೂರು ದಿನಗಳ ‘ಧಾರವಾಡ ಸಾಹಿತ್ಯ ಸಂಭ್ರಮ’ಕ್ಕೆ ತೆರೆ ಬಿದ್ದಿತು. ವಿವಿಧೆಡೆಗಳಿಂದ ಸಾಹಿತ್ಯಾಸಕ್ತರನ್ನು ಧಾರವಾಡಕ್ಕೆ ಬರಮಾಡಿಕೊಳ್ಳುವ ಈ ಸಂಭ್ರಮವು ನಿರಂತರವಾಗಿ ನೆರವೇರಲಿ ಎಂಬುದು ನಮ್ಮೆಲ್ಲರ ಆಶಯ.
.
-ಹೇಮಮಾಲಾ.ಬಿ. ಮೈಸೂರು
Nice and detailed review. Good read
ಪ್ರೀಯ ಹೇಮಾದೇವಿ.
ಸಣ್ಣ ಬಿಂದಿಗೆಯಲ್ಲಿ ಸಮುದ್ರವನ್ನೇ ತುಂಬಿಸಿಟ್ಟ ಲೇಖನ ನಿಜಕ್ಕೂ ಆಶ್ಚರ್ಯದಾಯಕ .
ಮೂರು ದಿನಗಳ ಎಲ್ಲ ಗೋಷ್ಠಿಗಳನ್ನು, ಆರಂಭಿಕ ಉದ್ಘಾಟನಾ ಭಾಷಣ , ಮತ್ತು ಮುಕ್ತಾಯದ ಪರಿ ,
ಎಲ್ಲವನ್ನು ಒಳಗೊಂಡ ತಮ್ಮಿಂದ ರಚಿತವಾದ ಲೇಖನ ವಿದ್ವತ್ಪೂರ್ಣವಾಗಿದೆ .ಇನ್ನು ಮುಂದೆ ನಾವೆಲ್ಲ
ಸಾಹಿತ್ಯ ಸಂಭ್ರಮಕ್ಕೆ ಹೋಗುವ ಅವಶ್ಯಕತೆ ಇಲ್ಲ..ಏಕೆಂದರೆ ಸಂಭ್ರಮದ ಮುಕ್ತಾಯದ ನಂತರ ತಾವು ಸಾದರ
ಪಡಿಸುವ ಲೇಖನ ಓದಿದರೆ ಸಾಕು , ಪೂರ್ತಿ ಸಂಭ್ರಮವೆ ಕಣ್ಣು ಮುಂದೆ ಕಟ್ಟಿದಂತೆ ಭಾಸವಾಗುತ್ತದೆ (ಕುಮಾರವ್ಯಾಸ ಹಾಡಿದಂತೆ )
ಶುಭಾಶೀರ್ವಾದಗಳು.
ರಂಗಣ್ಣ ನಾಡಗೀರ್ , ಹುಬ್ಬಳ್ಳಿ
ಮಾನ್ಯ ರಂಗಣ್ಣ ನಾಡಗೀರ್ ಅವರೇ,
ಎಂತಹಾ ದೊಡ್ಡ ಮಾತು..ಧನ್ಯೋಸ್ಮಿ! ಸಕಾಲದಲ್ಲಿ ಮಾಹಿತಿ ತಿಳಿಸಿ, ಧಾರವಾಡಕ್ಕೆ ಬರಮಾಡಿಕೊಳ್ಳುವ ತಮ್ಮ ಕಾಳಜಿಯಿಂದ ನಾವು ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ತಮಗೆ ಚಿರಋಣಿ.
ಹೇಮಮಾಲಾ, ಮೈಸೂರು
ಮಾನ್ಯ ರಂಗಣ್ಣ ನವರು ಲೇಖನ ಕ್ಕೆ ಪ್ರತಿಕ್ರಿಯಿಸಿದಂತೆ ಲೇಖನ ಕಣ್ಣಿಗೆ ಕಟ್ಟುವಂತೆ ವಿವರವಾಗಿ,ನಿರೂಪಣೆ ಯು ಕೂಡ ಚೆನ್ನಾಗಿ ಬಂದಿದೆ.,
ಧನ್ಯವಾದಗಳು 🙂
ಲೇಖನದ ಉದ್ದಕ್ಕೂ ಲೇಖಿಕೆಯವರ ಎರಡು ರೀತಿಯ ಪರಿಣತಿಗಳು ಸ್ಪಷ್ಟವಾಗಿ ಕಾಣುತ್ತದೆ. ಒಂದನೆಯದು, ಸಾಹಿತ್ಯದ ಮೇಲಿನ ಆಸಕ್ತಿ ಮತ್ತು ಅಭಿಮಾನ. ಇನ್ನೊಂದು ಒಬ್ಬ ಪತ್ರಕರ್ತೆಗೆ ಇರಬೇಕಾದ ಸೂಕ್ಷ್ಮ ಮತ್ತು ವರದಿ ಮಾಡುವ ಕೌಶಲ್ಯ. ಸಂಪಾದಕಿಯವರಲ್ಲವೇ?
ಕನ್ನಡ ಮತ್ತು ಸಂಸ್ಕ್ಕ್ರತಿ ಇಲಾಖೆಯ ಅಧಿಕಾರಿಗಳ ಗೈರು ಲೇಖನದಲ್ಲಿ ಅಂದಂತೆ ಆಶ್ಚರ್ಯವೇನಲ್ಲ. ಸರಕಾರೀ ಆಯೋಜಿತ ಪ್ರತಿನಿಧಿಗಳಲ್ಲವೇ!
‘ಘಾಚರ್ ಘೋಚರ್’ ಅಂದರೆ ಅರ್ಥವೇನೆಂದು ಗೊತ್ತಾಗಲಿಲ್ಲ ಮತ್ತು ಕೃತಿಯಲ್ಲಿರುವ ವಿಷಯವೇನೆಂದು ತಿಳಿಯುವ ಕುತೂಹಲವಾಯಿತು.
ಗೋಪಾಲಕೃಷ್ಣ ಅಡಿಗರ ‘ಮತ್ತೆ ಮತ್ತೆ ಓದಬೇಕಾದ ಕವಿತೆಗಳು’ ಗೋಷ್ಠಿಯ ಆಯೋಜನೆ ಲೇಖನದಲ್ಲಿ ಮೂಡಿದುದು ತುಂಬಾ ಪ್ರಸ್ತುತ ಮತ್ತು ಔಚಿತ್ಯವೇ. ಈ ವರ್ಷ ಅವರ ಜನ್ಮ ಶತಮಾನವಲ್ಲವೇ? ಲೇಖಿಕೆಯವರಿಗೆ ಧನ್ಯವಾದಗಳು
ಉಲ್ಲಾಸ ಕಾರಂತರು ನಿಸರ್ಗ ಮತ್ತು ಹುಲಿ ಸಂರಕ್ಷಣೆ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರೆ, ಇಡೀ ಗೊಷ್ಟಿಯ ಸಮಯವೇ ಬೇಕಾಗ ಬಹುದು. ಶಿವರಾಮ ಕಾರಂತರ ಮಗ, ಉಲ್ಲಾಸರೊಂದಿಗೆ ಪುತ್ತೂರಿನಲ್ಲಿದ್ದಾಗಿನ (ನನ್ನ Class-mate) ಒಡನಾಟ ಮಸುಕಾಗಿಯಾದರೂ ನೆನಪಾಯಿತು.
ಸಾಂಸ್ಕೃತಿಕ ನೀತಿ ಒಳಗಿನಿಂದಲೇ ಬರುವಂತಹುದು, ಸರಕಾರಕ್ಕೆ ಠರಾವುಗಳನ್ನು ಗೋಷ್ಟಿಯ ಕೊನೆಗೆ ಕಳುಹಿಸಬಹುದಷ್ಟೇ!
ಒಟ್ಟಿನಲ್ಲಿ, ಲೇಖನ ತುಂಬಾ ಚೆನ್ನಾಗಿ ಬಂದಿದೆ.
ಹೇಮಾಜಿ, ಮುಂದೆ ಯಾವ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸಲು ತೆರಳುವಿರಿ. ಬಂದಮೇಲೆ ಬರೆಯುವಿರಿ ತಾನೇ?
ತಮ್ಮ ವಿಶ್ಲೇಷಣಾತ್ಮಕವಾದ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.
ನನಗೆ ಅರ್ಥವಾದಂತೆ, ‘ಘಾಚರ್ ಘೋಚರ್’ ಪದಕ್ಕೆ ನಿರ್ಧಿಷ್ಟ ಅರ್ಥವಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ಅದರ ಅರ್ಥ ಬದಲಾಗಬಹುದು. ಸ್ಥೂಲವಾಗಿ ಹೇಳುವುದಾದರೆ ಗೋಜಲು, ಗೊಂದಲ ಎಂದು ಹೇಳಬಹುದು. ಕೆಳಮಧ್ಯಮವರ್ಗದಲ್ಲಿ ಹುಟ್ಟಿದ ಕಥಾನಾಯಕನು ತನ್ನ ಬದುಕಿನ ಉದ್ದೇಶವೇ ಅರಿತಿಲ್ಲದವನಂತೆ ಇರುವುದು, ತನ್ನ ಅಪ್ಪ,ಅಮ್ಮ, ಪತ್ನಿ, ಅಕ್ಕ ಮತ್ತು ಚಿಕ್ಕಪ್ಪ ಇಷ್ಟು ಮಂದಿಯೊಂದಿಗೆ ಕೂಡುಕುಟುಂಬದ ಆಪ್ತತೆಯ ಸೋಗಿನಲ್ಲಿ ತಮ್ಮ ಅನಿವಾರ್ಯತೆಗಳನ್ನು ಅಡಗಿಸಿಕೊಳ್ಳುವುದು …ಹೀಗೆ ಹಲವು ಮಗ್ಗುಲಿನ ವಿಚಾರಗಳು ಕಥಾವಸ್ತು. ಕಥನ ಶೈಲಿ ಎಷ್ಟು ಅದ್ಭುತವಾಗಿದೆ ಎಂದರೆ, ಪುಸ್ತಕದ ಪ್ರಥಮ ಪುಟದಿಂದ ಕೊನೆಯ ಪುಟದ ವರೆಗೂ ಒಂದೇ ಓಟದಲ್ಲಿ ಓದುತ್ತಾ ಕೊನೆಯ ಸಾಲಿಗೆ ಬಂದಾಗಲೂ ಕಥೆ ಮುಗಿದಿದೆಯೇ, ಇನ್ನೊಂದು ಕಥೆ ಆರಂಭವಾಗುತ್ತಲಿದೆಯೇ ಎಂದು ನನಗಂತೂ ಗೊಂದಲವಾಯಿತು. ಅರ್ಥಾತ್ ಓದುಗರ ತಲೆಯನ್ನು ‘ಘಾಚರ್ ಘೋಚರ್’ ಮಾಡಿಸುವ ಶಕ್ತಿ ಕೃತಿಕಾರ ವಿವೇಕ ಶಾನಭಾಗ ಅವರದು!
ತಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.
ಸಮೀಕ್ಷೆ ಉತ್ತಮವಾಗಿ ಮೂಡಿ ಬಂದಿದೆ ,
ಸಮ್ಮೇಳನಕ್ಕೆ ಬರದ ಕೊರತೆ ನಿಮ್ಮ ಬರಹ ಕಡಿಮೆ ಮಾಡಿತು.
ಸಾಹಿತ್ಯ ಸಂಭ್ರಮವು ನಿಜಕ್ಕೂ ಒಂದು ಅದ್ಭುತ ಅನುಭವವಾಗಿತ್ತು. ನಿಮ್ಮ ಬರಹವು ಬಹಳ ಉತ್ತಮಾಗಿ ಮೂಡಿ ಬಂದಿದೆ.
ಧಾರವಾಡ ಸಾಹಿತ್ಯ ಸಂಭ್ರಮದ ಬಗ್ಗೆ ತುಂಬಾ ಜನ ಒಳ್ಳೊಳ್ಳೆ ಮಾತುಗಳನ್ನಾಡುವುದು ಕೇಳಿದ್ದೇನೆ.ಗಿರಡ್ಡಿ ಗೋವಿಂದರಾಜರ ಸಂಘಟನೆಯಲ್ಲಿ ತುಂಬಾ ಚೆನ್ನಾಗಿ ನಡೆಸುತ್ತಾರಂತೆ ಅದನ್ನು.ಒಂದು ಸಲವಾದರೂ ಹೋಗಿ ಭಾಗವಹಿಸಬೇಕು..
ಹೌದು.ಗೋಷ್ಠಿಗಳು ಚೆನ್ನಾಗಿರುತ್ತವೆ. ಕಡಿಮೆ ಜನರಿಗೆ ಭಾಗವಹಿಸಲು ಅವಕಾಶವಿರುವುದರಿಂದ ದೊಂಬಿ ಇರುವುದಿಲ್ಲ.