ಪ್ರಿನ್ಸೆಪ್ ಘಾಟ್ ನಲ್ಲೊಂದು ನಡಿಗೆ
ಕೋಲ್ಕತಾಕ್ಕೆ ಭೇಟಿ ಕೊಟ್ಟಾಗ ಒಂದು ಸಂಜೆ ಅಲ್ಲಿಯ ಅತ್ಯಂತ ಹಳೆಯ ಮನರಂಜನಾ ಸ್ಥಳವಾದ ಪ್ರಿನ್ಸೆಪ್ ಘಾಟ್ ನತ್ತ ಹೊರಟೆವು. ದಾರಿಯುದ್ದಕ್ಕೂ ಬೆಂಗಾಲಿ ಮಿಶ್ರಿತ ಹಿಂದಿಯಲ್ಲಿ ಮಾತನಾಡುತ್ತಿದ್ದ ಕ್ಯಾಬ್ ಚಾಲಕನಿಂದ ಪ್ರಿನ್ಸೆಪ್ ಘಾಟ್ ನಲ್ಲಿ ಬಾಲಿವುಡ್ ನ ಪರಿಣೀತಾ ಚಿತ್ರದ ಛಾಯಾಗ್ರಹಣ ನಡೆದಿದೆಯೆಂದು ತಿಳಿಯಿತು. ಆತ ಅದು ಆ ಸ್ಥಳದ ಪರಮ ವೈಶಿಷ್ಟ್ಯತೆಯೆಂಬಂತೆ ವ್ಯಾಖ್ಯಾನಿಸಿದ್ದನ್ನು ಕೇಳಿ ಒಂದಷ್ಟು ಒಳ್ಳೆಯ ಫೋಟೋಗಳಿಗೇನೂ ಬರವಿಲ್ಲವೆಂದುಕೊಂಡಿದ್ದೆ. ನಿಜ, ಸಂಜೆ ಹೊತ್ತಿನಲ್ಲಿ ಅತ್ಯಂತ ಸುಂದರವಾಗಿರುವ ಈ ಸ್ಥಳ, ಕ್ಯಾಮರಾ ಕಣ್ಣುಗಳಿಗಳಿಗೂ ಹಬ್ಬ!
ಹೂಗ್ಲಿ ನದೀದಡದಲ್ಲಿ ಆಂಗ್ಲೋ ಇಂಡಿಯನ್ ವಿದ್ವಾಂಸ ಜೇಮ್ಸ್ ಪ್ರಿನ್ಸೆಪ್ ರ ನೆನಪಿನಲ್ಲಿ ಕಟ್ಟಿರುವ ಸ್ಮಾರಕ ಇದಾಗಿದೆ. ಯೂರೋಪಿಯನ್ ವಾಸ್ತು ಶೈಲಿಗಳಲ್ಲೊಂದಾದ ಪಲ್ಲಾಡಿಯನ್ ಶೈಲಿಯಲ್ಲಿ ನಿರ್ಮಿಸಲಾಗಿರುವ ಕಟ್ಟಡ ಇದಾಗಿದ್ದು ಇದರಲ್ಲಿ ಗ್ರೀಕ್ ಹಾಗೂ ಗೋಥ್ ಛಾಯೆಗಳನ್ನೂ ಕಾಣಬಹುದು. 1841-1843 ರ ಒಳಗೆ ಬ್ರಿಟಿಷರ ಆಡಳಿತ ಸಮಯದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡ ಹಾಗೂ ಘಾಟ್ ಆಗೆಲ್ಲಾ ಅವರ ಹಡಗಿನ ಮೂಲಕ ಬಂದುಹೋಗುವಿಕೆಯ ಜಾಗವಾಗಿತ್ತು ಎನ್ನಲಾಗುತ್ತದೆ.
ಈ ಕಟ್ಟಡವನ್ನು ನೋಡಿ ಮುಂದೆ ನಡೆದರೆ, ಒಂದು ಪುಟ್ಟ ರೈಲ್ವೆ ಸ್ಟೇಷನ್ ಹಾಗೂ ಮುಂದೆ ಹೂಗ್ಲಿ ನದಿಯು ಕಾಣಸಿಗುತ್ತದೆ. ನದಿಯಲ್ಲಿ ಬೋಟಿಂಗ್ ಗೆ ಅವಕಾಶವಿದೆ, ಹಾಗೆಯೇ ಸೂರ್ಯಾಸ್ತಮಾನವನ್ನು ವೀಕ್ಷಿಸಬಹುದು.
ಇಲ್ಲಿ ನದೀ ತೀರದಲ್ಲಿ ಒಂದೆರಡು ಕಡೆ ಸೂರ್ಯಾಸ್ತವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದ್ದು ಉಳಿದಂತೆ ಉದ್ದಕ್ಕೂ ಪಾರ್ಕ್ ನಿರ್ಮಿಸಿ ಕಲ್ಲು ಬೆಂಚುಗಳನ್ನು ಹಾಕಲಾಗಿದೆ. ದಾರಿಯುದ್ದಕ್ಕೂ ಸಾಕಷ್ಟು ಚಹಾದ ಅಂಗಡಿಗಳು, ಪಾವ್ ಭಾಜಿ ವಡಾ ಪಾವ್ ಪಾನಿಪೂರಿಗಳ ಪುಟ್ಟ ಗಾಡಿ ಅಂಗಡಿಗಳೂ ಇವೆ. ಹೊಸ ಅಂಗಡಿಗಳ ಜತೆ ನಲುವತ್ತು ವರ್ಷಗಳಷ್ಟು ಕಾಲ ಹಳೆಯ ಒಂದು ಐಸ್ಕ್ರೀಂ ಅಂಗಡಿ ಕೂಡಾ ಇಲ್ಲಿದೆ.
ಪುಟ್ಟ ಚಹಾ ಅಂಗಡಿಯಲ್ಲಿ “ಅದ್ರಕ್ ಚಾಯ್”(ಶುಂಠಿ ಚಹಾ) ಹೇಳಿ ಮುಂದಿದ್ದ ಸ್ಟೂಲ್ಗಳಲ್ಲಿ ಕುಳಿತೆವು. ಐದು ನಿಮಿಷಗಳಲ್ಲಿ ಪುಟ್ಟ ಮಣ್ಣಿನ ಗಡಿಗೆಗಳಲ್ಲಿ ಆತ ತಂದಿಟ್ಟ ಚಹಾ ಪರಮಾದ್ಭುತ ರುಚಿ ಹೊಂದಿತ್ತು! ಅಲ್ಲೊಂದಷ್ಟು ಹೊತ್ತು ಹರಟಿ ಮುಂದಕ್ಕೆ ನಡೆದೆವು.
ಇಲ್ಲಿ ಉದ್ದಕ್ಕೂ ಎರಡು ಕಿಲೋಮೀಟರ್ ನಡೆದರೆ ಮುಂದೆ ಬಾಬು ಘಾಟ್ ಸಿಗುತ್ತದೆ. ದಾರಿಯುದ್ದಕ್ಕೂ ಉದ್ಯಾನ, ಕಾರಂಜಿಗಳಿಂದ ಕೂಡಿದ ಸ್ಥಳ ಇದಾಗಿದ್ದು, ಸೂರ್ಯಾಸ್ತದ ಸಾಕಷ್ಟು ಮೊದಲೇ ಬಂದರೆ ಈ ಎರಡೂ ಸ್ಥಳಗಳನ್ನೂ ವೀಕ್ಷಿಸಬಹುದು.
ಸ್ವಚ್ಛವಾಗಿ ಕಾಯ್ದುಕೊಳ್ಳಲಾಗಿರುವ ಪ್ರಿನ್ಸೆಪ್ ಘಾಟ್ (ವಾರಾಂತ್ಯದಲ್ಲಂತೂ) ಪ್ರವಾಸಿಗಳಿಂದ ಹಾಗೂ ಸ್ಥಳೀಯರಿಂದ ತುಂಬಿದ್ದರೂ ಕೂಡಾ ಒಳ್ಳೆಯ ಅನುಭವ ನೀಡುತ್ತದೆ. ಒಂದುದ್ದ ವಾಕ್ ಹೋಗಲು ಇಷ್ಟಪಡುವವರಿಗೆ ಪ್ರವಾಸದೊಂದಿಗಿನ ಬೋನಸ್ ಖುಷಿ ನೀಡುತ್ತದೆ.
– ಶ್ರುತಿ ಶರ್ಮಾ, ಬೆಂಗಳೂರು