ಸುಂದರಬನ ಎಂದರಷ್ಟೇ ಸಾಕೆ?

Share Button

ಬಂಗಾಳಕೊಲ್ಲಿಯ ಜಲರಾಶಿಯ ಮೇಲೆ ನಿಧಾನವಾಗಿ ಚಲಿಸುತ್ತಿರುವ ಯಾಂತ್ರೀಕೃತ ಚಾಲನೆಯ ಫೆರ್ರಿ ದೋಣಿ. ಹಿತವಾಗಿ ಬೀಸುತ್ತಿರುವ ತಂಗಾಳಿ. ದೋಣಿಯ ಮೇಲ್ಮಹಡಿಯಲ್ಲಿ ಕುರ್ಚಿಯಲ್ಲಿ ಆಸೀನರಾಗಿ, ಕೈಯಲ್ಲಿ ಕುರುಕಲು ತಿಂಡಿಯೊಂದಿಗೆ ಬಿಸಿಚಹಾದ ಕಪ್ ಇದ್ದರೆ, ಪ್ರಕೃತಿಯ ಸೊಬಗನ್ನು ಆಸ್ವಾದಿಸಲು ಹೇಳಿ ಮಾಡಿಸಿದ ವಾತಾವರಣ.

ಎತ್ತ ನೋಡಿದರೂ ನೀಲಿ ಜಲ, ಹಚ್ಚಹಸಿರಿನ ಮರಗಳುಳ್ಳ ದ್ವೀಪಗಳು , ಅಲ್ಲಲ್ಲಿ ಚಿಕ್ಕ ದೊಡ್ಡ ಕಡಲುಗಾಲುವೆಗಳು, ಕಪ್ಪು-ಬೂದು ಬಣ್ಣದ ಜವುಗು ಮಣ್ಣಿನಲ್ಲಿ ಮೂಡಿರುವ ಯಾವುದೋ ಕಾಡು ಪ್ರಾಣಿಯ ಹೆಜ್ಜೆ ಗುರುತುಗಳು, ಸಮುದ್ರದ ಭರತ ಸಮಯದಲ್ಲಿ ಮೇಲೆ ತೇಲುತ್ತಿದ್ದ ದೋಣಿಯು ನೀರಿಳಿದಾಗ ಆ ಜವುಗು ಮಣ್ಣಿನಲ್ಲಿ ಮೂಡಿಸಿದ ದೋಣಿಯ ಅಚ್ಚು, ನೀರಿನಲ್ಲಿ ಅವಿರತವಾಗಿ ತೇಲಿ ಬರುತ್ತಿರುವ ಹಳದಿ ಬಣ್ಣದ ಬರುತ್ತಿರುವ ಒಣಎಲೆಗಳ ಸಾಲು, ಅಲ್ಲಲ್ಲಿ ಮಿಂಚಿ ಮರೆಯಾಗುವ ಶ್ವೇತಸುಂದರಿ ಜೆಲ್ ಫಿಷ್ ಗಳು, ಅದೃಷ್ಟವಿದ್ದರೆ ಕಾಣಸಿಗುವ ಡಾಲ್ಫಿನ್ ಗಳು, ನಿಂತಲ್ಲಿಂದ ಸೊಯ್ಯನೆ ಬಲೆಬೀಸುವ ಬೆಸ್ತರು, ಮೀನು ಹಿಡಿಯುವವರ ಪುಟ್ಟದೋಣಿಗಳು, ಸರಕು ಸಾಗಣೆಯ ಹಡಗುಗಳು, ಜನವಸತಿ ಇರುವ ಕೆಲವು ದ್ವೀಪಗಳಲ್ಲಿರುವ ಹುಲ್ಲಿನ ಗುಡಿಸಲುಗಳು, ಚಿಕ್ಕ ದೊಡ್ಡ ಮನೆ ಅಥವಾ ಕಾಟೇಜುಗಳು, ಒಂದೆರಡು ರೆಸಾರ್ಟ್ ಗಳು, ಇವೆಲ್ಲವನ್ನೂ ಗಮನಿಸುವ ಗಡಿ ಭದ್ರತಾ ಪಡೆಯವರ ದೋಣಿಗಳು, ಅರಣ್ಯ ಇಲಾಖೆಯ ಕಚೇರಿಗಳು……ಹೀಗೆ ಕಣ್ಣು, ಮನಸ್ಸು ದಣಿಯುವಷ್ಟೂ ನೋಡಿದರೂ ಮುಗಿಯದು ಪ್ರಕೃತಿಯ ಸೊಬಗಿನ ಪಯಣ. ಇಷ್ಟು ಸುಂದರವಾದ ಸ್ಥಳ ಇರುವುದೆಲ್ಲಿ ಎಂಬ ಪ್ರಶ್ನೆಗೆ ಉತ್ತರ ‘ಸುಂದರಬನ’.

ಭಾರತ ಹಾಗೂ ಬಾಂಗ್ಲಾದೇಶಗಳಲ್ಲಿ ಹರಡಿಕೊಂಡಿರುವ ಸುಂದರಬನವು ಪ್ರಪಂಚದಲ್ಲಿಯೇ ಅತಿ ವಿಸ್ತಾರವಾದ ನದಿ ಮುಖಜಭೂಮಿ. ಗಂಗಾ, ಬ್ರಹ್ಮಪುತ್ರಾ ಮತ್ತು ಇತರ ಉಪನದಿಗಳು ಬಂಗಾಳಕೊಲ್ಲಿಯನ್ನು ಸೇರುವ ತಾಣವಿದು. ಪ್ರಪಂಚದಲ್ಲೇ ಅತಿ ಹೆಚ್ಚು ಪ್ರಬೇಧಗಳ ಮ್ಯಾಂಗ್ರೋವ್ ಸಸ್ಯವರ್ಗವನ್ನು ಪ್ರದೇಶವಾದ ಸುಂದರಬನವು ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತಾದಿಂದ 130 ಕಿ.ಮೀ ದೂರದಲ್ಲಿದೆ. ಸ್ಥಳೀಯ ಅರಣ್ಯ ಇಲಾಖೆಯ ಲಭ್ಯ ಮಾಹಿತಿ ಪ್ರಕಾರ ಸುಂದರಬನದ ಒಟ್ಟು ವಿಸ್ತಾರ 29,000 ಚದರ ಕಿ.ಮೀ .ಇದರಲ್ಲಿ 9630 ಚದರ ಕಿ.ಮೀ ಪ್ರದೇಶವು ಭಾರತದ ಸುಪರ್ದಿನಲ್ಲಿದೆ . ಇದನ್ನು ರಾಷ್ಟ್ರೀಯ ಉದ್ಯಾನವನವೆಂದು 1984ರಲ್ಲಿ ಘೋಷಿಸಲಾಯಿತು. ಉಳಿದ ಭಾಗವು ಬಾಂಗ್ಲಾದೇಶದ ಅಧೀನದಲ್ಲಿದೆ. ‘ಬುರಿದಾಬ್ರಿ’ ಎಂಬಲ್ಲಿ, ‘ರಾಯ್ ಮಂಗಲ್’ ನದಿಯಾಚೆಗಿನ ಭಾಗವು ಬಾಂಗ್ಲಾದೇಶಕ್ಕೆ ಸೇರುತ್ತದೆ.

ನದಿಗಳು ತರುವ ಸಿಹಿನೀರು ಹಾಗೂ ಸಮುದ್ರದ ಉಪ್ಪುನೀರಿನ ಮಿಶ್ರಣ ಹಾಗೂ ಸಮುದ್ರದ ಭರತ-ಇಳಿತಗಳಿಂದಾಗುವ ವಿಶಿಷ್ಟ ಸನ್ನಿವೇಶಗಳಿಂದಾಗಿ, ಇಲ್ಲಿನ ಪರಿಸರದಲ್ಲಿ ಬೆಳೆಯುವ ಮ್ಯಾಂಗ್ರೋವ್ ಅರಣ್ಯಗಳು ವಿಭಿನ್ನವಾಗಿವೆ. ಈ ಮರಗಳಲ್ಲಿ ‘ಉಸಿರಾಡುವ ಬೇರುಗಳಿರುತ್ತವೆ’. ನೆಲದಿಂದ ಮೇಲೇರುವ ಬಿಳಲಿನಾಕಾರದ ಅಸಂಖ್ಯಾತ ಗಟ್ಟಿ ಬೇರುಗಳಿರುವುದು ಮ್ಯಾಂಗ್ರೋವ್ ಕಾಡುಗಳ ವೈಶಿಷ್ಟ್ಯ . ಸಮುದ್ರದ ಭರತದ ಸಮಯದಲ್ಲಿ ನೀರಿನಿಂದ ಆವೃತವಾಗುವ ಬೇರುಗಳು ಇಳಿತದ ಸಮಯದಲ್ಲಿ ಆಮ್ಲಜನಕವನ್ನು ಉಸಿರಾಡುತ್ತವೆ.. ನದಿ ಮುಖಜ ಭೂಮಿ ಅಥವಾ ಡೆಲ್ಟಾ ಪ್ರದೇಶಗಳೆಂದು ಕರೆಯಲ್ಪಡುವ ಅಂಟಾದ ಜೌಗು ಮಣ್ಣಿನಲ್ಲಿ ‘ಸುಂದರಿ’ ಎಂಬ ಮರಗಳು ಹೆಚ್ಚಾಗಿ ಕಂಡುಬರುವುದರಿಂದ ಈ ಪ್ರದೇಶವನ್ನು ‘ಸುಂದರಬನ’ ಎಂದು ಕರೆಯಲಾಗುತ್ತದೆ. ‘ಸಮಂದರ್ ಬನ್’ ಅಥವಾ ಸಮುದ್ರದಲ್ಲಿರುವ ವನ ಎಂಬ ಕಾರಣದಿಂದಲೂ , ಸುಂದರವಾಗಿ ಇರುವ ವನವಾದುದರಿಂದಲೂ ‘ಸುಂದರ್ ಬನ್’ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ. ‘ಸುಂದರ್ ಬನ್’ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ.

ಸುಂದರಬನದ ಮರಗಳು ಗಟ್ಟಿಯಾಗಿದ್ದು, ಪೀಠೋಪಕರಣಗಳ ತಯಾರಿಕೆ ಮತ್ತು ದೋಣಿಗಳ ನಿರ್ಮಾಣಕ್ಕೆ ಉಪಯೋಗವಾಗುತ್ತದೆ. ಮ್ಯಾಂಗ್ರೋವ್ ಕಾಡಿನಲ್ಲಿ ತಿನ್ನಲರ್ಹವಾದ ಹಣ್ಣುಗಳನ್ನು ಬಿಡುವ ಮರಗಳು ಬಲು ಕಡಿಮೆ. ಹೆಚ್ಚಿನ ಫಲಗಳು ರುಚಿಯಿಲ್ಲದವುಗಳು ಅಥವಾ ವಿಷಕಾರಿ. ಸುಂದರಿ, ಗೋಲಿಪತ್ತಾ, ಢುಂಡುಲ್, ಕಂಕ್ರಾ , ಬೈನ, ಗೇವಾ, ನೀಪಾ ಇತ್ಯಾದಿ ಹಲವಾರು ಪ್ರಭೇದದ ಮರಗಳಿವೆ. ನೂರಾರು ಹುಲ್ಲುವರ್ಗದ ಸಸ್ಯಗಳಿವೆ . ಮಣ್ಣನ್ನು ಹಿಡಿದಿಟ್ಟು ಕಡಲಕೊರೆತವನ್ನು ತಡೆಯುವ ಸುಂದರಬನದಲ್ಲಿ ಬಹಳಷ್ಟು ಜೀವಸಂಕುಲಗಳು ಆಶ್ರಯ ಪಡೆದಿವೆ. ಈ ಅರಣ್ಯಗಳಲ್ಲಿ ನೂರಾರು ಬಂಗಾಳದ ‘ರಾಯಲ್ ಟೈಗರ್’ ತಳಿಯ ಹುಲಿ, ಕಾಡುಹಂದಿ, ಜಿಂಕೆ, ಮೊಸಳೆ, ಮಂಗ, ವಿವಿಧ ಹಾವುಗಳು, ಕಡಲಾಮೆ, ಮಾನಿಟರ್ ಹಲ್ಲಿ ಹಾಗೂ ವಿಶಿಷ್ಟ ಪಕ್ಷಿಗಳಿವೆ. ಸುಂದರ ಬನದ ಸುಜನ್ ಕಾಲಿ, ಝಿಲಾ , ದೊ ಬಂಕಿ ರಿಸರ್ವ್ , ಮೊದಲಾದ ದ್ವೀಪಗಳಲ್ಲಿ ಅರಣ್ಯ ಇಲಾಖೆಯವರ ಮ್ಯೂಸಿಯಂನಲ್ಲಿ ಸ್ಥಳೀಯ ಜೀವವೈವಿಧ್ಯದ ಬಗ್ಗೆ ಬಹಳಷ್ಟು ಮಾಹಿತಿ ಲಭ್ಯ.

ಭಾರತದ ಭಾಗದಲ್ಲಿರುವ ಸುಂದರಬನದಲ್ಲಿ 54 ಚಿಕ್ಕಪುಟ್ಟ ದ್ವೀಪ ಸಮೂಹಗಳಿವೆ. ಹೆಚ್ಚಿನ ದ್ವೀಪಗಳು ನಿರ್ಜನವಾಗಿದ್ದು ಅರಣ್ಯ ಇಲಾಖೆಯ ಸ್ವಾಧೀನದಲ್ಲಿವೆ. ಕೇವಲ ಬೆರಳೆಣಿಕೆಯ ದ್ವೀಪಗಳಲ್ಲಿ ಜನವಸತಿಯಿದೆ. ಇನ್ನು ಕೆಲವು ದ್ವೀಪಗಳಲ್ಲಿ ಜನವಸತಿಯಿಲ್ಲ. ಆದರೆ ಅರಣ್ಯ ಇಲಾಖೆಯವರ ಅನುಮತಿ ಪಡೆದು, ವರ್ಷದ ನಿರ್ಧಿಷ್ಟ ತಿಂಗಳಲ್ಲಿ ಮಾತ್ರ, ಸ್ಥಳೀಯರಿಗೆ ಜೇನು ಸಂಗ್ರಹಿಸಲು ಅರಣ್ಯ ಪ್ರವೇಶಿಸಲು ಅವಕಾಶವಿದೆ. ಕೆಲವು ದ್ವೀಪಗಳಲ್ಲಿ ಮೀನುಗಾರಿಕೆಗೆ ಅನುಮತಿ ಇದೆ. ದ್ವೀಪಗಳಲ್ಲಿ ನರಹಂತಕ ಹುಲಿಗಳಿರುವುದರಿಂದ ಜೀವವಿಮೆ ಮಾಡಿಯೇ ಕಾಡಿಗೆ ಹೋಗಲು ಅನುಮತಿ ಕೊಡುವ ಪದ್ಧತಿಯಂತೆ! ಇಲ್ಲಿನ ಜನರು ಹುಲಿಯನ್ನು ಕಾಡಿನ ರಾಜನಾದ ‘ದಕ್ಷೀನ್ ರೇ’ ಎಂದೂ ಹಾಗೂ ತಮ್ಮನ್ನು ರಕ್ಷಿಸುವ ಮಾತೆಯಾಗಿ ಬನದೇವಿಯನ್ನೂ ಭಯ-ಭಕ್ತಿಯಿಂದ ಅರಾಧಿಸುತ್ತಾರೆ. ಜೇನು ಸಂಗ್ರಹಣೆಗಾಗಿ ಕಾಡಿಗೆ ತೆರಳುವ ಮೊದಲು, ಬನದೇವಿಗೆ ಪೂಜೆ ಸಲ್ಲಿಸಿ ಹೊರಡುವುದು ಅವರ ಸಂಪ್ರದಾಯ.


ಹುಲಿಗಳು ನೀರಿನಲ್ಲಿ ಈಜುತ್ತಾ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗುವುದು ಸಾಮಾನ್ಯ. ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುವ ಹಾಗೂ ಜೇನು ಸಂಗ್ರಹಕ್ಕಾಗಿ ಕಾಡಿಗೆ ತೆರಳುವವರಲ್ಲಿ ಪ್ರತಿವರ್ಷವೂ ಕನಿಷ್ಟ 10 ಮಂದಿ ಹುಲಿಗೆ ಆಹಾರವಾಗುತ್ತಾರಂತೆ! ನಮ್ಮ ಗೈಡ್ ಆಗಿದ್ದ ಎಳೆಯ ಯುವಕನು, ನಾಡದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದಾಗ, ತನ್ನ ದೊಡ್ಡಪ್ಪನನ್ನು ಹುಲಿ ಎಳೆದುಕೊಂಡು ಹೋಗಿದ್ದುದನ್ನು ಕಣ್ಣಾರೆ ಕಂಡು ಪ್ರಜ್ಞಾಹೀನನಾಗಿದ್ದೆನೆಂದು ವಿವರಿಸಿದ!

ಬದಲಾದ ಹವಾಮಾನ, ಚಂಡಮಾರುತ, ಕಡಿಮೆಯಾದ ನಿಹಿನೀರಿನ ಸೆಲೆಗಳಿಂದಾಗಿ ಸುಂದರಬನದ ಸಹಜತೆ ಕಡಿಮೆಯಾಗುತ್ತಿದೆ. ಸಮುದ್ರದ ನೀರಿನ ಮಟ್ಟ ಏರುತ್ತಿರುವುದರಿಂದ ಮುಂದೆ ಕೆಲವು ದ್ವೀಪಗಳು ಮುಳುಗಡೆಯಾಗುವ ಸಾಧ್ಯತೆಗಳಿವೆ. ಬದಲಾಗುತ್ತಿರುವ ಜೀವನ ಶೈಲಿಯ ಅಗತ್ಯಗಳು, ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷದಿಂದಾಗಿ ಸುಂದರಬನ ದ್ವೀಪದ ಜನರ ಜೀವನ ನಿಜಕ್ಕೂ ತ್ರಾಸದಾಯಕ.

ಪ್ರವಾಸಿಗರ ದೃಷ್ಟಿಯಲ್ಲಿ ಹಾಗೂ ಕ್ಯಾಮೆರಾದ ಕಣ್ಣಿಗೆ ಬಲು ಅಂದವಾಗಿ ಕಾಣುವ ಸುಂದರಬನದ ಹಿಂದೆ ಬಹಳಷ್ಟು ತಲ್ಲಣಗಳಿವೆ. ಸ್ಥಳೀಯ ನಿವಾಸಿಗಳಿಗೆ ತೀರಾ ಅವಶ್ಯವಾದ ಔಷಧಿ, ಆಹಾರ, ಬಟ್ಟೆ ಇತ್ಯಾದಿ ಸಾಮಗ್ರಿಗಳನ್ನು ಪಡೆಯಲು ಕೂಡ ಮನೆಯಂಗಳದಿಂದಲೇ ದೋಣಿ ಪ್ರಯಾಣ ಮಾಡಲೇ ಬೇಕಾದ ಅನಿವಾರ್ಯತೆ. ಸಾಮಗ್ರಿಗಳನ್ನು ತಲೆಹೊರೆಯಲ್ಲಿಯೇ ತರಬೇಕು. ಹೆಚ್ಚಿನ ಮನೆಗಳು ಹುಲ್ಲಿನ ಗುಡಿಸಲುಗಳು. ವಿದ್ಯುಚ್ಚಕ್ತಿ ಇಲ್ಲದ ಹಳ್ಳಿಗಳೇ ಹೆಚ್ಚು. ಪ್ರತಿ ಮನೆಯ ಮುಂದೆ ವಿಶಾಲವಾದ ಮಳೆನೀರಿನ ಇಂಗುಗುಂಡಿ ಮಾಡಿ , ಸಿಹಿನೀರು ಪಡೆಯುವುದರೊಂದಿಗೆ ಮೀನು ವ್ಯವಸಾಯವನ್ನೂ ಮಾಡುತ್ತಾರೆ.

ಇಲ್ಲಿರುವ ಪ್ರಾಥಮಿಕ ಶಾಲೆಗೆ ನಿಯೋಜಿತರಾಗುವ ಅಧ್ಯಾಪಕರುಗಳು ಆದಷ್ಟು ಬೇಗನೆ ಬೇರೆಡೆಗೆ ವರ್ಗಾವಣೆಗೆ ಅರ್ಜಿ ಹಾಕುತ್ತಾರಂತೆ. ಹಾಗಾಗಿ ವಿದ್ಯಾಭ್ಯಾಸದ ಮಟ್ಟ ಕಡಿಮೆ.ಇನ್ನು ಅನಿವಾರ್ಯ ಆರೋಗ್ಯ ಸಮಸ್ಯೆ, ಹೆರಿಗೆ ಇತ್ಯಾದಿಗಳಿಗೆ ಸನಿಹದ ನಗರಿಯಾದ ‘ಕ್ಯಾನಿಂಗ್’ ನಲ್ಲಿರುವ ಆಸ್ಪತ್ರೆಗೆ ಹೋಗಲು ಕನಿಷ್ಟ ನಾಲ್ಕು ಗಂಟೆ ಬೇಕು! ಯಾವುದೇ ಸಮಯದಲ್ಲಿ ಸಮುದ್ರದಲ್ಲಿ ಏಳಬಹುದಾದ ಚಂಡಮಾರುತದ ಭೀತಿ, ಹಾಗೂ ಕಾಡುಪ್ರಾಣಿಗಳ ಭಯ ಸದಾ ಇರುತ್ತದೆ. ಉಪ್ಪುನೀರಿನ ಜವುಗು ಮಣ್ಣಿನಲ್ಲಿ ಕೃಷಿಯನ್ನೂ ಮಾಡಲಾಗದು. ಮೀನುಗಾರಿಕೆ, ಜೇನು ಸಂಗ್ರಹ ಹಾಗೂ ಸ್ವಲ್ಪಮಟ್ಟಿಗೆ ಪ್ರವಾಸೋದ್ಯಮ ಇಷ್ಟೇ ಅವರ ಆದಾಯದ ಮೂಲ. ಸಹಜವಾಗಿಯೇ ಯುವಕರು ಉದ್ಯೋಗವನ್ನು ಅರಸಿ ಭಾರತದ ದೂರದ ನಗರಗಳಿಗೆ ವಲಸೆ ಹೋಗುತ್ತಾರೆ. ಇದು ಸುಂದರ ಬನದ ಇನ್ನೊಂದು ಮುಖ. ಆದರೂ, ಪ್ರವಾಸಿಯ ದೃಷ್ಟಿಯಿಂದ ಸುಂದರಬನಕ್ಕೆ ಭೇಟಿ ಕೊಡುವುದು ಬಹಳ ರೋಚಕವಾದ ಅವಿಸ್ಮರಣೀಯ ಅನುಭವ.

ಸುಂದರಬನವನ್ನು ತಲಪುವುದು ಹೀಗೆ :
ಕೊಲ್ಕತ್ತಾ ನಗರದಿಂದ ಅರ್ಧ ಗಂಟೆ ರಸ್ತೆ/ರೈಲಿನಲ್ಲಿ ಪ್ರಯಾಣಿಸಿ 10 ಕಿ.ಮೀ ದೂರದಲ್ಲಿರುವ ‘ಸಿಯಾಲ್ಡಾ’ ರೈಲ್ವೇಸ್ಟೇಷನ್ ಗೆ ಹೋಗಿ, ಅಲ್ಲಿಂದ 45 ಕಿ.ಮೀ ದೂರದಲ್ಲಿರುವ ‘ಕ್ಯಾನಿಂಗ್’ ಎಂಬ ರೈಲ್ವೇಸ್ಟೇಷನ್ ಗೆ ತಲಪಬೇಕು. ಇದು ಸುಂದರಬನಕ್ಕೆ ಹತ್ತಿರವಾದ ರೈಲ್ವೇಸ್ಟೇಷನ್ . ಇಲ್ಲಿಂದ ಆಟೋ ರಿಕ್ಷಾದಲ್ಲಿ ಅರ್ಧ ಗಂಟೆ ಪ್ರಯಾಣಿಸಿದರೆ ‘ಸಜನ್ ಕಾಲಿ’ ಜೆಟ್ಟಿ ಸಿಗುತ್ತದೆ. ಇಲ್ಲಿಂದ ಸುಂದರಬನ ಪ್ರದೇಶವಾಗಿರುತ್ತದೆ. ಫೆರ್ರಿಗಳ ಮೂಲಕ ಪ್ರಯಾಣಿಸಿ ಸುಂದರಬನವನ್ನು ಕಣ್ತುಂಬಿಸಿಕೊಳ್ಳುತ್ತಾ. ಬಾಂಗ್ಲಾದೇಶದ ಗಡಿಯ ವರೆಗೂ ಪ್ರಯಾಣಿಸಬಹುದು. ಸ್ಥಳೀಯ ಪ್ಯಾಕೇಜು ಟೂರ್ ನವರು ಅರಣ್ಯ ಇಲಾಖೆಯವರ ಪೂರ್ವಾನುಮತಿ, ಫೆರ್ರಿ ಪ್ರಯಾಣ, ಆಹಾರ, ವಾಸ್ತವಕ್ಕೆ ವ್ಯವಸ್ಥೆ ಮಾಡುತ್ತಾರೆ. ಕೆಲವು ದ್ವೀಪಗಳಲ್ಲಿ ಮಾತ್ರ ವಾಸ್ತವ್ಯಕ್ಕೆ ರೆಸಾರ್ಟ್ ಗಳಿವೆ.

– ಹೇಮಮಾಲಾ.ಬಿ
(11/03/2018 ರ ಪ್ರಜಾವಾಣಿ ಪತ್ರಿಕೆಯ ‘ಮುಕ್ತಛಂದ’ದಲ್ಲಿ ಪ್ರಕಟಿತವಾದ ಬರಹ)

2 Responses

  1. Murthy Parashiva says:

    ಬರವಣಿಗೆ ಮತ್ತು ನಿಮ್ಮ ಅನುಭವ ಎರಡೂ ಚೆನ್ನಾಗಿದೆ. ಅಭಿನಂದನೆಗಳು.

  2. ವಿಜಯ ಸಾರಥಿ says:

    ಶಾಲೆಯಲ್ಲಿ ಸುಂದರಬನ ಎಂದಷ್ಟೇ ಓದಿದ ನೆನಪು. ತಮ್ಮ ಈ ಲೇಖನ ಓದಿದ ಮೇಲೆ, ನೋಡಿದಂತೆ ಆಯಿತು. ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: