ಜೆಸ್ಸಿ ಪಿ ವಿ
ಪರೀಕ್ಷೆಯೆಂದರೆ ವಿದ್ಯಾರ್ಥಿಗಳಿಗೆ ಭಯ, ಕಳವಳ. ಎಸ್ ಎಸ್ ಎಲ್ ಸಿ ಪರೀಕ್ಷೆ ಬಂತೆಂದರೆ ನನಗೂ ಕಳವಳ. ಶಿಕ್ಷಕಿಯಾಗಿ ನನ್ನ ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಬರೆಯುವರೋ ಎಂಬುದು ನನ್ನ ಕಳವಳದ ಒಂದು ಕಾರಣವಾದರೆ ಇನ್ನೊಂದು ಬಲವಾದ ಕಾರಣ, ಕೊಠಡಿ ಮೇಲ್ವಿಚಾರಣೆ ಎಂಬ ಆ ಮೂರು ಗಂಟೆಗಳು ನನಗೆ ಜೈಲೊಳಗಿದ್ದಂತೆ ಅನಿಸುವುದು.
ಈ ಸಲವೂ ಬಂತು ಈ ಜವಾಬ್ದಾರಿ. ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಪ್ರಾರಂಭಕ್ಕೂ ಮುಕ್ಕಾಲು ಗಂಟೆ ಮುಂಚಿತವಾಗಿ ಹೋಗಿ ತಲುಪಿ ಕೊಠಡಿಯ ಸಂಖ್ಯೆಯ ಚೀಟಿ ಎತ್ತಿಕೊಂಡು, ಆ ಕೊಠಡಿಗೆ ಬೇಕಾದ ಉತ್ತರ ಪತ್ರಿಕೆ, ಹೆಸರಿನ ಯಾದಿ ಇನ್ನಿತರ ಪರಿಕರಗಳನ್ನು ತೆಗೆದುಕೊಂಡು ಕೊಠಡಿ ತಲುಪುವುದು ಮೊದಲ ಕೆಲಸ. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗನುಸಾರ ಉತ್ತರ ಪತ್ರಿಕೆಯ ಪುಸ್ತಕವನ್ನು ಹಂಚಿಯಾಯ್ತು. ನಂತರ ಪ್ರಶ್ನೆಪತ್ರಿಕೆಯ ಪ್ಯಾಕೆಟ್ ಮೇಲೆ ಇಬ್ಬರು ವಿದ್ಯಾರ್ಥಿಗಳ ಸಹಿ ತಗೊಂಡು ಬೆಲ್ ಬಾರಿಸಿದ ಕೂಡಲೇ ಪ್ಯಾಕೆಟ್ ಬಿಚ್ಚಿ ಪ್ರಶ್ನೆ ಪತ್ರಿಕೆ ಹಂಚಿಯೂ ಆಯ್ತು. ಪ್ರಶ್ನೆ ಪತ್ರಿಕೆ ಓದಲು ಇರುವ ಕಾಲುಗಂಟೆಯ ಅವಧಿಯಲ್ಲಿ ಹೆಸರಿನ ಯಾದಿಯನ್ನು( Nominal Roll) ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿ ಹೋಗಿ ಬುಕ್ ಲೆಟ್ ನಂಬರ್ ಬರೆಸಿ, ಸಹಿ ಮಾಡಿಸಿ ಅವರ ಉತ್ತರಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ ಇತ್ಯಾದಿಗಳನ್ನು ಸರಿಯಾಗಿ ಬರೆದಿದ್ದಾರೋ ಎಂದು ನೋಡಿ ಅದಕ್ಕೂ, ಪ್ರವೇಶ ಪತ್ರಕ್ಕೂ ಸಹಿ ಮಾಡಿ ಬರುವವರೆಗೆ ಕೊಠಡಿ ಮೇಲ್ವಿಚಾರಕಳೆಂಬ ನನಗೆ ಗಡಿಬಿಡಿಯ ಕೆಲಸ. ಬರೆಯುವ ಸೂಚನೆಯ ಬೆಲ್ ಬಾರಿಸಿದಾಗ, ಮಕ್ಕಳು ಬರೆಯಲು ಶುರುವಾದ ಮೇಲೆ ಶುರುವಾಯಿತು ನೋಡಿ ನನ್ನ ನರಕ ಯಾತನೆ.
ಪರೀಕ್ಷೆ ಶುರುವಾಗಿ ಕೇವಲ ಹತ್ತು ನಿಮಿಷ ಆಗಿದೆಯಷ್ಟೇ. ಕೊಠಡಿಯಲ್ಲಿ ಒಂದೆರಡು ಬಾರಿ ಶತಪಥ ಹಾಕಿ ಬಂದಾಗ ಬೇಡವೆಂದರೂ ಕಣ್ಣು ವಾಚ್ ನೋಡುತ್ತದೆ. ಅರೆ, ಇನ್ನೂ ಹತ್ತು ಗಂಟೆಯಷ್ಟೇಯಾ!? ಮನಸ್ಸಲ್ಲಿ ಹುಟ್ಟಿದ ಪ್ರಶ್ನೆಗೆ ಉತ್ತರಿಸುವವರಿಲ್ಲದ ಕಾರಣ ಪುನಃ ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣಿಡುತ್ತಾ ಶತಪಥ ಹಾಕುತ್ತೇನೆ. ಹಲವು ಸಲ ನಡೆದ ಬಳಿಕ ಸ್ವಲ್ಪ ಹೊತ್ತು ಎಲ್ಲಾದರೂ ನಿಂತುಕೊಳ್ಳುವ ಮನಸ್ಸಾಗುತ್ತದೆ. ಪುನಃ ನಡಿಗೆ. ಅಷ್ಟರಲ್ಲಿ ಕಾಲು ಸುಸ್ತಾದಂತೆನಿಸಿ ಒಂದು ಕ್ಷಣ ಕುಳಿತುಕೊಳ್ಳೋಣವೆಂದರೆ ತಪಾಸಣಾಧಿಕಾರಿಯ ಸವಾರಿ ಇತ್ತ ಬರುವುದು ಕಾಣಿಸುತ್ತದೆ. ವಿಧಿಯಿಲ್ಲದೇ ಕುಳಿತುಕೊಳ್ಳುವ ಆಸೆಯನ್ನು ಮನಸ್ಸಲ್ಲೇ ಹುದುಗಿಸಿ ಪ್ರದಕ್ಷಿಣೆ ಪುನರಾರಂಭಿಸುತ್ತೇನೆ. ಆ ಗೋಡೆಯ ಒಂದು ಬದಿಯಿಂದ ನಮ್ಮನ್ನೇ ನೋಡುತ್ತಿರುವ ಸಿ ಸಿ ಕ್ಯಾಮೆರಾ ಇರುವಾಗ ಕುಳಿತುಕೊಳ್ಳಲೂ ಅಂಜಿಕೆ. ಓ, ಈಗ ತುಂಬಾ ಸಮಯ ಕಳೆದಿದೆ, ಗಂಟೆ ಎಷ್ಟಾಯ್ತು ನೋಡುವಾ ಅಂದರೆ ಹಾಳು ಗಡಿಯಾರಕ್ಕೆ ಆಮೆಯ ವೇಗ ಅನಿಸ್ತದೆ.
“ಈ ಸಮಯವೆಂಬುದು ಮಹಾ ಪಕ್ಷಪಾತಿ. ಅಂದು ನಾನು ಪರೀಕ್ಷೆ ಬರೆಯುವಾಗ ಹೇಗೆ ಓಡುತ್ತಿತ್ತು. ಸಮಯವನ್ನು ನಿಲ್ಲಿಸಲು ಸಾಧ್ಯವಾಗುತ್ತಿದ್ದರೆ ಎಂದು ಆಶಿಸುವಷ್ಟು ವೇಗ ಅದಕ್ಕಿತ್ತು. ಈಗ ನಾನು ಬೆಳಗ್ಗೆ ಎದ್ದು ಮನೆಕೆಲಸಗಳನ್ನೆಲ್ಲಾ ಲಗುಬಗೆಯಿಂದ ಮಾಡಿ, ಮಕ್ಕಳನ್ನು ಶಾಲೆಗೆ ಹೊರಡಿಸಿ, ನಾನೂ ಹೊರಡುವಷ್ಟರಲ್ಲಿ ನಿರ್ದಾಕ್ಷಿಣ್ಯವಾಗಿ ನನ್ನನ್ನು ಬಿಟ್ಟು ವೇಗವಾಗಿ ಓಡುವ ಸಮಯ, ಈ ಕೊಠಡಿ ಮೇಲ್ವಿಚಾರಣೆಯ ಕೆಲಸ ಮಾಡುವಾಗ ಮಾತ್ರ ಇಷ್ಟೊಂದು ಉದಾಸೀನದಿಂದ ಮೆಲ್ಲನೆ ಚಲಿಸುತ್ತದೋ?” ಮನಸ್ಸಲ್ಲಿ ಸಮಯವನ್ನು ಬೈದುಕೊಳ್ಳುತ್ತಲೇ ಆಸೆಯಿಂದ ಗಡಿಯಾರ ನೋಡುತ್ತೇನೆ.
,
” ಥೂ, ಈ ದರಿದ್ರದ ಸಮಯದ ಕಾಲು ಮುರಿದಿದೆಯಾ!” ಎಂದು ಮನಸ್ಸು ಕೇಳುತ್ತದೆ. ಯಾಕೆಂದರೆ ಆಗಕ್ಕಿಂತ ಹತ್ತು ಅಥವಾ ಇಪ್ಪತ್ತು ನಿಮಿಷದಷ್ಟು ಮಾತ್ರ ಸಮಯ ಮುಂದೆ ಹೋಗಿರುತ್ತದೆ.
ಅಷ್ಟರಲ್ಲಿ ಯಾರೋ ಒಬ್ಬರು ಪುಣ್ಯಾತ್ಮರು ನಮಗೆ ಐದು ನಿಮಿಷದ ವಿರಾಮ ನೀಡಲು ಬರುತ್ತಾರೆ. ಪರೀಕ್ಷಾ ಕೇಂದ್ರದವರು ವ್ಯವಸ್ಥೆ ಮಾಡಿರುವ ಚಹಾ ಮತ್ತು ಬಿಸ್ಕತ್ತು ತೆಗೆದುಕೊಂಡು ಬಿಸಿ ಚಹಾ ಹೀರುತ್ತಿರಬೇಕಾದರೆ ವಿರಾಮ ನೀಡುವ ಆ ರಿಲೀಫ್ ಡ್ಯೂಟಿಯವರ ಬಿಡುವಿಲ್ಲದ ಅಲೆದಾಟ ನೆನಪಾಗಿ ಸಮಯ ನಷ್ಟಮಾಡುವ ಮನಸ್ಸಾಗದೇ ಆದಷ್ಟು ಬೇಗ ನಮ್ಮ ಕೊಠಡಿಗೆ ಮರಳುತ್ತೇನೆ. ಪುನಃ ಶತಪಥ ಹಾಕುವಿಕೆ ಪ್ರಾರಂಭ. ನನಗಂತೂ ಸುಮ್ಮನೆ ಕೆಲಸವಿಲ್ಲದೇ ಕುಳಿತುಕೊಳ್ಳುವ ಈ ಮೂರು ಗಂಟೆಗಳು ಪಂಜರದೊಳಗಿನ ಪಕ್ಷಿ ನಾನೆಂಬ ಭಾವನೆ ಮೂಡಿಸುತ್ತದೆ.
.
ಸಮಯ ಕಳೆಯಲು ಮಕ್ಕಳ ಹೆಸರಿನ ಯಾದಿಯಲ್ಲಿ ಅವರ ಹೆಸರು, ಅವರ ಹೆತ್ತವರ ಹೆಸರು ಇತ್ಯಾದಿಗಳನ್ನು ಓದುತ್ತೇನೆ. ಎದ್ದು ಪುನಃ ಸುತ್ತು ಹಾಕುತ್ತಾ ಮಕ್ಕಳ ಬರವಣಿಗೆಯನ್ನು ಗಮನಿಸುತ್ತೇನೆ. ಸಮುದ್ರದ ಆಳದಿಂದ ಹೆಕ್ಕಿ ತಂದ ಅಮೂಲ್ಯವಾದ ಸುಂದರ ಮುತ್ತುಗಳನ್ನು ಪೋಣಿಸುತ್ತಿದ್ದಾರೋ ಎಂಬಂತೆ ಅತ್ಯಂತ ಸುಂದರ ಬರವಣಿಗೆಯ ಕೆಲವರು. ಅಕ್ಷರ ಅಷ್ಟೇನೂ ಸುಂದರವಲ್ಲದಿದ್ದರೂ ಅತ್ಯಂತ ಅಚ್ಚುಕಟ್ಟಾಗಿ ಬರೆಯುವ ಇನ್ನು ಕೆಲವರು, ಆಕಾಶವೇ ಕಳಚಿ ಬಿತ್ತೇನೋ ಎಂಬಂತೆ ಒತ್ತಡದಿಂದ ಪರೀಕ್ಷೆ ಬರೆಯುವವರು, ಇದೆಲ್ಲಾ ನನಗೆ ಲೆಕ್ಕಕ್ಕೇ ಇಲ್ಲ ಎಂಬಂತೆ ಲೀಲಾಜಾಲವಾಗಿ ಬರೆಯುತ್ತಲೇ ಇರುವವರು, ಕಾಗದಕ್ಕೆ ಪೆನ್ನು ತಾಗಿತೋ ಇಲ್ಲವೋ ಎಂಬಂತೆ ತೇಲಿಸಿ ತೆಳುವಾಗಿ ಬರೆಯುವವರು, ಒಂದು ಪುಟದಲ್ಲಿ ಬರೆದರೆ ಮುಂದಿನ ಎರಡು ಪುಟಕ್ಕೆ ಅದರ ಅಚ್ಚು ಬೀಳುವಂತೆ ಒತ್ತಿ ಬರೆಯುವವರು, ಯಾವ ಪುಣ್ಯಾತ್ಮ ನನ್ನ ಲಿಪಿಯನ್ನು ಓದುತ್ತಾನೋ ನೋಡುವಾ ಎಂದು ಸವಾಲು ಹಾಕುವಂತೆ ಗೀಚಿ ಬರೆಯುವವರು…ಅಬ್ಬಬ್ಬಾ ಬರಹದಲ್ಲೂ ಇಷ್ಟೊಂದು ವೆರೈಟಿಯೇ! ಎಂದು ಆಶ್ಚರ್ಯಪಡುತ್ತಾ ಮೆಲ್ಲನೆ ಕದ್ದು ವಾಚು ನೋಡಿದರೆ ಅದರ ನಿಧಾನ ಗತಿಯಲ್ಲಿ ಏನೇನೂ ವ್ಯತ್ಯಾಸವಿಲ್ಲ. ಸಮಯವನ್ನು ಕೊಲ್ಲಲು(ನಿಜಕ್ಕೂ ಸಮಯದ ಕತ್ತು ಹಿಚುಕುವ ಮನಸ್ಸಾಗ್ತದೆ) ಕೊಠಡಿಯ ಹೊರಗಿನ ದೃಶ್ಯಗಳನ್ನು ಕಿಟಕಿಯ ಮೂಲಕ ಸುಮ್ಮನೆ ವೀಕ್ಷಿಸುತ್ತೇನೆ. ಆ ಕಿಟಕಿಯೊಳಗಿನ ದೃಶ್ಯಗಳು ಬಾಯಿಪಾಠವಾಗುವಷ್ಟು ಬಾರಿ ನೋಡಿದ ಮೇಲೆ ಪುನಃ ಆಚೀಚೆ ನಡೆಯುವುದೊಂದೇ ದಾರಿ ಎನಿಸುತ್ತದೆ.
ಒಂದು ದಿನ ಕೊಠಡಿಯೊಳಗೆ ಕಿಟಕಿಯ ಬಳಿ ಒಂದು “ಅಜ್ಜನ ಮೀಸೆ” (ಒಂದು ಜಾತಿಯ ಗಿಡದ ಬೀಜ, ಬೀಜವು ಗಾಳಿಯಲ್ಲಿ ಹಾರಿ ಹೋಗಲು ಅದರಲ್ಲಿ ಹತ್ತಿಯಂತೆ ಬೆಳ್ಳಗಿನ ಮೀಸೆಯಿರುತ್ತದೆ) ಬಿದ್ದಿತ್ತು. ಮೆಲ್ಲನೆ ಅದನ್ನೆತ್ತಿಕೊಂಡೆ. ಬಾಲ್ಯದಲ್ಲಿ ಮಾಡುತ್ತಿದ್ದಂತೆ ಅದನ್ನು ಅಂಗೈಯಲ್ಲಿಟ್ಟು ಕಿಟಕಿಯಿಂದ ಹೊರಗೆ “ಫೂ” ಎಂದು ಊದುತ್ತಿರಬೇಕಾದರೆ ಯಾವುದೋ ಉನ್ನತ ಅಧಿಕಾರಿಯೊಬ್ಬರು ಬಾಗಿಲ ಬಳಿಯಲ್ಲಿ. ಒಂದು ಕ್ಷಣ ಬೆಚ್ಚಿದೆ. ನಗು ಎಂಬುದು ಬಹಳ ಅಮೂಲ್ಯ ಎಂದು ತಿಳಿದುಕೊಂಡಂತಿರುವ ಗಂಭೀರ ವದನದ ಅವರು ಏನೂ ಹೇಳದೇ ಮುಂದೆ ಹೋದಾಗ ನನಗೆ ನೆಮ್ಮದಿ. ಮತ್ತೊಂದೆರಡು ಸುತ್ತು ಹೊಡೆದು ಪುನಃ ಕಿಟಕಿಯಿಂದ ಹೊರಗೆ ನೋಡಿದೆ. ಆ ಶಾಲೆಯೆದುರಿನ ಬಾದಾಮಿ ಗಿಡದಲ್ಲಿ ಒಂದು ಓತಿಕ್ಯಾತ ಕುಳಿತಿತ್ತು. ಕತ್ತು ಉದ್ದ ಮಾಡಿ ಆಗಾಗ ಏನು ಎಂದು ಕೇಳುವಂತೆ ಮಾಡುವಾಗ, ಇದೀಗ ಹಾರುತ್ತದೆಯೋ ಎಂದುಕೊಂಡೆ. ಆದರೆ ಅದು ಹಾರುವ ಓತಿಯಾಗಿರದೇ ಸಾಮಾನ್ಯ ಓತಿಯಾಗಿತ್ತು. ಇನ್ನೊಂದು ರೌಂಡ್ ಹೊಡೆದು ಬಂದು ನೋಡುವಾಗ ಓತಿ ಅಲ್ಲಿರಲಿಲ್ಲ. ಇನ್ನು ಸಮಯ ಕಳೆಯಲು ಏನು ಹುಡುಕಲಿ? ಎಂದು ಯೋಚಿಸುತ್ತಿರಬೇಕಾದರೆ ಪರೀಕ್ಷೆ ಮುಗಿಯುವ ಸಮಯ ಹತ್ತಿರ ಬರುತ್ತಿರುವ ಅರಿವಾಯ್ತು. ಕೊನೆಯ ಬಾರಿಯ ಸಹಿ ತೆಗೆದುಕೊಂಡು, ಪರೀಕ್ಷೆ ಮುಗಿಯುವ ಬೆಲ್ ಆಗುವದನ್ನೇ ಕಾಯುತ್ತಾ ಕುಳಿತೆ. ನನಗೆ ನಿಮಿಷಗಳು ಗಂಟೆಗಳಂತೆ ಅನಿಸುತ್ತಿದ್ದರೆ ಕೆಲವು ವಿದ್ಯಾರ್ಥಿಗಳು ಈ ಸಮಯವೇಕೆ ಇಷ್ಟು ಬೇಗ ಓಡುತ್ತದೆ ಎಂಬಂತೆ ಎದ್ದು ಬಿದ್ದು ಬರೆಯುತ್ತಾ ಬರವಣಿಗೆ ಪೂರ್ತಿ ಮಾಡಲು ಹೆಣಗುತ್ತಿದ್ದರು.
ವಿದ್ಯಾರ್ಥಿಗಳಲ್ಲಿ ಒಂದು ರೀತಿ, ನನ್ನಂತಹ ಕೊಠಡಿ ಮೇಲ್ವಿಚಾರಕರಲ್ಲಿ ಇನ್ನೊಂದು ರೀತಿ ವ್ಯವಹರಿಸುವ ಸಮಯದ ಬಗ್ಗೆ ನನಗೆ ಅಸಹನೆ ಅನಿಸಿತು. ಅಂತೂ ಇಂತೂ ಬೆಲ್ ಆದಾಗ ದೊಡ್ಡದೊಂದು ಚಕ್ರವ್ಯೂಹದಿಂದೆಂಬಂತೆ ಖುಷಿಯಿಂದ ಹೊರಬಂದೆ.
– ಜೆಸ್ಸಿ ಪಿ.ವಿ.
,
ಅನುಭವಗಳ ಅಪರೂಪದ ಅಕ್ಷರ ರೂಪ.
ಅಭಿನಂದನೆಗಳು ಮೇಡಮ್!
ಚೆನ್ನಾಗಿದೆ. ಓದುವಾಗ ಲೇಖಕರು ಅಧ್ಯಾಪಕರು ಎಂದು ತೋರುತ್ತದೆ, ತಮ್ಮ ಅನುಭವವನ್ನು ಚೆನ್ನಾಗಿ ಚಿತ್ರಿಸಿದ್ದಾರೆ
ಘನಗಾಂಭೀರ್ಯದ ಪರೀಕ್ಷಾ ಕೊಠಡಿಯ ಆಸುಪಾಸಿನಲ್ಲಿ ‘ಅಜ್ಜನ ಮೀಸೆ’ ಬೀಜವನ್ನು ಫೂ ಎಂದು ಊದುವ ನಿಮ್ಮನ್ನು ಕಲ್ಪಿಸಿ ಮನಸಾರೆ ನಕ್ಕುಬಿಟ್ಟೆ! .ಬರಹ ಸೊಗಸಾಗಿದೆ.