ಗಂಗೋತ್ರಿಯ ಕಾಫಿ
ಮೈಸೂರಿನ ಮಾನಸ ಗಂಗೋತ್ರಿಗೆ ಕಾರ್ಯ ನಿಮಿತ್ತ ಹೋದಾಗೆಲ್ಲ ನಮ್ಮ ಆಪದ್ಭಾಂದವ ಎಂದರೆ ಕ್ಯಾಂಪಸ್ ನಲ್ಲಿರುವ ರೌಂಡ್ ಕ್ಯಾಂಟೀನ್. ಇಪ್ಪತ್ತು ವರ್ಷಗಳ ನಂತರ ಭೇಟಿ ಕೊಟ್ಟಾಗಲೂ ಅದೇ ಬೆರಗು, ಉಲ್ಲಾಸ, ಯೌವನದ ಸಂಭ್ರಮದೊಂದಿಗೆ ಈ ಕ್ಯಾಂಟೀನ್ ತಂಪು ಸುರಿಯುತ್ತಿರುತ್ತಿದೆ. ಇಲ್ಲಿ ಸಿಗುವ ಅದ್ಭುತವಾದ ಕಾಫ಼ಿ ನನಗೆ ಅಚ್ಚುಮೆಚ್ಚು. ಕಾಫ಼ಿಯೆಂದರೆ ಮತ್ತೇನಲ್ಲ ಕಾಲು ಭಾಗ ಡಿಕಾಕ್ಷನ್ ಅಥವಾ ಪೌಡರ್ ಗೆ ಅದಾಗಲೆ ಸಕ್ಕರೆ ಬೆರೆಸಿರುವ , ಗ್ಯಾಸ್ ಒಲೆಯಲ್ಲಿ ಮಂದ ಉರಿಯಲ್ಲಿ ಬಿಸಿಯಾಗಿಯೇ ಇರುವ ದಪ್ಪ ಹಾಲನ್ನು ಸುರುವುವುದು. ಆದರೂ ಅದಕ್ಕೆ ಎಷ್ಟು ರುಚಿಯೆಂದರೆ ಮನೆಯಲ್ಲಿ ಅದೇ ರುಚಿ ತರಲು ಎಷ್ಟು ಪ್ರಯತ್ನಿಸಿದರೂ ಸಿಗಲೊಲ್ಲದು.
ಬಹುಶ: ಮಂಗಳೂರಿನವಳಾದ ನನಗೆ ಮೈಸೂರಿನ ತಂಪು ಹವೆಯಲ್ಲಿ ಹೀಗನ್ನಿಸುತ್ತೇನೋ. ಇದೇ ರೀತಿ ನನ್ನ ಸ್ಮೃತಿಯಲ್ಲಿರುವ ಇನ್ನೊಂದು ರುಚಿ ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶೀ ಭಾಷಾ ಅಧ್ಯಯನ ಕೇಂದ್ರದ ಹಾಸ್ಟೆಲ್ ನಲ್ಲಿ ಸಿಗುವ ಪೆಪ್ಪರ್ ರಸಂ. ಧಾರಾಳವಾಗಿ ಸಿಗುವ ಅನ್ನ, ಪರಿಪ್ಪು ಜತೆಗೆ ಏನಿಲ್ಲವೆಂದರೂ ಈ ಸಾರು ಸಾಕು. ಎಲ್ಲಾ ಟೇಬಲ್ ಗಳ ಮೇಲೂ ಈ ಸಾರಿನ ಪುಟ್ಟ ಬೌಲ್ ಗಳು. ತಾಯಿ ಕೊಡುವ ಕಂಫ಼ರ್ಟ್ ನಂತಹ ರುಚಿ, ಅದರಲ್ಲಿನ ಕಂದು ಬಣ್ಣಕ್ಕೆ ತಿರುಗಿದ ಒಣ ಮೆಣಸು, ಕರಿ ಬೇವಿನ ಎಲೆಗಳು.. ಈಗಲೂ ನನಗೆ ಅಲ್ಲಿನ ಅದ್ಭುತ ಅಕಡೆಮಿಕ್ ವಾತಾವರಣದೊಂದಿಗೆ ನೆನಪಾಗುತ್ತಿರುತ್ತದೆ.
ಇನ್ನು ನಮ್ಮ ಮಂಗಳೂರಿನಲ್ಲಿ ಕಲ್ಪನಾ ಸ್ವೀಟ್ಸ್ ನಲ್ಲಿ ಸಿಗುವ ಗುಂಡನೆಯ, ಗರಿ ಗರಿಯಾದ , ಹದವಾಗಿ ಬೆಂದ ಹೂರಣದ ಆಲೂ ಗಡ್ಡೆ ಸಮೋಸ, ಕೋಮಲ್ ಸ್ವೀಟ್ಸ್ ನ ಗೋಧಿ ಹಲ್ವ, ರಾಮ್ ಭವನದ ಗ್ರೇಪ್ ಮೈಸೂರ್ ಪಾಕ್, ಠಾಗೋರ್ ಪಾರ್ಕ್ ಬಳಿಯ ಕ್ಯಾರೆಟ್, ಮಾವಿನ ಕಾಯಿ ತುರಿ, ನೆಲಗಡಲೆ , ಟೊಮೆಟೊ ಸೇರಿಸಿದ ಚುರುಮುರಿ ..ಹೀಗೆ ರುಚಿಯ ಜಗತ್ತು ಇದು. ರುಚಿಯಾಗಿ, ಶುಚಿಯಾಗಿ ತಿಂದು ಸಂಭ್ರಮಿಸುವುದು ಮನುಷ್ಯನ ಜೀವ ಸಹಜ ಸೆಳೆತ ಇರಬೇಕು.
-ಜಯಶ್ರೀ ಬಿ. ಕದ್ರಿ
ಮಾನಸ ಗಂಗೋತ್ರಿಯ ಕಾಫಿಯೊಂದಿಗೆ ಪೆಪ್ಪರ್ ರಸಂ ಮತ್ತಿನ್ನೇನೆಲ್ಲ ಮಾತಲ್ಲೇ ಉಣಬಡಿಸಿದಿರಿ, ಅಕ್ಕಾ! ಈ ಚಳಿಗೆ ಈ ಸಂಜೆಹೊತ್ತು ಇಷ್ಟೇ ಇಷ್ಟು ‘ವಿಂಡೋ ಈಟಿಂಗು’ ನನ್ನ ಹೊಟ್ಟೆ ಮಾತ್ರ ಕೇಳುತ್ತಾ ಇಲ್ಲವಲ್ಲ?