ಗಾಯಕಿ, ಸಾಧಕಿ ಎಸ್.ಜಾನಕಿ, ನಿಮಗೆ ನಮನ
ಮೂರು ದಶಕಗಳ ಹಿಂದೆ ಸಣ್ಣ ಊರುಗಳಲ್ಲಿ ಇರುತ್ತಿದ್ದ ಹೆಚ್ಚಿನ ಮನೆಗಳಲ್ಲಿ ವಿದ್ಯುತ್ ಇರಲಿಲ್ಲ. ಇನ್ನು ದೂರದರ್ಶನವು ಕಲ್ಪನೆಗೂ ನಿಲುಕದ ಬಲುದೂರದ ವಸ್ತು. ಹೀಗಿದ್ದಾಗ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದ ವಾರ್ತೆಗಳು ಮತ್ತು ಇತರ ಕಾರ್ಯಕ್ರಮಗಳು ಸುದ್ದಿ ಮತ್ತು ಮನಜಂಜನೆಯ ಜೊತೆಗೆ ಸಮಯದ ಮಾಪನವಾಗಿಯೂ ಕಾರ್ಯನಿರ್ವಹಿಸುತ್ತಿದ್ದುವು. ‘ವಾರ್ತೆಯ ಸಮಯ ಆಯಿತು…ಸ್ನಾನಕ್ಕೆ ಹೋಗಿ ‘, ‘ ಸಿಲೋನ್ ಚಿತ್ರಗೀತೆ ಸುರುವಾಗುವ ಮೊದಲು ಎಲ್ಲರ ಊಟ ಆಗಬೇಕು’ ಇತ್ಯಾದಿ ನಿಯಮಾವಳಿಗಳು ಮನೆಗಳಲ್ಲಿ ಜಾರಿಯಲ್ಲಿದ್ದುವು.
ಚಿತ್ರಗೀತೆಯ ಪ್ರಸಾರದ ಮೊದಲು, ಈ ಗೀತೆಯನ್ನು ಹಾಡಿದವರು ‘ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ‘ ಎಂಬ ನಿರೂಪಣೆಯನ್ನೇ ಸಾಮಾನ್ಯವಾಗಿ ಕೇಳುತ್ತಿದ್ದ ಕಾರಣ, ಭಾರತದಲ್ಲಿ ಹಾಡುಗಾರರು ಇವರಿಬ್ಬರೇ ಎಂದು ಗಾಢವಾಗಿ ನಂಬಿದ್ದೆವು, ಅಷ್ಟು ಪುಟ್ಟ ‘ಫಿಲಿಪ್ಸ್’ ರೇಡಿಯೋದ ಒಳಗೆ ಇಬ್ಬರು ಕುಳಿತು ಹಾಡಲು ಸಾಧ್ಯವೇ ಎಂದು ಚಕಿತರಾಗಿ ನಮಗಿಂತ ತುಸು ‘ಜ್ಞಾನಿ’ಗಳೆನಿಸಿಕೊಂಡವರಲ್ಲಿ ಕೇಳಿದ್ದಾಗ ಆ ‘ಜಾಣ’ರು ‘ಆಕಾಶವಾಣಿ ಕೇಂದ್ರದಲ್ಲಿ ಟವರ್ ಇರುತ್ತದೆ.. ಹಾಡುವವರು ಅದರ ತುದಿಯಲ್ಲಿ ಕುಳಿತು ಹಾಡುತ್ತಾರೆ’ ಎಂದು ನಮ್ಮ ಸಂಶಯವನ್ನು ನಿವಾರಿಸಿದ್ದರು!!
ಪ್ರಾಥಮಿಕ ಶಾಲಾದಿನಗಳಲ್ಲಿ , ಸಿಲೋನ್ ಆಕಾಶವಾಣಿ ಮತ್ತು ವಿವಿಧಭಾರತಿ ತರಂಗಾಂತರಗಳಲ್ಲಿ ಪ್ರಸಾರವಾಗುತ್ತಿದ್ದ ‘ಗಗನವು ಎಲ್ಲೋ ಭೂಮಿಯು ಎಲ್ಲೋ’ ‘ಭಾರತ ಭೂಶಿರ ಮಂದಿರ ಸುಂದರಿ’ ‘ಬಾನಲ್ಲು ನೀನೆ….’ ಇತ್ಯಾದಿ ಸುಮಧುರ ಹಾಡುಗಳನ್ನು ಕೇಳುತ್ತಾ, ಬರೆದಿಟ್ಟುಕೊಂಡು, ಗಾಯಕಿಯ ದನಿಯನ್ನು ನಮ್ಮಿಂದಾದಷ್ಟು ಮಟ್ಟಿಗೆ ಅನುಕರಣೆ ಮಾಡಿ ಶಾಲೆಯ ಸ್ಪರ್ಧೆಗಳಲ್ಲಿ ಹಾಡಿ ತೃತೀಯ ಬಹುಮಾನವೋ ಸಮಾಧಾನಕರ ಬಹುಮಾನವೋ ಗಳಿಸಿದ್ದಕ್ಕೆ , ಹಿಗ್ಗಿ ಹೀರೆಕಾಯಿಯಾಗಿದ್ದು ಇನ್ನೂ ನೆನಪಿದೆ!. ಹೀಗೆ ಎಸ್.ಜಾನಕಿಯವರು ತಮಗರಿವಿಲ್ಲದೆಯೇ ಸಹಸ್ರಾರು ಶಾಲಾ ವಿದ್ಯಾರ್ಥಿಗಳ ಮಾನಸ ಗುರುವಾಗಿದ್ದರು.
ಇಂಥಹ ಸ್ವರಸಾಮ್ರಾಜ್ಞಿ ಗಾಯಕಿ, ಸಾಧಕಿ, ಎಸ್.ಜಾನಕಿ ಅವರು ತಮ್ಮ ಸಾರ್ವಜನಿಕ ಗಾಯನ ಕಾರ್ಯಕ್ರಮಗಳಿಗೆ ವಿದಾಯ ಹೇಳಿದ ದಿನವಾದ ನಿನ್ನೆ (28/10/2017), ರಸಸಂಜೆಯಲ್ಲಿ ಪಾಲ್ಗೊಳ್ಳುವ ಸುಯೋಗ ನಮ್ಮದಾಯಿತು. ಅನೇಕ ಗಣ್ಯ ಅತಿಥಿಗಳು, ಚಲನಚಿತ್ರ ರಂಗದ ನಟ/ನಟಿಯರು, ಸಂಗೀತ ನಿರ್ದೇಶಕರು, ಎಸ್.ಜಾನಕಿಯವರ ಸಾವಿರಾರು ಅಭಿಮಾನಿಗಳು ಸೇರಿದ್ದ ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಅದೊಂದು ಭಾವುಕ ಕಾರ್ಯಕ್ರಮ.
ತನ್ನ 60 ವರ್ಷಗಳ ಗಾಯನದ ಪಯಣದಲ್ಲಿ 17 ಭಾಷೆಗಳಲ್ಲಿ 48000 ಕ್ಕೂ ಮಿಕ್ಕಿ ಗೀತೆಗಳನ್ನು ಹಾಡಿದ ಎಸ್. ಜಾನಕಿಯವರ ಕಂಠಸಿರಿಯಿಂದ ‘ ಗಜವದನ ನೀ ಗುಣಸಾಗರ… ‘, ‘ಪೂಜಿಸಲೆಂದೇ ಹೂಗಳ ತಂದೆ..’, ‘ಇಂದು ಎನಗೆ ಗೋವಿಂದ..’ ‘ನೀ ನಡೆವ ಹಾದಿಯಲ್ಲಿ…’, ‘ಮಗುವೆ ನಿನ್ನ ಹೂನಗೆ..’ ‘ ಬಾನಲ್ಲು ನೀನೆ ಭುವಿಯಲ್ಲು ನೀನೆ…, ‘ ನಗುನಗುತಾ ನೀ ಬರುವೆ..’ ಹೀಗೆ ಹಲವಾರು ಕನ್ನಡದ ಹಾಡುಗಳ ಜೊತೆಗೆ, ತಮಿಳು, ತೆಲುಗು, ಹಿಂದಿ ಭಾಷೆಯ ಕೆಲವು ಹಾಡುಗಳೂ ಮೂಡಿಬಂದುವು. ಕಿಕ್ಕಿರಿದ ತುಂಬಿದ್ದ ಬಯಲುಮಂದಿರವು ಎಸ್.ಜಾನಕಿಯವರ ಬಗ್ಗೆ ಜನರಿಗಿರುವ ಅಭಿಮಾನಕ್ಕೆ ಸಾಕ್ಷಿಯಾಯಿತು.
ಮೈಸೂರಿನಲ್ಲಿರುವ ಎಸ್.ಜಾನಕಿ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಎಸ್. ಜಾನಕಿಯವರನ್ನು ರಾಜವಂಶಸ್ಥೆ ಶ್ರೀಮತಿ ಪ್ರಮೋದಾದೇವಿ ಮತ್ತು ಇತರ ಗಣ್ಯರು ಸನ್ಮಾನಿಸಿದರು .
ತಮ್ಮ ಸರಳತೆ, ಮಾತೃವಾತ್ಸಲ್ಯದ ಮಾತುಗಳು, ಪರಿಚಿತರೊಂದಿಗೆ ಅವರು ತೋರಿಸುತ್ತಿದ್ದ ಪ್ರೀತಿ ಹಾಗೂ ಹಾಸ್ಯಪ್ರವೃತ್ತಿ ಎಲ್ಲವೂ ಅನುಕರಣೀಯ. ಎಸ್.ಜಾನಕಿಯವರಿಗೆ ಅವರೇ ಸಾಟಿ. ಜಾನಕಿ ಅಮ್ಮ ಅವರಿಗೆ ಹೃತ್ಪೂರ್ವಕ ಪ್ರಣಾಮಗಳು.
-ಹೇಮಮಾಲಾ.ಬಿ, ಮೈಸೂರು
ಉತ್ತಮ ನಿರೂಪಣೆ, ಅವರ ಸಂಗೀತ ಕಾರ್ಯಕ್ರಮವನ್ನು ಇಲ್ಲೇ ಕುಳಿತು ಆಸ್ವಾದಿಸಿದಂತಾಯಿತು 🙂