ಕಾಫಿ ಎಂಬ ಅನುಭೂತಿ
ಕಾಫಿ ಪ್ರಿಯರ ಮಧ್ಯೆ ಹುಟ್ಟಿ ಬೆಳೆದು ಕಾಫಿ ಪ್ರಿಯರ ಮಧ್ಯೆಯೇ ವಾಸಿಸುತ್ತಿರುವ ನನಗೆ ಒಳ್ಳೆ ಕಾಫಿಯ ಪರಿಮಳ ಬಹಳ ಪ್ರೀತಿಯದು. ಇಲ್ಲಿ “ಒಳ್ಳೆ” ಎಂಬ ಪದಕ್ಕೆ ನನ್ನದೇ ಆದ, ಪದಗಳಲ್ಲಿ ವಿವರಿಸಲಾಗದ ಅರ್ಥ, ವ್ಯಾಖ್ಯಾನಗಳಿವೆ. ಎಲ್ಲರಿಗೂ ಬೆಳಗು ಬೆಳಗೆನಿಸಬೇಕಾದರೆ ಕಾಫಿ ಹೀರಬೇಕಾದಲ್ಲಿ ನನಗೆ ಕಾಫಿ ಅಷ್ಟು ಅಗತ್ಯ ಏಂದು ಎಂದೂ ಅನಿಸಿರಲಿಲ್ಲ. ಆದರೂ ಅದರ ಘಮ ಹೊಡೆದರೆ ರುಚಿ ಊಹಿಸುವ ಮಟ್ಟಿಗೆ ಪರಿಣಿತಿ(?)ಯನ್ನು ಹೊಂದಿದ್ದೇನೆ.
ನನ್ನ ಮತ್ತು ಕಾಫಿ ಚಹಾಗಳ ನಂಟು ಒಂಥರಾ ವಿಚಿತ್ರ. ಮೊದಲೆಲ್ಲಾ ಪರೀಕ್ಷೆಗೆ ಓದುವಾಗ ನಿದ್ದೆ ಬರದಿರಲು ಚಹಾ, ಓದುವ ಪುಸ್ತಕ ಅರ್ಥವಾಗದಿದ್ದಲ್ಲಿ ಕಾಫಿ, ಗಂಟಲು ಸರಿಯಿಲ್ಲದಿದ್ದರೆ ಅಮ್ಮ ಒತ್ತಾಯದಿಂದ ಮಾಡಿ ಕೊಡುತ್ತಿದ್ದ ಸ್ಟ್ರಾಂಗ್ ಕಾಫಿ, ಹೊಟ್ಟೆ ಸರಿಯಿಲ್ಲದಿದ್ದರೆ ಕಣ್ಣ ಚಹಾ(ಹಾಲು, ಸಕ್ಕರೆ ಹಾಕದ ಚಹಾ) ಹೀಗೆ. ಆಪತ್ಕಾಲದಲ್ಲಿ ಮಾತ್ರ ನಾನು ಸಹಾಯ ಪಡಕೊಳ್ಳುವ ಅಪ್ತಮಿತ್ರರು ಕಾಫಿ, ಟೀಗಳು.
ನನ್ನ ನೆನಪಿನ ಶಕ್ತಿಯ ವ್ಯಾಪ್ತಿಯ ಹಿಂದೆ, ನಾನು ಸಣ್ಣ ಮಗುವಾಗಿದ್ದಾಗ ನಡುರಾತ್ರಿ ಎದ್ದು ಕಾಫಿಗಾಗಿ ಹಠಹೂಡುತ್ತಿದ್ದೆನೆಂದು ಅಮ್ಮನ ಬಾಯಲ್ಲಿ ಕೇಳಿ ಗೊತ್ತು. ನೆಂಟರ ಮನೆಗಳಿಗೆ ಹೋಗಿ ತಂಗಿದ್ದಾಗ, ಅಲ್ಲೂ ವರಾತ ಮಾಡಿದುದು ಸಹಿಸಲಾರದೆ ಮುಂದೆ ನನ್ನ ನಡುರಾತ್ರಿಯ ಕಾಫಿ ಅಭ್ಯಾಸವನ್ನು ತಪ್ಪಿಸಲು ದಿನಕ್ಕೊಂದು ತರಹದಲ್ಲಿ ಕೆಟ್ಟ ರುಚಿಯ ಕಾಫಿ ಮಾಡಿ ಕೊಡುತ್ತಿದ್ದರೆಂದು ನನಗೆ ಆಮೇಲೆ ತಿಳಿಯಿತು. ಸಕ್ಕರೆ ಹಾಕದ, ಅತಿ ಹೆಚ್ಚು ಸಕ್ಕರೆ ಹಾಕಿದ, ಹಾಲು ಹಾಕದ, ಡಿಕಾಕ್ಷನ್ ಮಾತ್ರ ಹಾಕಿದ, ಒಂದೇ ಒಂದು ತೊಟ್ಟು ಡಿಕಾಕ್ಷನ್ ಬೆರೆಸಿದ ಇತ್ಯಾದಿ ಇತ್ಯಾದಿ ವಿಧದ ಕಾಫಿಗಳನ್ನು ನನ್ನ ಮೇಲೆ ಪ್ರಯೋಗ ಮಾಡಿ ಈ ಅಭ್ಯಾಸಕ್ಕೆ ಪೂರ್ಣವಿರಾಮ ಹಾಕುವಲ್ಲಿ ನನ್ನ ಹೆತ್ತವರು ಯಶಸ್ವಿಯಾಗಿರುವುದು ಇತಿಹಾಸ. ಅದರಿಂದಲೋ ಏನೋ, ಕಾಫಿಯ ಪರಿಮಳ ಇಷ್ಟಪಡುವ ನಾನು ಕುಡಿಯಲು ಕೊಡುವುದಾದರೆ ಹೆಚ್ಚಾಗಿ ನಯವಾಗಿ ನಿರಾಕರಿಸುತ್ತೇನೆ.
ನಮ್ಮೂರಿನಿಂದ ಬೆಂಗಳೂರಿನ ಮನೆಗೆ ಬರುವಾಗ ನಿದ್ದೆ ಪೀಡಿತ, ಭಾರವಾದ ತಲೆಯನ್ನು ಹಗುರಗೊಳಿಸಲು ಮಧ್ಯ ಸಕಲೇಶಪುರದಲ್ಲೊಂದೆರಡು ಗುಟುಕು ಫ಼ಿಲ್ಟರ್ ಕಾಫಿ ಹೀರಿದಾಗ ಜೀವ ಬಂದ ಅನುಭವವಾಗಿದ್ದೂ ಉಂಟು. ಇನ್ನು ಕಾಫಿ ಡೇ ಸ್ಟಾರ್ ಬಕ್ಸ್ ಗಳ ಕಾಫಿಗಳು ಅಮೋಘ ರುಚಿ ಹೊಂದಿರದಿದ್ದರೂ ಅಲ್ಲೊಂದಷ್ಟು ಹೊತ್ತು ಕೂತು ಮಾತಾಡಿ ಪುನಃ ಉತ್ಸಾಹ ತುಂಬಿಸಿಕೊಂಡು ಯಾತ್ರೆ ಮುಂದುವರೆಸುವುದು ಒಂದು ಥರಹ ಖುಷಿ. ಕಾಫಿ ಡೇಯವರನ್ನುವಂತೆ “ಎ ಲಾಟ್ ಕ್ಯಾನ್ ಹಾಪನ್ ಓವರ್ ಎ ಕಾಫಿ!”
ಹೀಗೆ ಮೊನ್ನೆ ಎರಕಾಡ್ ಪ್ರವಾಸ ಹೋಗಿದ್ದಾಗ ನಾವು ತಂಗಿದ್ದ ಜಾಗದಲ್ಲಿ “ಬೀನ್ಸ್ ಆಂಡ್ ಬ್ರೂಸ್” ಅನ್ನುವ ಬೋರ್ಡ್ ಕಂಡೆವು. ಹತ್ತಿರ ಹೋದಂತೆ ಕಾಫಿಯ ಕಂಪು ಮೂಗಿಗಡರಿತು. ಕಿರಿ ಕಿರಿ ಮಾಡುತ್ತಿದ್ದ ಗಂಟಲಿಗೆ ಬಿಸಿ ಕಾಫಿ ಎರೆದು ಪಾಠ ಕಲಿಸಬೇಕೆಂದು ಒಳಹೊಕ್ಕೆ. ಕಾಫಿ ಶಾಪ್ ಗಳ ಕಂಪು ಒಂದು ಸುಂದರ ಅನುಭೂತಿ. ಒಂದು ಕ್ಷಣ ಮನಸ್ಪೂರ್ತಿಯಾಗಿ ಅಲ್ಲಿನ ಪರಿಮಳವನ್ನು ಹೀರುತ್ತೇನೆ. ಮೆನು ಕೈಗೆತ್ತಿ ನೋಡಿ ಯಾವುದನ್ನು ಹೇಳಲಿ ಎಂದು ತಿಳಿಯದೆ ಕಂಡಾಪಟ್ಟೆ ಕನ್ಫ್ಯೂಷನ್ ಗೊಳಗಾಗಿ ನಿಂತೆ.
ಯಾಕೋ ಕಾಫಿ ಮಾಡುತ್ತಿದ್ದ ವ್ಯಕ್ತಿಯನ್ನು ಮಾತಿಗೆಳೆಯಬೇಕೆನಿಸಿತು. “ವಿಚ್ ಇಸ್ ಯುವರ್ ಬೆಸ್ಟ್ ಕಾಫಿ?” ಎಂದು ಪ್ರಶ್ನಿಸಿದೆ. ಆತನ ಬಳಿ ಯಾರೂ ಈ ರೀತಿ ಕೇಳಿರಲಿಲ್ಲವೋ ಎನೋ ಎಂಬಂತೆ ಒಂದು ಬಾರಿ ನನ್ನನ್ನು ನೋಡಿದರು. ಮತ್ತೆ “ಕಾಫಿ ಪೀನಾ ಹೆ ತೊ ಫ಼ಿಲ್ಟರ್ ಕಾಫಿ ಪೀನಾ ಹೆ.. ಹಮಾರ ಸೌಥ್ ಇಂಡಿಯನ್ ಕಾಫಿ” ಎಂದು ಮುಗುಳು ನಕ್ಕರು. ಮೆನುವಿನಲ್ಲಿ “ಮೀಟರ್ ಕಾಪಿ” ಎಂದು ಬರೆದಿದ್ದ ಫ಼ಿಲ್ಟರ್ ಕಾಫಿಯನ್ನು ಹೇಳಿ ಬಂದು ಕೂತಿದ್ದಾಯಿತು.
ಆತ ಸ್ವಲ್ಪ ಹೊತ್ತಿನಲ್ಲಿ ಸ್ಟೀಲ್ ಲೋಟದಲ್ಲಿ ನೊರೆ ತುಂಬಿದ ಹದವಾದ ಕಂದು ಬಣ್ಣದ ಮೀಟರ್ ಕಾಪಿಯನ್ನು ತಂದಿಟ್ಟರು. ಬೆರೆಸಿಕೊಳ್ಳಲು ಕೊಟ್ಟ ಎರಡು ಪುಟ್ಟ ಪ್ಯಾಕ್ ಸಕ್ಕರೆಯನ್ನೂ ಬೆರೆಸಿ ಹೀರಿದಾಗ ಒಂದು ಅದ್ಭುತ ರುಚಿ ಬಂತು ನೋಡಿ! ಯಾವತ್ತೂ ಒಂದು ಲೋಟ ಪೂರ್ತಿ ಕಾಫಿ ಕುಡಿಯಲು ಸಾಧ್ಯವಾಗದ ನಾನು ಅಂದು ಅದರ ಕಡೇ ಹನಿಯವರೆಗೂ ಆಸ್ವಾದಿಸಿದೆ.
ಫ಼ಿಲ್ಟರ್ ಕಾಫಿ ಜನಪ್ರಿಯವಾಗಿರುವ ಒಂದಷ್ಟು ಕಡೆ ಕಾಫಿ ರುಚಿ ನೋಡಿದ್ದೆ, ಅಲ್ಲೆಲ್ಲಾ ಯಾವ ವ್ಯತ್ಯಾಸವೂ ಅನಿಸಿರಲಿಲ್ಲ. ಈತನ ಬಳಿ ಅದು ಹೇಗೆ ಕಾಫಿ ಮಾಡುತ್ತೀರೆಂದು ಕೇಳಲೇ ಬೇಕೆಂದು ನಿಶ್ಚಯಿಸಿ ಬಿಲ್ಲು ಕೊಡುವಾಗ, “ನಾನು ಈವರೆಗೆ ಕುಡಿದುದರಲ್ಲಿ ಅತ್ಯಂತ ಉತ್ಕೃಷ್ಟವಾದ ಕಾಫಿ ಇದಾಗಿತ್ತು, ಹೇಗೆ ಮಾಡಿದಿರಿ ಹೇಳುವಿರಾ?” ಹಿಂದೆ ಒಂದು ಕಡೆ ರೆಸಿಪಿ ಕೇಳಿ ಮುಖಭಂಗ ಮಾಡಿಸಿಕೊಂಡಿದ್ದ ನಾನು ಅಳುಕುತ್ತಲೇ ಕೇಳಿದೆ.
ಈತ ರೆಸಾರ್ಟ್ ಒಳಗಿನ ಕಾಫಿ ಅಂಗಡಿಯವನಾದುದರಿಂದ ಗ್ರಾಹಕರು ಕಮ್ಮಿಯಾಗಬಹುದೆಂಬ ಭೀತಿಯಿರಲಿಲ್ಲವೆನುಸುತ್ತದೆ. ಸಿಕ್ಕಾಪಟ್ಟೆ ಮಾಥಮಾಟಿಕ್ಸ್ ಸಹಿತ ಕಾಫಿ ಮಾಡುವ ವಿಧಾನವನ್ನು ಹೇಳಿದರು. “ಯಾವಾಗಲೂ 10% ಮಾತ್ರ ಚಿಕೋರಿ ಇರುವ ಕಾಫಿ ಪುಡಿ ಬಳಸಿ. ಇಬ್ಬರಿಗೆ ಕಾಫಿ ಮಾಡಲು 10 -12 ಗ್ರಾಂನಷ್ಟು ಮಾತ್ರ ಕಾಫಿ ಪುಡಿ, ಅದಕ್ಕೆ 100 ಮಿ.ಲೀ ನೀರು ಹಾಕಿ ಡಿಕಾಕ್ಷನ್ ತಯಾರಿಸಬೇಕು. ಹಾಲು ಬೆರೆಸುವಾಗಲೂ ಅಷ್ಟೇ, 4.5 ಶೇಕಡಾ ಫ಼್ಯಾಟ್ ಇರುವ ಹಾಲನ್ನು ಬಳಸಬೇಕು, ಸಕ್ಕರೆ ಬೇಕಾದವರಿಗೆ 10 ಗ್ರಾಂ ಸಕ್ಕರೆ ಪುಡಿ ಸಾಕು” ಹೆಮ್ಮೆಯಿಂದ ತಮ್ಮ ರುಚಿಕಟ್ಟಾದ ಕಾಫಿ ಮಾಡುವ ರೀತಿಯನ್ನು ವಿವರಿಸಿದ್ದರಾತ. ತಡೆಯದೆ ಕೇಳಿದೆ, “ನೀವು ಡಿಕಾಕ್ಷನ್ ಮಶೀನ್ ನಲ್ಲಿ ತಯಾರಿಸುತ್ತೀರಲ್ಲವೇ?” ಅದಕ್ಕಾತ “ಸ್ಟೀಲ್ ನ ಫ಼ಿಲ್ಟರ್ ಅನ್ನೇ ಉಪಯೋಗಿಸಿದರೆ ಸಾಕು” ಎಂದರು.
ಅಲ್ಲಿಂದ ಎದ್ದು ಬರುತ್ತಾ ಗ್ರಾಂ ಲೆಕ್ಕಗಳನ್ನು ಬಾಯಿಪಾಠ ಮಾಡುತ್ತಾ ಬಂದೆ. ಅಂದಹಾಗೆ, ನೀವೂ ಮೀಟರ್ ಕಾಪಿಯನ್ನು ಸವಿಯಬೇಕಿದ್ದಲ್ಲಿ ಬೀನ್ಸ್ ಆಂಡ್ ಬ್ರೂಸ್ ಸಧ್ಯಕ್ಕೆ ಭಾರತದ ನಾಲ್ಕು ಜಾಗಗಳಲ್ಲಿದೆ. ಎರಕಾಡ್ ನ ದ ಲೇಕ್ ಫ಼ಾರೆಸ್ಟ್ ರೆಸಾರ್ಟ್, ಗೋವಾ, ಕೊಡಗು ಹಾಗೂ ಕಾರವಾರ. ಇವರ ಕಾಫಿ ಪುಡಿಗಳು ಆನ್ಲೈನ್ ನಲ್ಲೂ ಲಭ್ಯ.
.
-ಶ್ರುತಿ ಶರ್ಮಾ, ಬೆಂಗಳೂರು.
Nice bhatre
Thanks Avi 🙂
Shru… Superb…
Thanks Ravi 🙂
ವಾ..ಹ್..ಸೂಪರ್ ಮೀಟರ್ ಕಾಫಿ..
ಲೇಖನ ಓದಿ ಕೂಡಲೇ ನಮ್ಮನೆ ದೇಸಿ ಹಸುವಿನ ಹಾಲಿನ ಮೀಟರ್ ಕಾಫಿ ಮಾಡಿ ಕುಡಿದೆ.
ಲೇಖನ ನಿರೂಪಣೆ ತುಂಬಾ ಇಷ್ಟ ವಾಯಿತು.
ಮೀಟರ್ ಕಾಫಿ ಇಷ್ಟವಾಯಿತೇ? ಧನ್ಯವಾದಗಳು.
ಕಾಪಿ ಇಲ್ಲದೆ ನನ್ನ ದಿನ ಶುರುವಾಗದು. ಕಾಪಿಯ ಸುವಾಸನೆಗೆ ಮನಸೋಲದವರು ಇರರು. ನಿಮ್ಮ ಹಾಗೂ ಕಾಪಿಯ ನಂಟು ಚಿಕ್ಕಂದಿನಿಂತೆಯೇ ಸದಾ ಇರಲಿ. ಒಳ್ಳೆಯ ಬರಹ
ಧನ್ಯವಾದಗಳು ರಮ್ಯ 🙂
Shru good one!
Thanks Deepa 🙂
Nice one….
Thank you