ನಮೋ ಯಕ್ಷಸಾರ್ವಭೌಮ
ಅಕ್ಷರದಿ ಸಲ್ಲಿಸುವೆ ನಮನ
ಯಕ್ಷರಂಗದ ಸಾರ್ವಭೌಮ
ನಿನಗಿದೋ ಎನ್ನ ಪ್ರಣಾಮ
ಯಕ್ಷಗಾನಲೋಕದ ಇಂದ್ರ
ಚಿಟ್ಟಾಣಿ ಹೆಗಡೆ ರಾಮಚಂದ್ರ
ಅಗಲಿದರೂ ನಮ್ಮನು
ಅಜರಾಮರ ನೀನು
ಅಚ್ಚೊತ್ತಿದ್ದೆ ಇಂದಲ್ಲ
ಅಂದು ಹದಿನಾಲ್ಕರ
ಅದ್ದೂರಿ ಪ್ರವೇಶದಲ್ಲೇ
ಹೊನ್ನಾವರ ಹೊಸಕುಳಿ
ಊರಿಗೆ ಇಟ್ಟು ಕಚಗುಳಿ
ಹೊರಟನು ಚಿಟ್ಟಾಣಿ ಮಾಣಿ
ಏರಿದ ಯಕ್ಷಬಾನಂಗಳದೇಣಿ
ಕಡತೋಕದ ಆ ಧೀರೆ ಸುಶೀಲೆ
ಕರಹಿಡಿದ ಅಗುತ ಅನುಕೂಲೆ
ಪ್ರಭಾವ ಬೀರಿ ಮಕ್ಕಳ ಮೇಲೆ
ಧರಿಸಿದರು ಪುತ್ರರೂ ಯಕ್ಷಮಾಲೆ
ನಾಟ್ಯಪ್ರಧಾನದ ಬಡಗಿಗೆ
ಚಿಟ್ಟಾಣಿ ಹೆಜ್ಜೆಯ ಬೆಡಗು
ಸೆಳೆದೆಳೆವ ನೃತ್ಯದ ಮೆರುಗು
ಮೋಡಿಗೆ ಯಕ್ಷಯೋಕ ಬೆರಗು
ಪುಂಡ ಪೋಕರಿ ಪೋರ
ಸಜ್ಜನ ದುರ್ಜನ ಶೂರ
ಸುರಾಸುರ ಭಸ್ಮಾಸುರ
ವೈಭವ ನೋಟ ಭರಪೂರ
ಸಾಧಿಸಿ ಹತ್ತು ಹಲವು
ದಕ್ಕಿಸಿದ ಜನರೊಲವು
ಪ್ರಯೋಗವು ಕೆಲವು
ಒಲಿಯಿತಲ್ಲಿ ಗೆಲುವು
ಮತ್ತೆ ಅವತರಿಸಿ ಹರಸು
ಅಲ್ಲಿಯೂ ಕಲೆ ಬೆಳೆಸು
ನೃತ್ಯಮಳೆಯನೇ ಸುರಿಸು
ಯಕ್ಷನಾಟ್ಯವ ನೀ ಕಲಿಸು
ಅಸಂಖ್ಯಾತರ ಎದುರೊಳು
ಅಭಿಮಾನಿಗಳೊಳಗಿಳಿದೇ
ಅಚ್ಚುಮೆಚ್ಚಿನಲಿ ಭಾವ ಮೆರೆದೆ
ಅಳಿಸಲಾಗದು ಆ ಯಕ್ಷ ಹೆಜ್ಜೆ
ಅರೆಕ್ಷಣವೂ ಮರೆಯದ ಗೆಜ್ಜೆ
– ಗಣೇಶಪ್ರಸಾದ ಪಾಂಡೇಲು
ಯಕ್ಷ ಸಾರ್ವಭೌಮ ಮತ್ತೆ ಹುಟ್ಟಿ ಬರಲಿ
ಯಕ್ಷಲೋಕದ ಮೇರುಕಲಾವಿದರಿಗೊಂದು ನಮನ.