ಅಲೆಪ್ಪಿಯ ದೋಣಿಮನೆಯಲ್ಲಿ ಒಂದು ದಿನ
ಕೇರಳವು ಅರಬ್ಬೀ ಸಮುದ್ರದ ಕಿನಾರೆಯಲ್ಲಿರುವ ಒಂದು ಪುಟ್ಟ ರಾಜ್ಯ. ಈ ದೇವರ ನಾಡು ತನ್ನ ಹಚ್ಚ ಹಸಿರು ಪರಿಸರ ಹಾಗೂ ವಿಶಾಲವಾದ ಹಿನ್ನೀರಿನಿಂದ ಪ್ರಸಿದ್ಧವಾಗಿದೆ. ಬೃಹತ್ ವಿಸ್ತಾರವಾಗಿ ಎಲ್ಲೆಂದರಲ್ಲಿ ಹರಡಿರುವ ಈ ಹಿನ್ನೀರು, ಕೆಲವೆಡೆ ಪುಟ್ಟ-ಪುಟ್ಟ ದ್ವೀಪಗಳು ಮೂಡಲು ಕಾರಣವಾಗಿದೆ. ಹಸ್ತಕೌಶಲದಿಂದ ತಯಾರಿಸಲ್ಪಟ್ಟ ದೋಣಿಮನೆಗಳು ಬೆರಗುಗೊಳಿಸುವ ಹಿನ್ನೀರಿನಲ್ಲಿ ತೇಲಿಕೊಂಡು ಹೋಗುವುದೇ ಕೇರಳದ ವೈಶಿಷ್ಟ್ಯ. ಅಲೆಪ್ಪಿ ಕೇರಳದಲ್ಲಿರುವ ಒಂದು ಚಿಕ್ಕ ಪಟ್ಟಣ. ಅಲೆಪ್ಪಿ ತನ್ನ ಹಿನ್ನೀರಿನಲ್ಲಿ ಅಲಂಕೃತಗೊಂಡಿರುವ ಸೊಗಸಾದ ದೋಣಿಮನೆಗೆ ಪ್ರಸಿದ್ಧವಾಗಿದೆ. ಈ ಮನಸೆಳೆಯುವ ದೋಣಿಮನೆಗೆ ಒಮ್ಮೆ ಭೇಟಿ ನೀಡಬೇಕೆಂದು ಎಂದಿನಿಂದಲೂ ನನ್ನ ಪ್ರವಾಸ ಪಟ್ಟಿಯಲ್ಲಿತ್ತು. ನಾನು ಹಾಗೂ ನನ್ನ ಪೋಷಕರು ದೋಣಿಮನೆಯಲ್ಲಿ ಒಂದು ದಿನ ಕಳೆದ ನೆನಪು ಇಲ್ಲಿದೆ.
ಸುಮಾರು 12 ಗಂಟೆ ಮಧ್ಯಾಹ್ನ ಅಲೆಪ್ಪಿಯ ಬೋಟ್ ಜೆಟ್ಟಿಯಲ್ಲಿ ನಿಂತ ನಮ್ಮನ್ನು ಸಮಾನಾಂತರವಾಗಿ ನಿಂತ ಹಲವು ದೋಣಿಮನೆಗಳು ಸ್ವಾಗತಿಸಿದವು. ಒಂದಕ್ಕಿಂತ ಇನ್ನೊಂದು ವಿಭಿನ್ನ, ಬಗೆ ಬಗೆಯ ಶೈಲಿಗಳಿಂದ ಹಲವಾರು ದೋಣಿಗಳು ಕಂಗೊಳಿಸುತ್ತಿದ್ದವು. ದೋಣಿಯ ಗಾತ್ರ ಚಿಕ್ಕದು ಹಾಗೂ ಕೋಣೆಗಳು ಕಡಿಮೆಯಾದಷ್ಟು, ದೋಣಿಯ ಅಂದ ಉತ್ತೇಜಿಸುತ್ತದೆ. ಕೆಲವು ನಿಮಿಷಗಳ ನಂತರ ನಾವು ಕಾದಿರಿಸಿದ ದೋಣಿಯೊಳಗೆ ಪ್ರವೇಶಿಸಿದೆವು. ದೋಣಿಯೊಳಗೆ ಚಾವಡಿ, ಅಡುಗೆ ಕೋಣೆ, ಮಲಗುವ ಕೋಣೆಗೆ ಸೇರಿಕೊಂಡಿರುವ ಸ್ನಾನಗೃಹ ಒಟ್ಟಾರೆ ಒಂದು ಮನೆಯೇ ಆ ದೋಣಿಯೊಳಗೆ ತಂಗಿತ್ತು. ಮಲಗುವ ಕೋಣೆಯನ್ನು ಹೇಗೆ ನಿರ್ಮಿಸಲಾಗಿದೆ ಎಂದರೆ ಒಂದು ಕ್ಷಣಕ್ಕೆ ದೋಣಿಯೊಳಗಿದ್ದೇವೆ ಎಂದು ಅರಿವಾಗಲೇ ಇಲ್ಲ. ಕುಳಿತುಕೊಳ್ಳಲು ಚಾವಡಿಯಲ್ಲಿ ಸೋಫಾ, ದೂರದರ್ಶನ, ಊಟ ಮಾಡುವ ಮೇಜು ಇತ್ತು.ದೋಣಿಯೊಳಗೆ ಹೋದಾಗ ಅಲ್ಲಿಯ ನಿರ್ವಾಹಕರು ತಂಪು ಪಾನೀಯ ನೀಡಿ ಬರಮಾಡಿಕೊಂಡರು.
ಚಾವಡಿಯಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಿದ್ದಂತೆ ದೋಣಿಯು ಹಿನ್ನೀರಿನ ಪ್ರಪಂಚದತ್ತ ಪಯಣ ಬೆಳೆಸಿತು. ನಿರ್ವಾಹಕನು ಚಕ್ರವನ್ನು ತಿರುಗಿಸುತ್ತಿದ್ದಂತೆ ಗ್ರಾಮ್ಯ ದೋಣಿಯು ನೀರನ್ನು ಹಿಂಬಡಿಯುತ್ತಾ ನೈಸರ್ಗಿಕ ಕಾಲುವೆಗಳ ನಡುವೆ ತೇಲಿತು. ಹೀಗೆ ಸಾಗುತ್ತಾ ಹೊರಗೆ ನೋಡುತ್ತಿದ್ದಂತೆ ಪಕ್ಕದಲ್ಲಿ ನಿಂತ ಬೇರೆ ದೋಣಿಮನೆಗಳಾಗಲಿ, ಅತ್ತ ಕಾಣುವ ಚಿಕ್ಕ ಅಂಗುಲದ ದ್ವೀಪವಾಗಲಿ, ಮುಗಿಲೆತ್ತರಕ್ಕೆ ಬೆಳೆದು ನಿಂತ ತೆಂಗಿನ ಮರಗಳಾಗಲಿ ಅಥವಾ ಗಾಢ ಹಸಿರು ಬಣ್ಣದ ನೀರಾಗಲಿ ಎಲ್ಲವೂ ಆ ಕ್ಷಣದಲ್ಲಿ ವರ್ಣರಂಜಿತವಾಗಿತ್ತು. ಕೆಲವು ಹೊತ್ತು ಹೀಗೆ ತೇಲಿದ ನಮ್ಮ ದೋಣಿಯನ್ನು ನಂತರ ಒಂದು ಬದಿಯಲ್ಲಿ ಭೋಜನಕ್ಕಾಗಿ ನಿಲ್ಲಿಸಲಾಯಿತು. ದೋಣಿಯ ಮುನ್ನಂಗಳದಲ್ಲಿ ಊಟ ಆಯೋಜಿಸಲಾಗಿತ್ತು. ಅನ್ನ, ಸಾರು, ಪಲ್ಯಗಳು, ಸಾಂಬಾರ್, ಹಪ್ಪಳ ಹೀಗೆ ವಿಧ-ವಿಧವಾದ ಖಾದ್ಯಗಳನ್ನು ಸೇವಿಸಿ ಜಠರ ತೃಪ್ತಿಯಾಯಿತು. ಊಟ ಮುಗಿಸಿ ವಿಶ್ರಾಂತಿಸುತ್ತಿದ್ದ ನಮಗೆ ಸಮೀಪದಲ್ಲಿ ದೋಣಿಮನೆ ಕಟ್ಟುವುದು ಕಣ್ಣಿಗೆ ಬಿತ್ತು. ಕಾರ್ಮಿಕರು ತಮ್ಮ ಕೈ-ಚಾತುರ್ಯದಿಂದ ಮರದ ಕಟ್ಟಿಗೆ, ಬಿದಿರು, ತೆಂಗಿನ ನಾರು ಮುಂತಾದವುಗಳನ್ನು ಉಪಯೋಗಿಸಿ ಬಹಳ ಪರಿಶ್ರಮದಿಂದ ಅಂದವಾದ ದೋಣಿಯನ್ನು ಕಟ್ಟುತ್ತಿದ್ದರು.
ಪುನಃ ಹಿನ್ನೀರಿನ ಹೃದಯದತ್ತ ಪಯಣ ಬೆಳೆಸಿದೆವು. ಅತ್ಯುತ್ಸುಕಳಾದ ನಾನು ದೋಣಿಯ ಮುಂಭಾಗದಲ್ಲಿ ಕಾಲು ಚಾಚಿ ಕುಳಿತುಕೊಂಡೆ. ತಂಪಾದ ಗಾಳಿ ಬೀಸುತ್ತಿತ್ತು, ಮಾರುತಕ್ಕೆ ಕುಣಿಯುತ್ತಿದ್ದ ನೀರಿನ ಅಲೆಗಳ ಕಲರವ, ತೆರೆಗಳಿಂದಾಗಿ ಓಡಾಡುತ್ತಿದ್ದ ನೀರಿನ ಗಿಡಗಳು, ಬಾನಂಚಿನಲ್ಲಿ ಬಾಗಿ ನಿಂತ ತೆಂಗಿನ ಮರಗಳು, ಇವೆಲ್ಲಗಳ ನಡುವೆ ತೇಲಿ ಹೋಗುವ ದೋಣಿಯಲ್ಲಿ ಕುಳಿತ ನನಗೆ ಎಂದಿಲ್ಲದ ನೆಮ್ಮದಿ, ಶಾಂತಿ, ವಿಶ್ರಾಂತಿ. ಯಾವ ದಿಕ್ಕಿನಲ್ಲಿ ಕಣ್ಣು ಹಾಯಿಸಿ ನೋಡಿದರೂ, ಸುತ್ತಲೂ ಜಲರಾಶಿಯ ಅನಂತತೆ. ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಮಂತ್ರಮುಗ್ಧಳಾದೆನು. ಹಿನ್ನೀರಿನ ಲೋಕದಲ್ಲಿ ಮಗ್ನಳಾಗುವಷ್ಟರಲ್ಲಿ ಸಂಜೆಯ ಚಹಾ ಸಮಯ ಬಂತು. ದೋಣಿಯು ದ್ವೀಪದ ಸಮೀಪ ಲಂಗರು ಹಾಕಿ ನಿಂತಿತು. ಪ್ರಕೃತಿಯ ಮಡಿಲಿನಲ್ಲಿ ಚಹಾ ಹಾಗೂ ರುಚಿಕರವಾದ ಬಿಸಿ-ಬಿಸಿ ಈರುಳ್ಳಿ ಪಕೋಡ ಸೇವಿಸಿದೆವು.
ಸರಿಸುಮಾರು 30 ನಿಮಿಷ ದೋಣಿಯು ನಿಂತಿದ್ದರಿಂದ, ದೋಣಿಯಿಂದ ಕೆಲಕಾಲಕ್ಕೆ ಇಳಿದು ದ್ವೀಪದತ್ತ ನಡೆದೆವು. ಹಸಿರು ಹಾಸಿಗೆಯಂತಿದ್ದ ಗದ್ದೆ ತನ್ನ ತಾಜಾತನದಿಂದ ನಮ್ಮನ್ನು ಆಕರ್ಷಿಸಿ ಕರೆಯಿತು. ಗದ್ದೆಯಲ್ಲಿ ಕೆಲಕಾಲ ಕಳೆದು ದೋಣಿಗೆ ಮರಳಿದೆವು. ದೆೋಣಿ ತೇಲುತ್ತಾ ಮುಂದೆ ಸಾಗುತ್ತಿದ್ದಂತೆ ಸೂರ್ಯನು ಮುಳುಗಲು ಪ್ರಾರಂಭಿಸಿದ್ದನು. ಅಲೆಪ್ಪಿಯಲ್ಲಿ ಸೂರ್ಯಾಸ್ತದ ನಂತರ ದೋಣಿ ಚಲಿಸುವಹಾಗಿಲ್ಲ. 5 ಗಂಟೆ 45 ನಿಮಿಷದ ವೇಳೆಗೆ ದಿನದ ಪಯಣ ಮುಗಿಸಿ ಆಳದ ನೀರಿಗೆ ಲಂಗರು ಹಾಕಿ ದೋಣಿ ಅಲ್ಲಿಯೇ ಬೀಡು ಬಿಟ್ಟಿತು. ಹೇಗೆ ಸಮಯ ಕಳೆಯಿತು ಎಂದು ಅರಿವಾಗುವಷ್ಟರಲ್ಲಿ ಚಂದಿರ ಆಗಸದಲ್ಲಿ ನಗುತ್ತಿದ್ದನು. ದೋಣಿಯಲ್ಲಿ ಬೇರೆ ಪ್ರವಾಸಿಗರ ಪರಿಚಯವಾಯಿತು. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದೆವು. ರಾತ್ರಿ ಆವರಿಸುತ್ತಿದ್ದಂತೆ ನೀರಿನ ಅಲೆಗಳ ಮೌನ ಗೀತೆಗೆ ನಿದ್ರೆ ಆಕ್ರಮಿಸಿತು.
ಮುಂಜಾನೆ ರವಿಯ ಕಿರಣಗಳು ಭೂಮಿಗೆ ಬೀಳುತ್ತಿದ್ದಂತೆ ಅಲೆಪ್ಪಿಯ ಮೀನುಗಾರರು ಪುಟ್ಟ ದೋಣಿಗಳಲ್ಲಿ ಜಲರಾಶಿಗೆ ಬಲೆ ಹಾಕುತ್ತಾರೆ. ಹಕ್ಕಿಗಳ ಚಿಲಿಪಿಲಿಗೆ ಹಿನ್ನೀರನ್ನು ನೋಡುತ್ತಾ ಬಿಸಿಬಿಸಿ ಕಾಫಿಯನ್ನು ಒಂದೊಂದೇ ಗುಟುಕಿನಲ್ಲಿ ಸವಿಯುವುದು ಆನಂದವೇ ಸರಿ. ಬೆಳಗ್ಗಿನ ತಿಂಡಿ ಮುಗಿಸಿ, ದೋಣಿಯಿಂದ ಹೊರಡುವಾಗ ನನ್ನ ಮನಸ್ಸಿನಲ್ಲಿ ಹೊಸ ಚೈತನ್ಯ ತುಂಬಿತ್ತು. ಉಲ್ಲಾಸಗೊಳಿಸಿದ ಹಿನ್ನೀರಿಗೆ ಮನಸಾರೆ ಕೃತಜ್ಞತೆ ಸಲ್ಲಿಸುತ್ತಾ ಅಲ್ಲಿಂದ ತೆರಳಿದೆವು.
.
– ರಮ್ಯಶ್ರೀ ಭಟ್.
ದೋಣಿ ಮನೆಗೆ ಹೋಗಿ ಬಂದಂತಾಯಿತು 🙂
Superb
ನನಗೂ ದೋಣಿ ಮನೆಗೆ ಹೋಗಿ ಬoದ ಹಾಗಾಯಿತು
ಸುಂದರ ವಿವರಣೆ 🙂
ಒಳ್ಳೆಯ ಕುತೂಹಲ ಭರಿತ ದೋಣಿಮನೆ ಪ್ರವಾಸ. ಇದನ್ನೋದಿದಾಗ ನನಗೂ ಹೋಗಿ ಅನುಭವಿಸಿ ಬರಬೇಕೆಂಬ ತುಡಿತ ಸ್ಪುರಿಸಿದ್ದು ಸುಳ್ಳಲ್ಲ.