ಡಾ. ಕಾಳೇಗೌಡರೊಂದಿಗೆ ಕಳೆದ ಸುದಿನ
(ಅಂಗೈ ಅಗಲದ ಪುಟ್ಟ ‘ಮಹಾಕೂಟ’ ಪತ್ರಿಕೆಯನ್ನು ಪರಿಚಿತ ಹಾಗೂ ಅಪರಿಚಿತ ನಾಡಿನ ಪ್ರಗತಿಪರ ಆಲೋಚನೆಯ ಎಲ್ಲ ವಯೋಮಾನದವರಿಗೂ ಅಂಚೆ ಮೂಲಕ ಕಳುಹಿಸುತ್ತಿದ್ದೆ. ನನ್ನ ಕನಸಿನ ಪತ್ರಿಕೆಯನ್ನು ಓದಿ ಮೆಚ್ಚಿಕೊಂಡು ಹಲವು ಪ್ರಮುಖರು ಪತ್ರ ಮತ್ತು ಪೋನ್ ಮೂಲಕ ಅಭಿಪ್ರಾಯ ಹಂಚಿಕೊಂಡರು. ಅವರಲ್ಲಿ ಮುಖ್ಯವಾಗಿ ಕೊ.ಚನ್ನಬಸಪ್ಪ, ಚಂಪಾ, ಎಂ.ಡಿ.ಗೋಗೇರಿ, ಪ್ರೊ. ವಸಂತ ಕುಷ್ಟಗಿ, ಹಾವೇರಿಯ ಸತೀಶ್ ಕುಲಕರ್ಣಿ, ಪ್ರೊ, ಶಿವರಾಮಯ್ಯ ಮತ್ತು ಪ್ರೊ. ಕಾಳೇಗೌಡ ನಾಗವರ ಮುಂತಾದ ಹಿರಿಯ ಚಿಂತಕರು, ಕಿರಯನಾದ ನನಗೆ ಬೆನ್ನುತಟ್ಟಿ ಹುರಿದುಂಬಿಸಿದ್ದಾರೆ. ಹೀಗೆ ಪರಿಚಯಸ್ಥರಾದ ಕಾಳೇಗೌಡ ನಾಗವರವರು ಒಂದು ಬಾರಿ ಸಾಹಿತ್ಯಿಕ ಕಾರ್ಯಕ್ರಮಕೆ ಮುಖ್ಯ ಅತಿಥಿಯಾಗಿ ಸಿದ್ದಾಪುರಕೆ ಆಗಮಿಸಿದ್ದರು, ಅವರೊಂದಿಗೆ ಕಳೆದ ಆ ಒಂದು ದಿನದ ಸವಿನೆನಪಿಗೆ ಅಕ್ಞರರೂಪ ನೀಡಿರುವೆ.)
ಸಧ್ಯ ಮೈಸೂರಿನಲ್ಲಿ ನೆಲಿಸಿರುವ ಕ್ರಿಯಾಶೀಲ ಡಾ. ಕಾಳೇಗೌಡ ನಾಗವರ (೧೯೪೭) ಅವರು ಅಪ್ಪಟ ಗ್ರಾಮೀಣ ಸೊಗಡು ಹಾಗೂ ದೇಶಿ ಸಂಸ್ಕೃತಿಯ ಅಪರೂಪದ ಕವಿ, ಕತೆಗಾರ, ಜಾನಪದ ತಜ್ಞ, ಪರಸ್ಪರ ಪ್ರೀತಿ ಹಾಗೂ ನಿರ್ಭೀತಿಗಾಗಿ ನಿರಂತರ ಸೆಣಸಾಡುವ ಸಂವೇದನಾಶೀಲ ಬಂಡಾಯಗಾರರು. ಬೆಟ್ಟಸಾಲು ಮಳೆ, ಕರಾವಳಿಯಲ್ಲಿ ಗಂಗಾಲಗ್ನ, ಈ ಮಂಜಿನೊಳಗೆ, ಪ್ರೀತಿ ಮತ್ತು ನಿರ್‍ಭೀತಿ, ಅಲೆಗಳು, ಕೆನ್ನೆಯ ಸ್ನೇಹ ಮುಂತಾದವುಗಳು ಡಾ. ಕಾಳೇಗೌಡರ ಪ್ರಮುಖ ಕೃತಿಗಳು. ಇನ್ನು ಮಡುಗಟ್ಟಿ, ಅಕ್ಕರೆ, ಸಂತನ ಧ್ಯಾನ, ಜೀವಪ್ರೇಮದ ಅಚ್ಚರಿ ಇವು ನಾಗವರವರ ವ್ಯಕ್ತಿತ್ವ ಮತ್ತು ಸಾಧನೆಯ ಕುರಿತ ಗ್ರಂಥಗಳು.
ರಾಜ್ಯದ ಪ್ರತಿ ಮೂಲೆಮೂಲೆಯಲ್ಲಿಯೂ ಪ್ರೊ. ಕಾಳೇಗೌಡರ ಒಂದು ಬಳಗವಿದೆ. ಜೀವಪರ ಕಾಳಜಿ ಇಟ್ಟುಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನೂ ಅದರಲ್ಲೂ ಯುವ ಜನಾಂಗವನ್ನು ಜಾಗೃತಗೊಳಿಸುವ ಸಾಮಾಜಿಕ ಕಳಕಳಿಯುಳ್ಳವರು. ತಮ್ಮ ಇಳಿವಯಸ್ಸಿನಲ್ಲೂ ಈ ರಾಜ್ಯ ಸುತ್ತುವ ಪರಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ನಾವು ಓದದ ಅದೇಷ್ಟೋ ಮಹತ್ವದ ವಿಷಯಗಳನ್ನು ತುಂಬಾ ಗಂಭೀರವಾಗಿ ಹಾಗೂ ಒಂದಿಷ್ಟು ಸಾತ್ವಿಕ ಸಿಟ್ಟಿನೊಡನೆ ನಮ್ಮೆದಿರು ತೆರೆದಿಟ್ಟ ಬಗೆ ನಿಜಕ್ಕೂ ಅದ್ಭುತ ಮತ್ತು ಅನನ್ಯ.
ಬಸವಣ್ಣ, ಅಂಬೇಡ್ಕರ್, ಲೋಹಿಯಾ, ಲಂಕೇಶ್ ಹೀಗೆ ಹಲವು ಚಿಂತಕರ-ಹೋರಾಟಗಾರರ ನಿಲುವು ಹಾಗೂ ನಿದರ್ಶನಗಳನ್ನು ತೆರೆದಿಡುತ್ತಾ ನಮ್ಮನ್ನು ಬೆರುಗುಗೊಳಿಸಿದರು. ತಮ್ಮ ಮಕ್ಕಳ ವಯೋಮಾನದ ನಮ್ಮನ್ನು ಗೆಳೆಯರಂತೆ ಕಂಡು ಆಪ್ತತೆಯಿಂದ ನಡೆಸುವ ಚರ್ಚೆ, ಚಿಂತನೆ, ಹರಟೆ ಸ್ಮರಣೀಯ. ಸಿದ್ದಾಪುರ ಪಟ್ಟಣದ ರಾಮಕೃಷ್ಣ ಹೆಗಡೆಯವರ ವೃತ್ತದಲ್ಲಿರುವ ಪುಟ್ಟ ಚಹಾದಂಗಡಿಯಲಿ ಕುಳಿತು ಮುಂಜಾನೆ ಚಹಾ ಹೀರುತ್ತಾ, ಸುಮಾರು ಎರಡು ಗಂಟೆಗಳ ಕಾಲ ನಡೆದ ಗೌಡರ ಮಾತಿನ ಚಕಮಕಿಯಲಿ ಕನ್ನೇಶ್ ಕೊಲಶಿರ್ಸಿ, ಡಾ. ವಿಜಯಕುಮಾರ ಹಾಗೂ ನಾನು ಕಿವಿ ನಿಮಿರಿಸಿಕೊಂಡು ಆಶ್ಚರ್ಯ ಚಕಿತರಾಗಿ ಕೇಳಿಸಿಕೊಂಡೆವು.
ಹಿರಿಕರಾದ ಕಾಳೇಗೌಡರು ನನಗೆ ಗುರುವಾಗಿ ಕಲಿಸದಿದ್ದರೂ ನನ್ನೊಳಗೊಂದು ಅರಿವಿನ ಹರಿಗೋಲನ್ನು ಹರಿಬಿಟ್ಟು ಹುರಿಗೊಳಿಸಿದ ಚಿಂತಕರು. ಇಂತಹವರ ಶಿಷ್ಯ ಅಂತಾ ಹೇಳಿಕೊಳ್ಳುವುದರಲ್ಲೂ ಒಂದು ರೀತಿಯ ಖುಷಿ, ಆತ್ಮತೃಪ್ತಿ ನನ್ನೊಳಗಿದೆ. ಒಟ್ಟಾರೆ ಕಾಳೇಗೌಡರೊಂದಿಗೆ ಓಡಾಡಿದ ಆ ದಿನ, ಒಂದು ಗ್ರಂಥಾಲಯದಲ್ಲಿ ನಡೆದಾಡಿದ ದಿನ ಅರ್ಥಾತ್ ಹಲವು ಮೌಲ್ಯಯುತ ಪುಸ್ತಕಗಳೊಂದಿಗೆ ಅನುಸಂಧಾನಗೈದ ಸುದಿನವಾಗಿತ್ತು..
-ಕೆ.ಬಿ.ವೀರಲಿಂಗನಗೌಡ್ರ.