ಧುಮ್ಮಿಕ್ಕಿ ಹರಿಯುವ ಹನುಮಾನ್ ಗುಂಡಿ

Share Button

ಮಲೆನಾಡಿನ ಸೊಬಗು ವಿವರಿಸಿದಷ್ಟು ಮುಗಿಯದು, ಎಷ್ಟು ನೋಡಿದರೂ ಕಣ್ಣಿಗೆ ಸಾಕಾಗದು. ಹಸಿರು ಸೀರೆ ಉಟ್ಟು ಸೆರಗು ಹರಡಿ ಕುಳಿತಂತೆ ಕಾಣುವ ಪರಿಸರದಲ್ಲಿ ಕಂಡದ್ದೆಲ್ಲ ಚೆಂದವೇ. ಅಂತಹ ಪ್ರಕೃತಿಯ ತಪ್ಪಲಿನಲ್ಲಿ ಅಡಗಿ ಕುಳಿತಿದೆ ಒಂದು ಮನೋಹರವಾದ ಜಲಪಾತ. ಅದುವೇ ಭೋರ್ಗರೆಯುವ ಹನುಮಾನ್ ಗುಂಡಿ. ‘ಸೂತನಬ್ಬಿ’ ಜಲಪಾತವೆಂದೂ ಕರೆಯಲಾಗುತ್ತದೆ.

ಹನುಮಾನ್ ಗುಂಡಿಯ ಬಗ್ಗೆ ನನ್ನ ಪದವಿ-ಪೂರ್ವ ವ್ಯಾಸಂಗ ಸಮಯದಲ್ಲಿ ಕೇಳಿ ತಿಳಿದಿದ್ದೆ. ಮುಂಗಾರಿನ ಗ್ರೀಷ್ಮ ವೃಷ್ಟಿಯ ಕಾಲದಲ್ಲಿ ಅಲ್ಲಿಗೆ ಹೋಗಲು ಅನುಕೂಲವಾಯಿತು. ಶೃಂಗೇರಿ ಮತ್ತು ಕದುರೆಮುಖದ ನಡುವೆ ಇರುವ ಈ ತಾಣವು ಶೃಂಗೇರಿಯಿಂದ ಸುಮಾರು 26 ಕಿಲೋಮೀಟರ್ ಹಾಗೂ ಕುದುರೆಮುಖದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಕುದುರೆಮುಖ ಅರಣ್ಯದ ಸಮೀಪ ಕಳಸ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ಶೀರ್ಲು ಗ್ರಾಮದಲ್ಲಿ ಹನುಮಾನ್ ಗುಂಡಿಯ ದ್ವಾರ ಕಾಣಸಿಗುತ್ತದೆ. ಅರಣ್ಯ ಇಲಾಖೆಯ ಪುಟ್ಟ ಕೊಠಡಿಯೊಂದು ಇದ್ದು ಅಲ್ಲಿ ಸಾಮಾನ್ಯವಾಗಿ ಇಬ್ಬರು ಆರಕ್ಷಕರು ಇರುತ್ತಾರೆ. ಕೂಠಡಿಯತ್ತ ನಡೆದಾಗ ಹನುಮಂತನ ಅವತಾರಗಳಾದ ವಾನರರು ಪ್ರವಾಸಿಗರನ್ನು ಸ್ವಾಗತಿಸುತ್ತಾರೆ.

ಹನುಮಾನ್ ಗುಂಡಿ ಎಂಬ ಹೆಸರಿಗೆ ತಕ್ಕಂತೆ ಜಲಪಾತವನ್ನು ತಲುಪಲು ಸುಮಾರು ಮುನ್ನೂರು ಮೆಟ್ಟಿಲುಗಳನ್ನು ಇಳಿಯಬೇಕು. ಜಲಪಾತದ ಸಮೀಪ ತಲುಪುತ್ತಿದಂತೆಯೇ ದಟ್ಟ ಕಾಡಿನ ನಡುವೆ ರಭಸವಾಗಿ ಹರಿಯುವ ನೀರಿನ ಭೋರ್ಗರೆತ ಕೇಳುತ್ತದೆ. ಸುತ್ತ ನೋಡುತ್ತಿದ್ದಂತೆಯೇ ಸುಮಾರು 22 ಅಡಿ ಎತ್ತರದಿಂದ ಬೀಳುವ ಜಲಧಾರೆಯು ತನ್ನ ಆಕರ್ಷಣೀಯ ರೂಪದಿಂದ ತನ್ನತ್ತ ಗಮನ ಸೆಳೆಯುತ್ತದೆ. ಗಂಗಾಮೂಲದಲ್ಲಿ ಉಗಮಿಸಿ, ತುಂಗಾ ನದಿಯು ಅತ್ಯುತ್ಸಾಹದಿಂದ ಕಲ್ಲು ಬಂಡೆಗಳ ನಡುವೆ ಬಳುಕುತ್ತಾ ಹರಿದು ಇಲ್ಲಿ ಜಲಪಾತವಾಗಿ ಧುಮುಕುತ್ತಾಳೆ.  ಒಮ್ಮೆ ಉದ್ದವಾಗಿ ಜಿಗಿದು ನಂತರ ಒಂದು ಕೋಲುದ್ದ ಹರಿದು ಪುನಃ ಸಣ್ಣಕ್ಕೆ ಜಿಗಿಯುತ್ತಾ ಸರಸರನೆ ಹರಿಯುವ ಜಲಧಾರೆಯನ್ನು ನೋಡಿ “ಆಹಾ…! ಎಂಥಾ ಸೌಂದರ್ಯ ಈ ಪ್ರಕೃತಿ” ಎನ್ನುತ್ತಾ ಆ ದೃಶ್ಯಕ್ಕೆ ಮನಸೂರೆಗೊಳ್ಳದವರಿರರು.

ಇಂಥಾ ಸೊಗಸಾದ ದೃಶ್ಯವನ್ನು ಸವಿಯಲು ಸ್ವಲ್ಪ ಸಮಯ ಅಲ್ಲಿ ಕಳೆಯಬೇಕಲ್ಲವೇ. ಈಜಲು ಆಸಕ್ತಿ ಇರುವವರು ಸ್ವಚ್ಛ ನೀರಿನಲ್ಲಿ ಹಾಯಾಗಿ ತೇಲಾಡಬಹುದು. ಈಜುವುದು ನಿಮ್ಮ ಆಯ್ಕೆಯಾಗದಿದ್ದರೆ ಏನಂತೆ ಪಕ್ಕದಲ್ಲಿರುವ ಕಲ್ಲು ಬಂಡೆಗಳಲ್ಲಿ ಕುಳಿತು ಜಲಪಾತದ ಅಂದವನ್ನು ಆಸ್ವಾದಿಸುತ್ತಾ ವಿಶ್ರಾಂತಿ ಪಡೆದುಕೊಳ್ಳಬಹುದು. ತುಂಗೆಯ ನೀರು ಸ್ವಚ್ಛ, ನಿಷ್ಕಲ್ಮಶ. ತಾಜಾ ಹಸಿರಿನ ಅಡವಿಯ ಒಡಲಿನಲ್ಲಿ ಝುಳುಝುಳುನೆ ಹರಿಯುವ, ನೊರೆ ಹಾಲಿನಂತೆ ಕಾಣುವ ನೀರು ಅಷ್ಟೇ ರುಚಿಕರ. ಆ ತಂಪಾದ ಕಾನನದೊಳಗಿನ ನೀರು ಗಂಟಲ ಒಳಗೆ ಗಳಗಳನೆ ಇಳಿಯುತ್ತಿದ್ದಂತೆ ಮನಸ್ಸಿಗೆ ಸಂತೃಪ್ತಿಯಾಗುತ್ತದೆ.

ಪ್ರಕೃತಿಗೆ ತಂಪುಣಿಸುವ ಮುಂಗಾರಿನ ಅಬ್ಬರದ ನರ್ತನದ ಕಾಲವು ಈ ಜಲಧಾರೆಯ ಸೊಬಗನ್ನು ಸವಿಯಲು ಹೇಳಿಮಾಡಿದಂತಿರುತ್ತದೆ. ರಮಣೀಯವಾದ ಈ ಜಲಪಾತವು ದಟ್ಟ ಕಾಡಿನ ಮಧ್ಯೆ ಕೂಡಿಟ್ಟಂತೆ ಇರುವುದರಿಂದ ಇಲ್ಲಿಗೆ ಗುಂಪು ಗುಂಪಾಗಿ ಹೋಗುವುದು ಉತ್ತಮ. ಸೂಕ್ಷ್ಮವಾದ ಕಾಡಿನ ಪ್ರದೇಶವಾದ್ದರಿಂದ ತಿಂಡಿ-ಪದಾರ್ಥ, ಬಾಟಲಿ ಇತ್ಯಾದಿಗಳ ತ್ಯಾಜ್ಯ ಎಂದಿಗೂ ಅಲ್ಲಿಗೆ ಸೇರದೆ ಜಲಪಾತವು ವರ್ಷದ ಧಾರೆಯಿಂದ ಉಕ್ಕಿ ನಲಿದಾಡಿ ಹರಿಯಲಿ ಎನ್ನುವುದೇ ನಮ್ಮೆಲ್ಲರ ಕಳಕಳಿ..

 

 – ರಮ್ಯಶ್ರೀ ಭಟ್, ಬೆಂಗಳೂರು

13 Responses

  1. Shruthi Sharma says:

    ತುಂಬಾ ಚೆನ್ನಾಗಿ ಬರೆದಿದ್ದೀರಿ. ಹನುಮಾನ್ ಗುಂಡಿಗೆ ಭೇಟಿ ನೀಡಬೇಕೆನಿಸಿತು 🙂

  2. Hema says:

    ಬರಹ ಸೊಗಸಾಗಿದೆ. ಕೆಲವು ವರ್ಷಗಳ ಮೊದಲು ನಾವು ಹನುಮಾನ್ ಗುಂಡಿ ಜಲಪಾತಕ್ಕೆ ಭೇಟಿ ಕೊಟ್ಟಿದ್ದು ನೆನಪಾಯಿತು.

  3. Doddabasappa P says:

    ಮಲೆನಾಡು ಹಾಗೂ ಜಲಪಾತದ ವರ್ಣನೆ ಚೆನ್ನಾಗಿದೆ .ಮನ ತಂಪಾಯಿತು.

  4. Lathika Bhat says:

    ಬರಹ ಚೆನ್ನಾಗಿದೆ. ಒಮ್ಮೆ ಹೋಗಬೇಕು.

  5. Shriganesh Bhat says:

    Good one. Keep up your good works..!!

  6. Brian Fernandes says:

    ಕನ್ನಡದಲ್ಲಿನ ನಿಮ್ಮ ಪ್ರಭುತ್ವ ನನಗೆ ಇಷ್ಟವಾಯಿತು. ನಿಮ್ಮ ಸಾಹಿತ್ಯ ಕೃಷಿ ಹೀಗೇ ಮುಂದುವರೆಯಲಿ .

  7. ಭಗವಂತನು ನಿಮಗೆ ಒಳ್ಳೆಯ ತಾಂತ್ರಿಕ ವಿದ್ಯೆಯ ಜತೆಯಲ್ಲಿ ಕಾವ್ಯಾಲಂಕಾರದ ಶಕ್ತಿಯನ್ನೂ ಅನುಗ್ರಹಿಸಿದ್ದಾನೆ. ನೀವು ನಿಜವಾಗಿ ಧನ್ಯರು . ನಿಮ್ಮ ಬಾಳು ಬೆಳಗಲಿ . ಮ್ ವಿ Shanbhogue ೯೪೪೮೦೯೧೩೫೦.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: