ಬಯಕೆಯ ಬಸಿರು
ಬರಗಾಲದ ಶಾಪವೋ
ಅಗ್ನಿಗಾಹುತಿಯೋ
ಬರಿದಾಗಿ ಬಿರಿದು ಹೋಯಿತೇ
ಪ್ರಕೃತಿಯ ಮಡಿಲು.
ಬಂಜೆಯಾಗಲೊಲ್ಲಳಿವಳು
ಅಳಿದುಳಿದ ಬಯಕೆಗಳ
ಬಸಿರೊಳಗೆ ಬಚ್ಚಿಟ್ಟು
ರಕ್ಷಣೆಗಿಳಿಸಿದಳೇ ಕಣ್ಣೀರು.
ಕಣ್ಣೀರ ಧಾರೆಯೋ ಅವಳ
ಬಸವಳಿದ ಬೆವರ ಹನಿಗಳೋ
ಒಂದಾಗಿ ಆಗಸದಿ ಹೆಪ್ಪುಗಟ್ಟಿ
ಕರಿಮುಗಿಲ ನೋಟ ಇಳೆಯೆಡೆಗೆ.
ಕಾರ್ಮೋಡ ಕರಗಿ ಮಳೆಯಾಗಿ ಹನಿದು
ಬಾನುಬುವಿಯೊಂದಾಗಿ ಹರ್ಷಿಸಲು
ಬಯಕೆಯ ಬಸಿರ ಹೆರುವ ಪ್ರತೀಕ್ಷೆಯು
ನನಸಾಗಿ ಬಯಕೆಯ ಚಿಗುರು ಮೊಳೆತಿದೆ.
– ಅನ್ನಪೂರ್ಣ, ಬೆಜಪ್ಪೆ.