ನಾಳೆ
ಅಗೋಚರವೂ
ಅದೃಶ್ಯದಲ್ಲಿರುವುದೂ
ಅಸದೃಶವೂ ಆದ ಅದು
ಆಸೆಬೀಜಗಳಾಗರ
ಅಸ್ಪಷ್ಟಕ್ಕೆಳೆವ ಜಿಗಿತ
ಭಯದ ಬೀಡು
ನಿತ್ಯವೂ ಸುಳಿವ ಗೀಳು
ಕವಿ ಎಂದೂ ಮುಗಿಸದ
ಮಹಾಕಾವ್ಯ!
ಅವಿತ ಅದ್ಭುತ
ಕಿನ್ನರ ಲೋಕ
ವಿರಹಿಗೆ ನಿಲುಕದ ದೂರ
ಹಾರಾಡಿ ಹುಡುಕು ಬೇಟೆ
ಈಜಾಡಿ ಹೆಕ್ಕಬೇಕಿರುವ ಮುತ್ತು
ಅಭದ್ರತೆಯ ತೆರೆ ನೀರ್ಗುಳ್ಳೆ
ಬಂದೀತೋ ಬಾರದೊ
ಊಹೆಗರಳುವ ಬೆಳಕು
ಇಂದು ಮುಗಿದರೆ
ಹುಟ್ಟಿಗೆ ರಹದಾರಿ
ಇಂದಿಟ್ಟ ಹೆಸರು
ಹುಟ್ಟುತ್ತಲೆ ಮರುನಾಮಕರಣ
ಕರ್ಮ
ಕಾಯಲೇ ಬೇಕು
ಸೂರ್ಯ ನಡಿಗೆಗೆ ಅದರ ತಳಕು
ಕತ್ತಲ ಕಾಡು ಕಾಣದ ಅದು
ಯಾರ ನೆಂಟ
ದೇಹ ಮನಸು ಯಾ ಮಾಯೆಗ?
ಅಮೆರಿಕದ ಬಂಧು
ಭಾರತದ ನನ್ನೊಡನೆ ಮಾತು
ಅವನಿಗದು ನಾಳೆಗೆ ಸಂದುವ ನಾನು!
ಲೆಕ್ಕ ಸಿಕ್ಕುವ ಇಂದು ನಿನ್ನೆ
ನಿಲುಕದ ಅನಂತ ’ನಾಳೆ’
ಹೊಳೆವಷ್ಟರಲೆ ಒಳಗೆ
ಹರಿದು ಹೋಗುವ ಹೊಳೆ!
– ಅನಂತ ರಮೇಶ್