‘ಅಜ್ಞಾತ’- (ಹಿರಿತಲೆಯೊಂದರ ಅನುಭವ ಕಥನ)
1969 ನೇ ಇಸ್ವಿ ಬಹುಶಃ ನವಂಬರ್,ಡಿಸೆಂಬರ್ ತಿಂಗಳಿರಬಹುದು.ಆಗ ನಾನು ಹಿಮಾಚಲ ಪ್ರದೇಶದ ಖನೇಟಿಯ ಹೈಸ್ಕೂಲೊಂದರಲ್ಲಿ ಹೆಡ್ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಜೆರೊಲ್ ಎಂಬ ದೊಡ್ಡ ಊರು ..ಅಲ್ಲಿಂದ 3000 ಅಡಿ ಕೆಳಗಿಳಿದರೆ ಖನೇಟಿ.
ಅಲ್ಲಿದ್ದ ಎಂಟು – ಹತ್ತು ಜನ ‘ಹಾಟು ಶಿಖರದ’ ಚಾರಣಕ್ಕೆ ಹೋಗುವದೆಂದು ನಿಶ್ಚಯಿಸಿದೆವು. ಹಾಟು ಶಿಖರ ಸಮುದ್ರ ಮಟ್ಟದಿಂದ 14,000 ಅಡಿ, ಹತ್ತಿರದ ನಾರ್ಖಂಡದಿಂದ 6000 ಅಡಿಗಳ ಎತ್ತರದಲ್ಲಿತ್ತು. ಅಲ್ಲೊಂದು ದೇವಿಯ ಪುಟ್ಟ ಮಂದಿರವಿತ್ತು. ದೇವಿಗೆ ಒಪ್ಪಿಸಲು ಹಲವಾರು ವಿಧದ ತಿಂಡಿ,ತಿನಿಸುಗಳನ್ನು ಜನ ಹೊತ್ತೊಯ್ಯುತ್ತಿದ್ದರು. ಕುಡಿಯಲು ನೀರು ದಾರಿಯಲ್ಲಿ ಸಿಗುತ್ತದೆ ಎಂದು ಅವರೆಲ್ಲರೂ ಹೇಳಿದರು.ಬೆಳಿಗ್ಗೆ ಏಳು ಗಂಟೆಗೆ ಹೊರಡುವದೆಂದು ನಿಶ್ಚಯವಾಯಿತು.
“ಮಾ ಕೋ ಕ್ಯಾ ಖಿಲಾಯೇಗಾ”? ಎಂದು ಅವರು ನನ್ನನ್ನು ಕೇಳಿದಾಗ ನಾನು ” ಮೈ ಬಚ್ಚಾ, ಮಾ ಕೋ ಕ್ಯಾ ದೇಸಕತಾ ಹೂಂ?, ಹಮೇ ಖಿಲಾನೇವಾಲಿ ತೋ ಮಾ ಹೈ” ಎಂದೆ. ಅಲ್ಲಿ ದಾರಿಯಲ್ಲಿರುವ ಝರಿ,ತೊರೆಗಳ ನೀರು ಸಿಗುವದೆಂದು ಭಾವಿಸಿ ನಾನು ಒಯ್ಯಲಿಲ್ಲ.
ಸರಿ, ಬೆಳಿಗ್ಗೆ ಹೇಳಿದ ಸಮಯಕ್ಕೆ ಸರಿಯಾಗಿ ನಾರ್ಖಂಡಕ್ಕೆ ಹೋದರೆ ಅಲ್ಲಿ ಇವರಾರೂ ಬರಲೇ ಇಲ್ಲ. ಭಯಂಕರ ಚಳಿ. ಅಲ್ಲಿ ಯಾರೋ ಚಳಿಕಾಯಿಸಲು ಉರಿಸಿ ಇಟ್ಟಿದ್ದ ಬೆಂಕಿಯಿಂದ ಮೈಕೈ ಕಾಯಿಸಿಕೊಂಡೆ. ಗ್ಲೌಸ್ ತೆಗೆದು ಕಾಯಿಸಿಕೊಳ್ಳುವಷ್ಟರಲ್ಲಿ ಕೈ ಬೆರಳುಗಳು ಸೆಟೆದುಕೊಂಡಿದ್ದವು. ಕೈಗೆ ಜೀವವೇ ಇರಲಿಲ್ಲ. ನೇರವಾಗಿ ಬೆಂಕಿಯ ಮೇಲೆ ಹಿಡಿದಾಗ, ಒಂಭತ್ತು ಬೆರಳುಗಳಿಗೆ ಜೀವ ಬಂತು. ಆದರೆ ಒಂದು ಕಿರು ಬೆರಳು ಶಾಶ್ವತವಾಗಿ ಸೊಟ್ಟಗಾಗಿಬಿಟ್ಟಿತ್ತು. (ಇಂದಿಗೂ ಅದು ಹಾಗೇ ಇದೆ.)
ಹಿಂತಿರುಗಿ ಹೋಗಲು ಮನಸ್ಸಿಲ್ಲದೇ ನಾನೊಬ್ಬನೇ ಮೇಲೆ ಏರತೊಡಗಿದೆ.ಏರಿ, ಏರಿ ಮೇಲೆ ಹೋದ ಹಾಗೆ ಬಾಯಾರಿಕೆಯಾಯಿತು.ಆಗ ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆ.
ಹಾಗೇ ನೀರು ಹುಡುಕುತ್ತಾ ಮೇಲೆ ಹೋದಾಗ ಮಧ್ಯಾಹ್ನ ಒಂದು ಗಂಟೆಯಾಯಿತು. ಬಹಳ ಬಾಯಾರಿಕೆಯಾಗಿತ್ತು. ಇಲ್ಲಿಯೂ ನೀರು ಸಿಗದಿದ್ದರೆ….?? ಗಮ್ಯವನ್ನು ತಲುಪಾಗಿತ್ತು.ಆದರೆ ಬಹಳ ಕಂಗಾಲಾಗಿದ್ದೆ . ನೀರು ಅಲ್ಲಿಯೂ ಇರಲಿಲ್ಲ. ಅಲ್ಲಿ ಹೋದಾಗ ತಕ್ಷಣ ಇಳಿದುಬಿಡಬೇಕು ಎಂದರೂ ಕನಿಷ್ಠ ಆರುಗಂಟೆಗಳ ನಂತರವೇ.
“ಮಾ ಪಾನೀ ದೇ..” ಎಂದು ಬೇಡಿಕೊಂಡೆ.ಆರುಸಾವಿರ ಅಡಿಗಳಷ್ಟು ಮೇಲೆ ಹೋಗಿ, ಇಳಿದು ಬರಲೂ ತ್ರಾಣವಿಲ್ಲ..
ಅಷ್ಟರಲ್ಲಿ ಯಾರೋ ಒಬ್ಬ ತಲೆಯ ಮೇಲೆ ಹೊರೆಯೊಂದನ್ನು ಹೊತ್ತುಕೊಂಡು ಬರುತ್ತಿರುವುದು ಕಂಡಿತು. ಅವನು ಹತ್ತಿರ ಬಂದಾಗ ಇಲ್ಲಿ ನೀರು ಎಲ್ಲಿ ಸಿಗುವದೆಂದು ಕೇಳಿದೆ. ಅಂದು ಅಲ್ಲಿಯವರೆಗೆ ನನಗೆ ಸಿಕ್ಕಿದ ಮೊದಲ ಮನುಷ್ಯಪ್ರಾಣಿ ಅವನೇ.
ಅವನು ಇಲ್ಲೆಲ್ಲೂ ನೀರು ಸಿಗುವುದಿಲ್ಲವೆಂದು ಹೇಳಿ ,ತನ್ನ ಬಳಿಯಿರುವ ಗಂಟಿನಿಂದ ತೆಗೆದು ನೀರು ಕೊಟ್ಟ.
ಅಬ್ಬಾ…ಜೀವ ಬಂತು !!!
ಹಾಗೇ ದೇವಿಯ ದರುಶನ ಮಾಡಿ ರಾತ್ರಿಯಾಗುವುದರೊಳಗೆ ಕೆಳಗಿಳಿದು ಬಂದೆ..ಆ ಮನುಷ್ಯ ಆ ಕ್ಷಣದಲ್ಲಿ ನೀರು ಕೊಟ್ಟು ನನ್ನ ಜೀವ ಉಳಿಸಿದ ದೇವರಾಗಿದ್ದ..
ನಂತರ ತಿಳಿದು ಬಂದ ಸಂಗತಿ ಏನೆಂದರೆ , ಅಲ್ಲಿ ಆ ಕಿರುದಾರಿಯ ಪಕ್ಕ ಸ್ವಲ್ಪ ದೂರದಲ್ಲಿ ತೊರೆ,ಝರಿಗಳಿದ್ದವು ಎಂದು
(ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ವ್ಯಕ್ತಿಯೊಬ್ಬರ ಸ್ವಾನುಭವದ ಸಾರಾಂಶವಿದು. ಅಜ್ಞಾತರಾಗಿರಬಯಸುವ ಇವರ ಕಥೆಗೆ ಅಕ್ಷರ ರೂಪ ಕೊಡುವ ಪ್ರಯತ್ನವಿದು)
,
ನಿರೂಪಣೆ : ಲತಿಕಾ ಭಟ್, ಬೆಳಗಾವಿ