ಜೈಸಲ್ಮೇರಿನಲ್ಲಿ ‘ರಾಜ’ ಭೋಜನ
ಜೈಸಲ್ಮೇರ್ ನಗರವು ರಾಜಸ್ಥಾನ ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಅಪ್ಪಟ ಮರುಭೂಮಿ ಪ್ರದೇಶವಾದ ಇಲ್ಲಿಂದ 120 ಕಿ. ಮಿ. ದೂರದಲ್ಲಿ ಪಾಕಿಸ್ಥಾನದ ಸೀಮಾರೇಖೆ ಇದೆ. ರಜಪೂತರು, ಮೊಘಲರು ಆಳಿದ ಈ ನಗರದಲ್ಲಿ ಹಳದಿ ಬಣ್ಣದ ಕಲ್ಲಿನಿಂದ ಕಟ್ಟಲಾದ ಹವೇಲಿಗಳು ಹಾಗೂ ಥಾರ್ ಮರುಭೂಮಿಯ ಮರಳುದಿಬ್ಬಗಳು ಮುಖ್ಯ ಪ್ರವಾಸಿ ಆಕರ್ಷಣೆ. ಕಲ್ಲಿನ ಕಟ್ಟಡಗಳ ಮೇಲೆ ಬಿಸಿಲು ಬಿದ್ದಾಗ ಅವು ಬಂಗಾರದ ಬಣ್ಣದಿಂದ ಕಂಗೊಳಿಸುವುದರಿಂದ ಜೈಸಲ್ಮೇರ್ ನಗರಕ್ಕೆ ಗೋಲ್ಡನ್ ಸಿಟಿ ಎಂಬ ಅನ್ವರ್ಥ ನಾಮವಿದೆ. ಪ್ರವಾಸಿಗಳಾಗಿ ಜೈಸಲ್ಮೇರ್ ಗೆ ಬಂದವರಿಗೆ ಅಲ್ಲಿಯ ಶಿಲ್ಪವೈಭವ, ಕಣ್ಣು ಹಾಯಿಸುವಷ್ಟೂ ದೂರಕ್ಕೆ ಕಾಣಸಿಗುವ ಮರಳ ದಿಬ್ಬಗಳು, ಒಂಟೆ ಸವಾರಿ, ರಾಜಸ್ಥಾನಿ ಸಾಂಸ್ಕೃತಿಕ ಕಲಾಪ್ರಕಾರಗಳು ಮುದ ಕೊಡುತ್ತವೆ. ನಾವು ಸ್ಥಳ ವೀಕ್ಷಣೆಯ ಜತೆಗೆ , ರಾಜಸ್ಥಾನದ ವಿಶಿಷ್ಟ ತಿನಿಸುಗಳನ್ನು ಸವಿದೆವು. ಅವುಗಳಲ್ಲಿ ಪ್ರಮುಖವಾದುವು ‘ ದಾಲ್ – ಬಾಟಿ -ಚೂರ್ಮ’ , ‘ಕೇರ್ ಸಾಂಗ್ರಿ ಕಾ ಸಬ್ಜಿ’ ಮತ್ತು ‘ಗೇವಾರ್’. .
ದಾಲ್ – ಬಾಟಿ –ಚೂರ್ಮ
ಗೋಧಿ ಹಿಟ್ಟು, ರವೆ, ನೀರು ಮತ್ತು ತುಪ್ಪವನ್ನು ಬಳಸಿ ಚಪಾತಿಹಿಟ್ಟಿನ ಹದಕ್ಕೆ ಕಲೆಸಿ, ಕಿತ್ತಳೆ ಗಾತ್ರದ ಉಂಡೆಗಳನ್ನು ಮಾಡುತ್ತಾರೆ. ಈ ಹಿಟ್ಟಿನ ಉಂಡೆಗಳನ್ನು ಕೆಂಡದಲ್ಲಿ ಸುಟ್ಟಾಗ ‘ಬಾಟಿ’ ತಯಾರಾಗುತ್ತದೆ.. ಬೆಂದ ಬಾಟಿಯನ್ನು ಅರ್ಧ ಮಾಡಿ, ಮೇಲಿಷ್ಟು ತುಪ್ಪ ಸುರಿದು, ದಾಲ್ ನೊಂದಿಗೆ ಬಡಿಸುತ್ತಾರೆ.
ಬಾಟಿಯು ನೋಡಲು ಅಷ್ಟೇನೂ ಆಕರ್ಷಕವಾಗಿಲ್ಲ. ಚಪಾತಿ ಹಿಟ್ಟಿನ ಉಂಡೆಯನ್ನು ಕೆಂಡದಲ್ಲಿ ಸುಟ್ಟಂತೆ ಕಾಣಿಸುತ್ತದೆ. ಹೊರಪದರವು ಸ್ವಲ್ಪ ಗಟ್ಟಿಯಾಗಿ ಇರುತ್ತದೆ. ಮನೆಗಳಲ್ಲಿ ತಯಾರಿಸುವುದಾದರೆ, ಗ್ಯಾಸ್ ನ ಮೇಲೆ, ಹಪ್ಪಳ ಸುಡುವಂತೆ ‘ಬಾಟಿ’ ಹಿಟ್ಟಿನ ಉಂಡೆಯನ್ನು ಬೇಯಿಸಲು ಪ್ರಯತ್ನಿಸಿಬಹುದು. ಅವರವರ ಆಯ್ಕೆಗೆ ತುಪ್ಪವನ್ನು ಹೆಚ್ಚು-ಕಡಿಮೆ ಮಾಡಿಕೊಂಡರಾಯಿತು! ಹಾಗೆಯೇ ತಿಂದರೆ ಸಪ್ಪೆ ಬಿಸ್ಕತ್ತಿನ ರುಚಿ! ಹಾಗಾಗಿ ಇದರ ಜೊತೆಗೆ ಕೊಡಲಾಗುವ ದಾಲ್ ನಿಂದಲೇ ಬಾಟಿಯ ಸವಿ ಹೆಚ್ಚುತ್ತದೆ.
ವಿವಿಧ ಬೇಳೆಕಾಳುಗಳು ಮತ್ತು ಟೊಮೆಟೊ, ಶುಂಠಿ, ಬೆಳ್ಳುಳ್ಳಿ ಇತ್ಯಾದಿ ಮಸಾಲೆ ಇತ್ಯಾದಿ ಸೇರಿಸಿ ತಯಾರಿಸಿದ ‘ದಾಲ್’ ಬಾಟಿಗೆ ನೆಂಚಿಕೊಳ್ಳಲು ಸಾಥ್ ಕೊಡುತ್ತದೆ. ಹಲವಾರು ಕಾಳು/ಬೇಳೆಗಳಿಂದ ದಾಲ್ ಅನ್ನು ತಯಾರಿಸುತ್ತಾರಾದರೂ, ಬಾಟಿಯೊಂದಿಗೆ ತೊಗರಿಬೇಳೆ ಅಥವಾ ಹೆಸರುಕಾಳಿನ ಮಿಶ್ರಣದ ದಾಲ್ ಅನ್ನು ನೆಂಚಿಕೊಂಡು ತಿನ್ನಲು ಹೆಚ್ಚು ಚೆನ್ನಾಗಿರುತ್ತದೆ ಎಂದು ನಮಗೆ ಅನಿಸಿತ್ತು.
ಚೂರ್ಮ
ಬೆಂದ ಬಾಟಿಯನ್ನು ಪುಡಿಮಾಡಿ ಇನ್ನಷ್ಟು ತುಪ್ಪ ಸುರುವಿ ಸಕ್ಕರೆ- ಏಲಕ್ಕಿ-ಗೋಡಂಬಿ ಹಾಕಿ ಬೆರೆಸಿದಾಗ ಸಿಹಿಯಾದ ಚೂರ್ಮ ಸಿದ್ದವಾಗುತ್ತದೆ. ಇದರ ರುಚಿ ಸುಮಾರಾಗಿ ಗೋಧಿಹಿಟ್ಟಿನ ಲಾಡಿನಂತೆ. ನೋಡಲು ಕೂಡ ಗೋಧಿ ಲಾಡನ್ನು ಪುಡಿ ಮಾಡಿ, ಇನ್ನಷ್ಟು ತುಪ್ಪ ಬೆರೆಸಿ ತಟ್ಟೆಯಲ್ಲಿಟ್ಟು, ಚಮಚ ಹಾಕಿ ತಿನ್ನಲು ಕೊಟ್ಟಂತೆ. ಒಟ್ಟಿನಲ್ಲಿ ದಾಲ್-ಬಾಟಿ -ಚೂರ್ಮದ ಸಂಯೋಜನೆಯು ರಾಜಸ್ಥಾನದ ‘ಸಿಗ್ನೇಚರ್ ಡಿಶ್ಸ್ ‘ ಸ್ಥಾನ ಪಡೆದಿದೆ ನಮ್ಮಲ್ಲಿ ಹಬ್ಬದೂಟಕ್ಕೆ ಹೋಳಿಗೆ-ಲಾಡು-ತುಪ್ಪಕ್ಕೆ ವಿಶೇಷ ಮನ್ನಣೆ ಇರುವಂತೆ, ರಾಜಸ್ಥಾನದಲ್ಲಿ ‘ದಾಲ್- ಬಾಟಿ-ಚೂರ್ಮ’ಕ್ಕೆ ವಿಶೇಷ ಗೌರವವಿದೆ..
ಕೇರ್ ಸಾಂಗ್ರಿ ಕಾ ಸಬ್ಜಿ
ಥಾರ್ ಮರುಭೂಮಿಯ ಪರಿಸರದಲ್ಲಿ ಮಾತ್ರ ಬೆಳೆಯುವ ಒಂದು ವಿವಿಧ ಕಾಳು ( ಕೇರ್ ) ಮತ್ತು ಒಣಬೀನ್ಸ್ ನಂಥಹ ‘ಸಾಂಗ್ರಿ’ಯನ್ನು ನೀರಿನಲ್ಲಿ ನೆನೆಸಿ ಮಾಡುವ ಪಲ್ಯ ಇದು. ಬಾಜ್ರ ಅಥವಾ ಗೋಧಿ ರೊಟ್ಟಿಯೊಂದಿಗೆ ಬಡಿಸುವ ವ್ಯಂಜನ. ರುಚಿಯಲ್ಲಿ ಸುಮಾರಾಗಿ ಬೀನ್ಸ್ ಅನ್ನು ಹೋಲುವ ಕೇರ್ ಕಾ ಸಾಂಗ್ರಿಯು ಮರುಭೂಮಿಯಲ್ಲಿ ಬೆಳೆಯುವ ತರಕಾರಿ ಎಂಬ ಕಾರಣಕ್ಕೆ ವಿಶಿಷ್ಟವಾಗಿದೆ. ‘ಕೇರ್ ಕಾ ಸಾಂಗ್ರಿ’ಯನ್ನು ಒಣಗಿಸಿ ಇಟ್ಟುಕೊಂಡು, ಅಡುಗೆ ಮಾಡುವ ಮೊದಲು 4-5 ಗಂಟೆ ನೀರಿನಲ್ಲಿ ನೆನೆಸಿ, ಆಮೇಲೆ ಬೇಯಿಸಿ , ವಿವಿಧ ಮಸಾಲೆಗಳನ್ನು ಬೆರೆಸಿ ಗ್ರೇವಿಯ ಹಾಗೆ ಇರುವ ಪಲ್ಯ ತಯಾರಿಸುತ್ತಾರೆ.
ಗೇವಾರ್
ಮೈದಾ ಹಿಟ್ಟು , ಹಾಲು, ಸಕ್ಕರೆ ಮತ್ತು ತುಪ್ಪವನ್ನು ಬಳಸಿ ತಯಾರಿಸುವ ಗೇವಾರ್ ಸ್ವಾದಿಷ್ಟವಾಗಿದೆ. ಆಕಾರದಲ್ಲಿ ದೋಸೆಯಂತೆ ಇದ್ದು ಕೇಕ್ ನಂತೆ ಮೆದುವಾಗಿ, ಸಿಹಿಯಾಗಿ ಇರುವ ಸಿಹಿತಿನಿಸು ರಾಜಸ್ಥಾನದ ಶುಭಕಾರ್ಯಗಳ ಊಟದಲ್ಲಿ ಕಡ್ಡಾಯವಾಗಿ ಇರುತ್ತದೆಯಂತೆ. ದೋಸೆಗಿಂತ ಮೆತ್ತನೆಯಾಗಿದ್ದು ಕೇಕ್ ಗಿಂತ ಗಟ್ಟಿ ಇರುವ ಈ ಸಿಹಿತಿನಿಸು ಸಿಹಿಪ್ರಿಯರಿಗೆ ಖಂಡಿತಾ ಇಷ್ಟವಾಗಬಹುದು. ಗೇವಾರ್’ ಬೇಕರಿಗಳಲ್ಲಿಯೂ ಸಿಗುತ್ತದೆ. ಒಂದು ವಾರದ ವರೆಗೆ ರುಚಿ ಕೆಡುವುದಿಲ್ಲ. ರಾಜಸ್ಥಾನಕ್ಕೆ ಹೋದವರು ಅಲ್ಲಿ ಸವಿಯುವುದರ ಜೊತೆಗೆ ಮನೆಮಂದಿಗಾಗಿ ಖರೀದಿಸಿ ತರಬಹುದು.
ಈ ತಿನಿಸುಗಳು ಸಿಗುವ ತಾಣ :
ರಾಜಸ್ಥಾನದ ಹೆಚ್ಚಿನ ಹೋಟೆಲ್ ಗಳಲ್ಲಿ ದಾಲ್,ಭಾಟಿ, ಚೂರ್ಮ, ಗೇವಾರ್ ಸಿಗುತ್ತವೆ. ‘ಕೇರ್ ಸಾಂಗ್ರಿ ಕಾ ಸಬ್ಜಿಯು ಸಾಮಾನ್ಯವಾಗಿ ಜೈಸಲ್ಮೇರ್ ನ ಹೋಟೆಲ್ ಗಳಲ್ಲಿ ಲಭ್ಯ . ರಾಜಸ್ಥಾನ ಪ್ರವಾಸಕ್ಕೆ ಹೋಗುವವರು ಸ್ಥಳೀಯ ತಿನಿಸುಗಳನ್ನು ತಿನ್ನಲು ಮರೆಯದಿರಿ.
,
– ಹೇಮಮಾಲಾ.ಬಿ
(ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)
ಸುಂದರ ಲೇಖನ ಪ್ರವಾಸಿಗರಿಗೆ ಉಪಯುಕ್ತ.
ಲೇಖನ ತುಂಬಾ ಚೆನ್ನಾಗಿದೆ
ಧನ್ಯವಾದಗಳು
ಉಪಯುಕ್ತ ಮಾಹಿತಿ. ತಮ್ಮ ಬರಹದ ಶೈಲಿಗೆ ಬಾಯಲ್ಲಿ ನೀರೂರಿತು.