ಮನೆವಾಳ್ತೆಯ ಮಹಿಳೆಗ್ಯಾಕೆ ಯಾವ ಪ್ರಶಸ್ತಿ ಇಲ್ಲ!?

Share Button
Sangeetha Raviraj

ಸಂಗೀತ ರವಿರಾಜ್

ನಾವು ಹುಟ್ಟಿ ಬೆಳೆದ ಮನೆ ಪರಿಸರದಲ್ಲಿ ನಮಗೆ ಬೇಕಾದಂತೆ ಹಾಯಾಗಿ ದಿನಗಳೆದು ಚಿಗರೆಯಂತೆ ಓಡಾಡುವ ಹುಡುಗಿಯರು ಮದುವೆಯ ನಂತರದ ಜೀವನದ ಬಗ್ಗೆ ಆಲೋಚನೆಯು ಮಾಡಲು ಹೋಗುವುದಿಲ್ಲ. ಇಲ್ಲಿ ಇದ್ದಂತಲ್ಲ ಅಲ್ಲಿ. ಏನಾದರು ಸ್ಪಲ್ಪ ಮನೆಕೆಲಸ ಕಲಿ ಎಂಬ ಅಮ್ಮಂದಿರ ಸಹಸ್ರ ನಾಮಾರ್ಚನೆಯನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟುಬಿಡುತ್ತಾರೆ ಅಷ್ಟೆ. ವಾಸ್ತವ ಮತ್ತು ಜೀವನ ಅರಿವಾಗುವುದು ಪ್ರತಿ ಹೆಣ್ಣಿಗು ಮದುವೆಯ ನಂತರವೆ ಎಂಬುದು ದಿಟ. ಎಂತಹ ಕಟುವಾಸ್ತವವನ್ನು ಎದುರಿಸುವ ಶಕ್ತಿಯನ್ನೂ ತನ್ನ ತವರಿಂದಲೆ ಪಡೆದುಕೊಂಡು ಹೋಗುತ್ತಾಳೆ. ಹೊಂದಾಣಿಕೆಯ ಸಂಸಾರದ ಮೂಲಮಂತ್ರ ಎಂಬುದು ಆಕೆಗೆ ರಕ್ತಗತವಾಗಿರುತ್ತದೆ. ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವ ಹೆಣ್ಣು ಮನುಕುಲದ ಮನ್ವಂತರವೆ ಸರಿ.

ಕನ್ನಡದ ಖ್ಯಾತ ಲೇಖಕಿಯೊಬ್ಬರು ತಮ್ಮ ಬರಹದಲ್ಲಿ ಹೆಣ್ಣು ಎಷ್ಟು ಕಲಿರತೇನು, ಬೆಳಗಾಗೆದ್ದು ಒಲೆಯ ಬೂದಿ ತೆಗೆಯುವುದು ತಪ್ಪುವುದೇ? ಹೆಣ್ಣು ಪ್ರಧಾನಿಯಾದರು ಮುಂಜಾನೆ ಗಂಡನಿಗೆ ಚಹಾ ಕೊಡಲೇಬೇಕು ಎಂಬುದಾಗಿ ಹೇಳಿದರು. ಇದೇ ಮಾತನ್ನು ಪರಾಮರ್ಶಿಸಿದಾಗ ಗೃಹಿಣಿಯ ಕಾರ್ಯವೈಖರಿ ಸಂಪೂರ್ಣ ಅರಿವಾಗುತ್ತದೆ.

ಮನೆಯಿಂದ ಮನೆಯೆನಿಸುವುದೆಲ್ಲ
ಮಡದಿಯಿಂದ ಮನೆ ಕಾಣಾ|
ಕಲ್ಲು ಕಟ್ಟಡಗಳಿಂದ ಮನೆಯಾಗುವುದಿಲ್ಲ.
ಮನೆಯೊಳಗೆ ಮಡದಿಯಿದ್ದರೆ ಮಾತ್ರ ಮನೆ ನೋಡಿ|

Housewife choresಹೌದು. ಮನೆಯ ಶುಭೋದಯದವೆ ಗೃಹಿಣಿ. ಆದರೂ ಆಕೆಗೆ ಬವಣೆಯೊಳಗಿನ ಸುಖಗಳು ಹಲವಾರು. ಬೆಳಗಾಗೆದ್ದು ಉರಿಸಿದ ಬೆಂಕಿಯೊಂದಿಗೆ ಸುಟ್ಟುಹೋಗುವ ಆಕೆಯ ಕನಸುಗಳು. ಅನ್ನದೊಂದಿಗೆ ಬೇಯುವ ಕನವರಿಕೆಗಳು, ಒಗೆದ ಬಟ್ಟೆಯೊಂದಿಗೆ ಹಿಂಡಿ ಹಿಪ್ಪೆಯಾಗುವ ಆಲೋಚನೆಗಳೂ, ತೊಳೆದ ಪಾತ್ರೆಯ ನೀರಿನಲ್ಲಿ ಕಳೆದು ಹೋಗುವ ಬಯಕೆಗಳು, ಗುಡಿಸಿ ಸಾರಿಸಿ ತೆಗೆದ ಆಸೆಗಳು, ಮಕ್ಕಳ ಆಟದ ಪರಿಕರಗಳನ್ನು ಎತ್ತಿಟ್ಟ ಭಾವದೊಳಗೆ ನಿಡಿದಾದ ನಿಟ್ಟುಸಿರು, ಮೆಗಾಧಾರಾವಾಹಿಗಳ ಅಂತ್ಯವಿಲ್ಲದ ಕಢೆಯ ಆವರಿಪ ಶೂನ್ಯಭಾವ, ಮಹೋತ್ಸವದಲ್ಲೆ ಕಣ್ಬೆಳಕು ತೋರಿ ಬೆಳಗಾದರೆ ಕತ್ತಲಾಗುವ ಸುಪ್ತ ಹೊಂಗಿರಣಗಳು, ಮನೆಪಾಠ, ಮನೆಖರ್ಚುವೆಚ್ಚ ಸರಿದೂಗಿಸಿ ಹೈರಾಣಾದ ಹೃದ್ಯಕಂಗಳು, ಗಂಡ-ಮಕ್ಕಳ ಬರುವಿಕೆಯ ಕಾಯುವಿಕೆಯೊಂದಿಗೆ ಕಳೆದು ಹೋಗುವ ಕಾಲವೂ…..!? ಇಂತಹ ಹಲವಾರು ಕಾರ್ಯವೈಖರಿಗಳ ನಡುವೆಯು ಸದಾ ತೃಪ್ತಿ ಕಂಡ ಬದುಕು. ವ್ಯಾಸ ಮಹರ್ಷಿ ಮಹಾಭಾರತದ 233ನೇ ಪರ್ವದಲ್ಲಿ ಹೇಳಿದನ್ನು ಈಗಲು ಇಲ್ಲಿ ಸ್ಮರಿಸೋಣ. ಭಾರತೀಯ ಮಹಿಳೆ ಸುಖದಲ್ಲಿ ಸುಖವನ್ನು ಕಾಣುವವಳಲ್ಲ ; ದು:ಖದಲ್ಲಿ ಸುಖವನ್ನು ಕಾಣಬಲ್ಲದವಳು. ಕಾಲಚಕ್ರ ಸದ್ದಿಲ್ಲದೆ ತಿರುಗುವ ನಿಲ್ಲದ ನಿಬಂಧನೆ. ಇದರೊಳಗೆ ಮನೆವಾರ್ತೆಯೆಂದರೆ ಯಾವುದೆ ಅಡ್ಡಿ ಆತಂಕಗಳಿಲ್ಲದ ಸಣ್ಣ ಕೆಲಸವೆಂದೆ ಭಾವಿಸಿದವರು ಹೆಚ್ಚು. ಯಾಂತ್ರಿಕ ಜೀವನದ ಯಂತ್ರ ದೇಹದ ಪಿಸುನುಡಿ ಯಾರಿಗು ಕೇಳಿಸುವುದಿಲ್ಲ. ಬಾಹ್ಯದ ಬೆವರಿನ ಅಣಿಮುತ್ತು ಅಳಿಸುವುದೆ ಇಲ್ಲವೆಂಬಂತೆ ಕೆಲಸವಾದರೆ, ಅಂತರಂಗದೊಳೂ ಅಂತಹುದೆ ಧಾವಂತ, ಸುಸ್ತಾಗದ ಸಹಿಷ್ಣುತೆ. ಇವೆಲ್ಲದರಿಂದ ಸಹನೆ ಕಳೆದು ಹೋಗಿದೆ ಎಂಬ ಮನೋಭಾವವವಿಲ್ಲ ಬದಲಿಗೆ ತನ್ನು ತಾಳ್ಮೆಯ ಮಿತಿ ಹೆಚ್ಚಿನದಾಗಿದೆ ಎನ್ನುವ ಸಾಧ್ವಿ. ಹೀಗಿರುವಾಗ ಅನುರೂಪಳಾದ ಹೆಂಡತಿಯಿರುವಾಗ ವಿದೇಶಿಗರು ಭಾರತೀಯ ದಂಪತಿಗಳು ಜೀವನಪೂರ್ತಿ ಜೊತೆಗಿರಲು ಹೇಗೆ ಸಾಧ್ಯ ಎಂಬುದಾಗಿ ಆಶ್ಚರ್ಯಪಡುವುದರಲ್ಲಿ ತಪ್ಪೇನಿಲ್ಲ.

ಅಪ್ಪ ಅಂದರೆ ನಂಬಿಕೆ, ಅಮ್ಮ ಅಂದರೆ ಸತ್ಯ ಎಂಬ ಭಾವನೆಯ ಹುರುಳಿರುವ ಆತ್ಮಸಾಕ್ಷಾತ್ಕರದಲ್ಲಿ ಬೆಳೆಯುತ್ತಿರುವ ಮಕ್ಕಳಿಗು ಮುಂದೆ ಇದೇ ಸಂಸ್ಕಾರ ಬೆಳೆದಿರುತ್ತದೆ. ಬದಲಾಗುತ್ತ್ತಿರುವ ಕಾಲಘಟ್ಟದಲ್ಲಿ ಗೃಹಿಣಿಯ ಪಾತ್ರ ಬದಲಾವಣೆ ಹೊಂದಿದ್ದರು ಭಾರತೀಯ ಬಾಳ್ವೆಯೊಳಗೆ ಹೇಳಲಾಗದ ಅವಿನಾಭಾವ ಸಂಭಂದ ಇದ್ದೆ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಶೀರ್ಷಿಕೆ ಹೇಳಿರುವಂತೆ ಮನೆವಾಳ್ತೆಯ ಮಹಿಳೆಗ್ಯಾಕೆ ಯಾವ ಪ್ರಶಸ್ತಿಯು ಇಲ್ಲ ಎಂಬ ಪ್ರಶ್ನಾರ್ಥಕಕ್ಕೆ ಉತ್ತರವೆಂಬಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ಕೈಂಕರ್ಯಕ್ಕೆ ಯಾಕೆ ಬೇಕು ಪುರಸ್ಕಾರ? ಇಂತಹ ಪ್ರಶಸ್ತಿ ಇದ್ದರು ಅರ್ಜಿ ಗುಜರಾಯಿಸಲು ಯಾರು ಮುಂದೆ ಬಾರದ ಲೋಕ ನಮ್ಮ ಗೃಹಿಣಿಯರದ್ದು!

Homemaker award

ನಡುಮನೆಯ ಒಳಕೋಣೆಯಲ್ಲಿ ಉರಿಯುವ ದೀಪದಂತಹ ಬಾಳು ಗೃಹಿಣಿಯರದ್ದು. ದೀಪ ಬೆಳಗುತ್ತಿದ್ದರೆ ಆ ಮನೆಗೆ ಪ್ರಭೆ. ಆಕೆಯ ಹೃದಯ ಮಿಡಿತ ಹೊಸಿಲು ದಾಟುವುದೆ ಇಲ್ಲ. ಆಕೆಗೆ ಅದರಲ್ಲೆ ಖುಷಿ. ಎಲ್ಲಾ ಕಾರ್ಯಕ್ಷೇತ್ರಗಳನ್ನು ಒಳಗೊಂಡಂತೆ ಮನೆ ನಿಭಾಯಿಸುವ ಗೃಹಿಣಿಯ ಚಾಕಚಕ್ಯತೆ ಯಾವ ನಾಯಕನಿಗೆ ಕಡಿಮೆ ಹೇಳಿ? ತಿಳುವಳಿಕೆ ಇಲ್ಲದವರು ಮಾತ್ರ ಆಕೆಗೇನು ಕೆಲಸ ಅನ್ನುತ್ತಾರೆ ಅಷ್ಟೆ. ಮನೆಯ ಏಳಿಗೆಗೆ ನಿರಂತರ ಕಾಯಕಲ್ಪ ನೀಡುವ ಮಹಿಳೆಗೆ ಕೊಂಚ ಕಾಳಜಿ, ತುಸು ಪ್ರೀತಿ ನೀಡಿದರೆ ಅದೇ ಅವಳಿಗೆ ಜೀವನದಿ. ಸುಪ್ರಭಾತದ ಬೆಳಗು ಕಳೆದಿರುಳು ಬರುತ್ತಿದ್ದರೂ, ಪಾಡ್ಯ, ಬಿದಿಗೆ, ಶಿಶಿರ ಕಳೆದು ಮತ್ತೊಮ್ಮೆ ಬರುತ್ತಿದ್ದರು ಗೃಹಿಣಿಯ ಕಾರ್ಯದಲ್ಲಿ ಯಾವುದೆ ಬದಲಾವಣೆಯಿಲ್ಲ .

 

 

– ಸಂಗೀತ ರವಿರಾಜ್

 

5 Responses

  1. Hema says:

    ಸಂಗೀತಾ ಅವರೇ, ಬರಹ ಆಪ್ತವೆನಿಸಿತು.
    “ಇಂತಹ ಪ್ರಶಸ್ತಿ ಇದ್ದರು ಅರ್ಜಿ ಗುಜರಾಯಿಸಲು ಯಾರು ಮುಂದೆ ಬಾರದ ಲೋಕ ನಮ್ಮ ಗೃಹಿಣಿಯರದ್ದು!” ಈ ವಾಕ್ಯ ವಾಸ್ತವಕ್ಕೆ ಹಿಡಿದ ಕನ್ನಡಿ.

  2. Niharika says:

    ವಾವ್.. 100 % ನಿಜ. ಉತ್ತಮ ಬರಹ. ಇಷ್ಟವಾಯಿತು .

  3. Neelamma Banur says:

    Well said

  4. Rahul Raj says:

    Waaaw sooo great ittheechege recommend maadi award thagolo mandheene hecchirovaaga ee reethi thought sooo great n amaazing

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: