ಸಪ್ತ ಸುಪ್ರಭಾತ ಸರಮಾಲೆ…!!!
1
ನೀಲಿ ಆಕಾಶದಲಿ ತಾರಾ ಲೋಕದಲಿ
ಚಂದಿರನು ನಸುನಗುತ ಬಂದ
ಮಬ್ಬುಗತ್ತಲಿನ ತೆರೆ ಸರಿಯೆ ನೋಡಲ್ಲಿ
ಆ ಸೂರ್ಯ ಕಿರಣಗಳು ಚಂದ..!
2
ಮೂಡಿದನು ರವಿತೇಜ ಮೂಡು ಬಾನಂಗಳದಿ
ಬಿಳಿ ಮೋಡಗಳೆಡೆಯಿಂದ ಮೆಲ್ಲ ಮೇಲೆ
ನೋಡು ನೋಡುತ ಸರಿದ ಬಣ್ಣ ಮೇಲಿದು ಹಳದಿ
ಕಣ್ತುಂಬಿಕೊಳ್ಳೆ ತಾ ಇದು ಜಗದ ಶಾಲೆ..!
3
ಗಿರಿಶಿಖರ ಮೇಲಿಂದ ನೇಸರನು ಮೂಡಿಬರೆ
ಗರಿಮೂಡಿ ಮನಹಕ್ಕಿ ತಾನು ಕೂಗಿ ಕರೆ
ನವಿರಾದ ತಂಗಾಳಿ ತೇಲಿ ಮುಂದುಬರೆ
ಶುಭದಿನಕೆ ಶುಭ ಕೊರುವಾ ಮನ ಬರೆ…
4
ಬಾನಂಗಳದಲಿ ತೇಲಿಬರೆ ಕರಿಮೋಡಗಳ ಸಾಲು
ಮನೆಯಂಗಳದಲಿ ಬೀಳೆ ಹನಿ ನೀರ ಪಾಲು
ಹಸಿರುಸಿರಿ ಕಂಗೊಳಿಸೆ ತಂಪೆರೆದ ಈ ಮಳೆಗೆ
ಶುಭ ಕೋರೆ ಸೂರ್ಯ ಬರೆ ಕಂಗೊಳಿಪ ಇಳೆಗೆ
5
ಬೆಳ್ಳಿತೇರನು ಏರಿ ಬಂದನದೊ ಆದಿತ್ಯ
ಉಷೆ ಕುಂಚ ಆಡಿಸಿರೆ ಚಿತ್ರ ಸತ್ಯ
ಪ್ರಕೃತಿಯ ವೈಭವವು ತಾ ಚಿರ ವೈಚಿತ್ರ್ಯ
ಮನದುಂಬಿ ಅನುಭವಿಸೆ ಅದು ನಿತ್ಯಸತ್ಯ
6
ನಿಶೆಯ ಓಡಿಸಲು ತಾ ಉಷೆ ಮೂಡಿ ಬಂದಾಗ
ಹಕ್ಕಿಗಳ ಚಿಲಿಪಿಲಿಯೆ ಉದಯರಾಗ
ಮನದ ನಿಶೆ ತೊಲಗಿಸಲು ರಾಮ ತಾ ಬಂದಾಗ
ಮನದ ಹಕ್ಕಿಗಳಿಗದೆ ಪುಣ್ಯರಾಗ
7
ಭಾನುವಿನ ಹೊಂಗಿರಣ ಸೂಸಿ ಮೂಡಲದಿ
ಕತ್ತಲನು ಕಳೆದು ತಾ ಭುವಿಯು ಬೆಳಗೆ
ಪಕ್ಷಿಸಂಕುಲವು ತಾ ಉದಯರಾಗವ ಹಾಡಿ
ಮನಸೆಂಬ ಹೂವರಳಿ ಮುಖವು ಬೆಳಗೆ
.
– ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ!
ಮೆಚ್ಚುಗೆಗಾಗಿ ಧನ್ಯವಾದಗಳು