ಸಹಜ ಯೋಗಾಸನಗಳು…

Share Button
Hema trek Aug2014

ಹೇಮಮಾಲಾ.ಬಿ

ನಾವು ಚಿಕ್ಕವರಿರುವಾಗ ಓದು-ಬರಹ ಮಾಡಲು ಮಕ್ಕಳಿಗಾಗಿ ಪುಟಾಣಿ ಕುರ್ಚಿ-ಮೇಜು, ‘ಡಿಸೈನರ್ ಸ್ಟಡಿ ಟೇಬಲ್’ ಇವೆಲ್ಲಾ ಗೊತ್ತೇ ಇರಲಿಲ್ಲ. ನೆಲದ ಮೇಲೆ ಒಂದು ಚಾಪೆ ಹಾಸಿದರೂ ಆಯಿತು, ಇಲ್ಲದಿದ್ದರೂ ಸರಿ. ಕುಳಿತೋ, ಮಲಗಿಯೋ ಓದಿ-ಬರೆದು ಮಾಡುತ್ತಿದ್ದೆವು. ಇನ್ನು ಓದಲು ಕುಳಿತುಕೊಳ್ಳುತ್ತಿದ್ದ ಶೈಲಿಯನ್ನು ಈಗ ನೆನಪಿಸುವಾಗ ನಾವು ನಮಗರಿವಿಲ್ಲದೆಯೇ ಅದೆಷ್ಟು ‘ಯೋಗಪಟು’ಗಳಾಗಿದ್ದೆವು ಅನಿಸುತ್ತದೆ! ಉದಾಹರಣೆಗೆ :

ಮಲಗಿಕೊಂಡು ಓದಬಾರದೆಂದು ದೊಡ್ಡವರು ಹೇಳುತ್ತಿದ್ದರೂ, ಕವುಚಿ ಮಲಗಿ ಎರಡೂ ಕೈಗಳನ್ನು ಗಲ್ಲಕ್ಕೆ ಆಧಾರವಾಗಿ ಒತ್ತಿ ಹಿಡಿದು, ಓದುತ್ತಿದ್ದೆವು ( ಮಕರಾಸನದ ಒಂದು ಪ್ರಕಾರದಂತೆ) . ಹೀಗೆ ಓದುವಾಗ, ಕಾಲುಗಳನ್ನು ಆಗಾಗ ಮುಂದಕ್ಕೆ,ಹಿಂದಕ್ಕೆ, ಪಕ್ಕಕ್ಕೆ ಚಲಿಸುವುದು, ಕೆಲವೊಮ್ಮೆ ಪಕ್ಕದಲ್ಲಿರುವವರನ್ನು ಕೆಣಕಲೆಂದೇ ಕಾಲನ್ನು ಚಾಚುವುದು ನಡೆಯುತ್ತಿತ್ತು ( ಚಾಲನೆ ಸಹಿತ ಮಕರಾಸನದಂತೆ). ಓದಿ ಸುಸ್ತಾದಾಗ, ಕಾಲಿನ ಹಿಮ್ಮಡಿ ಒಳಮುಖವಾಗಿರುವಂತೆ ಚಾಚಿ, ಕೈಗಳನ್ನು ವಿರುದ್ಧ ದಿಕ್ಕಿನಲ್ಲಿ ಮಡಿಚಿ, ತಲೆಯ ಅಡಿಗೆ ಇಟ್ಟು ಮಲಗಿದರೆ ಎಂತಹಾ ವಿಶ್ರಾಂತಿ ( ಮಕರಾಸನ)!

Makarasana-3 

Makarasana1

ಕಾಲನ್ನು ಹಿಮ್ಮುಖವಾಗಿ ಮಡಚಿ ಕುಳಿತು ಬರೆಯುತ್ತಿದ್ದೆವು, ‘ವೀರಾಸನ’ದಂತೆ . ಸ್ವಲ್ಪ ದೂರದಲ್ಲಿರುವ ಶಾಲಾಚೀಲವನ್ನೋ, ಉರುಳಿ ಹೋದ ಪೆನ್ಸಿಲ್ ಅನ್ನೋ ತರಲು ಎದ್ದು ಹೋಗುವ ಬದಲು, ಶರೀರವನ್ನೇ ತಿರುಚಿ ಎಡಕ್ಕೋ ಬಲಕ್ಕೋ ಕೈಗಳನ್ನು ಚಾಚಿ ‘ಜಠರ ಪರಿವರ್ತನಾಸನ’ವನ್ನೂ ಮಾಡುತ್ತಿದ್ದೆವು. ಇದ್ದಕಿದ್ದಂತೆ ಏನೋ ನೆನಪಾದರೆ ಅಥವಾ ಮಕ್ಕಳಲ್ಲಿ ಜಗಳವಾದರೆ, ತತ್ಕ್ಷಣ ಅರ್ಧಕ್ಕೆ ಮೇಲೆದ್ದು, ಕೈಗಳ ಆಧಾರದಲ್ಲಿ ಶರೀರದ ಮುಂಭಾಗವನ್ನು ಮೇಲೆತ್ತಿ ‘ಭುಜಂಗಾಸನ’ ಆಗುತ್ತಿತ್ತು. ಅದಕ್ಕೆ ಪ್ರತೀಕಾರವಾಗಿ ಇನ್ನೊಬ್ಬರು ಬಂದು ಎತ್ತಿದ್ದ ತಲೆಯನ್ನು ನೆಲಕ್ಕೆ ಜಗ್ಗಿಸಿದಾಗ, ಕಾಲಿನ ಭಾಗ ತಂತಾನೇ 15 ಡಿಗ್ರಿ ಯಷ್ಟು ಮೇಲೆದ್ದು, ‘ಶಲಭಾಸನ’ವೂ ಸಂಪನ್ನಗೊಳ್ಳುತ್ತಿತ್ತು. ಕಥೆಪುಸ್ತಕವನ್ನು ಓದುವಾಗ, ತಲೆಯನ್ನು ಸ್ವಲ್ಪ ಎತ್ತರಿಸಿ, ಶರೀರವನ್ನು ಒಂದು ಕಡೆಗೆ ವಾಲಿಸಿ, ಒಂದು ಕೈಯಿಂದ ತಲೆಯನ್ನು ಆಧರಿಸಿದಾಗ ‘ಅನಂತಾಸನ’ವಾಯಿತು.

ಬಾಲ್ಯದಲ್ಲಿ ಅತ್ಯಂತ ಸಹಜವಾಗಿ ಅರಿವಿಲ್ಲದೆಯೇ ಮಾಡಿದ ಯೋಗಾಸನಗಳು, ಈಗ ತರಬೇತಿ ಪಡೆದರೂ ಸುಲಲಿತವಾಗಿ ಮಾಡಲಾಗುತ್ತಿಲ್ಲ !

 

– ಹೇಮಮಾಲಾ.ಬಿ

7 Responses

  1. ಹೇಮಮಾಲರವರೆ,
    ವಯಸ್ಕರಾದಂತೆ ನಾವೆಷ್ಟು ನಿರ್ಬಂಧಿತರಾಗುತ್ತೇವೆನ್ನುವುದು ನಮ್ಮರಿವಿಗೆ ಬರುವುದೇ ಇಲ್ಲ. ದೊಡ್ಡ ಆಸನಗಳಿರಲಿ ಸ್ವಲ್ಪ ಎತ್ತರದ ಜಾಗಗಳಿಗೆ ಕಾಲೆತ್ತಿಡಲು ಹರಸಾಹಸ ಮಾಡಬೇಕು, ಸಮತೋಲನ ತಪ್ಪಿ ಹೋದೀತೆಂದು ಅಂಜುತ್ತಲೆ ನಿಭಾಯಿಸಬೇಕು.. ಚಿಕ್ಕವರಿದ್ದಾಗ ಎಷ್ಟು ಸಲೀಸಾಗಿ ಚಕ್ಕಳಮಕ್ಕಳ ಹಾಕಿ ಕೂತು ಊಟ ಮಾಡುತ್ತಿದ್ದೆವು. ಈಗ ಆ ರೀತಿ ಕೂರಲೆ ಮೊದಲ ಕಷ್ಟ, ಮೇಲೇಳಲು ಇನ್ನೂ ಕಷ್ಟ ! ಮಕ್ಕಳ ವಿಷಯದಲ್ಲಿ ಅವರ ಸ್ನಾಯು ಖಂಡಗಳೆಲ್ಲ ಚುರುಕಾಗಿ ಹೇಳಿದಂತೆ ಕೇಳುತ್ತವೆಯಾಗಿ ಅದರ ಕಾಠಿಣ್ಯದ ಅರಿವಿಲ್ಲದೆಯೆ ಎಲ್ಲ ಸಲೀಸಾಗಿ ನಡೆಯುತ್ತದೆ – ಅವರೂ ದೊಡ್ಡವರಾಗುವತನಕ 🙂

  2. Sathya Yc says:

    Nanna balyada nenapaytu mam

  3. Shyamala Kashyap says:

    ನಿಜ ನಾನು ಹೀಗೆ ಓದ್ತಾ ಇದ್ದೆ. ಸೊಗಸಾದ ಬಾಲ್ಯ. ಈಗ ಯೋಗಾಸನ ಕ್ಲಾಸ್ ಗೆ ಹೋದ್ರೂ ಮಾಡಕೆ ಆಗ್ತಿಲ್ಲ.

  4. Krishnappa Ramaswamy Gowda says:

    ನನಗೂ ಇಂತಃ ಅನುಭವವಾಗಿದೆ. ಆದರೆ ಯೋಗದೊಂದಿಗೆ ಬೆರೆತಿದುದು,ಈಗಷ್ಟೆ ಅರಿವಾಯಿತು. ನಮನಗಳೊಂದಿಗೆ.

  5. ನವೀನ್ ಮಧುಗಿರಿ says:

    ಚಿಕ್ಕ ಬರಹ , ಚೊಕ್ಕ ಬರಹ.. ಇಷ್ಟವಾಯ್ತು.. ನಮಗೇ ಗೊತ್ತಿಲ್ಲದೇ ನಮ್ಮ ಬಾಲ್ಯದಲ್ಲಿ ನಾವು ಯೋಗಪಟುಗಳಾಗಿದ್ವಿ ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: