‘ಕಾಗುಣಿತ’ ಕಾವ್ಯದೇವಿ
*ಕ*ಮಲದಳಗಳ ಮೇಲೆ ನಡೆಯುತ
*ಕಾ*ವ್ಯದೇವಿಯು ಬಂದಳು.
*ಕಿ*ರುನಗೆಯ ಪನ್ನೀರ ಸೂಸುತ
*ಕೀ*ರವಾಣಿಯಲುಲಿದಳು.
*ಕು*ಹೂ ಎನ್ನುತ ಮಧುರಪಿಕಗಳು
*ಕೂ*ಗೆ ಸುಳಿಯುತ ಬಂದಳು.
*ಕೃ*ಪೆಯದೋರುತ ಕವಿಮನಗಳಿಗೆ
*ಕೆ*ನೆಯ ಹಾಲಂತೊಲಿದಳು.
*ಕೇ*ದಗೆಯ ಪರಿಮಳದ ವನದಿಂ
*ಕೈ*ಯ ಬೀಸುತ ಬಂದಳು.
*ಕೊ*ರಳ ಪದಕದ ಹಾರ ಮಿಂಚಲು
*ಕೋ*ಮಲಾಂಗಿಯು ನಲಿದಳು.
*ಕೌ*ತುಕದಿ ನೋಡುತಿರೆ ಅವಳನು
*ಕಂ*ದ ಬಾ ಇಲ್ಲೆಂದಳು.
ಕವನದಳಗಳ ಮೇಲೆ ಬೆಳಗುತ ಕಾವ್ಯದೇವಿಯು ನಿಂದಳು.
‘
– ಮೋಹಿನಿ ದಾಮ್ಲೆ (ಭಾವನಾ)
‘ಕಾಗುಣಿತ’ ಕವನ ತುಂಬಾ ಸೊಗಸಾಗಿದೆ.
ಖುಷಿಯಿಂದೋದಿಸುವ ಕವನ..