ಹೇಗೆ
ಉದುರಿದ ಪಕಳೆಗಳಲ್ಲಿ ನಿನ್ನ ಅರಸುವುದು ಹೇಗೆ
ವಿಷಮರೇಖೆಗಳಲ್ಲಿ ಬಣ್ಣ ತುಂಬುವುದು ಹೇಗೆ
ಕೈಹಿಡಿದು ನಡೆವಾಗ ಬಡಿದು ಬರಸಿಡಿಲು
ಸೀಳಿದ ದಾರಿಗಳ ಮತ್ತೆ ಬೆಸೆಯುವುದು ಹೇಗೆ
ಸಾಗಿದ ಹಾದಿಗುಂಟ ಬೆಳೆದ ಗೋರಿಯ ಸಾಲು
ಸತ್ತ ಕನಸುಗಳ ನಡುವೆ ನಿನ್ನ ತಲುಪುವುದು ಹೇಗೆ
ಜಾರಿ ಬಿದ್ದಿದೆ ದೀಪ ಒಡೆದು ಹೋಗಿದೆ ಗಾಜು
ಕೆಣಕುಗಾಳಿಯಲಿ ಕುಡಿಯ ಕಾಯುವುದು ಹೇಗೆ
ಮುಳುಗಿದ ನೇಸರ ಮತ್ತೆ ಹುಟ್ಟುತ್ತಾನೆ ಖಾತ್ರಿ ‘ವಿಶು’
ಜಾರದಂತವನ ಬೊಗಸೆಯಲಿ ಹಿಡಿಯುವುದು ಹೇಗೆ
‘
– ಗೋವಿಂದ ಹೆಗಡೆ
ಭಾವಪೂರ್ಣ ಕವನ. ಇಷ್ಟವಾಯಿತು .
ಧನ್ಯವಾದ !