ಹಾರಿಹೋಗುವ ಮರಿಗಳು..
ಸೆಪ್ಟೆಂಬರ ತಿಂಗಳ ಒಂದು ಮುಂಜಾವು..ಪುಟ್ಟ ತೋಟದ ದಟ್ಟ ಮರಗಳ ನಡುವಿನಲ್ಲಿನಲ್ಲಿರುವ ನಮ್ಮ ಮನೆಯ ಸುತ್ತು ಯಾವಾಗಲೂ ಹಕ್ಕಿಗಳ ಚಿಲಿಪಿಲಿ ನಿನಾದ …ಆ ದಿನ ಸ್ವಲ್ಪ ಜಾಸ್ತಿಯೇ ಇದ್ದಂತೆ ಇತ್ತು.ನಾಲ್ಕೈದು ತರಹದ ಹಕ್ಕಿಗಳಲ್ಲಿ ಗಮನ ಸೆಳೆಯುವ ಹಕ್ಕಿ ಅದಾಗಿತ್ತು. ಚಂದದ ನೀಲಿ ನವಿಲು ಬಣ್ಣದ ರೆಕ್ಕೆ..ಪುಕ್ಕ..ತುಸು ಉದ್ದನೆಯ,ಮುಂದಕ್ಕೆ ಬಾಗಿದ ಕೆಂಪು ಕೊಕ್ಕು..ಅದರ ಹೆಸರು ಗೊತ್ತಿರಲಿಲ್ಲ.ತಿಳಿಯುವ ಕುತೂಹಲ.. ಹಕ್ಕಿ ಪ್ರಿಯರಾದ,ಅವುಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವ ನಮ್ಮ ಕುಟುಂಬ ಸ್ನೇಹಿತರೊಬ್ಬರಲ್ಲಿ ಕೇಳಿ ತಿಳಿದುಕೊಂಡೆ. ಬುಲ್ ಬುಲ್ ಹಕ್ಕಿಯಾಗಿತ್ತು ಆದು..(KEMMISE PIKALARA RED WHISKED BULBUL). ಅದರ ಸದ್ದು ಆ ದಿನ ಸ್ವಲ್ಪ ಜೊರಾಗಿಯೇ ಇತ್ತು.ಮನೆಯ ಹೊರಗಿನ ವರಾಂಡದತ್ತ ಜೋರಾಗಿ ಧಾವಿಸಿ ಹಾರಿ ಬರಿತ್ತಿತ್ತು…ಅಲ್ಲೇ ನೇತು ಹಾಕಿದ್ದ ತೂಗು ಹೂಕುಂಡದತ್ತ ಅದರ ಗಮನವಿತ್ತು. ದೂರದಿಂದಲೇ ಗಮನಿಸಿದಾಗ ತಿಳಿಯಿತು..ಪ್ರತೀ ವರ್ಷದಂತೆಯೇ ಈ ವರ್ಷ ಕೂಡಾ ಗೂಡು ಕಟ್ಟುವ ತಯಾರಿಯೆಂದು..!
ನಮ್ಮ ಮನೆಯ ಸುತ್ತುಮುತ್ತಲು ಮನೆಗೆ ಹೊಂದಿಕೊಂಡತೆಯೇ, ವರ್ಷದಲ್ಲಿ 2-3 ಗೂಡುಗಳನ್ನು ಕಟ್ಟಿ. ಸಂತಾನಾಭಿವೃಧ್ಧಿ ಮಾಡಿಕೊಂಡು ಗೂಡು ಖಾಲಿ ಮಾಡುವುದು ಮಾಮೂಲಾಗಿತ್ತು. ನನಗೆ, ಮೊಟ್ಟೆ,ಮರಿಗಳದ್ದು ಫೊಟೋ ತೆಗೆಯುವ ಆಸೆ ಮಾತ್ರ ಈಡೇರಿರಲಿಲ್ಲ..ಎಲ್ಲೋ ಎತ್ತರದಲ್ಲಿ ಇರುತ್ತಿತ್ತಲ್ಲಾ ಅದರ ಗೂಡು.. ಈ ಸಲ ನನಗೆ ಖುಷಿ..ಯಾಕೆ ಗೊತ್ತಾ..ಈಗ ಮಾತ್ರ ಅದು ಈಡೇರುವಂತೆ ಕಾಣುತ್ತಿತ್ತು..ಕೈಗೆಟಕುವ ಎತ್ತರದಲ್ಲಿ ಗೂಡು ತಯಾರಾಗುವ ಸೂಚನೆ ಇತ್ತು..! ಹತ್ತಿರ ಹೋದರೆ ಅದು ದೂರವೇ ಕುಳಿತು ನಾವು ಅಲ್ಲಿಂದ ಸರಿಯುವ ವರೆಗೆ ಕಾಯುತ್ತಿತ್ತು..ಆದ್ದರಿಂದ ನಮ್ಮ ವೀಕ್ಷಣೆ ದೂರದಿಂದಲೇ ನಡೆಯುತ್ತಿತ್ತು.ಸುಮಾರು 4-5 ದಿನಗಳಲ್ಲಿ ಚಂದದ ಗೂಡು ರೆಡಿಯಾಗಿತ್ತು.
ಸರಿ..ಗೂಡು ತಯಾರಿಯಾದದ್ದೇ ತಡ..ಎರಡು ಹಕ್ಕಿಗಳು ಬರಲು ಆರಂಭ.ಗಂಡು ಮತ್ತು ಹೆಣ್ಣು ಇದ್ದಿರಬಹುದು..ಎರಡೂ ಒಂದೇ ತರಹ ಕಾಣುತ್ತಿದ್ದವು..ಹೆಣ್ಣು ಹಕ್ಕಿ ಮೊಟ್ಟೆ ಇಡುವ ಸಂಭ್ರಮದಲ್ಲಿತ್ತು. ನೋಡುವಾಗಲೆಲ್ಲಾ ಗೂಡಲ್ಲೇ ಕುಳಿತಿರುತ್ತಿತ್ತು.ಜಾಸ್ತಿ ಇಣುಕಲು ಹೋಗದೆ ಕಾದೆವು. ಹಾಗೆಯೇ 2 ದಿನಗಳು ಕಳೆದವು..ಹಕ್ಕಿ ಗೂಡಲ್ಲಿ ಕಾಣಲಿಲ್ಲ..ಮೆಲ್ಲನೆ ಗೂಡೊಳಗಡೆ ಇಣುಕಿದೆ..ಆಹಾ..ಜನ್ಮ ಸಾರ್ಥಕವೆನಿಸಿತು ..!! 3ಚಂದದ ಮೊಟ್ಟೆಗಳು… ಹಕ್ಕಿಗಳು ಇನ್ನು ಬಿಸಿ..ಸರದಿಯಂತೆ ಕಾವು ಕೊಡುವ ಸಂಭ್ರಮ ಅವುಗಳದ್ದು..ಹಕ್ಕಿ ಇಲ್ಲದಾಗ ಮೊಟ್ಟೆ ನೋಡುವ ಸಂಭ್ರಮ ನಮ್ಮದು..!!
ಮತ್ತೆ ನಾಲ್ಕು ದಿನಗಳಲ್ಲಿ 2 ಪುಟ್ಟ ಮರಿಗಳು ಗೂಡಿನೊಳಗೆ ಕಂಡವು. ಹಾಗಾದರೆ ಇನ್ನೊಂದು ಮರಿ ಎಲ್ಲಿ?? ನನಗೋ ಒಂಥರ ಆತಂಕ..! ಮತ್ತೆರಡು ದಿನಗಳಲ್ಲಿ ಮೂರನೇ ಮರಿ ಗೋಚರಿಸಿತು.! ಮನಸ್ಸಿನ ಆತಂಕ ದೂರವಾಯ್ತು.ಮೂರನೆಯ ಮೊಟ್ಟೆ, ಮರಿಹಕ್ಕಿಗಳ ಕೆಳಗಡೆಯೇ ಇದ್ದಿರಬೇಕು.! ಕಣ್ಣೂ ಬಿಡದ ಪುಟ್ಟ ಮರಿಗಳಿಗೆ ತುತ್ತು ನೀಡುವ ಪರಿ ನೋಡುವುದೇ ಸೊಗಸಾಗಿತ್ತು.! ನಾನು ಗೂಡಿನ ಬಳಿ ಇದ್ದರೆ ಕೊಕ್ಕಲ್ಲಿ ತಂದ ತುತ್ತಿನೊಂದಿಗೆ ದೂರವೇ ಕುಳಿತು ನಾನು ದೂರವಾದ ಮೇಲೆಯೇ ಮರಿಗಳ ಬಳಿ ಬರುತ್ತಿತ್ತು.ಸ್ವಲ್ಪ ದಿನಗಳಲ್ಲಿ ಮರಿಗಳ ಪುಟ್ಟ ಚಿಂವ್ ಚಿಂವ್ ಸ್ವರ ಕೇಳಲು ಪ್ರಾರಂಭಿಸಿತು. ಅಮ್ಮ(ಅಪ್ಪ??) ಹಕ್ಕಿ ಆಹಾರ ತಂದಾಗ ಅವುಗಳಿಗೆ ತಿಳಿದು ಬಿಡುತ್ತಿತ್ತು,ಆಗ ಸ್ವರ ಎತ್ತುತ್ತಿದ್ದವು..! ಮೈಮೇಲೆ ಗರಿಗಳು ಇನ್ನೂ ಮೂಡಿಲ್ಲ.
ಮೊಟ್ಟೆಯೊಡೆದು 10 ದಿನಗಳಲ್ಲಿ ಮರಿಗಳಿಗೆ ಗರಿಗಳು ಮೂಡಲು ಪ್ರಾರಂಭವಾದುವು..ನಮಗೋ ಆತಂಕ..ಅಷ್ಟು ಸಣ್ಣ ಗೂಡಲ್ಲಿ 3 ಮರಿಗಳಿಗೆ ಜಾಗ ಸಾಲುತ್ತೋ ಇಲ್ವೋ ಅಂತ..! ಹಾಗೆಯೇ ಆಯ್ತು..ಪತಿರಾಯರು ಬೆಳಿಗ್ಗೆ ನೋಡಿದಾಗ ಒಂದು ಮರಿ ಕೆಳಗೆ ಬಿದ್ದಿತ್ತು…ಮೆಲ್ಲನೆ ಎತ್ತಿ ಗೂಡಿನೊಳಗೆ ಇಟ್ಟು ಗೂಡಿನ ಕೆಳಗಡೆ ದಪ್ಪ ಪೇಪರನ್ನು ಆಧಾರವಾಗಿ ಇಟ್ಟು ರಕ್ಷಣೆ ಕೊಟ್ಟೆವು.ಈಗೀಗ ಅಂತೂ ಅವುಗಳ ಚಿಂವ್ ಚಿಂವ್ ಜೋರಾಗಿಯೇ ಇರುತ್ತಿತ್ತು. ತುಂಬಾ ಹಸಿವು ಆಗಿರಬೇಕೇನೋ..! ಅಮ್ಮ ಹಕ್ಕಿ ಹತ್ತಿರ ಬಂದರೆ ಮಾತ್ರ ಜೋರಾದ ಸದ್ದು..ಇಲ್ಲದಿದ್ದರೆ ನಿಶ್ಶಬ್ದವಾಗಿ ಮಲಗಿ ಬಿಡುತ್ತಿದ್ದವು..ಇಲ್ಲಾ ಕಣ್ಣು ಪಿಳುಕಿಸಿ ಅತ್ತಿತ್ತ ನೋಡುತ್ತಿದ್ದವು.ಅಂಗೈ ಅಗಲವೂ ಇಲ್ಲದ ಆ ಗೂಡಿನಲ್ಲಿ 3ಮರಿಗಳು ಬೆಚ್ಚಗೆ ಮುದುಡಿ ಮಲಗಿದ್ದು ನೋಡುವಾಗಲೇ ನಮಗನ್ನಿಸುತ್ತದೆ..ಅಬ್ಬಾ..ಪ್ರಕೃತಿಯ ವಿಚಿತ್ರವೇ..!! (ನಮಗೆಲ್ಲಾ ಎಷ್ಟು ದೊಡ್ಡ ಮನೆ ಇದ್ದರೂ ಸಾಕಾಗುವುದಿಲ್ಲ ಅಲ್ಲವೇ..??) ಪುಟ್ಟ ಮರಿಗಳು ಮೆಲ್ಲನೇ ತೆವಳಿಕೊಂಡು ಹೊರಬರಲು ಪ್ರಯತ್ನಿಸುತ್ತಿದ್ದವು.
ಹಾಂ..! ಆ ದಿನ ಬಂದೇ ಬಂತು…ಬೆಳಗಿನಿಂದಲೇ ಅಪ್ಪ..ಅಮ್ಮ ಹಕ್ಕಿಗಳು ಭರ್ರನೆ ಗೂಡಿನ ಬಳಿಗೆ ಹಾರಿ ಬಂದು ಸುತ್ತು ಗಿರಕಿ ಹೊಡೆಯುತ್ತಾ ಜೋರಾಗಿ ಗಲಭೆ ಎಬ್ಬಿಸುತ್ತಿದ್ದವು.ಮರಿಗಳು ಹಾರಿಹೋಗುವ ಮೊದಲೇ ಇನ್ನೊಮ್ಮೆ ಕ್ಲಿಕ್ಕಿಸುವ ಅವಕಾಶಕ್ಕೆ ಕಾಯುತ್ತಾ ಇದ್ದರೆ, ಹಕ್ಕಿಗಳು ಹತ್ತಿರ ಹೋಗಲೇ ಬಿದುತ್ತಿರಲಿಲ್ಲ ನಮ್ಮ ತಲೆ ಮೇಲೆಯೇ ಭರ್ರೆಂದು ಆಕ್ರಮಣಕಾರಿಗಳಂತೆ ಬಂದು ನಮ್ಮನ್ನು ತಡೆಯುತ್ತಿದ್ದವು..! ಹುಂ..ಇರಲಿ ಎಂದು ಕಾಯುತ್ತಾ ಇದ್ದೆ. ಆದರೆ ನಾಳೆ ಮರಿಗಳು ಗೂಡಿನಲ್ಲಿ ಇರಲಾರವೇನೋ ಅಂದುಕೊಂಡೆ..ಹಾಗೆಯೇ ಆಯ್ತು..!.ಮರುದಿನ ನಸುಕಿನಲ್ಲೇ ಆ ಪುಟ್ಟ ಗೂಡು ಖಾಲಿಯಾಗಿತ್ತು.ಆತ್ಮೀಯವಾಗಿದ್ದ ಮರಿ ಹಕ್ಕಿಗಳು ಇನ್ನೆಂದೂ ನಮಗೆ ಕಾಣಸಿಗದಂತೆ ಗೂಡು ಖಾಲಿ ಬಿಟ್ಟು ಹಾರಿಹೋಗಿದ್ದವು.ಮನದ ಒಂದು ಮೂಲೆಯಲ್ಲಿ ಸಂತಸವೇ..ರೆಕ್ಕೆ ಬಲಿತು ಹಾರಿ ಹೋದರೆ, ಅವುಗಳು ಸ್ವತಂತ್ರ ಬದುಕಿಗೆ ನಾಂದಿ ಹಾಡಿದಂತೆ..ಇನ್ನೊಂದು ಮೂಲೆಯಲ್ಲಿ ಬಲವಾದ ನೋವು..ಇನ್ನು ಆ ಕಾತರದ ದಿನಗಳು ನೆನಪು ಮಾತ್ರ..!!
28/10/2017 ರ ಪ್ರಜಾವಾಣಿಯಲ್ಲಿ ಪ್ರಕಟಿತ ಬರಹ http://www.prajavani.net/news/article/2017/10/28/529098.html
-ಶಂಕರಿ ಶರ್ಮ, ಪುತ್ತೂರು
ಹಕ್ಕಿಮನೆ ಎಷ್ಟು ಚಂದವಿದೆ!ರೆಕ್ಕೆ ಬಲಿತ ಹಕ್ಕಿ ಹಾರಿಹೋಗುವುದು . ಹಕ್ಕಿಗಳು ಎಷ್ಟು ಬೇಗ ತನ್ನಕಾಲಮೇಲೆ ತಾವು ನಿಲ್ಲುತ್ತವೆಅಲ್ಲವೆ? ಮನುಷ್ಯ ಎಷ್ಟೇ ಬುದ್ದಿವಂತನಾದರೂ ೨೫ ವರ್ಷವಾದರೂ ಅಪ್ಪ ಅಮ್ಮನ ಅವಲಂಬಿತ.
ಕಣ್ಣಿಗೆ ಕಟ್ಟುವಂಥ ಬಣ್ಣನೆ