ವಿರುದ್ಧಾಹಾರ
ನಮ್ಮಲ್ಲಿ ಒಂದು ಮಾತಿದೆ- “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ”. ಇದು ಅಕ್ಷರಶಃ ಸತ್ಯ. ಇತ್ತೀಚಿನ ವೈದ್ಯಕೀಯ ವಿದ್ಯಾಮಾನಗಳನ್ನು ಮತ್ತು ವೈದ್ಯರ ಅನುಭವಗಳನ್ನುಗಮನಿಸಿದರೆ ಈ ಗಾದೆಯ ಮೊದಲಾರ್ಧಕ್ಕೆ ಹೆಚ್ಚು ತಾಳೆಯಾಗುತ್ತದೆ. ಇಂದಿನ ಪೀಳಿಗೆಯವರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಬರಲು ಕಾರಣ ಬದಲಾದ ಜೀವನ ಶೈಲಿ ಮತ್ತು ಆಹಾರ ಸೇವನಾ ಕ್ರಮಗಳೆಂದು ಮೇಲ್ನೋಟಕ್ಕೆ ಕಾಣುವುದು. ಆಯುರ್ವೇದ ವೈದ್ಯ ಪಧ್ದತಿಯು ರೋಗ ನಿವಾರಣೆಗಿಂತ ಮೊದಲು ಸ್ವಾಸ್ಥ್ಯರಕ್ಷಣೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ಒಬ್ಬ ವ್ಯಕ್ತಿಯ ದಿನಚರಿ, ಆಹಾರ ಸೇವನಾ ಕ್ರಮ ಆತನ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಅವುಗಳಲ್ಲಿ ವಿರುದ್ಧಾಹಾರವೂ ಒಂದು. ಇದಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ.
ಏನಿದು ವಿರುದ್ಧಾಹಾರ?
ಗುಣ ಲಕ್ಷಣಗಳಲ್ಲಿ ಒಂದಕ್ಕೊಂದು ಹೊಂದಿಕೆಯಾಗದ ಆಹಾರ ಪದಾರ್ಥಗಳನ್ನು ಬೆರಕೆಮಾಡುವುದನ್ನೇ ವಿರುದ್ಧ ಎನ್ನುತ್ತೇವೆ. ಇವುಗಳಲ್ಲಿ 18 ವಿಧಗಳನ್ನು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ನಮ್ಮ ಹಿರಿಯರು ಇವನ್ನು ತಿಳಿದೋ ತಿಳಿಯದೆಯೋ ಪಾಲಿಸುತ್ತಿದ್ದರು, ಆದರೆ ಈಗ ಆಧುನಿಕತೆಯ ಪ್ರಭಾವದಿಂದ ನಮ್ಮ ಆಹಾರಕ್ರಮದಲ್ಲಿ ಬಹಳಷ್ಟು ವಿರುದ್ಧಾಹಾರಗಳ ಸೇರ್ಪಡೆಯಾಗಿದೆ.
ಅನ್ನಕ್ಕೆ ಹಾಲು ಮತ್ತು ಉಪ್ಪು ಬೆರೆಸಿ ಊಟ ಮಾಡಬಾರದು ಅಂತ ನಮ್ಮಜ್ಜಿ ಯಾವಾಗಲೂ ಹೇಳ್ತಿದ್ದ ಮಾತು ನನಗೆ ನೆನಪಿದೆ. ಅದರ ಉಲ್ಲೇಖ ಆಯುರ್ವೇದದಲ್ಲೂ ಇದೆ. ಹಾಲು ಮತ್ತು ಉಪ್ಪು ಬೆರಕೆಮಾಡಿದರೆ ಅದು ಒಂದು ರೀತಿಯ ವಿರುದ್ಧವೇ ಆಗುತ್ತದೆ. ಹೀಗೆ ಕೆಲವೊಂದು ವಿರುದ್ಧಗಳನ್ನ ಉದಾಹರಿಸುವುದಾದರೆ, ಅಮ್ಲ ರಸ ಅಂದರೆ ಹುಳಿ ರುಚಿಯುಳ್ಳ ಆಹಾರ ಪದಾರ್ಥಗಳನ್ನು ಹಾಲಿನ ಜೊತೆ ಬೆರೆಸಬಾರದು. ಅದರರ್ಥ ಹುಳಿ ಹಣ್ಣುಗಳನ್ನು( ದಾಳಿಂಬೆ, ಮಾವಿನ ಹಣ್ಣು ಇತ್ಯಾದಿ) ಹಾಲಿನೊಡನೆ ಬೆರೆಸಿ ಮಿಲ್ಕ್ ಶೇಕ್ ರೂಪದಲ್ಲಿ ಸೇವಿಸುವುದು ಅಷ್ಟು ಒಳ್ಳೆಯದಲ್ಲ. ಇನ್ನು ತರಕಾರಿಗಳಲ್ಲಿ ಮೂಲಂಗಿಯನ್ನು ಹಾಲಿನೊಡನೆ ಬೆರೆಸಬಾರದು. ಹುರುಳಿಯೂ ಅಷ್ಟೆ.
ಬಹುತೇಕ ಜನರ ಪ್ರೀತಿ ಪಾತ್ರ ಪೇಯ ಚಹಾ ಕೂಡ ಒಂದರ್ಥದಲ್ಲಿ ವಿರುದ್ಧವೇ! ಯಾಕೆಂದರೆ ಒಗರುರುಚಿಯುಳ್ಳ ಪದಾರ್ಥವನ್ನು ಹಾಲಿನೊಂದಿಗೆ ಬೆರೆಸಬಾರದು ಎನ್ನುತ್ತಾರೆ.
ನಾವು ಹಲವಾರು ಅರೋಗ್ಯ ಸಲಹೆಗಳ ಅಂಕಣಗಳನ್ನು ದಿನ ಪತ್ರಿಕೆಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಬಹಳ ಪ್ರಚಲಿತವಾದದ್ದೆಂದರೆ ಬಿಸಿ ನೀರಿಗೆ ಜೇನು ಹಾಗೂ ನಿಂಬೆ ರಸವನ್ನು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹದ ತೂಕ ಕಡಿಮೆಯಾಗುವುದು ಎಂಬ ಸಲಹೆ. ಇದನ್ನು ಬಹಳಷ್ಟು ಜನ ಪ್ರಯೋಗಿಸಿ ನೋಡಿರಬಹುದು. ಆದರೆ ಬಿಸಿ ನೀರಿಗೆ ಜೇನುಬೆರೆಸುವುದು ಅದನ್ನು ವಿರುದ್ಧವಾಗಿಸುತ್ತದೆ. ಇದು ಆಧುನಿಕ ವೈಜ್ಞಾನಿಕ ಸಂಶೋಧನೆಗಳಲ್ಲೂ ದೃಢ ಪಟ್ಟಿದೆ.
ಆಹಾರವನ್ನು ಶೇಖರಿಸಿದ ಪಾತ್ರೆಗೂ ಮಹತ್ವವಿದೆ. ತುಪ್ಪವನ್ನು ತಾಮ್ರದ ಪಾತ್ರೆಯಲ್ಲಿ 10 ದಿನಕ್ಕೂ ಹೆಚ್ಚುಕಾಲ ಶೇಖರಿಸಿಟ್ಟಿದ್ದಲ್ಲಿ ಅದು ಸೇವನೆಗೆ ಅಷ್ಟು ಯೋಗ್ಯವಲ್ಲ. ಒಂದು ವೇಳೆ ಬಳಸುವುದಾದರೂ ಅದರ ಜೊತೆ ಬಿಸಿ ಪದಾರ್ಥಗಳನ್ನು ಬೆರೆಸಬಾರದು.
ಇನ್ನು ಮಾಂಸಾಹಾರಿಗಳಿಗೆ ಹೇಳುವುದಾದರೆ ಮೀನು (ವಿಶೇಷವಾಗಿ ಸಿಗಡಿ) ಸೇವಿಸಿದ ತಕ್ಷಣ ಹಾಲುಸೇವನೆ ಮಾಡಬಾರದು. ಮಾಂಸಾಹಾರದ ಜೊತೆ ಮೊಸರು ಸೇವನೆ ಕೂಡ ನಿಷಿಧ್ದ.
ಪಾಯಸ ಇತ್ಯಾದಿ ಸಿಹಿಗಳನ್ನೊಳಗೊಂಡ ಭೂರಿ ಭೋಜನದ ಬಳಿಕ ಮದ್ಯಪಾನ ಮಾಡುವಂತಿಲ್ಲ. ಹೀಗೆ ಕೆಲವು ವಿರುದ್ಧಾಹಾರಗಳ ಅರಿವು ನಮಗಿದ್ದಲ್ಲಿ ನಮ್ಮ ಆರೋಗ್ಯದ ಮೇಲೆ ಅದರಿಂದಾಗುವ ದುಷ್ಪರಿಣಾಮಗಳನ್ನು ತಡೆಯಬಹುದು.
ವಿರುದ್ಧಾಹಾರವನ್ನು ಆಯುರ್ವೇದದಲ್ಲಿ ವಿಷಕ್ಕೆ ಸಮ ಎನ್ನಲಾಗಿದೆ. ಇಲ್ಲಿ ಅದು ಶರೀರಕ್ಕೆ ಹಾನಿಯುಂಟುಮಾಡುವುದು ಎಂಬರ್ಥದಲ್ಲಿ “ವಿಷ” ಶಬ್ದ ಬಳಕೆಯಾಗಿದೆ. ವಿರುದ್ಧಾಹಾರ ಸೇವನೆಯಿಂದ ತಕ್ಷಣಕ್ಕೆ ಯಾವುದೇ ಪರಿಣಾಮ ಕಂಡುಬರದೇ ಇದ್ದರೂ ಕ್ರಮೇಣ / ದೀರ್ಘಕಾಲೀನ ಬಳಕೆಯಿಂದ ನಮ್ಮ ಶರೀರದಲ್ಲಿ ಕಲ್ಮಶಗಳು ಶೇಖರಿಸಿ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಚರ್ಮರೋಗಗಳಿಗೂ ಆಹಾರ ಕ್ರಮಕ್ಕೂ ನೇರ ಸಂಬಂಧವಿದೆ.
ಆಯುರ್ವೇದದಲ್ಲಿ ಇದಕ್ಕೆ ಪಂಚಕರ್ಮ ಚಿಕಿತ್ಸೆಯ ಮೂಲಕ ಪರಿಣಾಮಕಾರಿ ಉಪಶಮನ ನೀಡಲಾಗುವುದು. ಆದರೆ ನಮ್ಮ ಆಹಾರಕ್ರಮದಲ್ಲಿ ಸ್ವಲ್ಪ ಸುಧಾರಣೆ ಮಾಡಿಕೊಂಡಲ್ಲಿ ಇಂತಹ ಸಮಸ್ಯೆಗಳೇ ಬಾರದಂತೆ ತಡೆಗಟ್ಟಬಹುದು.
– ಡಾ.ಶ್ರುತಿ ಎನ್ ಭಟ್, ಕಾವೇರಿಕಾನ
ಸರಳ ನಿರೂಪಣೆಯೊಂದಿಗೆ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.
ದೈನಂದಿನ ಜೀವನದಲ್ಲಿ ತಿಳಿದೋ ತಿಳಿಯದೆಯೋ ವಿರುದ್ಧ ಆಹಾರಗಳನ್ನು ಸೇವಿಸುತ್ತಿರುತ್ತೇವೆ. ಇದರ ಬಗ್ಗೆ ತಜ್ಞರು ತಿಳಿಸುವ ಮಾಹಿತಿ ಸಿಗದೆ ಇಂಟರ್‌ನೆಟ್, ಪತ್ರಿಕೆಗಳಲ್ಲಿ ಸಿಗುವ ಯಾವುದೇ ಸಲಹೆಗಳನ್ನು ಕಣ್ಣು ಮುಚ್ಚಿ ಪಾಲಿಸಿ ತೊಂದರೆಗೀಡಾಗುವ ಬಹಳಷ್ಟು ಮಂದಿ ಇದ್ದಾರೆ.
ತುಂಬಾ ಉಪಯುಕ್ತ ಲೇಖನ, ಚೆಂದದ ನಿರೂಪಣೆ 🙂
ಉತ್ತಮ ಉಪಯುಕ್ತ ಲೇಖನ.
ಒಂದು ಸಂದೇಹ ಇದೆ. ಜೇನು ಮತ್ತು ತುಪ್ಪವನ್ನು ಬೆರೆಸಿ ತಿನ್ನಬಾರದು ಎಂದು ಎಲ್ಲೋ ಓದಿದ ನೆನಪು. ಆದರೆ ಚಿಕ್ಕಂದಿನಿಂದಲೂ ದೋಸೆ ಹೊಟ್ಟೆಗಿಳಿಯಬೇಕಾದ್ರೆ ಜೇನು-ತುಪ್ಪ ಬೇಕೇ ಬೇಕಿತ್ತು. ಜೇನು – ತುಪ್ಪ ಯಾಕೆ ವಿರುದ್ಧ ಆಹಾರ ಆಗತ್ತೆ? ತಿಳಿಸಬಹುದಾ?
ಹಲವರ ಬಳಿ ಕೇಳಿದ್ದೆ… ಆದರೆ ಸಮಾಧಾನಕರ ಉತ್ತರ ಸಿಕ್ಕಲಿಲ್ಲ.
ಜೇನು ಮತ್ತು ತುಪ್ಪ ಬೆರೆಸಬಾರದೆಂದು ಹೇಳಿಲ್ಲ. ಸಮ ಪ್ರಮಾಣದಲ್ಲಿ ಸೇವಿಸುವುದು ವಿರುದ್ಧ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅದು ಯಾಕೆ ಎಂಬುದಕ್ಕೆ ಸಮರ್ಪಕ ಉತ್ತರ ನಮ್ಮ ಗ್ರಂಥಗಳಲ್ಲಿ ವಿವರಿಸಿಲ್ಲ, ಆದರೆ ಅದರಿಂದ ಕೆಲವು ಅಜೀರ್ಣ ಸಮಸ್ಯೆಗಳು ಕಂಡು ಬಂದ ಕಾರಣ ಬಹುಶಃ ಅದು ವಿರುದ್ಧ ಎಂದು ಕರೆದಿದ್ದಾರೆ.
ತುಂಬಾ ಉಪಯುಕ್ತ ಲೇಖನ.ನಾವು ದಿನ ನಿತ್ಯ ಗೊತ್ತಿಲ್ಲದೆ ವಿರುದ್ದ ಆಹಾರ ಸೇವನೆ ಮಾಡುತ್ತಿರುತ್ತೇವೆ.
ನಮ್ಮ ಪೂವಿ೯ಕರು ಆಹಾರದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಅದಕ್ಕೆ ತಕ್ಕಂತೆ ಗಾದೆ ರೂಪದಲ್ಲಿ ಆಡು ಭಾಷೆ ಯಾಗಿ ಬಳಸುತ್ತಿದ್ದರು. “ಒಂದು ಹೊತ್ತು ಉಂಡವನು ಯೋಗಿ, ಎರಡು ಹೊತ್ತು ಉಂಡವನು ಭೋಗಿ ಮೂರು ಹೊತ್ತು ಉಂಡವನು ರೋಗಿ, ನಾಲ್ಕು ಹೊತ್ತು ಉಂಡವವನನ್ನು ಹೊತ್ತು ಕೊಂಡು ಹೋಗಿ” ಅಂತ. ದೇಹದ ಆರೋಗ್ಯ ದೃಷ್ಟಿಯಿಂದ ಅಲ್ಲದೆ ನಮ್ಮ ಮನಸ್ಸಿನ ಸುಸ್ಥಿತಿಗೂ ನಾವು ಸೇವಿಸುವ ಆಹಾರವೇ ಕಾರಣ.
ಹೌದು.. ಸರಿಯಾಗಿ ಹೇಳಿದಿರಿ. ☺
ಉಪಯುಕ್ತ ಮಾಹಿತಿ. ಸಾಧ್ಯವಾದಲ್ಲಿ ದೈನಂದಿನ ಆಹಾರದಲ್ಲಿ ಹೆಚ್ಚಾಗಿ ಬಳಸುವ ವಿರುದ್ಧ ಆಹಾರಗಳ ಬಗ್ಗೆ ಒಂದು ಕೈಪಿಡಿಯನ್ನು ಪ್ರಕಟಿಸಿ.
ಖಂಡಿತ ಪ್ರಯತ್ನಿಸುತ್ತೇನೆ. Thank you
Very nice my dear student
In Ayurveda very clear description about viruddahara is there. It is a boon to prevent diseases and medication. Better to follow
Thank you sir