ಅವಳು ಮತ್ತು ಬೆಕ್ಕು
ಬೆಕ್ಕುಗಳೆಂದರೆ ಅವಳಿಗೇನೋ ಆಕರ್ಷಣೆ
ಅದಕೆಂದೇ ಕೆಂದು ಬಣ್ಣದ ಬೆಕ್ಕೊಂದಕ್ಕೆ ಹಾಲು ಅನ್ನ ಹಾಕಿ
ಸಾಕಿ ಕೊಂಡಿದ್ದಳು
ಬಂದವರೆದುರಲ್ಲಿ ಅದರದೇ ಗುಣಗಾನ
ಅದರ ತೀಕ್ಷ್ಣ ಕಣ್ನುಗಳ ಬಗ್ಗೆ
ನಿಮಿರುವ ಬಾಲದ ಬಗ್ಗೆ
ತುಪ್ಪಳದಂತ ಅದರ ಕೂದಲ ಬಗ್ಗೆ
ಸಪ್ಪಳವಾಗದಂತೆ ಬಂದು ಎದಮೇಲೆ ಮುಖವಿಟ್ಟು
ತಬ್ಬಿ ಮಲಗುವ ಅದರ ರೀತಿಯನ್ನು
ನೂರಾರು ಕತೆ ಕವಿತೆಯಾಗಿಸಿದ್ದಳು
ಸಾಕಷ್ಟು ಚಪ್ಪಾಳೆಗಳನ್ನೂ ಪಡೆದಿದ್ದಳು!
ಅರಿತೊ ಅರಿಯದೆಯೊ
ಒಂದು ದಿನ ನೆಲದಮೇಲೆ ಮಲಗಿದ್ದ ಅದರಬಾಲ
ತುಳಿದ ನೋವಿಗದು
ಅವಳ ಪಾದಗಳ
ಪರಚಿಬಿಟ್ಟಿತು.
ಆಮೇಲವಳದಕ್ಕೆ ಅನ್ನಹಾಲು ಹಾಕದೆ
ಕಿಟಕಿ ಬಾಗಿಲು ತೆರೆದು ಬಿಟ್ಟಳು
ಹಸಿವಾದರೆ ಅದರ ಆಹಾರವನ್ನದು ಹುಡುಕಿಕೊಳ್ಳಲೆಂದು
ಸುಮ್ಮನಿದ್ದು ಬಿಟ್ಟಳು.
ಹಾಲು ಅಭ್ಯಾಸ ಮಾಡಿಸಿದ ಅವಳದಕ್ಕೆ
ಬೇಟೆಯಾಡುವುದನ್ನೇ ಮರೆಸಿಬಿಟ್ಟಿದ್ದಳು
ಹಸಿವಿನಿಂದ ತತ್ತರಿಸಿದ ಬೆಕ್ಕು ದಿನದಿನಕ್ಕೆ ಕೃಶವಾಗಿ
ಕೊನೆಗೆ ಓಡಾಡಲು ಶಕ್ತಿ ಇರದಂತಾಗಿ
ಅವಳ ಪಾದಗಳ ನುಣುಪ ನೆಕ್ಕುತ್ತಲೇ ಸತ್ತು ಹೋಯಿತು.
ಈಗ ಮತ್ತವಳು ಸತ್ತು ಹೋದ ತನ್ನ ಬೆಕ್ಕಿನ ಬಗ್ಗೆ ಇನ್ನಷ್ಟು
ಆಕರ್ಷಕವಾಗಿ ಕವಿತೆ ಬರೆಯುತ್ತಿದ್ದಾಳೆ.
ಹಿಂದಿಗಿಂತ ಈಗ ಚಪ್ಪಾಳೆಗಳೂ ಹೆಚ್ಚಾಗಿವೆ!
– ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ