ನೇಪಾಳದ ‘ಮನಕಾಮನಾ’ ಮಂದಿರ
ನೇಪಾಳದ ರಾಜಧಾನಿಯಾದ ಕಟ್ಮಂಡುವಿನಿಂದ ಸುಮಾರು 120 ಕಿ.ಮೀ ದೂರದಲ್ಲಿ, ಸುಂದರವಾದ ಹಸಿರು ಬೆಟ್ಟದ ತುದಿಯಲ್ಲಿ, ನೇಪಾಳಿಗರ ಪ್ರಮುಖ ಆರಾಧ್ಯದೇವತೆಯಾದ ‘ಮನಕಾಮನಾ’ ದೇವಿಯ ಮಂದಿರವಿದೆ. ಹೆಸರೇ ಸೂಚಿಸುವಂತೆ, ಈ ದೇವಿಯು ನಮ್ಮ ಮನಸ್ಸಿನ ಇಷ್ಟಾರ್ಥಗಳನ್ನು ಪೂರೈಸುವಳೆಂದು ನಂಬಿಕೆ. ಈ ದೇವಿಯು ಪಾರ್ವತಿಯ ಇನ್ನೊಂದು ರೂಪವಾಗಿದ್ದು, ಈ ಸ್ಥಳವು ‘ಶಕ್ತಿಪೀಠ’ವಾಗಿದೆ. ಮನಕಾಮನಾ ದೇವಿಯ ಪರ್ವತವು ಸಮುದ್ರ ಮಟ್ಟದಿಂದ 1,300 ಮೀಟರ್ ಎತ್ತರವಿದೆ. ಕಣ್ಣಳತೆಯಲ್ಲಿ ಹೇಳುವುದಾದರೆ, ಮೈಸೂರಿನ ಚಾಮುಂಡಿ ಬೆಟ್ಟದ ಎರಡು ಪಾಲು ಎತ್ತರವಿದೆ.
ಬೆಟ್ಟದ ತುದಿಯನ್ನು ತಲಪಲು 2.8 ಕಿ.ಮೀ ಉದ್ದದ ಕೇಬಲ್ ಕಾರ್ ವ್ಯವಸ್ದೆಯಿದೆ. ಟಿಕೆಟ್ ದರ ರೂ.400/- ಉದ್ದದ ಸರದಿ ಸಾಲಿನಲ್ಲಿ ನಿಂತು , ಕೇಬಲ್ ಕಾರ್ ನ ಗೊಂಡೋಲಾದಲ್ಲಿ ಕುಳಿತು ಪ್ರಯಾಣಿಸುತ್ತಾ, ಹಿಮಾಲಯದ ಪ್ರಕೃತಿ ಸೊಬಗು, ಕೆಳಗಡೆ ಶಾಂತವಾಗಿ ಹರಿಯುತ್ತಿರುವ ತ್ರಿಶೂಲಿ ನದಿ, ಅಲ್ಲಲ್ಲಿ ಕಾಣಿಸುವ ಪುಟ್ಟ ಹೊಲಗಳು ….ಇತ್ಯಾದಿ ನೋಡುತ್ತಿರುವಷ್ಟರಲ್ಲಿ 8 ನಿಮಿಷದ ಕೇಬಲ್ ಕಾರ್ ಪ್ರಯಾಣ ಮುಗಿದೇ ಹೋಗುತ್ತದೆ! ಕೇಬಲ್ ಕಾರಿನಲ್ಲಿ ಸಾಕಷ್ಟು ಸುರಕ್ಷತಾ ವಿಧಾನಗಳನ್ನು ಅಳವಡಿಸಲಾಗಿದೆಯಾದರೂ, ಗೊಂಡೋಲಾದ ಗಾಜಿನ ಮೂಲಕ ನಾವು ಕ್ರಮಿಸುತ್ತಿರುವ ಏರುಹಾದಿಯನ್ನೂ, ಕೆಳಗಿನ ಪ್ರಪಾತವನ್ನೂ ಗಮನಿಸಿದಾಗ ಎದೆಯಲ್ಲಿ ನಡುಕ ಹುಟ್ಟುತ್ತದೆ!
ದೇವಾಲಯ ತಲುಪಲು ಗೊಂಡೋಲಾ ಇಳಿದು ಸ್ವಲ್ಪ ದೂರ ನಡೆಯಬೇಕು. ಈ ಕಾಲುದಾರಿಯಲ್ಲಿ ಕಾಣಸಿಕ್ಕಿದ ಕಿತ್ತಳೆ ಮರಗಳು ಹಣ್ಣುಗಳಿಂದ ಶೋಭಿಸುತ್ತಿದ್ದುವು. ತಾಜಾ ಕಿತ್ತಳೆಹಣ್ಣುಗಳನ್ನು ಅಲ್ಲಿಯೇ ಮಾರುತ್ತಿದ್ದರು.
17 ನೆಯ ಶತಮಾನದಲ್ಲಿ, ಅರಸರಾಮ್ ಶಾ ರಾಜನ ಮರಣಾನಂತರ ಆತನ ಮಂತ್ರಿಯಾದ ಲಖನ್ ಥಾಪಾ ಎಂಬವನು ಮನಕಾಮನಾ ದೇವಾಲಯವನ್ನು ಕಟ್ಟಿಸಿದನಂತೆ. ಇದು ನಾಲ್ಕು ಅಂತಸ್ತುಗಳ ಪಗೋಡದ ಆಕಾರದಲ್ಲಿ ಇತ್ತಂತೆ. 2015 ರ ಎಪ್ರಿಲ್ ನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಮಂದಿರವು ಘಾಸಿಗೊಂಡಿದೆ, ಈಗ ಪುನರ್ನಿಮಾಣ ಕೆಲಸಗಳು ನಡೆಯುತ್ತಿವೆ. ಅಲ್ಲಿದ್ದ ಅಂಗಡಿಯೊಂದರಲ್ಲಿ, ಮೊದಲು ಇದ್ದ ದೇವಾಲಯದ ಚಿತ್ರ ಸಿಕ್ಕಿತು.
ಶಕ್ತಿದೇವತೆಯ ಆರಾಧನೆಯ ಪದ್ಧತಿಯಂತೆ ಅಲ್ಲಿ ಪ್ರಾಣಿಬಲಿ ಈಗಲೂ ನಡೆಯುತ್ತದೆ. ನಮ್ಮ ಸರದಿ ಸಾಲಿನಲ್ಲಿ ಆಡು ಮತ್ತು ಕೋಳಿಗಳನ್ನು ಹಿಡಿದುಕೊಂಡು ಬಂದವರಿದ್ದರು. ಅವರವರ ಆಚರಣೆ, ನಂಬಿಕೆಯನ್ನು ಪ್ರಶ್ನಿಸುವಂತಿಲ್ಲ. ಆದರೂ, ಕತ್ತಿಗೆ ಟ್ಯಾಗ್ ಸಿಕ್ಕಿಸಿಕೊಂಡು ತನ್ನ ‘ಪ್ರಾಣಹರಣ’ದ ಕಾಲವನ್ನು ಎದುರುನೋಡುತ್ತಿದ್ದ ಮೂಕಪ್ರಾಣಿಗಳನ್ನು ಕಂಡಾಗ ಬೇಸರವಾಯಿತು.
ನಾವು ಅಲ್ಲಿಗೆ ಭೇಟಿ ಕೊಟ್ಟಿದ್ದ ದಿನವಾದ , 25 ಫೆಬ್ರವರಿ 2017 ಶನಿವಾರದಂದು, ನೇಪಾಳದಲ್ಲಿ ಸಾರ್ವಜನಿಕ ರಜೆಯಿತ್ತು. ಹಾಗಾಗಿ ಮಂದಿರದಲ್ಲಿ ಬಹಳಷ್ಟು ಜನರಿದ್ದರು. ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡಲು ಇನ್ನಷ್ಟು ಸಮಯ ಬೇಕಾಗುತ್ತಿತ್ತು. ಹಾಗಾಗಿ, ಪ್ರದಕ್ಷಿಣೆ ಮಾಡಿ, ಸ್ವಲ್ಪ ದೂರದಿಂದಲೇ ಶಕ್ತಿಪೀಠವನ್ನು ನೋಡಿ ಬಂದೆವು..
-ಹೇಮಮಾಲಾ.ಬಿ
ಅರವಿಂದ ನಾಡಕರ್ಣಿಯವರ ಗೊಂಡೊಲಾ ನಿಲ್ಲು ಕವಿತೆ ನೆನಪಾಯಿತು.
Super