ಮನಸಿಗೊಪ್ಪುವ ತಿನಿಸು!
ಆಹಾರ, ಆರೋಗ್ಯ ಇವೆರಡರ ನಂಟು ಬಲು ಗಟ್ಟಿ. ಕುಡಿವ ನೀರು, ತಿನ್ನುವ ಆಹಾರ, ಹೆಚ್ಚೇಕೆ ಉಸಿರಾಡುವ ಗಾಳಿಯನ್ನೂ ಅನುಮಾನಿಸುವ ಹಂತದಲ್ಲಿ ನಗರವಾಸಿಗಳಿದ್ದರೆ ಇನ್ನೊಂದೆಡೆ ಸಾವಯವ ಲೇಬಲ್ ಅಂಟಿಸಿದ ಅಕ್ಕಿ, ಗೋಧಿ, ಸಕ್ಕರೆ ಎಲ್ಲದಕ್ಕೂ ಬಹಳ ಬೇಡಿಕೆ. ಮೂಟೆಗಟ್ಟಲೆ ಸಿರಿಧಾನ್ಯಗಳನ್ನು ಅದರ ಆರೋಗ್ಯಕರ ಅಂಶಗಳ ಬರಹಗಳೊಂದಿಗೆ ಮಾರಾಟಕ್ಕಿಟ್ಟು ಆಕರ್ಷಿಸುವ ಮಳಿಗೆಗಳೂ ಹೆಚ್ಚು!
ಆಹಾರದ ದೃಷ್ಟಿಕೋನದಿಂದ ಆರೋಗ್ಯದತ್ತ ತಮ್ಮ ಅತ್ಯಂತ ಕಾಳಜಿಯನ್ನು ತರಹೇವಾರಿ ರೂಪದಲ್ಲಿ ವ್ಯಕ್ತಪಡಿಸುವರರು ಕೆಲವರಾದರೆ, ಕಷ್ಟದ ಪಥ್ಯಕ್ರಮವನ್ನು ಕಷ್ಟಪಟ್ಟು ಅನುಸರಿಸುವವರು ಇನ್ನು ಕೆಲವರು. ಜೊತೆಗೆ ವಾಕಿಂಗ್, ರನ್ನಿಂಗ್, ವ್ಯಾಯಮ, ಜಿಮ್, ಆಫೀಸ್ ಗೆ ಸೈಕಲ್ ತುಳಿಯುತ್ತಾ ಹೊಗುವುದು, ಹೀಗೆ ವೃತ್ತಿಯೊಂದಿಗೆ ಆರೋಗ್ಯದ ಕಾಯ್ದುಕೊಳ್ಳುವಿಕೆ ಕೆಲಬಾರಿ ಹರಸಾಹಸವಾಗಿರುತ್ತದೆ.
ಇದೆಲ್ಲಾ ಸರಿ! “ಆರೋಗ್ಯ” ಎಂದರೆ ಏನು?! ಎಂಬ ಚಿಕ್ಕ ಪ್ರಶ್ನೆ ನನ್ನ ಮನಸ್ಸಿನಲ್ಲಿ ಸಾಧಾರಣವಾಗಿ ಮೂಡುತ್ತಿರುತ್ತದೆ. ಈ ಪ್ರಶ್ನೆಗೆ ಉತ್ತರಕ್ಕಾಗಿ ಒಮ್ಮೆ ಯೋಚಿಸುವುದರಲ್ಲಿ ತಪ್ಪಿಲ್ಲ. ಶರೀರದ ಸರಿಯಾದ ತೂಕ, ಶಾರೀರಿಕ ತಪಾಸಣೆಯ ವೈದ್ಯಕೀಯ ರಿಪೋರ್ಟ್ಸ್ ಎಲ್ಲವೂ “ನಾರ್ಮಲ್” ಆಗಿದ್ದ ಮಾತ್ರಕ್ಕೆ ನಾವು ಆರೋಗ್ಯವಂತರೆಂದರ್ಥವೇ?! ಒಂದರ್ಥದಲ್ಲಿ ಹೌದು. ಇನ್ನೊಂದು ಅರ್ಥದಲ್ಲಿ “ಅಲ್ಲವೇ ಅಲ್ಲ”!
ನಮ್ಮೊಳಗೆ ದೃಷ್ಟಿಗೆ ಸಿಲುಕದ, ಸ್ಪರ್ಶಕ್ಕೆ ದೊರಕದ ಆದರೆ ಅವರವರ ಅರಿವಿನ ವ್ಯಾಪ್ತಿಯೊಳಗೆ ಮಾತ್ರ ಬರುವ “ಮನಸ್ಸು” ಎಂಬುದೂಂದಿದೆ, ಅದೆಷ್ಟರ ಮಟ್ಟಿಗೆ ಅದು ಆರೋಗ್ಯಕರವಾಗಿದೆ ಎಂಬುದಕ್ಕೆ ಎಷ್ಟೋ ಬಾರಿ ನಾವು ತಿಲಮಾತ್ರ ಬೆಲೆ ಕೊಟ್ಟಿರುವುದಿಲ್ಲ. ಅದೆಷ್ಟರ ಮಟ್ಟಿಗೆ ಮನಸ್ಸಿನ ಆರೋಗ್ಯವನ್ನು ಕಡೆಗಣಿಸುತ್ತೇವೋ, ಅದೂ ಅಷ್ಟೇ ಶರೀರದೊಂದಿಗಿನ ತನ್ನ ಅಸಹಕಾರವನ್ನೇ ಮುಂದುವರೆಸುತ್ತದೆ.
ಉದಾಹರಣೆಗೆ ಶಾರೀರಿಕ ಆರೋಗ್ಯಕ್ಕಾಗಿ ಕಠಿಣವಾದ, ಬೆವರು ಬಿಚ್ಚುವ ವ್ಯಾಯಾಮ, ನಡಿಗೆ, ಪಥ್ಯ ಇತ್ಯಾದಿ ಶುರುಹಚ್ಚಿಕೊಂಡು ಕೆಲವು ದಿನ/ವಾರಗಳಿಗಿಂತ ಹೆಚ್ಚು ಕಾಲ ಅದನ್ನು ಮುಂದುವರೆಸಲು ಉದಾಸೀನತೆಯೋ ಇನ್ನೇನೋ ಕಾರಣವೇ ಮೊದಲಾಗಿ ನಿಲ್ಲಿಸಿಬಿಡುವವರೆಷ್ಟೋ. ಆಗಲೆಲ್ಲಾ “ಮನಸ್ಸು” ಸಹಕರಿಸಿ ಮುಂದುವರೆಸಲು ಅನುವು ಮಾಡಿಕೊಡುತ್ತಿಲ್ಲವೆಂಬುದು ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯ. ಶರೀರ, ಮನಸ್ಸುಗಳು ಒಮ್ಮತದಿಂದ ಸಹಕರಿಸಿದರೆ ಮಾತ್ರ ಮನುಷ್ಯ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ. ಇದಕ್ಕಾಗಿ ಜೀವನದಲ್ಲಿ ಕೆಲ ನಿಯಮಗಳು, ಶಿಸ್ತು, ಆರೋಗ್ಯಕರ ಆಹಾರ ಕ್ರಮ, ಸಾತ್ವಿಕ ರೀತಿ, ನಡೆ, ನುಡಿ, ಧ್ಯಾನ ಇವೆಲ್ಲಾ ಅವಶ್ಯ.
ಇನ್ನು, ಆಹಾರದ ವಿಷಯಕ್ಕೇ ಬಂದರೆ, ಬಹು ಮಂದಿ ಮರೆವ ಬಹುಮುಖ್ಯ ವಿಚಾರ ಎಂದರೆ ಆಹಾರದಲ್ಲಿ ಎರಡು ವಿಧ ಎಂಬುದು.
1) ಶಾರೀರಿಕ ಆಹಾರ
2) ಮಾನಸಿಕ ಆಹಾರ
ಶಾರೀರಿಕ ಆರೋಗ್ಯಕ್ಕೆ ವ್ಯಾಯಾಮದೊಂದಿಗೆ ಸೇವಿಸುವ ಆಹಾರ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯಕ್ಕಾಗಿ ನಾವು ಸೇವಿಸುವ ಆಹಾರದೊಂದಿಗೆ ಮಾನಸಿಕ ಆಹಾರವೂ ಅತ್ಯವಶ್ಯಕ.
ಸರಿ! ಏನಿದು ಮಾನಸಿಕ ಆಹಾರ?!
ನಮ್ಮ ಮನಸ್ಸನ್ನು ಧನಾತ್ಮಕತೆಯತ್ತ ವಾಲಿಸಿ ಸ್ವಸ್ಥತೆಯ ಗಟ್ಟಿ ಅಡಿಪಾಯವನ್ನು ಹಾಕಿ ಶರೀರ, ಮನಸ್ಸುಗಳನ್ನು ಒಂದಾಗಿಸುವಂತಹ ಪೂರಕ ಅಂಶಗಳನ್ನು ಮನಸ್ಸಿಗೆ ಕೊಡುವ ಆಹಾರಗಳನ್ನು ಮಾನಸಿಕ ಆಹಾರವೆಂದು ಕರೆಯಬಹುದು. ಶಬ್ದವಿರಲಿ, ದೃಶ್ಯವಿರಲಿ, ಸ್ಪರ್ಶವಿರಲಿ, ವಾಸನೆಯಿರಲಿ, ಅಥವಾ ರುಚಿಯ ರೂಪದಲ್ಲೇ ಇರಲಿ ಅದು ಮನಸ್ಸಿನಲ್ಲಿ ಧನಾತ್ಮಕತೆಯನ್ನು ಉಂಟುಮಾಡಿದಾಗ ಮನಸ್ಸಿಗೆ ಆಹ್ಲಾದವುಂಟಾಗುತ್ತದೆ, ಅದುವೇ ಶಾರೀರಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮವನ್ನು ಉಂಟುಮಾಡುತ್ತದೆ. ನಮ್ಮ ಗ್ರಹಿಕೆಯ ಅಂಗಗಳು ಅದೇನನ್ನು ಗ್ರಹಿಸುತ್ತವೋ, ಅದನ್ನು ಮೆದುಳು ಯಾವ ರೀತಿ ಅರ್ಥೈಸುತ್ತದೋ, ಅಂತಿಮವಾಗಿ ಮನಸ್ಸು ಅದಕ್ಕೆ ಯಾವ ತರಹ ಸ್ವೀಕರಿಸಿ ಸ್ಪಂದಿಸುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.
ನೋಡುವ ದೃಶ್ಯಗಳು, ಕೇಳುವ ಮಾತು, ಸುತ್ತಲಿನ ಪರಿಸರ, ನಡೆ-ನುಡಿ, ಪ್ರತಿಯೊಂದೂ ಸತತವಾಗಿ ನಮ್ಮ ಮೇಲೇ ನಮಗರಿವಿಲ್ಲದೆಯೇ ಪರಿಣಾಮವನ್ನುಂಟುಮಾಡುತ್ತದೆ(ಬಸ್ ಪ್ರಯಾಣದ ಸಮಯದಲ್ಲಿ ತಂಪು ಪಾನೀಯದ ಜಾಹೀರಾತಿನ ಫ಼್ಲೆಕ್ಸ್ ಒಂದನ್ನು ನೋಡಿ ಅದರ ಮೇಲೆ ನೀವು ಆಕರ್ಷಿತರಾಗಿದ್ದರೆ ಸ್ಟಾಪ್ ಬಂದಾಗ ಅಂಗಡಿಯಲ್ಲಿ ಅದೇ ತಂಪು ಪಾನೀಯದ ಬಾಟಲ್ ಅನ್ನು ಕಂಡರೆ ಅದನ್ನು ಕೊಳ್ಳುವ ಆಲೋಚನೆ ಬರುತ್ತದೆ). ನಾನು ಉಲ್ಲೇಖಿಸಿದ್ದು ಅತಿಸಣ್ಣ, ಸಾಧಾರಣ ಉದಾಹರಣೆ. ಆದರೆ ನಮ್ಮ ಮಾನಸಿಕ ಆಹಾರಗಳು ಎಷ್ಟೋ ಬಾರಿ ಮನಸ್ಸನ್ನು ಅಸ್ವಸ್ಥತೆಯತ್ತ ಕೊಂಡೊಯ್ದು ದೀರ್ಘ ಕಾಲದಲ್ಲಿ ಅತಿ ಗಂಭೀರ ಪರಿಣಾಮಗಳನ್ನುಂಟುಮಾಡುವ ಸಾಧ್ಯತೆಗಳೂ ಇರುತ್ತವೆ.
ಇತ್ತೀಚೆಗೆ ಶಾಲೆಯ ಮಕ್ಕಳಲ್ಲಿ ಜಗಳವಾಗಿ ಬಾಲಕನೊಬ್ಬನನ್ನು ಇತರ ಮಕ್ಕಳು ಸೇರಿ ಹತ್ಯೆ ಮಾಡಿದಂತಹ ಘಟನೆಯೊಂದು ನಡೆಯಿತು. ಸಿನಿಮಾಕ್ಕೂ ಜೀವನಕ್ಕೂ ವ್ಯತ್ಯಾಸ ಅರಿಯದ ಎಳೆಯ ಮನಸ್ಸುಗಳಲ್ಲಿ ಬಿತ್ತಿದ ಬೀಜ ರುಣಾತ್ಮಕವಾಗಿದ್ದು ನಂತರದ ದಿನಗಳಲ್ಲಿ ಹಿಂದೆ ತರಲಾರದ ಘಟ್ಟಕ್ಕೆ ಹೋದರೆ ಉಂಟಾಗುವ ಪರಿಸ್ಥಿತಿಗೆ ಇದೊಂದು ಸಾಕ್ಷಿ ಅಷ್ಟೇ.
ದೃಶ್ಯಗಳ ವಿಚಾರಕ್ಕೇ ಬರೋಣ. ಚಲನಚಿತ್ರಗಳು, ಧಾರಾವಾಹಿಗಳು ಹೆಚ್ಚೇಕೆ ಇಂದಿನ ನ್ಯೂಸ್ ಚಾನಲ್ ಗಳೇ ಸಾಕು ಸಮಾಜದಲ್ಲಿ ಅಸ್ವಸ್ಥ ಮನಸ್ಸುಗಳನ್ನು ಬೆಳೆಸಲು. ಜಗಳ, ಕೊಲೆ, ದರೋಡೆ, ಹೊಡೆದಾಟ, ಅನುಮಾನ, ಅರಚುವ ಸದ್ದುಗಳು, ಆರ್ತನಾದ ಇಂತಹವುಗಳನ್ನು ನೋಡದಿರಿ, ಕೇಳದಿರಿ. ಮುಖ್ಯವಾಗಿ ಎಳೆಯ ಮಕ್ಕಳನ್ನು ಇಂಥಹವಿಂದ ದೂರವಿರಿಸಬೇಕು. ನಿಮಗೆ ಅಂತಹ ದೃಶ್ಯಗಳನ್ನು ನೋಡುವಾಗ, ಸದ್ದುಗಳನ್ನು ಕೇಳಿದಾಗ ಭಯವಾಗದಿದ್ದಲ್ಲಿ, ಮನಸ್ಸಿಗೆ ಹಿಂಸೆಯಾಗದಿದ್ದಲ್ಲಿ, ನಿಮ್ಮಲ್ಲಿ ಅದಕ್ಕೆ ಸ್ಪಂದಿಸುವ ಧನಾತ್ಮಕತೆಯು ಕುಸಿಯುತ್ತಿದೆ ಎಂದು ನಿಸ್ಸಂಶಯವಾಗಿ ಹೇಳಬಲ್ಲೆ.
ಮಾತಿನಲ್ಲಿ ಶಬ್ದಗಳ ಬಳಕೆ, ಪ್ರತಿಯೊಬ್ಬರನ್ನೂ ಗೌರವದಿಂದ ನೋಡುವ ಪರಿ, ಪರಿಸರ ಸ್ವಚ್ಚತೆ, ಮನೆ-ಮನಗಳ ಸ್ವಚ್ಚತೆ, ಕೇಳುವ ಸಂಗೀತ, ಎಲ್ಲದರಲ್ಲೂ ಧನಾತ್ಮಕತೆಯನ್ನು ತುಂಬಿಸಿಕೊಂಡು ನಮ್ಮೊಳಗೆ ಸಾಧ್ಯವಾದಷ್ಟು ಧನಾತ್ಮಕ ಅಂಶಗಳ ಬೆಳವಣಿಗೆಯಾಗುವಂತೆ ಮಾಡುವುದೂ ಕೂಡಾ ಒಂದು ಯೋಗ ಸಾಧನೆ.
ಹೀಗೆ ಮನಸ್ಸಿನ ಚಂಚಲತೆಯನ್ನು ಶಮನ ಮಾಡುವ ಸಾತ್ವಿಕತೆ, ಪ್ರಕೃತಿಗೆ ನಾವೇನಾದರೂ ಅಳಿಲಸೇವೆಯನ್ನು ಮಾಡುದಾಗ ಸಿಗುವ ತೃಪ್ತಿ, ಧ್ಯಾನ, ಸತ್ವಯುತ ಆಹಾರ ಎಲ್ಲವೂ ಜತೆಗೂಡಿ ಮನಸ್ಸನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ನೆನಪಿರಲಿ, ಮಾನವನ ಮನಸ್ಸಿಗಿಂತ ಶಕ್ತಿಯುತವಾದುದು ಇನ್ನೊಂದಿಲ್ಲ ಎಂಬ ಮಾತಿನಲ್ಲಿ ಸಾಕಷ್ಟು ಅರ್ಥವಿದೆ. ಮನೋಬಲವಿದ್ದಲ್ಲಿ ಮಾತ್ರ ನಮ್ಮ ಶರೀರ ನಾವು ಮಾಡುವ ಕೆಲಸಗಳಿಗೆ ಸಹಕಾರ ಕೊಡುತ್ತದೆ. ಅದುವೇ ಶಾರೀರಿಕ ಆರೋಗ್ಯಕ್ಕೆ ಬುನಾದಿ. ಶಾರೀರಿಕ ಆರೋಗ್ಯದ ಬಗ್ಗೆ ಅತಿ ಕಾಳಜಿ ವಹಿಸಿ ಆಹಾರದಲ್ಲಿ ವೈವಿಧ್ಯ ಪ್ರಯೋಗಗಳನ್ನು ಮಾಡುವಾಗ ಮಾನಸಿಕ ಆಹಾರವೂ ಕೂಡ ಸ್ವಸ್ಥವಾಗಿದ್ದಲ್ಲಿ ಅದುವೇ ಆರೋಗ್ಯ ಸಾಧನೆಗೆ ಬುನಾದಿ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಉತ್ತಮ “ಆರೋಗ್ಯ”ವನ್ನು ಹೊಂದಲು ಖಂಡಿತ ಸಾಧ್ಯ.
– ಶ್ರುತಿ ಶರ್ಮ, ಬೆಂಗಳೂರು
Nice article….
ಮಾಹಿತಿಪೂರ್ಣ ಬರಹ..ಇಷ್ಟವಾಯಿತು
ಚಿಂತನ ಶೀಲ ವಿಚಾರ ಬರಹ ಶೃತಿ ಶರ್ಮ. ಕೆಲವಷ್ಟು ಮಾಹಿತಿ,ಭಗವದ್ಗೀತೆಯಲ್ಲಿ ಹೇಳುವುದು ; ಪುನರಪಿ ನೆನಪಿಗೆ ಬಂತು. ಧನ್ಯವಾದ
ಆಹಾರ , ತಿನಿಸು , ಮಾನಸಿಕ ಸ್ವಾಸ್ಥ್ಯ ಯೋಗ,ಮನಸ್ಸು ಇತ್ಯಾದಿಗಳನ್ನೊಳಗೊಂಡ
ನಿಮ್ಮ ಲೇಖನ ಮನಕ್ಕೆ ಮುದ ನೀಡಿತು. ವಿಚಾರಪ್ರಚೋದಕ, ಸಚಿತ್ರ ಲೇಖನ ಓದಿ
ತೃಪ್ತಿ ಆಯಿತು. ಹೀಗೆಯೇ ನಿಮ್ಮ ಸಾಹಿತ್ಯ ಕೃಷಿ ಮುಂದುವರೆಯಲಿ .