ವಧುಪರೀಕ್ಷೆಯೂ, ಮ್ಯಾಚ್ ಮೇಕಿಂಗೂ..
ಪಿತೃ ಪ್ರಧಾನ ವ್ಯವಸ್ಥೆ ಪ್ರಬಲವಾಗಿದ್ದ ಹಿಂದಿನ ಕಾಲದಲ್ಲಿ ತಂದೆತಾಯಿಗಳು ತಮ್ಮ ಮಕ್ಕಳಿಗೆ ತಾವೆ ಸ್ವತಃ ವಧು ಅಥವಾ ವರನನ್ನು ಹುಡುಕಿ ಮದುವೆ ಮಾಡುತ್ತಿದ್ದರು. ತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ಹುಡುಗ, ಹುಡುಗಿಯರಿಗೆ ಆಗ ಅವಕಾಶಗಳಿರಲಿಲ್ಲ. ತಂದೆತಾಯಿಗಳು ಬಡವರಾಗಿದ್ದರೆ ಮದುವೆಯಲ್ಲೊ, ಜಾತ್ರೆಯಲ್ಲೊ ನೋಡಿದ ಹುಡುಗಿಯನ್ನು ಅವಳ ಹೆತ್ತವರ ಜೊತೆ ಮಾತನಾಡಿ ತಮ್ಮ ಮಗನಿಗೆ ಮದುವೆ ಮಾಡಿಸುತ್ತಿದ್ದರು. ಶ್ರೀಮಂತರು ಮತ್ತು ಮಧ್ಯಮವರ್ಗದವರು ತಮ್ಮ ತುಂಬಿದ ಮನೆ, ಅಂತಸ್ತು, ಮನೆ ಕೆಲಸ ಈ ಎಲ್ಲವಕ್ಕೂ ಸರಿ ಹೋಗುವಂತೆ ವಧುವನ್ನು ತರ ತರದ ಪರೀಕ್ಷೆಗೆ ಒಳ ಪಡಿಸಿ, ಅವಳನ್ನು ಪಾಸ್ ಮಾಡುತ್ತಿದ್ದರು. ಮೆಟ್ರಿಕ್ಯುಲೇಶನ್ ಪರೀಕ್ಷೆ ಪಾಸು ಮಾಡುವುದೂ ವಧುವಿಗೆ ಅಷ್ಟು ಕಷ್ಟವಾಗುತ್ತಿರಲಿಲ್ಲವಂತೆ!
ಹುಡುಗ, ಹುಡುಗಿಯ ಜಾತಕ ಕೂಡಿ ಬಂದ ಮೇಲೆ ವರನ ತಂದೆ, ತಾಯಿ, ದೊಡ್ಡಪ್ಪ, ದೊಡ್ಡಮ್ಮ, ಮಾವ, ಅತ್ತೆ ಮತ್ತು ಮಧ್ಯವರ್ತಿಗಳಿಂದ ಕೂಡಿದ ದೊಡ್ಡ ದಿಬ್ಬಣವೆ ವಧುವಿನ ಮನೆಗೆ ಹೋಗಿ, ತಿಂಡಿ ತಿಂದು, ಕಾಫಿ ಕುಡಿದು ಸಾವಧಾನವಾಗಿ ಪರೀಕ್ಷೆ ನಡೆಸುತ್ತಿದ್ದರಂತೆ.“ಬಂದಿರೊ ಹಿರಿಯರೆಗೆಲ್ಲ ನಮಸ್ಕಾರ ಮಾಡು” ಎನ್ನುವ ಮೂಲಕ ವಧು ಪರೀಕ್ಷೆ ಶುರುವಾಗುತ್ತಿತ್ತಂತೆ. ನಡೆಯ ಬೇಕಾದರೆ ವಧುವಿನ ಕಾಲುಗಳು ಸರಿಯಾಗಿದೆಯೆ, ಬಗ್ಗಿ ನಮಸ್ಕರಿಸುವಾಗ ನಯ, ವಿನಯ ಇದೆಯೆ ಎಂದು ಪರೀಕ್ಷಿಸುತ್ತಿದ್ದರಂತೆ.
“ಅಡುಗೆ ಬರುತ್ಯೆ? ಹತ್ತು ಜನರ ಊಟಕ್ಕೆ ಎಷ್ಟು ಅಕ್ಕಿ ಇಡಬೇಕು? ಅದಕ್ಕೆ ಎಷ್ಟು ನೀರು ಹಾಕಬೇಕು?” ಎಂದೆಲ್ಲ ಪ್ರಶ್ನೆಗಳನ್ನು ಕೇಳಿ ಹುಡುಗಿಗೆ ಅಡುಗೆ ಬರುತ್ತಾ, ಕಿವಿ ಕೇಳಿಸುತ್ತಾ, ಮಾತನಾಡಲು ಬರುತ್ತಾ ಎಂದು ಪತ್ತೆ ಮಾಡುತ್ತಿದ್ದರಂತೆ.
ಕಣ್ಣು ಸೂಕ್ಷ್ಮವಾಗಿದೆಯೆ ಎಂದು ನೋಡಲು ಸಾಸಿವೆ ಕಾಳು ಲೆಕ್ಕ ಹಾಕಲು ಕೊಡುತ್ತಿದ್ದರಂತೆ. ಗಂಡಿನವರನ್ನು ಸಂತೋಷಗೊಳಿಸಲು ಹೆಣ್ಣಿನಿಂದ ಹಾಡು ಹೇಳಿಸುತ್ತಿದ್ದರಂತೆ. ಈ ಎಲ್ಲಾ ಥಿಯರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆಗಳು ಮುಗಿದು, ಇನ್ನೂ ತೃಪ್ತರಾಗದ ಕೆಲವು ಗಂಡಿನವರು ಪರೀಕ್ಷೆಯನ್ನು ಇನ್ನೂ ಮುಂದುವರಿಸುತ್ತಿದ್ದರಂತೆ. ಗಂಡಿನ ಕಡೆಯ ವಯಸ್ಸಾದ ಹೆಂಗಸರು ಹುಡುಗಿಯನ್ನು ಒಳ ಕೋಣೆಗೆ ಕರೆದುಕೊಂಡು ಹೋಗಿ ಅವಳ ಜಡೆ ಬಿಚ್ಚಿಸಿ ಕೂದಲು ಒರಿಜಿನಲ್ಲಾ ಅಥವಾ ಚೌರಿಯಾ ಎಂದು ನೋಡುತ್ತಿದ್ದರಂತೆ. ಬಟ್ಟೆ ಬಿಚ್ಚಿಸಿ ಚರ್ಮದ ಖಾಯಿಲೆಯಿದೆಯೆ ಎಂದು ಪರೀಕ್ಷಿಸುತ್ತಿದ್ದರಂತೆ. ಜಾನುವಾರು ಸಂತೆಯಲ್ಲಿ ಹಸುವಿನ ಕಿವಿ, ಕಣ್ಣು, ಹೊಟ್ಟೆ ಪರೀಕ್ಷಿಸಿದ ಹಾಗೆ! ಇಷ್ಟೆಲ್ಲಾ ಪಾಸು ಮಾಡಿದ ಹುಡುಗಿಗೆ ಸಿಗುವ ವರ ಹೇಗಿರ್ತಾನೆ ಅಂದ್ರೆ ಅದು ಅವರವರ ಅದೃಷ್ಟ.
ಇಪ್ಪತ್ತು ವರ್ಷಗಳ ಹಿಂದೆ ನಾನು ಮದುವೆಯಾಗುವ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು. ಸಂಪ್ರದಾಯಸ್ಥರ ಮನೆಗಳಲ್ಲಿ ಪ್ರೀತಿ, ಪ್ರೇಮಗಳು ಅಪರಾಧಗಳಾಗಿದ್ದವು. ಆದರೆ ತಂದೆತಾಯಿಗಳು ನೋಡಿದ ಸಂಬಂಧವನ್ನು ಪರಸ್ಪರ ನೋಡಿ ಒಪ್ಪಿಗೆ ಸೂಚಿಸಬಹುದಾಗಿತ್ತು. ಹೆಣ್ಣಿಗೆ ಜಾಸ್ತಿ ಆಯ್ಕೆ, ಸ್ವಾತಂತ್ರ್ಯಗಳಿರಲಿಲ್ಲ. ಹೆಣ್ಣಿನವರು ಗಂಡಿನ ಕಡೆಯವರಿಗೆ ತಗ್ಗಿ ಬಗ್ಗಿ ನಡೆದು ಮದುವೆ ಮಾಡುತ್ತಿದ್ದರು.
ಈಗ ವಧು ಪರೀಕ್ಷೆ ಎನ್ನುವುದು ಬಹಳಷ್ಟು ಸುಧಾರಿಸಿ ‘ಮ್ಯಾಚ್ ಮೇಕಿಂಗ್’ ಅನ್ನುವ ಹೊಸ ರೂಪ ತಳೆದಿದೆ. ವಧುವಿನ/ವರನ ವಯಸ್ಸು, ಎತ್ತರ, ತೂಕ, ಬಣ್ಣ, ಗೋತ್ರ, ಜಾತಿ, ಕೆಲಸ, ಹುದ್ದೆ, ಸಂಬಳ, ಆಸ್ತಿ, ಹವ್ಯಾಸ, ದುಶ್ಚಟ ಹೀಗೆ ಬಹಳಷ್ಟು ವಿವರಗಳಿಂದ ಕೂಡಿದ ಬಯೊಡಾಟಾ (Biodata) ತಯಾರಿಸಲಾಗುತ್ತದೆ. ವರನ ಬಯೊಡಾಟಾದಲ್ಲಿ ಆತನ ಭವಿಷ್ಯದ ಪ್ಲಾನುಗಳೇನು, ಅಪ್ಪ ಅಮ್ಮ ಜೊತೆಯಲ್ಲಿದ್ದಾರೆಯೆ, ಮನೆಯಲ್ಲಿ ಯಾರು ಯಾರು ಇದ್ದಾರೆ, ವಿದೇಶದಲ್ಲಿದ್ದರೆ ಗ್ರೀನ್ ಕಾರ್ಡ್ ಇದೆಯೆ ಎನ್ನುವ ಇನ್ನಷ್ಟು ವಿವರಗಳಿರುತ್ತವೆ. ಹೀಗೆ ತಯಾರಿಸಿದ ಬಯೊಡಾಟಾವನ್ನು ವಿವಿಧ ಭಂಗಿಗಳಲ್ಲಿ ತೆಗೆದ ಫೊಟೊಗಳ ಜೊತೆ ಲಗತ್ತಿಸಿ ಮ್ಯಾಚ್ ಮೇಕಿಂಗ್ ಸೆಂಟರ್‌ಗಳಿಗೊ, ಮಧ್ಯವರ್ತಿಗಳಿಗೊ ಕೊಡಲಾಗುತ್ತದೆ. ತಂದೆತಾಯಿಗಳು ತಮ್ಮ ಮಗ/ಮಗಳಿಗೆ ಸರಿಹೋಗುವ ಬಯೊಡಾಟಾಗಳನ್ನು ಇವರಿಂದ ಪಡೆದು ಮಕ್ಕಳ ಜೊತೆ ಕೂತು ಚರ್ಚಿಸಿ, ಅವರಿಗೆ ತಕ್ಕ ಮ್ಯಾಚ್ ಹುಡುಕುತ್ತಾರೆ. ಆಮೇಲೆ ಗಂಡು ಹೆಣ್ಣು ನೋಡುವ ಕಾರ್ಯಕ್ರಮವಿರುತ್ತದೆ. ಸರಿಯಾದ ಮ್ಯಾಚ್ ಸಿಗದೆ ಹುಡುಕಿ ಹುಡುಕಿ ಸುಸ್ತಾದ ಕೆಲವು ತಂದೆತಾಯಿಗಳು ಇತ್ತೀಚೆಗೆ ತಮ್ಮ ಮಕ್ಕಳಿಗೆ ಪ್ರೇಮವಿವಾಹವಾಗಲು ಪ್ರೋತ್ಸಾಹಿಸುತ್ತಿದ್ದಾರಂತೆ!
ವರ್ಷದ ಕೆಳಗೆ ನನ್ನ ಕಸಿನ್ ಮದುವೆ ಇಂಟರ್ನೆಟ್‌ನಲ್ಲಿಯೆ ಫಿಕ್ಸ್ ಆಯಿತು. ಹುಡುಗ ವಿದೇಶದಲ್ಲಿದ್ದ ಕಾರಣ, ಬಯೊಡಾಟಾ ಮತ್ತು ಫೋಟೊಗಳು ಕಂಪ್ಯೂಟರ್‌ಗಳ ಮೂಲಕ ಹರಿದಾಡಿ, ಫೋನಿನಲ್ಲೆ ಮಾತುಕತೆಗಳಾಗಿ, ನಿಶ್ಚಿತಾರ್ಥವನ್ನು ಅಪ್ಪ ಅಮ್ಮಂದಿರು ಈ ದೇಶದಲ್ಲಿ ಮಾಡಿಕೊಂಡರು. ಮದುವೆಯಾಗಿ ಈಗ ಸುಖವಾಗಿದ್ದಾಳೆನ್ನಿ. ಹೀಗೆ ಬಹಳಷ್ಟು ಮದುವೆಗಳು ಈಗ ಇಂಟರ್ನೆಟ್‌ನಲ್ಲಿಯೆ ಫಿಕ್ಸ್ ಆಗುತ್ತವೆ. ಇಲ್ಲಿ ಅಪ್ಪ ಅಮ್ಮಗಳೆ ಬೇಕಾಗಿಲ್ಲ. ಹುಡುಗ, ಹುಡುಗಿಯರೆ ತಮ್ಮ ಬೇಕಾದ ಮ್ಯಾಚ್‌ಗಳನ್ನು ಹುಡುಕಿಕೊಳ್ತಾರೆ; ಮದುವೆಯಾಗ್ತಾರೆ; ಅಡ್ಜಸ್ಟ್ ಆಗಿಲ್ಲವಾದರೆ ಡೈವೂರ್ಸೂ ಕೊಡ್ತಾರೆ.
ಕಾಲಾಯ ತಸ್ಮೈ ನಮಃ !!
– ಪೂರ್ಣಿಮಾ ಕೆ
09/03/2014
ಅಂದು ಹೆಣ್ಣಿಗೆ ಮದುವೆಯೇ ಸರ್ವಸ್ವ .ಅನೇಕ ಮನೆಗಳಲ್ಲಿ ಗಂಡ ಉಂಡೆದ್ದ ಎಂಜಲೆಲೆಯಲ್ಲೇ ಉಣ್ಣಬೇಕಾದ ಅನಿವಾರ್ಯತೆ .ಆರ್ಥಿಕ ಸ್ವಾತಂತ್ರ, ವಿದ್ಯೆ ಇಂದು ಆಕೆಗೆ ಬೆನ್ನೆಲುಬಾಗಿ ನಿಂತಿದೆ .ಅದರಿಂದಾಗಿ ಆಕೆ ನೆಟ್ಟಗೆ ನಿಲ್ಲುವನ್ತಾಯಿತು . ಬರಹಕ್ಕೆ ಅಭಿನಂದನೆಗಳು .
ತುಂಬಾ ಚೆನ್ನಾಗಿ ಬರೆದಿದ್ದಾರೆ