ಹೊರಡಬೇಕಿದೆ ನಾನೀಗಲೇ
ಕರೆ ಬಂದಿದೆ ಅಲ್ಲಿಂದಲೇ
ಹೋಗದೇ ವಿಧಿ ಇಲ್ಲ
ಇಲ್ಲಿರಲು ಬಿಡುತಿಲ್ಲ
ಯಮನ ದೂತರು ಪಾಶ ಎಸೆದಿಹರು
ಕುಣಿಕೆ ಹಿಂಡಿದೆ ಕೊರಳ ಉಸಿರು
ವಿಲವಿಲ ಒದ್ದಾಡಿದೆ ಈ ದೇಹ
ಭವಬಂಧನ ಕಳಚಿಕೊಳ್ಳುವ ದಾಹ
ಯಾರಿತ್ತರೋ ಅಲ್ಲಿ ದೂರು
ತೀರ್ಪಲ್ಲಿದೆ ನನ್ನ ಹೆಸರು
ನನ್ನ ವಾದಕಿಲ್ಲ ಅವಕಾಶ
ಗೋಣ ಬಿಗಿದಿದೆ ಯಮಪಾಶ
ಹೋಗುವುದೀಗ ಅನಿವಾರ್ಯ
ಹೋಗುವೆನು ಸುಮ್ಮನೆ ನಾನೀಗ
ಕಟುಕನ ಕೈಯ ಪಶು ನಾನು
ಅದು ಹೇಗೆ ಅವರ ವಶವಾದೆನೋ
ಸಾಯುವ ಸರದಿಯಲ್ಲಿ ನಾನಿರಲಿಲ್ಲ
ಆದರೂ ಎಳೆದೊಯ್ದರು ಯಾಕೋ ಗೊತ್ತಿಲ್ಲ
ಸಮಜಾಯಿಷಿ ನೀಡೋ ಸಮಯವಿದಲ್ಲ
ಹೇಗೇಕಾಯ್ತೋ ವಿಧಿಯೇ ಬಲ್ಲ
ಹೋಗುವೆನು ನಾನು ನಿಮ್ಮಿಂದ ದೂರ
ಶರಣಾಗತಿಯೇ ನನ್ನ ಸಂಸ್ಕಾರ
ಋಣ ತೀರಿದ ಮೇಲೆ ಗುಣಕಿಲ್ಲ ಬೆಲೆ
ನಿಮ್ಮನ್ನು ಬಿಟ್ಟು ಹೊರಟಿಹೆ ಅರ್ಧದಲ್ಲೇ
– ಅಮುಭಾವಜೀವಿ