‘ತಾಳಿದರೆ ಬಾಳಬಹುದು’ ಅಲ್ಲವೇ ?
08 ನವೆಂಬರ್ 2016 ರಂದು, ರಾತ್ರಿ 08:15 ಗಂಟೆಗೆ, ಹೊಸದಿಲ್ಲಿಯಲ್ಲಿ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭಾರತದ ಅರ್ಥವ್ಯವಸ್ಥೆಯಲ್ಲೊಂದು ಕ್ರಾಂತಿಕಾರಕ ಐತಿಹಾಸಿಕ ನಿರ್ಣಯವನ್ನು ಪ್ರಕಟಿಸಿದರು. ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗಾಗಿ ಭಾರತ ಸರ್ಕಾರವು ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ.500 ಮತ್ತು ರೂ. 1000 ನೋಟುಗಳ ಅನಾಣ್ಯೀಕರಣವನ್ನು ಘೋಷಣೆ ಮಾಡಿತು. ಹಳೆಯ ಬ್ಯಾಂಕ್‍ನೋಟುಗಳನ್ನು ಮಹಾತ್ಮ ಗಾಂಧಿ ಹೊಸ ಸರಣಿಯ, ಹೊಸ ರೂ.500 ಮತ್ತು ರೂ. 2000 ಬ್ಯಾಂಕ್ ನೋಟುಗಳ ನೀಡಿಕೆಯ ವಿನಿಮಯವನ್ನು ಘೋಷಿಸಿತು.
ಇಂತಹ ಸಂಚಲನಕಾರಿ ವಿಚಾರವನ್ನು ಪ್ರಕಟಿಸುವ ಎದೆಗಾರಿಕೆ ಮತ್ತು ಅದರ ಅನುಷ್ಠಾನದಲ್ಲಿ ಕಾಯ್ದುಕೊಂಡ ಚಾಣಾಕ್ಷತೆ ಮತ್ತು ಗೋಪ್ಯತೆಗೆ – ಮೋದಿಜೀ, ತುಝೇ ಸಲಾಂ! ಜನಸಾಮಾನ್ಯರಿಗೆ ತತ್ಕ್ಷಣವೇ ಮಾಹಿತಿಯನ್ನು ರವಾನಿಸಿದ ಸಮೂಹ ಮಾಧ್ಯಮಗಳಿಗೂ ಧನ್ಯವಾದಗಳು.ರಾತ್ರಿ ಬೆಳಗಾಗುವಷ್ಟರಲ್ಲಿ ಅದೆಷ್ಟು ಜನ, ವಿಭಿನ್ನ ರೀತಿಯಲ್ಲಿ 500/1000 ರೂ ನೋಟುಗಳ ಬಗ್ಗೆ ಪ್ರತಿಕ್ರಿಯಿಸಿದರೆಂದರೆ, ನಿದ್ರಿಸಿದ್ದ ದೇಶವೇ ತಟಕ್ಕನೇ ಎದ್ದಂತಾಗಿದೆ.
ಈ ಹೊಸ ನಿರ್ಣಯದ ಅನುಷ್ಠಾನದಿಂದಾಗಿ, ಕಾಳಧನಿಕರಿಗೆ ಚಡಪಡಿಸುವಂತಾಗಿದೆ. ಲೆಕ್ಕವಿಲ್ಲದಷ್ಟು ಕಪ್ಪುಹಣ ಹೊಂದಿರುವ ಭ್ರಷ್ಟರು ‘ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ’ ಎನ್ನುತ್ತಾ, ಕಪಟ ಜನಪರ ಕಾಳಜಿಯನ್ನು ನಟಿಸುತ್ತಾ, ಮೋದಿಯವರ ನಡಾವಳಿಯನ್ನು ಟೀಕಿಸುತ್ತಾ ತಮ್ಮ ಕಪ್ಪುಹಣವನ್ನು ಬಿಳಿಹಣವನ್ನಾಗಿ ಮಾಡಲು ಹೆಣಗಾಡುತ್ತಿದ್ದಾರೆ. ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆಯಾದರೂ, ನಾನು ಗಮನಿಸಿದಂತೆ ದೇಶದ ಹೆಚ್ಚಿನವರು ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ ಹಾಗೂ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯಲ್ಲಿದ್ದಾರೆ.
ನಮ್ಮ ಮನೆಯ ಸಹಾಯಕಿ ಮೊನ್ನೆಯೇ “ನಮ್ಗಳಿಗೋ ದುಡ್ಡಿಲ್ಲ.. ಮೂಟೆಗಟ್ಲೆ ದುಡ್ಡಿಟ್ಟಿರ್ತಾರೆ ಕೆಲವ್ರು…ತಿಥಿ ಮಾಡಾಕಾ….ಉಣ್ಣಾಕೆಷ್ಟು ಬೇಕು….“ ಹೀಗೆ ತನ್ನದೇ ಶೈಲಿಯಲ್ಲಿ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸಿ, ವಿಶ್ಲೇಷಿಸಿ,ಸ್ವೀಕರಿಸಿದ್ದಳು. ಇಂತಿಪ್ಪ ಈಕೆ ಈವತ್ತು “ಮನೆಲಿ ಕೆಲ್ಸಕ್ಕೆ ಹೋಗೋರಿಗೆ ಭಾತ್ ಮಾಡ್ಬಿಟ್ಟು ಬಂದಿವ್ನಿ. ಟೀ ಸೊಪ್ಪು, ಸಕ್ರೆ ಆಗೋಗಿದೆ…ಟೀ ಕಾಯ್ಸಿಲ್ಲ, ನಮ್ಕಡೆಯರು ಯಾರೋ ತೀರಿ ಹೋದವ್ರೆ…. ನೋಡೋಕೆ ಹೋಗ್ಬೇಕು, ಬಸ್ಸಿಗೆ ಕಾಸಿಲ್ಲ, ಬ್ಯಾಂಕ್ ಲ್ಲಿ ಆಪಾಟಿ ಜನ “ ಇತ್ಯಾದಿ ತನ್ನ ಕಷ್ಟಸುಖ ಹೇಳಿಕೊಳ್ಳುತ್ತಿದ್ದಳು.
ಆಕೆ ಸ್ವಾಭಿಮಾನಿ ಎಂದು ನನಗೆ ಗೊತ್ತು. ಹಾಗಾಗಿ ” ನಾವೂ ಬ್ಯಾಂಕ್ ಗೆ ಇನ್ನೂ ಹೋಗಿಲ್ಲ, ರಶ್ ಕಡಿಮೆಯಾದ ಮೇಲೆ ಹೋಗ್ತೀವಿ. ನಮ್ಮ ಬಳಿಯೂ 5-6 ನೂರರ ನೋಟುಗಳು ಇವೆಯಷ್ಟೆ. ಸದ್ಯಕ್ಕೆ ಇನ್ನೂರು ರೂ ಕೊಡುತ್ತೇನೆ, ತಿಂಗಳ ಸಂಬಳದಲ್ಲಿ ಹಿಡಿದುಕೊಳ್ಳುತ್ತೇನೆ” ಅಂದೆ. ಖುಷಿಯಿಂದ ‘ಆಗಲಿ’ ಎಂದು ತಲೆಯಾಡಿಸಿದಳು. ಆಮೇಲೆ ಇಪ್ಪತ್ತರ ಮೂರು ನೋಟುಗಳನ್ನು ಆಕೆಗೆ ಕೊಟ್ಟು ಇದರಲ್ಲಿ ಅರ್ಜೆಂಟಾಗಿ ಬೇಕಾಗಿರುವ ವಸ್ತುಗಳನ್ನು ತಗೊ ಎಂದೆ. ಪಕ್ಕದ ಅಂಗಡಿಗೆ ಹೋಗಿ ಬಂದ ಆಕೆ ಸ್ವಲ್ಪ ಚಹಾಪುಡಿ ಮತ್ತು ಸಕ್ಕರೆಯನ್ನು ಖರೀದಿಸಿ, ಮಿಕ್ಕ 22 ರೂ ಅನ್ನು ಹಿಂತಿರುಗಿಸಿದಳು. ಚಿಲ್ಲರೆಯನ್ನು ನೀನೇ ಇಟ್ಟುಕೋ ಅಥವಾ ಇನ್ನೇನಾದರೂ ಬೇಕಿದ್ದರೆ ತಗೋ ಎಂದರೂ ‘ಬೇಡ’ ಎಂದಳು.
ಅಷ್ಟರಲ್ಲಿ ತರಕಾರಿ ಮಾರುವವರು ಬಂದರು. ‘ಜನರ ಬಳಿ ದುಡ್ಡಿಲ್ಲದೆ ನಿಮಗೆ ವ್ಯಾಪಾರ ಕಡಿಮೆಯಾಗಿದೆಯೆ’ ಅಂದೆ. ‘ಇಲ್ಲ ಕಣಕ್ಕಾ….ಅಂಗೇ ಇದೆ ….ಜನ ಉಣ್ಣೋದು ಬಿಡಕಾಯ್ತದಾ.. … ತರಕಾರಿ ಇಟ್ಕೋಂಡ್ರೆ ಕೆಟ್ಟೋಯ್ತದೆ…..ನಾನೇ ದುಡ್ಡು ಇಸ್ಕೊಳ್ಳದೆ ಕೆಲವ್ರಿಗೆ ತರಕಾರಿ ಕೊಟ್ಟೆ..ದುಡ್ಡು ಬರುತ್ತೆ, ಹೋಗುತ್ತೆ.. ನಮ್ಗೆ ಜನ ಬೇಕಲ್ವಾ… . ‘ ಅಂದರು. ನಮಗೂ, ಸಹಾಯಕಿಗೂ ಸೇರಿಸಿ ಹೆಚ್ಚುವರಿ ತರಕಾರಿ ಕೊಂಡೆವು.
ಸಾಮಾನ್ಯವಾಗಿ ಅಚ್ಚುಕಟ್ಟಾಗಿ ಗೃಹನಿರ್ವಹಣೆ ಮಾಡುವ ಮಧ್ಯಮ ವರ್ಗದ ಜನರು ಮನೆಗಳಲ್ಲಿ ಅಕ್ಕಿ, ಬೇಳೆ, ಉಪ್ಪು, ಗೋಧಿಹಿಟ್ಟು, ರವೆ, ಎಣ್ಣೆ ಇತ್ಯಾದಿ ಬೇಗನೇ ಕೆಡದ ಆಹಾರವಸ್ತುಗಳನ್ನು ಕನಿಷ್ಟ 10 ದಿನಗಳಿಗೆ ಸಾಕಾಗುವಷ್ಟು ಶೇಖರಿಸಿರುತ್ತಾರೆ.ಈ ರೀತಿಯ ದಾಸ್ತಾನು ಪದ್ಧತಿ ನಮ್ಮ ಹಿರಿಯರ ಕಾಲದಲ್ಲೂ ಇತ್ತು.ಮನೆಗೆ ದಿಢೀರ್ ಆಗಿ ಅತಿಥಿಗಳು ಬಂದರೂ, ಇರುವ ಆಹಾರ ಸಾಮಗ್ರಿಗಳನ್ನು ಬಳಸಿ ,ಅಡುಗೆ ಮಾಡಿ ಬಡಿಸುವ ಚಾಕಚಕ್ಯತೆ ಇರಬೇಕಾದುದು ನಮ್ಮ ಸಂಸ್ಕೃತಿ ಕೂಡ. ಒಂದೆರಡು ದಿನಸಿ ಮುಗಿದುಹೋದರೂ, ಬೇರೆ ಸಾಮಗ್ರಿ ಬಳಸಿ ಅಡುಗೆ ಮಾಡಬಹುದು. ಉದ್ದಿನಬೇಳೆ ಮುಗಿದಿದೆ ಎಂದಾದರೆ , ಇಡ್ಲಿ/ದೋಸೆ ಮಾಡಲೇಬೇಕೆಂಬ ಹಠ ಯಾಕೆ, ಚಪಾತಿ, ಚಿತ್ರಾನ್ನ ಇತ್ಯಾದಿ ತಿಂಡಿಗಳನ್ನು ಮಾಡಬಹುದಲ್ಲ!
ನಮ್ಮ ಮನೆಯಲ್ಲಂತೂ 500 ರೂ /1000 ರೂ ಚಲಾವಣೆಯಿದ್ದ ದಿನಗಳಲ್ಲೂ ಪ್ರತಿದಿನ ವ್ಯಾಪಾರ ಮಾಡುತ್ತಿರಲಿಲ್ಲ. ಇನ್ನು ಹಾಲು, ವಾರ್ತಾಪತ್ರಿಕೆ ಇತ್ಯಾದಿಗಳಿಗೆ ತಿಂಗಳಿಗೊಮ್ಮೆ ದುಡ್ಡು ಕೊಡುವ ಪದ್ಧತಿ. ಹೆಚ್ಚು ಮೊತ್ತದ ಖರೀದಿಗೆ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ ಆನ್-ಲೈನ್ ಇದ್ದೇ ಇದೆ. ತರಕಾರಿ ಮತ್ತು ಹಣ್ಣುಗಳನ್ನು ಕೊಳ್ಳಲು ಚಿಲ್ಲರೆ ದುಡ್ಡು ಬೇಕು. ಇವುಗಳನ್ನೂ 2-3 ದಿನಕ್ಕೆ ಸಾಕಾಗುವಷ್ಟು ಕೊಂಡರಾಯಿತು. ಅನಿವಾರ್ಯ ಸಂದರ್ಭಗಳಲ್ಲಿ ನಂಬಿಕೆಯ ಮೇಲೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ಕೊಡುವ ವ್ಯಾಪಾರಿಗಳು ಇರುತ್ತಾರೆ. ಅಷ್ಟರಮಟ್ಟಿಗೆ ಸೌಹಾರ್ದತೆ, ಉದಾರತೆ ನಮ್ಮ ದೇಶದಲ್ಲಿ ಇನ್ನೂ ಇದೆ!
ನಮಗಂತೂ ನೋಟುಗಳು ಅಮಾನ್ಯತೆಗೊಂಡ ನವೆಂಬರ್ 8 ರಿಂದ ಇಂದಿನವರೆಗೆ ದಿನಚರಿ ಬದಲಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವದಂತಿಗಳನ್ನು ಹಬ್ಬಿಸದೆ, ಗೊಂದಲವನ್ನು ಹೆಚ್ಚಿಸದೆ, ತಾಳ್ಮೆಯಿಂದ ಇರುವುದೇ ಇರುವುದೇ ನಾವು ಮಾಡಬಹುದಾದ ದೇಶಸೇವೆ ಅನಿಸುತ್ತಿದೆ. ಮೋದಿಯವರ ಕಠಿಣ ಮತ್ತು ದಿಢೀರ್ ನಿರ್ಧಾರದ ಅನುಷ್ಠಾನದಲ್ಲಿ ಕಷ್ಟ ಎದುರಾಗಿದೆ, ಆದರೆ ಅವರ ಉದ್ದೇಶ ಮತ್ತು ಗುರಿ ಉತ್ತಮವಾದ ಕಾರಣ ಸ್ವಲ್ಪ ದಿನಗಳ ಕಾಲ ಕಷ್ಟವಾದರೂ ಸಹಿಕೊಳ್ಳಬೇಕು, ಸಹಿಸಿಕೊಳ್ಳುತ್ತೇವೆ ಎಂಬುದು ನನ್ನ ಪರಿಚಿತರ ನಡುವೆ ಸಿಕ್ಕ ಜನಸಾಮಾನ್ಯರ ಸಂದೇಶ.
ಇನ್ನೂ ಸ್ವಲ್ಪ ದಿನ ‘ತಾಳಿದರೆ ಬಾಳಬಹುದು’ ಅಲ್ಲವೇ ?
– ಹೇಮಮಾಲಾ.ಬಿ
ಹೆಚ್ಚಿದ ಅಪಪ್ರಚಾರದ ನಡುವೆ ಒಂದು ಒಳ್ಳೆಯ ಬರಹ.
ಧನ್ಯವಾದಗಳು .
ಸತ್ಯ!