ಕುಂತಿ

Share Button

Divakara Dongre

ಅಮ್ಮ ಹೇಳಿದುದಕ್ಕೆಲ್ಲ ನಾನು ಬರೀ ಹ್ಞೂ…ಗುಟ್ಟುತ್ತಿದೆ..

ನನ್ನ ಜಡೆ ಹಾಕುತ್ತಿದ್ದ ಅಮ್ಮ ನನ್ನ ಜಡೆ ಎಳೆದು ಅಂದರು, …ನಾನು ಹೇಳುವುದೆಲ್ಲವನ್ನು ಕೇಳುತ್ತಿದ್ದೀಯಲ್ಲ.

ಹ್ಞೂ…ಹೇಳು…

ಹ್ಞೂಗುಟ್ಟುವುದಕ್ಕೂ ಕೇಳುವುದಕ್ಕೂ ಇದು ಕತೆಯಲ್ಲ, ವಾಸ್ತವ…

ಗೊತ್ತು ನನಗೆ…ಮುಂದುವರಿಸು…ನಾನಂದೆ.

ಅಮ್ಮ ಮತ್ತೆ ಪ್ರಾರಂಭಿಸಿದಳು..ನಿನ್ನ ನಿರ್ಧಾರದ ಮೇಲೆ ಈ ಮಗುವಿನ ಭವಿಷ್ಯ ನಿಂತಿದೆ. ಇಷ್ಟಕ್ಕೂ ಮಗು ಯಾರದು? ನಿನ್ನ ಅಕ್ಕನದೇ..ಅವಳು ಅಲ್ಪಾಯುಷಿ… ನಮ್ಮಿಂದ ಉಳಿಸಿಕೊಳ್ಳಲಾಗಲಿಲ್ಲ. ಅಮ್ಮ ಮತ್ತೆ ಅಳುವುದಕ್ಕೆ ಪ್ರಾರಂಭಿಸಿದಳು. ಅಮ್ಮನ ಕಣ್ಣ ಕಂಬನಿ ಕಂಡು ನನ್ನ ಕಣ್ಣುಗಳು ಒದ್ದೆಯಾದವು.

ಯಾಕಮ್ಮಾ…. ಅಳುತ್ತಿದ್ದೀ…? ಪುಟ್ಟ ಕಿರಣ ನನ್ನ ಸೆರಗೆಳೆದ..

ಅಕ್ಕ ನಮ್ಮನ್ನಗಲಿ ಎರಡು ವರ್ಷವಾಗಿತ್ತು. ಭಾವ ಆರು ತಿಂಗಳ ಮಗು ಕಿರಣನನ್ನು ನಮ್ಮಲ್ಲಿಯೇ ತಂದು ಬಿಟ್ಟಿದ್ದ. ಕಿರಣನಿಗೆ ನಾನು ಚಿಕ್ಕಮ್ಮನಾದರೂ ತಾಯಿಯಾದೆ. ಮದುವೆಯಾಗದೆ ತಾಯಿಯಾದ ಕುಂತಿಯ ಹಾಗೆ..! ಅಪ್ಪ ಅಮ್ಮ ನನಗಿಟ್ಟ ಹೆಸರೂ ಕೂಡ ಕುಂತಿಯೆಂದು!

ಅಮ್ಮ ಮುಂದುವರಿಸಿದಳು… ನನಗೆ ಗೊತ್ತು…ನಿನಗೆ ಸ್ವಲ್ಪ ಕಷ್ಟವಾಗಬಹುದು. ವಯಸ್ಸಿನಲ್ಲಿ ನಿನಗೂ ಅವನಿಗೂ ಇಪ್ಪತ್ತು ವರ್ಷಗಳ ಅಂತರ. ಆದರೆ ಉಳಿದ ವಿಷಯದಲ್ಲೇನಿದೆ ಕೊರತೆ? ರೂಪ, ಶ್ರೀಮಂತಿಕೆ, ಮನೆತನ, ಉಡುವುದಕ್ಕೆ-ಉಣ್ಣುವುದಕ್ಕೆ ಎಲ್ಲವೂ ಇದೆಯಲ್ಲ. ಬದುಕನ್ನು ಕೆಲವೊಂದು ಸಲ ಬಂದ ಹಾಗೆ ಸ್ವೀಕರಿಸಬೇಕು ಮಗು. ಅಮ್ಮ ಎದ್ದು ಒಳ ನಡೆದಳು..

ಪಕ್ಕದಲ್ಲಿದ್ದ ಕನ್ನಡಿಯನ್ನು ನೋಡಿದೆ. ಕನ್ನಡಿಯಲ್ಲಿ ನನ್ನ ಬಿಂಬ ಕಾಣುತ್ತಿಲ್ಲ. ಅಕ್ಕನದೇ ಪ್ರತಿಬಿಂಬ. ಪುಟ್ಟ ಕಿರಣ ಹಿಂದಿನಿಂದ ಬಂದು ಸೀರೆಯೆಳೆದು ಅಮ್ಮ..ಅಮ್ಮಾ… ಎನ್ನುತ್ತಿದ್ದ. ತಲೆ ಕೆಟ್ಟಿತ್ತು..ಸಿಟ್ಟು ಎಲ್ಲಿತ್ತೋ..ಮಗುವಿನ ಕುಂಡಿಯ ಮೇಲೆ ಎರಡು ಬಿಗಿದೆ..

ಕಿರಣ ಅಮ್ಮಾ…ಅಮ್ಮಾ… ಎಂದು ಅಳಲು ಪ್ರಾರಂಭಿಸಿದ. ತಡೆಯಲಾಗಲಿಲ್ಲ..ಎದೆಗವಚಿಕೊಂಡೆ.

kunti

ಈ ಸಮಸ್ಯೆಗೆ ಪರಿಹಾರ ನಾನೇನಾ…? ಯಾಕೆ ನಾನು ಹೆಣ್ಣಾಗಿ ಹುಟ್ಟಿದ ತಪ್ಪಿಗಾಗಿಯೇ? ಅಕ್ಕನಿಗೆ ತಂಗಿಯಾದುದಕ್ಕಾಗಿಯೇ? ಅಥವಾ ನಾವು ಬಡವರೆಂದೆ? ಭಾವ ಎರಡೇ ಎರಡು ಸಾಲಿನ ಕಾಗದ ಬರೆದಿದ್ದರು. ‘ಕುಂತಿಯನ್ನು ಕರೆದುಕೊಂಡು ಬನ್ನಿ… ಮದುವೆಗೆ ಮುಹೂರ್ತ ನಿಶ್ಚಯಿಸಿದ್ದೇನೆ? ನನ್ನ ಬದುಕಿನ ಬಗೆಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇವರ್ಯಾರು..? ಹೌದಲ್ಲ…ತಬ್ಬಲಿ ಮಗುವನ್ನು ನಮ್ಮ ಬಳಿಬಿಟ್ಟು ಭಾವ ಅಂದಿದ್ದರು…ಕುಂತಿ…ನೀನೇ ಇನ್ನು ನನ್ನ ಮಗುವಿಗೆ ತಾಯಿ! ಏನಿದರರ್ಥ? ಇನ್ನು ನೀನೆ ನನ್ನ ಹೆಂಡತಿಯೆಂದಲ್ಲವೇ? ಥೂ..ಈ ಪುರುಷ ಜಾತಿಯೇ ಹೀಗೆ..ಅವರ ಸ್ವಾರ್ಥ ಮಾತ್ರ ಅವರಿಗೆ. ನಾನೊಲ್ಲೆ…ಎಂದರೆ ಹೇಗೆ..? ನನ್ನ ಕಿರಣನಿಗೆ ಮತ್ತೊಬ್ಬಳು ಮಲತಾಯಿಯಾಗಿ ಬರಬಹುದು. ಇಲ್ಲ….ಹಾಗಾಗಬಾರದು. ಹಾಗಾಗಕೂಡದು. ಕೆಲವು ಸಮಸ್ಯೆಗಳಿಗೆ ಕಾಲವೇ ಉತ್ತರಿಸಬೇಕು.

********

ಅಪ್ಪ ಅಮ್ಮ ಮತ್ತು ಕಿರಣ ಹೊರಟೆವು ನಮ್ಮ ಭಾವನ ಊರಿಗೆ. ಬಸ್ ಸ್ಟಾಂಡಿಗೆ ನಮ್ಮ ಭಾವನ ತಮ್ಮ ಸುಧೀರ ಬಂದಿದ್ದ. ಹತ್ತಿರದ ನಗರವೊಂದರಲ್ಲಿ ಆತ ಕಾಲೇಜು ಅಧ್ಯಾಪಕ. ಭಾವನದೇ ತದ್ರೂಪ. ಯಾವ ಹೆಣ್ಣಿಗಿದೆಯೋ ಇವನನ್ನು ವರಿಸುವ ಅದೃಷ್ಟ. ಯಾವಾಗ ಊರಿಗೆ ಬಂದಿರಿ…ನಾನು ಕೇಳಿದ..ನಿನ್ನೆ ಬಂದೆ..ಅಣ್ಣ ಜರೂರು ಬರಬೇಕೆಂದು ಹೇಳಿ ಕಳುಹಿಸಿದರು..ಮನೆ ತಲುಪಿದೆವು. ಮನೆ ನಮಗೇನು ಹೊಸದಲ್ಲ. ನನ್ನಕ್ಕ ಬದುಕಿ ಬಾಳಿದ ಮನೆ.

ಬನ್ನಿ…ಬನ್ನಿ… ಭಾವ ಸ್ವಾಗತಿಸಿದರು. ಮಧ್ಯಾಹ್ನದ ಊಟ ಮುಗಿಸಿದೆವು..

ಬಂಧು ಬಳಗ ಯಾರು ಕಾಣ್ತಾ ಇಲ್ಲ…ಮದುವೆ ನಿಶ್ಚಯವೆಂದು ಕರೆದಿದ್ದೀಯಾ ನಮ್ಮನ್ನು…ಅಪ್ಪ..ಭಾವನಲ್ಲಿ ಕೇಳಿದರು..

ನಾವಿಷ್ಟೇ ಜನ ಸಾಲದೇ… ಭಾವ ಅಪ್ಪನಿಗಂದರು.

ಕುಂತಿ…ನಿನ್ನಲ್ಲೊಂದು ನನ್ನ ಪ್ರಾರ್ಥನೆಯಿದೆ. ಇದುವರೆಗೂ ನೀನು ನನ್ನ ಮಗು ಕಿರಣನನ್ನು ತಾಯಿಯಾಗಿ ಬೆಳೆಸಿದ್ದೀಯಾ…ಇನ್ನು ಮುಂದೆಯೂ ನೀನವನಿಗೆ ತಾಯಿಯಾಗಿಯೇ ಇರಬೇಕು. ಭಾವ ನನ್ನನ್ನು ತ್ಯಾಗಮೂರ್ತಿಯಾಗಿಸಿ ನನ್ನೆದೆಗೆ ಹೊನ್ನಶೂಲವನ್ನು ತಿವಿಯುತ್ತಿದ್ದರು. ನನ್ನ ಅಭ್ಯಂತರವೇನಿಲ್ಲ…ನಾನಂದೆ..ಸೋಲೊಪ್ಪಿಕೊಂಡವಳಂತೆ.

ಆದರೊಂದು ಶರತ್ತಿದೆ…ಭಾವ ಮಾತು ಮುಂದುವರಿಸಿದರು..ನೀನು ನನ್ನ ಮಗುವಿಗೇ ತಾಯಿಯಾಗೇ ಇರಬೇಕು. ಆದರೆ ನನಗೆ ಹೆಂಡತಿಯಾಗಿ ಅಲ್ಲ. ಒಗಟಿನಂತಿತ್ತು ಮಾತು. ನಮಗಾರಿಗೂ ಆರ್ಥವಾಗಲಿಲ್ಲ.

Mother and Child

ನಾವೆಲ್ಲರೂ ಭಾವನ ಮುಖವನ್ನೇ ನೋಡತೊಡಗಿದೆವು. ಅಲ್ಲಿ ನಿರ್ಭಾವುಕತೆ, ನಿರ್ಲಿಪ್ತತೆ ಮನೆ ಮಾಡಿತ್ತು.

ಭಾವ ಮಾತು ಮುಂದುವರಿಸಿದರು..ಕುಂತಿ..ನೀನೊಪ್ಪಿದರೆ ನನ್ನ ತಮ್ಮ ಸುಧೀರನಿಗೆ ವಧುವಾಗಿ, ಈ ಮನೆಯ ಗೃಹಲಕ್ಷ್ಮಿಯಾಗಿ, ಕಿರಣನಿಗೆ ತಾಯಿಯಾಗಿರಬೇಕು..ಇದಕ್ಕೆ ನಿನ್ನ ಒಪ್ಪಿಗೆ ಬೇಕು..

ಸುಧೀರ ನನ್ನ ಬಳಿ ಬಂದವನೇ…ಐ ಲವ್ ಯೂ ಕುಂತಿ. ನನ್ನನ್ನು ನಿರಾಶನನ್ನಾಗಿಸಬೇಡ ಅಂದ.

ಅಪ್ಪ ಅಮ್ಮ ನನಗೆ ಕಣ್ಸನ್ನೆ ಮಾಡಿದರು.. ನಾನು ಹೋಗಿ ಭಾವನ ಪಾದಗಳಿಗೆ ವಂದಿಸಿದೆ. ಅಕ್ಷರಶಃ ಅವರ ಕಾಲುಗಳನ್ನು ನನ್ನ ಕಂಬನಿಯಿಂದ ತೋಯಿಸಿದ್ದೆ. ಭಾವ ‘ಸೌಭಾಗ್ಯವತೀ…ಭವ..’ಎಂದು ನನ್ನನ್ನು ಹರಸಿದರು.

ಪುಟ್ಟ ಕಿರಣ ಅಮ್ಮಾ…ಅಮ್ಮಾ ಎಂದು ನನ್ನ ಬಳಿ ಓಡೋಡಿ ಬಂದ. ಎದೆಗಪ್ಪಿಕೊಂಡೆ.

ಒಳಗೆ ದೇವರ ಮನೆಯಲ್ಲಿ ನಂದಾದೀಪ ಮಂದ ಬೆಳಕನ್ನು ಹರಡಿತ್ತು.

**************

 – ದಿವಾಕರ ಡೋಂಗ್ರೆ ಎಂ.


11 Responses

  1. ಮನಸ್ಸು ದ್ರವಿಸುವ ಕತೆ. ಚಿಕ್ಕ ಚೊಕ್ಕ ಬರಹ.

  2. Hema says:

    ಕಥೆ ಇಷ್ಟವಾಯಿತು…

  3. Venkatesh S. Patil says:

    ಒಗಟಿನಂತೆ ಇದ್ದ ಪ್ರಾರಂಭ ಮೊದಲು ಸಿಟ್ಟು ತರಿಸುವಂತೆ ಮಾಡಿ ನಂತರ ಸುಖಾಂತ್ಯ ಕಂಡ ಈ ಕುಂತಿಯ ಕಥೆ ಮನ ಮಿಡಿಯುವಂತಿದೆ. ಕೊನೆಯ ವರೆಗೂ ಗುಟ್ಟು ಬಿಡದೆ ಹೇಳುವ ಕಥೆ ಸೊಗಸಾಗಿ ಮೂಡಿ ಬಂದಿದೆ. ತುಂಬಾ ಧನ್ಯವಾದಗಳು ಶ್ರೀ ಡೋಂಗ್ರೆ ಯವರೇ.

    • Divakara Dongre M. says:

      ನನ್ನ ಬರಹಗಳನ್ನು ಅಭಿಮಾನದಿಂದ ಓದುತ್ತಿರುವ ನಿಮಗಿದೊ ವಂದನೆ. ಸಾಹಿತ್ಯಿಕ ಪರಿಚಾರಿಕೆಯನ್ನು ಗೈಯ್ಯುತ್ತಿರುವ ‘ಸುರಹೊನ್ನೆ’ಗಿದೊ ಮತ್ತೊಂದು ನಮನ.

  4. Shankari Sharma says:

    ಕಥೆ ಚೆನ್ನಾಗಿ ಮೂಡಿ ಬಂದಿದೆ…ತಿರುವು ಚೆನ್ನಾಗಿದೆ.!

  5. ಭಾಗ್ಯಲಕ್ಷ್ಮಿ says:

    ಹೃದಸ್ಪರ್ಶಿ ಕಥೆ

  6. ಶಿವಮೂರ್ತಿ ಹೆಚ್ says:

    ತುಂಬಾ ಮನಮುಟ್ಟುವಂತೆ ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: