ಕಾವೇರಿಯ ಕೋರಿಕೆ
ನನ್ನೊಡಲೇ ಬತ್ತಿ ಹೋಗಿರಲು
ನಿನಗೆಲ್ಲಿಂದ ತರಲಿ ನಾ ನೀರು
ಬರದ ಬೇಗೆಯಲಿ ಬರಿದಾಗಿದೆ
ನೋಡಿಲ್ಲಿ ನನ್ನೆಲ್ಲಾ ಕಣ್ಣೀರು
ನನ್ನ ತವರನೇ ಒಣಗಿಸಿ
ನಿನ್ನ ಕುವರರ ಬದುಕಿಸಿ
ಹರಿಯುತಲೇ ಇರುವೆ
ಆದರೂ ನಿನ್ನ ದಾಹ ಇಂಗಿಲ್ಲವೇ
ನನ್ನ ಮನೆಯವರು ಬಾಯಾರಿದರೂ
ನಿನ್ನ ಫಸಲಿಗೆ ನೀರು ಹರಿಸಿದರು
ಅವರದು ನಾಳೆ ಹೇಗೆಂಬ ಚಿಂತೆ
ನಿನ್ನದೋ ಅದೇ ನಿತ್ಯದ ಕ್ಯಾತೆ
ನನ್ನವರು ಕರುಣೆಯ ಕುಲದವರು
ಸ್ವಾಭಿಮಾನಕೆ ಏಟು ಬಿದ್ದರೂ
ಮಾನವೀಯತೆಯ ಮೆರೆವರು
ಈ ಕಾವೇರಿಯ ಕುಡಿದ ಕನ್ನಡಿಗರು
ದ್ವೇಷದ ಸೋಗಿಲ್ಲದ ಮಕ್ಕಳು
ನೀನಾದೆ ಏಕೆ ಮಗ್ಗುಲ ಮುಳ್ಳು
ಇದ್ದಾಗ ಕೈ ಎತ್ತಿ ಕೊಡುವರು
ಮುಗ್ಧತೆಯಲಿ ಮಗುವಿನಂತಹವರು
ಇಷ್ಟಾದರೂ ತಣಿಯದೆ ದಾಹ
ಬಲವಂತದಿಂದೇಕೆ ಕಿತ್ತುಕೊಳ್ಳುವ ಮೋಹ
ಬದುಕಲು ಬಿಡು ಅವರನು
ಆಗ ಮೈದುಂಬಿ ಬರುವೆ ನಾನು
– ಅಮುಭಾವಜೀವಿ