ಮಹಿಳಾ ಕಾಲೇಜ್ ಎಂಬ ಮಹಾಪರ್ವ!
ಮನುಷ್ಯ ಜೀವನದ ಅತ್ಯಮೂಲ್ಯ ದಿನಗಳೆಂದರೆ ಅದು ಕಾಲೇಜ್ ಜೀವನ. ಯಾಕೆಂದರೆ ಪಠ್ಯದೊಂದಿಗೆ ಜೀವನ ಪಾಠವು ಹೇರಳವಾಗಿ ಸಿಗುವ ಹಂದರವಿದು. ಕೆಲವರಿಗೆ ಉದ್ಯೋಗದ ಮುನ್ಸೂಚನೆ ಇಲ್ಲೆ ಸಿಕ್ಕಿದರೆ ಇನ್ನು ಕೆಲವರಿಗೆ ಬಾಳ ಸಂಗಾತಿಯ ಆಯ್ಕೆಯು ಇಲ್ಲೆ ಆಗುತ್ತದೆ. ಉದಯೋನ್ಮುಖ ಪ್ರತಿಭೆಗಳು ಅನಾವರಣಗೊಳ್ಳುವ ವೇದಿಕೆಯು ಹೌದು. ಒಟ್ಟಿನಲ್ಲಿ ಸರ್ವೋತಮುಖ ಬೆಳವಣಿಗೆಯ ಸಾಗರ ಎಂದರೆ ಕಾಲೇಜ್ ಜೀವನ. ಅದೂ ಹುಡುಗರಿಲ್ಲದ ಕಾಲೇಜ್ನಲ್ಲಿ ಓದಿದ ಅನುಭವಗಳ ಗುಚ್ಛವನ್ನು ಮತ್ತು ಸುಮಧುರ ನೆನಪುಗಳ ಮೂಟೆಯನ್ನು ಹೊತ್ತೊಯ್ಯಲು ಸಾಧ್ಯವಿಲ್ಲ ಬಿಡಿ.
ಲೋಕ ಮರೆತು ಹಾರುವ ಹಕ್ಕಿಗಳಂತೆ ಮಹಿಳಾ ಕಾಲೇಜ್ ಕ್ಯಾಂಪಸ್. ಈ ಜಗತ್ತಿನೊಳಗೆ ತಲ್ಲಣ, ದು;ಖ, ದುಮ್ಮಾನ ಖುಷಿ, ನಲಿವು ಕೋಪ ತಾಪ, ಹತಾಶೆ ಎಲ್ಲವು ಮುಗಿಯದ ಸಂತೆ. ಸ್ನೇಹದ ಬಳ್ಳಿಯಲ್ಲಿ ಅರಳಿ ನಿಂತ ನೂರಾರು ಹೂವುಗಳಂತೆ ಗೆಳತಿಯರ ಕಂತೆ. ಉಪನ್ಯಾಸಕರು ಕಾಲಿಡುವ ತನಕವು ನಿಲ್ಲದ ಮಾತಿನ ಮಲ್ಲಿಯರ ಹರಟೆ ಬಂದರು ಮುಗಿಯಲೊಲ್ಲದು. ತಪೋನಿರತ ಭಗಿನಿಯರಂತೆ ಕುಳಿತು ಉಪನ್ಯಾಸ ಕೇಳುವ ಫೋಸು ನೀಡಿದರು ನಮ್ಮೊಳಗಿನ ಮಿಡಿತಗಳು ಪ್ರತಿ ಹೃದಯಗಳಿಗೆ ಮಿಡಿಯುತ್ತಲೇ ಇರುತ್ತಿತ್ತು. ಹುಡುಗರು ಕೇಳಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಮಾತುಗಳನ್ನು ಹತ್ತಿಕ್ಕಿಕೊಳ್ಳುವ ಪ್ರಮೇಯವೆ ಇಲ್ಲಿರುವುದಿಲ್ಲ. ಪಿನ್ ಕೊಡೇ. ಪ್ಯಾಡ್ ಇದೆಯಾ, ಲಿಪ್ಸ್ಟಿಕ್ ಜಾಸ್ತಿಯಾಗಿದೆ ಕಣೆ ಹೀಗೆ ಯಾವುದೇ ದಾಕ್ಷಿಣ್ಯವಿಲ್ಲದೆ ಸ್ವಲ್ಪ ಜೋರಾಗಿಯೆ ಹೇಳಿಕೊಳ್ಳಬಹುದು. ಯಾವುದೆ ಎಗ್ಗಿಲ್ಲದೆ ಓತಪ್ರೋತವಾಗಿ ಮುನ್ನುಗ್ಗುವ ನಮ್ಮ ಮಾತುಗಳೆಂಬ ಪ್ರವಾಹವನ್ನು ತಡೆಯಲು ಯಾವ ಗೋಡೆಯು ಅಲ್ಲಿರಲಿಲ್ಲ.
ಹುಡುಗಿಯರಿಗೆ ಮಾತ್ರವೆ ಪ್ರಾತಿನಿಧ್ಯ ಇರುವ ವಿಧ್ಯಾಸಂಸ್ಥೆಗಳಲ್ಲಿ ಇಲ್ಲಿರುವ ಹಲವಾರು ಜವಾಬ್ದಾರಿಗಳು ಅವರಿಗೆ ಸಲ್ಲುತ್ತವೆ.ಇದು ಅದೆಷ್ಟೋ ಹುಡುಗಿಯರ ಭವಿಷ್ಯದ ಏಳಿಗೆಗು ಅತ್ಯಂತ ಸಹಕಾರಿಯಾಗಬಲ್ಲುದು. ಮಹಿಳಾ ಕಾಲೇಜ್ ನಲ್ಲಿ ಓದಿದ ನಾನು ಇದಕ್ಕೆ ಹೊರತಾಗಿಲ್ಲ. ಚಿಕ್ಕ ಪುಟ್ಟ ಯಾವುದೆ ಸಮಾರಂಭವಿರಲಿ ಅತಿಥಿಗಳನ್ನು ಕರೆಯುವುದರಿಂದ ಶುರು ಹಚ್ಚಿ ಕುರ್ಚಿ ಮೇಜುಗಳನ್ನು ನಾವುಗಳೆ ಹೊತ್ತೊಯ್ದು ಜೋಡಿಸಬೇಕು. ಮೇಜಿನ ಮೇಲೆ ಕುರ್ಚಿ ಇಟ್ಟು ವೇದಿಕೆ ಅಲಂಕರಿಸುತ್ತಿದ್ದೆವು. ವಾರ್ಷಿಕೋತ್ಸವ ಹಾಗು ಇನ್ನಿತರ ಯಾವುದೇ ಸಮಾರಂಭಗಳಿಗೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಜವಾಬ್ದಾರಿ ನಮಗೆ ಸಲ್ಲುತ್ತಿತ್ತು. ಸೂಕ್ತ ಬಹುಮಾನಗಳಿಗೆ ಅಂಗಡಿ ಅಂಗಡಿ ಅಲೆಯುತ್ತಿದ್ದೆವು. ಹುಡುಗರಿರುವ ವಿದ್ಯಾಲಯಗಳಾದರೆ ಇದರ ಅನುಭವ ನಮಗೆಲ್ಲಾಗುತ್ತಿತ್ತು? ಎಲ್ಲಾ ಕೆಲಸಗಳಿಗೆ ಉಪನ್ಯಾಸಕರು ಹುಡುಗರನ್ನೆ ಅವಲಂಬಿಸುತ್ತಿದ್ದರು. ನಾವು ಇನ್ನಷ್ಟು ಮಾತಿನ ಮಲ್ಲಿಗಳಾಗುತ್ತಿದ್ದೆವು ಅಷ್ಟೆ! ಇವಿಷ್ಟೆ ಅಲ್ಲದೆ ನಮ್ಮ ನಾಟಕ , ನೃತ್ಯ, ಕಾರ್ಯಕ್ರಮ ನಿರೂಪಣೆ ಹೀಗೆ ಗಂಡು ಪಾತ್ರವಿರುವ ಎಲ್ಲಾ ನಿರ್ವಹಣೆಯು ನಮಗೆ ಸಲ್ಲುತ್ತಿತ್ತು. ಮೀಸೆ ಇಟ್ಟು ಗಂಡಸರ ಪಾತ್ರದ ಅಭಿನಯದಲ್ಲಿ ಮಿಂಚಿ ಗಟ್ಟಿಗಿತ್ತಿಗಳಾದ ನೆನಪುಗಳು ಈಗ ಪುಳಕಗಳು.
ಇನ್ನೂ ಮುಖ್ಯವಾಗಿ ನಾಯಕನಿಲ್ಲದ ನಾಯಕಿಯ ಪಟ್ಟವು ನಮಗೆ ತಾನೆ? ಚುನಾವಣೆಯ ಮೂಲಕ ನಾಯಕಿಗಳಾಗುತ್ತಿದ್ದೆವು.ಜೊತೆಗೆ ಇನ್ನುಳಿದ ಮಂತ್ರಿಗಳ ಸ್ಥಾನಕ್ಕೆ ನಾವೆ ನ್ಯಾಯ ಸಲ್ಲಿಸುತ್ತಿದ್ದೆವು. ಕಾಲೇಜ್ ನಲ್ಲಿ ನಡೆಯುವ ಸ್ಪರ್ಧೆಯ ವಿಷಯದಲ್ಲಿ ಗೊಂದಲವೆ ಇರುತ್ತಿರಲಿಲ್ಲ. ಯಾವುದೆ ತಕರಾರು ಯಾರದ್ದು ಇಲ್ಲದೆ ಅಡುಗೆ ಸ್ಪರ್ಧೆ, ರಂಗೋಲಿ, ಮೆಹಂದಿ. ಕೇಶಲಂಕಾರ , ಹೂ ಪೋಣಿಸುವುದು ಇಂತವುಗಳನ್ನೆ ಆಯ್ಕೆ ಮಾಡುತ್ತಿದ್ದೆವು.ಇನ್ನು ಕೆಲವು ಹೆತ್ತವರು ಹುಡುಗರಿಲ್ಲದ ಸಂಸ್ಥೆಯಲ್ಲಿ ಪ್ರೀತಿ ಪ್ರೇಮದ ವಿಚಾರ ಕಡಿಮೆ ಎಂಬ ದೂರದೃಷ್ಟಿಯಿಂದ ಇಲ್ಲಿಗೆ ಸೇರ್ಪಡೆಗೊಳಿಸುತ್ತಿದ್ದರು. ಈ ವಾದ ನಿಜವು ಇರಬಹುದು ಅಥವ ಸುಳ್ಳು ಇರಬಹುದು! ಯಾಕೆಂದರೆ ಇದು ಅವರವರಿಗೆ ಬಿಟ್ಟಂತಹ ವೈಯುಕ್ತಿಕ ವಿಚಾರ. ಆದರೂ ಪ್ರೀತಿ ಪ್ರೇಮದ ವಿಚಾರದಲ್ಲಿ ಗಮನಾರ್ಹವಾಗಿ ಉಲ್ಲೇಖಿಸುವ ವಿಚಾರವಿದೆ. ಅದೇನೆಂದರೆ ಯೋಚನಾಸಹಿತವಾಗಿ ಮುಂದಡಿಯಿಡುವ ಹೆಣ್ಮಕ್ಕಳು ಸಿಗುವುದು ಮಹಿಳಾ ಕಾಲೇಜ್ ನ ಒಳಗೆ ಮಾತ್ರವೆ. ಪ್ರೀತಿಯಿಂದ ಸೋಲು ಅವಮಾನ ಹತಾಶೆ ಮೋಸ ಹೋದವರು ಇಲ್ಲಿರುವುದು ಅಪರೂಪ. ಗುಟ್ಟನ್ನು ಉಳಿಸಿಕೊಳ್ಳದ ಹೆಣ್ಮಕ್ಕಳು ಮನಸ್ಸು ತೆರೆದು ಮಾತಾನಾಡುತ್ತಾರೆ ಮತ್ತು ಸಲಹೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಪ್ರೀತಿಯಲ್ಲಿ ಸಿಲುಕಿಕೊಂಡವರು ಭವಿಷ್ಯವನ್ನು ಕರಾರುವಕ್ಕಾಗಿ ರೂಪಿಸಿಕೊಳ್ಳುತ್ತಾರಿಲ್ಲಿ. ಜಂಟಿಯಾಗಿ ಓದುವಾಗ ನಡೆಯುವ ಪ್ರೀತಿಯ ವಿಚಾರ ಮಹಿಳಾ ಕಾಲೇಜ್ ನ ಕಲ್ಪನೆಗು ಸಿಗುವುದಿಲ್ಲ.
ಪರಸ್ಪರ ಚಿಕ್ಕಪುಟ್ಟ ರಗಳೆಗಳ ಹೊರತಾಗಿ ಇನ್ಯಾವುದೆ ಗೊಂದಲ ಮಹಿಳಾ ಕಾಲೇಜ್ ನಲ್ಲಿಇರುವುದಿಲ್ಲ. ಕಾಲೇಜ್ ನಲ್ಲಿ ಇರುವುದೊಂದೆ ಹೆಣ್ಣು ಕುಲ ಎಂದ ಮೇಲೆ ಉಪನ್ಯಾಸಕರಿಗು ನಮ್ಮ ಮೇಲೆ ವಿಶೇಷ ಒಲವು ಮತ್ತು ಕಾಳಜಿ. ಉಪನ್ಯಾಸದ ಹೊರತಾಗಿ ಏನನ್ನು ಹೇಳುವುದಿದ್ದರು ಹುಡುಗಿಯರಿಗೆ ಬೇಕಾದ ತಕ್ಕ ಭೋದನೆಯೆ ಸಲ್ಲುತ್ತದೆ. ಪಿಕ್ ನಿಕ್ ,ಪ್ರವಾಸಗಳು ಮರೆಯಲಾರದ ಅನುಭವಗಳಾಗಿರುತ್ತವೆ. ಮಹಿಳಾ ಕಾಲೇಜ್ ನಲ್ಲಿ ಓದದವರಿಗೆ ಮಾತಿಗು ಮತ್ತು ಕಲ್ಪನೆಗು ನಿಲುಕದ ಅನುಭೂತಿ ಇಲ್ಲಿಯದು. ಇಂಚಿಚು ಸುಂದರ ಅನುಭವಗಳನ್ನು ದಾಖಲಿಸುವ ಮಹಿಳಾ ಕಾಲೇಜ್ ಹುಡುಗಿಯರ ಕಣ್ಮಣಿಯೆ ಹೌದು.
– ಸಂಗೀತ ರವಿರಾಜ್, ಮಡಿಕೇರಿ
ನಿಜ…
ಬರಹ ಸೊಗಸಾಗಿದೆ.
ಕಾಲೇಜು ದಿನಗಳನ್ನು ಚೆನ್ನಾಗಿ ಬರೆದಿರುವಿರಿ
ಮಹಿಳಾ ಕಾಲೇಜಿನಲ್ಲಿರುವಂತಹ ವಿಶೇಷ ಅನುಭವಗಳು ಚೆನ್ನಾಗಿ ಮೂಡಿಬಂದಿವೆ…